``ಗುರಿ ಬಿಡಬೇಡಿ. ಇವತ್ತಲ್ಲ ನಾಳೆ ನಾನು ಯಶಸ್ಸು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲದಿಂದ ಮುನ್ನಡೆಯಿರಿ. ಆಗ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ,'' ಎನ್ನುವ ಗೀತಾ ಇಂದಿನ ಯುವತಿಯರಿಗೆ ಮಾರ್ಗದರ್ಶಿ ಆಗಿದ್ದಾರೆ.
ಪುಟ್ಟ ಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಲ್ಲೂ ಸಂಗೀತ ವಿಶಿಷ್ಟ ಸಂವೇದನೆ ಹುಟ್ಟಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಮಂದಬುದ್ಧಿಯವರಲ್ಲೂ ಅದು ಚೈತನ್ಯ ತುಂಬುತ್ತದೆ. ಅವರ ವರ್ತನೆ, ನಡವಳಿಕೆಯಲ್ಲಿ ಬದಲಾವಣೆ ತರುತ್ತದೆ ಎಂಬುದನ್ನು ಮಲ್ಲೇಶ್ವರದ `ಹಂಸ ಕುಟೀರ'ದ ವೀಣಾ ವಾದಕಿ ಡಾ. ಗೀತಾ ಭಟ್ ಸಾಬೀತು ಮಾಡಿ ತೋರಿಸಿದ್ದಾರೆ. ಕಳೆದ 20 ವರ್ಷದ ತಮ್ಮ ಸಂಗೀತ ಪಯಣದಲ್ಲಿ ಸುಮಾರು 500ಕ್ಕೂ ಹೆಚ್ಚು ಬುದ್ಧಿಮಾಂದ್ಯರ ಜೀವನದಲ್ಲಿ ಸಾಕಷ್ಟು ಬದಲಾವಣೆಯ ಬೆಳಕು ಬೀರಿರುವ ಗೀತಾ ಭಟ್ ಸಂಗೀತ ಲೋಕದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಾರೆ.
ಮನೋತಜ್ಞೆಯಾದ ಸಂಗೀತ ಆರಾಧಕಿ
5ನೇ ವರ್ಷದಿಂದಲೇ ಸಂಗೀತಾಭ್ಯಾಸ ಶುರು ಮಾಡಿದ ಅವರು, ಕಾಲೇಜು ಶಿಕ್ಷಣ ಮುಗಿಸುವ ಹೊತ್ತಿಗೆ ಅವರಲ್ಲಿ ಮನೋವಿಜ್ಞಾನದ ಬಗ್ಗೆ ಒಲವು ಹೆಚ್ಚಿತು. ಸಂಗೀತ ಹಾಗೂ ಮನೋವಿಜ್ಞಾನ ಒಂದೆಡೆ ಸೇರಿದರೆ ಅಲ್ಲೊಂದು ಹೊಸ ಕ್ರಾಂತಿ ಮಾಡಬಹುದು ಎಂಬ ಸಣ್ಣ ಸುಳಿವು ಅವರಿಗೆ ಆಗಲೇ ಸಿಕ್ಕಿತು.
ಬುದ್ಧಿಮಾಂದ್ಯ ಮಕ್ಕಳಿದ್ದ `ಸೃಷ್ಟಿ ಸ್ಪೆಷಲ್ ಅಕಾಡೆಮಿ'ಗೆ ಗೀತಾ ಆಗಾಗ ಭೇಟಿ ಕೊಡುತ್ತಿದ್ದರು. ಬುದ್ಧಿಮಾಂದ್ಯ ಮಕ್ಕಳಿಗೆ ಅರ್ಥ ಆಗುವಂತಹ ಹಾಡುಗಳನ್ನು ಅವರ ಮುಂದೆ ಹಾಡಿ ತೋರಿಸುತ್ತಿದ್ದರು. ಮಕ್ಕಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಗತೊಡಗಿತು. ಇದರಿಂದ ಪ್ರೇರಿತರಾದ ಗೀತಾ ಅಂತಹ ಮಕ್ಕಳ ಬಗ್ಗೆ ಸಂಶೋಧನೆ ಶುರು ಮಾಡಿದರು. ಅಲ್ಲಿಂದಲೇ ಬುದ್ಧಿಮಾಂದ್ಯರಲ್ಲಿ ಸಂಗೀತ ಬಹಳಷ್ಟು ಬದಲಾವಣೆ ತರಲು ಕಾರಣವಾಗುತ್ತದೆ ಎಂಬುದು ಸ್ಪಷ್ಟವಾಗುತ್ತಾ ಹೋಯಿತು.
