ಕೊನೆಗೂ ಸಾಧನೆಗೆ ತಕ್ಕ ಗೌರವ ದಕ್ಕಿದೆ. ಜಗದಗಲಕ್ಕೂ ಭಾರತದ ಕೀರ್ತಿ ಪತಾಕೆ ಹಾರಿಸಿದ ದೇಶದ ಹೆಮ್ಮೆಯ ಪುತ್ರಿಯ ಮುಡಿಗೆ ಕಿರೀಟ ಸಿಕ್ಕಿದೆ. ಕ್ರೀಡಾ ಕ್ಷೇತ್ರದಲ್ಲಿ ದಿಗ್ಗಜ ರಾಷ್ಟ್ರಗಳಿಗೂ ಅಚ್ಚರಿ ಮೂಡಿಸಿ ಪದಕಗಳಿಗೆ ಕೊರಳೊಡ್ಡಿದ ಭಾರತಾಂಬೆಯ ಮಗಳಿಗೆ ಅತ್ಯುನ್ನತ ಪ್ರಶಸ್ತಿ ಸಿಕ್ಕಿದೆ. ಹೌದು.. ಕಳೆದ ಪ್ಯಾರಿಸ್ ಒಲಿಂಪಿಕ್ನಲ್ಲಿ ಎರಡು ಕಂಚಿನ ಪದಕ ಗೆದ್ದ ಮನುಭಾಕರ್ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೆ ಭಾಜನರಾಗಿದ್ದಾರೆ.
22 ವರ್ಷದ ಮನುಭಾಕರ್, ಒಲಿಂಪಿಕ್ಸ್ ಒಂದೇ ಆವತ್ತಿಯಲ್ಲಿ ಎರಡು ಪದಕ ಗೆಲ್ಲುವ ಮೂಲಕ ಸ್ವತಂತ್ರ ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 2024ರ ಆಗಸ್ಟ್ನಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗ ಮತ್ತು 10 ಮೀ ಏರ್ ಪಿಸ್ತೂಲ್ ಮಿಕ್ಸೆಡ್ ಟೀಂ ವಿಭಾಗದಲ್ಲಿ ಕಂಚಿಕ ಪದಕ ಗೆದ್ದಿದ್ದರು.
ಆದರೆ, ಕೆಲ ದಿನಗಳ ಹಿಂದಷ್ಟೇ ಭಾಕರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸದ ಕಾರಣ ಆಯ್ಕೆ ಸಮಿತಿಯು ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲದ ಹಿನ್ನೆಲೆಯಲ್ಲಿ ಮನು ಅವರನ್ನು ಖೇಲ್ ರತ್ನಗೆ ಕಡೆಗಣಿಸಲಾಗಿದೆ ಎಂಬ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದವು. ಇದಾದ ಬಳಿಕ ಖುದ್ದು ಮನು ಭಾಕರ್ ತಾನು ಅರ್ಜಿ ಸಲ್ಲಿಸುವಾಗ ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದರು. ಬಳಿಕ ಅವರನ್ನು ಪ್ರಶಸ್ತಿ ಪಟ್ಟಿಯಲ್ಲಿ ಸೇರಿಸಿದ್ದರಿಂದ ಇದೀಗ ದೇಶದ ಅಸಂಖ್ಯಾತ ಕ್ರೀಡಾಪ್ರೇಮಿಗಳು ಖುಷಿಗೊಂಡಿದ್ದಾರೆ. ಇದೇ ತಿಂಗಳ 17ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
14ನೇ ವಯಸ್ಸಲ್ಲಿ ಪಿಸ್ತೂಲ್ ಹಿಡಿದಳು: ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿ ಜಾಟ್ ಸಮುದಾಯದಲ್ಲಿ ಜನಿಸಿದ ಮನುಭಾಕರ್ ಚಿಕ್ಕಂದಿನಿಂದಲೂ ಕ್ರೀಡೆ ಅಂದ್ರೆ ಬಲು ಇಷ್ಟ. ತಂದೆ ರಾಮ್ ಕಿಶನ್ ಭಾಕರ್ ಮರ್ಚೆಂಟ್ ನೇವಿಯಲ್ಲಿ ಚೀಫ್ ಇಂಜಿನಿಯರ್ ಆಗಿದ್ರೆ, ತಾಯಿ ಸುಮೇಧ ಭಾಕರ್ ಹರಿಯಾಣದ ಗೊರಿಯಾದ ಯುನಿವರ್ಸಲ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಪ್ರಾಂಶುಪಾಲೆಯಾಗಿದ್ದರು. ಇದೇ ಶಾಲೆಯಲ್ಲೇ ಮನುಭಾಕರ್ ವಿದ್ಯಾಭ್ಯಾಸ ಕಲಿಯುತ್ತಿದ್ದಳು. ವಾಲಿಬಾಲ್, ಬಾಕ್ಸಿಂಗ್, ಸ್ಕೇಟಿಂಗ್, ಟೆನಿಸ್, ಕರಾಟೆ ಹೀಗೆ ಶಾಲಾ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಸೈಎನಿಸಿಕೊಂಡಿದ್ದಳು. ಅಷ್ಟೇ ಅಲ್ಲ, ಸುಮಾರು ೬೦ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದುಕೊಂಡು ಬೀಗಿದ್ದಳು. ಆದ್ರೆ ವಾಲಿಬಾಲ್ ಆಡುತ್ತಿದ್ದಾಗ ಕಣ್ಣಿಗೆ ಗಾಯ ಮಾಡಿಕೊಂಡ ಮನು, ಸಡನ್ ಆಗಿ ಶೂಟಿಂಗ್ ಸ್ಪರ್ಧೆಯತ್ತ ಒಲವು ತೋರಿದ್ದಳು. ಬೇರೆ ಕ್ರೀಡೆಗಳತ್ತ ಗಮನ ಬಿಟ್ಟು ೧೪ರ ಹರೆಯದಲ್ಲೇ ತನ್ನ ಅಪ್ಪನ ಬಳಿ ಶೂಟರ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಳು. ಪ್ರತಿ ಸಲ ಮನೆಗೆ ಬಂದಾಗ ಅಪ್ಪನ ಬಳಿ ಕ್ರೀಡಾ ಸಲಕರಣೆಗಳ ಪಟ್ಟಿ ಸಿದ್ಧಪಡಿಸಿಕೊಂಡು ತನಗೆ ಬೇಕಾಗಿರುವುದನ್ನು ಪಡೆದುಕೊಳ್ಳುತ್ತಿದ್ದಳು. ಮಗಳಿಗೆ ಯಾವತ್ತೂ ಇಲ್ಲ ಅನ್ನೋ ಮಾತು ರಾಮ್ ಕಿಶನ್ ಬಾಯಲ್ಲೂ ಬಂದಿರಲಿಲ್ಲ. ಅದು ೨೦೧೬.. ಆಗಷ್ಟೇ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದಿತ್ತು. ರಜೆಯಲ್ಲಿ ಮನೆಗೆ ಬಂದ ರಾಮ್ ಕಿಶನ್ ಭಾಕರ್‌ಗೆ ಮಗಳು ಮನು ಭಾಕರ್ ಇಟ್ಟ ಬೇಡಿಕೆ ಒಂದೇ ಅದು ಪಿಸ್ತೂಲ್. ತಾನು ಶೂಟರ್ ಆಗೋ ಕನಸನ್ನು ಬಿಚ್ಚಿಟ್ಟಾಗ ಅಪ್ಪನಾಗಿ ರಾಮ್ ಕಿಶನ್ ಮಗಳ ಆಸೆಯನ್ನು ನಿರಾಸೆಗೊಳಿಸಲಿಲ್ಲ. 1,50,000 ರೂ. ಕೊಟ್ಟು ಪ್ರೀತಿಯ ಮಗಳಿಗೆ ಪಿಸ್ತೂಲ್ ಉಡುಗೊರೆಯಾಗಿ ನೀಡಿದ್ದರು.
ಹೊಸ ತಿರುವು ಕೊಟ್ಟ ಜಸ್ಪಾಲ್ ರಾಣಾ: ಅದಕ್ಕೆ ತಕ್ಕಂತೆ ಶಾಲಾ ಕೋಚ್ ನರೇಶ್ ಮತ್ತು ಕಾರ್ಗಿಲ್ ಯೋಧ ಅನಿಲ್ ಜಾಖರ್ ಗರಡಿಯಲ್ಲಿ ಪಳಗಿದ ಮನು ಭಾಕರ್ ನಂತರ ಹಿಂದಿರುಗಿ ನೋಡಲೇ ಇಲ್ಲ. ರಾಜ್ಯ, ರಾಷ್ಟ್ರೀಯ, ವಿಶ್ವಕಪ್ ಶೂಟಿಂಗ್, ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹೀಗೆ ನಾನಾ ಕ್ರೀಡಾ ಕೂಟಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ಭರವಸೆಯ ಶೂಟರ್ ಆಗಿ ಕಂಗೊಳಿಸಿದ್ದಳು. ಜೊತೆಗೆ ಖ್ಯಾತ ಶೂಟರ್ ಜಸ್ಪಲ್ ರಾಣಾ ಮಾರ್ಗದರ್ಶನ ಮನು ಭಾಕರ್ ಅವರ ಬದುಕಿಗೆ ಹೊಸ ತಿರುವನ್ನೇ ನೀಡಿತ್ತು. 22 ವರ್ಷದ ಮನು ಭಾಕರ್ 2023ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್ 2022 ರಲ್ಲೂ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಮೂಲಕವೇ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
=======================