ಹಿಂದಿನ ಕಾಲದ ಜೀವನ ಶೈಲಿಗೂ ಇಂದಿನ ಆಧುನಿಕ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿನ ಮನೆ ಇಂದಿನ ಮನಗಳ ನಡುವೆ ಇಂತಹ ಕಂದಕ ಮೂಡಿರುವುದಾದರೂ ಏಕೆ.......?
ನಮ್ಮದು ಒಂಬತ್ತು ಮಕ್ಕಳ ಕುಟುಂಬ. ಅಪ್ಪ, ಅಮ್ಮ ಸೇರಿದರೆ ಒಟ್ಟು ಹನ್ನೊಂದು. ಜೊತೆಗೆ ಗಂಡನನ್ನು ಕಳೆದುಕೊಂಡು, ಇದ್ದ ಒಬ್ಬ ಮಗ ಓಡಿ ಹೋಗಿದ್ದರಿಂದ ಸದಾ ನಮ್ಮ ಮನೆಯಲ್ಲೇ ಇರುವ ಪುಟ್ಟಮ್ಮತ್ತೆ. ಅಪ್ಪನ ಮನೆಯಲ್ಲಿ ಮೂರು ಗಂಡು ಮಕ್ಕಳು. ಅಪ್ಪನೇ ಚಿಕ್ಕವರು. ಜೊತೆಗೆ ನಾಲ್ಕು ಹೆಣ್ಣು ಮಕ್ಕಳು. ನಮ್ಮ ಮನೆಯ ಪಕ್ಕದಲ್ಲೇ ನಮ್ಮ ದೊಡ್ಡಪ್ಪನ ಮನೆ. ನಮ್ಮಿಬ್ಬರ ಮನೆಯೂ ಒಂದೇ ಅಳತೆಯದು. ಹದಿನೈದು ಅಡಿ ಅಗಲ ಮತ್ತು ನೂರು ಅಡಿ ಉದ್ದದ ನಮ್ಮಜ್ಜನ ಮನೆಯನ್ನು ಎರಡು ಭಾಗ ಮಾಡಿದಾಗ ಇಬ್ಬರು ಅಣ್ಣ ತಮ್ಮಂದಿರಿಗೂ ಏಳೂವರೆ ಅಡಿ ಅಗಲ ಮತ್ತು ನೂರು ಅಡಿ ಉದ್ದದ ಮನೆ ಅಜ್ಜನಿಂದ ದೊರಕಿತ್ತು. ಭಾಗವಾದಾಗ ನಮ್ಮ ದೊಡ್ಡ ದೊಡ್ಡಪ್ಪ, ಅಂಗಡಿಯ ಬಂಡವಾಳಕ್ಕೆಂದು ಹಣ ತೆಗೆದುಕೊಂಡು ಹೋಗಿದ್ದರಿಂದ ಉಳಿದ ಒಂದೇ ಆಸ್ತಿಯಾದ ಮನೆಯನ್ನು ಅಣ್ಣ ತಮ್ಮಂದಿರಿಬ್ಬರೂ ಎರಡು ಭಾಗ ಮಾಡಿಕೊಂಡರು. ಅದರಲ್ಲೂ ಹಿಂದುಗಡೆ ಹೋಗ ಹೋಗುತ್ತಾ ದೊಡ್ಡಪ್ಪನ ಮನೆ ಅಗಲವಾಗಿ ನಮ್ಮದು ಚಿಕ್ಕದಾಗಿತ್ತು. ಅದನ್ನು ಇರುವಂತೆಯೇ ಹಂಚಿಕೊಂಡಿದ್ದರು. ನಾವು ಯಾವಾಗಲಾದರೂ, ``ಅಪ್ಪ ನಮಗೇಕೆ ಚಿಕ್ಕದು, ದೊಡ್ಡಪ್ಪನಿಗೇಕೆ ದೊಡ್ಡದು,'' ಎಂದು ಕೇಳಿದರೆ, ``ಅವರು ದೊಡ್ಡನಲ್ಲವೇನಮ್ಮ ಅದಕ್ಕೆ,'' ಎನ್ನುತ್ತಿದ್ದರು.

ನಂತರ ಸ್ವಲ್ಪ ದೊಡ್ಡವಳಾದ ಮೇಲೆ, ``ಸಮನಾಗಿ ಹಂಚಿಕೊಳ್ಳೋಕೆ ಗೋಡೆ ಒಡೆದು ಮತ್ತೆ ಕಟ್ಟಲು ಹಣವಾದರೂ ಎಲ್ಲಿತ್ತು ಮಗಳೇ....'' ಎನ್ನುತ್ತಿದ್ದರು ಅಪ್ಪ.