ಹಂಸ ಕುಟೀರ ಫೌಂಡೇಶನ್
ಬುದ್ಧಿಮಾಂದ್ಯ ಮಕ್ಕಳಲ್ಲಿ ಸಂಗೀತದ ಮೂಲಕ ಬದಲಾವಣೆ ತರಬೇಕೆಂಬ ಮೂಲ ಕಲ್ಪನೆಯಿಂದ 2003ರಲ್ಲಿ `ಹಂಸ ಕುಟೀರ ಫೌಂಡೇಶನ್' ಜನ್ಮ ತಾಳಿತು. ಬುದ್ಧಿಮಾಂದ್ಯ ಮಕ್ಕಳು ಪರಿಸರದ ಪ್ರಭಾವದಿಂದಿಲೂ, ಕುಟುಂಬದ ವಾತಾವರಣದಿಂದಲೋ ಮೌನಕ್ಕೆ ಶರಣಾಗಿ ಬಿಟ್ಟಿರುತ್ತಾರೆ. ಅವರನ್ನು ಮೌನದಿಂದ ಹೊರತರಲು ಸಂಗೀತ ಬಹಳಷ್ಟು ಕೆಲಸ ಮಾಡುತ್ತದೆ. `ಹಂಸ ಕುಟೀರ'ದಲ್ಲಿ ಬುದ್ಧಿಮಾಂದ್ಯ ಮಕ್ಕಳಷ್ಟೇ ಅಲ್ಲ, ಸಾಮಾನ್ಯ ಬುದ್ಧಿಮಟ್ಟದ ಮಕ್ಕಳು ಸಹ ಸಂಗೀತ ಕಲಿಯಲು ಬರುತ್ತಾರೆ. ಹೀಗಾಗಿ ಬುದ್ಧಿಮಾಂದ್ಯ ಮಕ್ಕಳು ಇತರರೊಡನೆ ಬೆರೆತು ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ರೀತಿ ಸಾಮಾನ್ಯ ಮಕ್ಕಳಲ್ಲಿ ಇರುವ ಬುದ್ಧಿಮಾಂದ್ಯರ ಬಗೆಗಿನ ಹಿಂಜರಿಕೆಯನ್ನು ನೀಗಿಸಲು ಇದು ಸಹಾಯ ಮಾಡುತ್ತದೆ.
ಬಹಳಷ್ಟು ಸಂಗೀತ ಶಾಲೆಗಳು ಬುದ್ಧಿಮಾಂದ್ಯ ಮಕ್ಕಳಿಗೆ ಸಂಗೀತಾಭ್ಯಾಸಕ್ಕೆ ಅನುವು ಮಾಡಿಕೊಡುವುದಿಲ್ಲ. ಅಂತಹ ಒಂದೇ ಒಂದು ಮಗುವಿಗೆ ತರಬೇತಿ ನೀಡುತ್ತಿದ್ದರೆ, ಎಲ್ಲಿ ಇತರೆ ಮಕ್ಕಳು ತಮ್ಮ ಶಾಲೆ ತೊರೆದು ಹೋಗುತ್ತಾರೋ ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ. ಆದರೆ `ಹಂಸ ಕುಟೀರ' ಅಂಥದಕ್ಕೆ ಅಪವಾದ. ಇಲ್ಲಿ ಸಾಮಾನ್ಯ ಮಕ್ಕಳು ಹಾಗೂ ಬುದ್ಧಿಮಾಂದ್ಯ ಮಕ್ಕಳ ಸಮನ್ವಯತೆ ಎದ್ದು ಕಾಣುತ್ತದೆ.
ಬುದ್ಧಿಮಾಂದ್ಯರ ಸಂಗೀತ ಕಾರ್ಯಕ್ರಮ
2002ರಲ್ಲಿ ಡಾ. ಗೀತಾ ಭಟ್ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ `ಸೃಷ್ಟಿ ಸ್ಪೆಷಲ್ ಅಕಾಡೆಮಿ'ಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಸಂಗೀತ ಚಿಕಿತ್ಸೆ ಶುರು ಮಾಡಿದ್ದರು. ಅದೊಂದು ದಿನ ಅಕಾಡೆಮಿಯ ಡೀನ್ ಮೀನಾ ಜೈನ್ ಹಾಗೂ ಸುಚಿತ್ರಾ ಸೋಮಶೇಖರ್‌ರವರು ಗೀತಾ ಭಟ್‌ರನ್ನು ಕರೆದು, ಭಾರತೀಯ ವಿದ್ಯಾಭವನದಲ್ಲಿ ಒಂದು ಕಾರ್ಯಕ್ರಮ ನಡೆಯಲಿದ್ದು, ಈ ಮಕ್ಕಳಿಂದ ಒಂದು ಕಾರ್ಯಕ್ರಮ ಕೊಡಿಸೋಕೆ ಆಗುತ್ತಾ ಎಂದು ಕೇಳಿದರು, ``ಅದನ್ನು ನಾನು ಒಂದು ಸವಾಲು ಎಂಬಂತೆ ಸ್ವೀಕರಿಸಿ, 10 ಮಕ್ಕಳನ್ನು ಸಂಗೀತ ಕಾರ್ಯಕ್ರಮ ನೀಡಲು ಸಿದ್ಧಪಡಿಸಿದೆ. ಆ ಮಕ್ಕಳು ಶ್ಲೋಕ, ಜನಪದ ಗೀತೆ, ದಾಸರ ಪದಗಳನ್ನು ಹಾಡಿ ಅಲ್ಲಿನ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು,'' ಎಂದು ಡಾ. ಗೀತಾ ತಮ್ಮ ಪ್ರಥಮ ಸಾಹಸದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.