ನಮ್ಮಮ್ಮ ಅಪ್ಪನ ಎರಡನೆಯ ಹೆಂಡತಿ. ಒಂದು ಅಪಘಾತದಲ್ಲಿ ಅಪ್ಪನ ಮೊದಲ ಹೆಂಡತಿ ಮೃತಪಟ್ಟಿದ್ದರಿಂದ ನಾಲ್ಕು ಮಕ್ಕಳ ಮೇಲೆ ಅವರು ಅಮ್ಮನನ್ನು ಮದುವೆಯಾದರು. ಅಮ್ಮನದು ಕನಸನ್ನು ಕಾಣುವ ವಯಸ್ಸು. ಹದಿಹರೆಯ, ಚೆಲುವೆಯೇ ಮೈವೆತ್ತಿದಂತಿದ್ದ ಸುಕುಮಾರಿ. ಆದರೆ ಕಿತ್ತು ತಿನ್ನುವ ಬಡತನ. ಅಮ್ಮನಿಗೆ ಇಷ್ಟವಿತ್ತೋ ಇಲ್ಲವೋ ಅಂತೂ ಮದುವೆಯಾಯಿತು. ಅಮ್ಮ ಅತ್ತೆ ಮನೆಗೆ ಬಂದರು. ಒಂದೆರಡು ವಾರದಲ್ಲೇ ಅಪ್ಪನ ಭಾವ ಮೈದುನರ ಮನೆಯಿಂದ ಮಕ್ಕಳ ಆಗಮನವಾಯಿತು. ನಾಲ್ಕೂ ಮಕ್ಕಳು ಮನೆಗೆ ಬಂದರು. ಅಮ್ಮನಿಗೆ ಹದಿನಾರು ವರುಷ, ಮದುವೆಯ ಕನಸನ್ನು ಹೊತ್ತು ಬಂದ ಅವರಿಗೆ ಎಷ್ಟು ನಿರಾಸೆಯಾಗಿರಬೇಡ. ಆದರೆ ಇದರಲ್ಲಿ ಅಮ್ಮನನ್ನು ಕಳೆದುಕೊಂಡ ಮಕ್ಕಳ ತಪ್ಪಾದರೂ ಏನಿದೆ? ತಮ್ಮ ಬೇಸರ ಮತ್ತು ನಿರಾಸೆಯನ್ನು ನುಂಗಿಕೊಂಡೇ ಅಮ್ಮ ತಮ್ಮ ಸಂಸಾರ ಪ್ರಾರಂಭಿಸಿದರು. ಅಜ್ಜನ ಮನೆಯಲ್ಲಿ ಉಪವಾಸ, ವನವಾಸವಿತ್ತು. ಆದರೆ ಗಂಡನ ಮನೆ ಸಹ ಅಂತಹ ಸುಖದ ಸುಪ್ಪತಿಗೆಯೇನಲ್ಲ, ಆದರೂ ನಮ್ಮ ಅಪ್ಪನಿಗೊಂದು ವ್ಯಾಪಾರ, ವ್ಯವಹಾರವಿತ್ತು. ಮನೆಯವರೆಲ್ಲರಿಗೂ ಹೊಟ್ಟೆ ತುಂಬಾ ಊಟದ ಕೊರತೆಯಂತೂ ಇರಲಿಲ್ಲ.
ಅಮ್ಮನಿಗೆ ಬೇಸರ ಸಿಟ್ಟು ಬಂದಾಗೆಲ್ಲಾ ಗೊಣಗುತ್ತಿದ್ದುದುಂಟು. `ನಾಲ್ಕು ಮಕ್ಕಳಿದ್ದಾರೆಂದು ನನಗೆ ಹೇಳೇ ಇರಲಿಲ್ಲ,' ಎಂದು. ಅಮ್ಮನಿಗೂ ಐದು ಮಕ್ಕಳಾದವು. ಎರಡು ಗಂಡು ಮತ್ತು ಮೂರು ಹೆಣ್ಣು. ಅಮ್ಮ ಈಗಲೂ ಹೇಳುತ್ತಾಳೆ, ``ನೀನು ಮತ್ತು ನಿನ್ನ ತಮ್ಮ ಹುಟ್ಟಿದ ಮೇಲೆ ನಮಗೆ ಮಕ್ಕಳು ಬೇಡವಾಗಿತ್ತು,'' ಎಂದು.





