*ಅಡುಗೆಮನೆ ಕೆಲ್ಸಾನಾ...*

 

_*ಅಡುಗೆಮನೆ ಕೆಲ್ಸ ಅಂದ್ರೆ....*

_.... *ಬೇಯ್ಸೋದಷ್ಟೇ ಅಲ್ಲ!*

 

*ಕೊತ್ತಂಬರಿ, ಕರಿಬೇವು, ಮೆಣಸಿನಕಾಯಿ, ನಿಂಬೇಹಣ್ಣು, ಶುಂಠಿ ಕೆಡದೇ ಇರೋ ಹಾಗೆ ಮ್ಯಾನೇಜ್ ಮಾಡೋ ಕಲೆ ಇರಬೇಕು.*

 

*ಯಾವ್ಯಾವ ತರಕಾರಿ ಎಷ್ಟು ದಿನ ಫ್ರೆಷ್ ಇರುತ್ತೆ, ಯಾವುದು ಬೇಗ ಹಾಳಾಗುತ್ತೆ, ಅನ್ನೋದು ಗೊತ್ತಿರ್ಬೇಕು.*

 

*ಗೊತ್ತಿದ್ದರಷ್ಟೇ ಸಾಲದು; ದಿನಾ ಒಂದೇ ತರ ಅಡುಗೆ ಮಾಡದೆ ವಿಧ ವಿಧವಾದ ಅಡುಗೆ ರುಚಿ ರುಚಿಯಾಗಿ ತಯಾರಿಸಿ ಅಡುಗೆ ಮನೆ ನಿಭಾಯಿಸೋ ಕಲೆ ಇರಬೇಕು.*

 

*ಯಾವಯಾವ ದಿನಸಿ, ಎಷ್ಟೆಷ್ಟು ಬೇಕು, ಎಂಬ ಲೆಕ್ಕಾಚಾರ ಗೊತ್ತಿರಬೇಕು. ತಂದ ದಿನಸಿಯನ್ನು ಹಾಳಾಗದಂತೆ ಕಾಪಾಡುವ ಸ್ಟೋರ್ಸ್ ಮ್ಯಾನಾಜ್‌ಮೆಂಟ್ ಗೊತ್ತಿರಬೇಕು.*

 

*ಊಟ ಮಾಡುವ ಆಸಾಮಿಗಳ ಇಷ್ಟಾನಿಷ್ಟಗಳು, ತಿನ್ನೋ ಸಾಮರ್ಥ್ಯ ತಿಳಿದಿರಬೇಕು. ಅದಕ್ಕೆ ತಕ್ಕಂತೆ ದಿನಸಿ ಇತ್ಯಾದಿ ಅಳತೆ ಅಂದಾಜು ಮಾಡ್ಕೋಬೇಕು. ಆಮೇಲೆ ಪಾತ್ರೆ ಆರಿಸ್ಕೊಬೇಕು.*

kitchen 1

*ಬೇಯಿಸಬೇಕು, ರುಬ್ಬಬೇಕು, ಹುರಿಯಬೇಕು, ಪುಡಿಮಾಡಬೇಕು, ಶ್ಯಾಲೋ-ಫ್ರೈ ಡೀಪ್-ಫ್ರೈ ಮಾಡಬೇಕು, ಸ್ಟೀಮ್‌ಕುಕ್ ಮಾಡಬೇಕು, ಕುಕ್ಕರ್ ಕೂಗಿಸಬೇಕು; ಆದರೆ ಕೂಗಾಡಬಾರದು.*

 

*ತೊಳೀಬೇಕು, ಬಳೀಬೇಕು, ಸಾರಿಸಬೇಕು, ಒಪ್ಪಓರಣ ಮಾಡಬೇಕು, ಅಚ್ಚುಕಟ್ಟು ಮಾಡಬೇಕು.*

 

*ಹಳೆ ಹಾಲು - ಹೊಸ ಹಾಲು, ಹಳೆ ಡಿಕಾಕ್ಷನ್ನು - ಹೊಸಾ ಡಿಕಾಕ್ಷನ್ನು ವ್ಯತ್ಯಾಸ ಗೊತ್ತಿರಬೇಕು.  ಕಾಫಿಪುಡಿ-ಟೀಪುಡಿ ವ್ಯತ್ಯಾಸ ಗೊತ್ತಿರಬೇಕು.*

 

*ಒಂದು ದೋಸೆ ತಟ್ಟೇಲಿದ್ರೆ, ಇನ್ನೊಂದನ್ನ ಕಾವಲಿಯಲ್ಲಿ, ಮತ್ತೊಂದನ್ನ ಹಾಟ್‌ಕೇಸಲ್ಲಿ ಕೂರಿಸೋ ಸ್ಕಿಲ್ ಮ್ಯಾನೇಜ್‌ಮೆಂಟ್ ಗೊತ್ತಿರಬೇಕು.*

 

*ಎರಡು-ಮೂರು ಬರ್ನರುಗಳಲ್ಲಿ ಒಟ್ಟೊಟ್ಟಿಗೆ ಬೇರೆ ಬೇರೆ ವೆರೈಟಿ ಅಡುಗೆ ಮಾಡೋ ಟೈಮ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.*

 

*ಬಡಿಸೋಕ್ಕೆ ಗೊತ್ತಿರಬೇಕು. ಮಿಕ್ಕಿದ್ದನ್ನ ಖಾಲಿ ಮಾಡಿ ಬೇರೇದಕ್ಕೆ ಹಾಕಿಡೋ ಸ್ಪೇಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.*

 

*ಸುಮ್ನೆ ಒಂದ್ ರಾಶಿ ಪಾತ್ರೆ ಗುಡ್ಡೆ ಹಾಕದೇ ಕನಿಷ್ಠ ಪಾತ್ರೆಗಳಲ್ಲೇ ಗರಿಷ್ಠ ಅಡುಗೆ ಮಾಡಿ ಬಡಿಸೋ ರಿಸೋರ್ಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.*

 

*'ಅಮ್ಮಾ' ಅಂತ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆಯದಕ್ಕೆ ಕರೆಯುತ್ತಾರೆ. ವಿಧವಿಧವಾದ ಕರೆಗಳಿಗೆ ಸ್ಪಂದಿಸುತ್ತಲೇ ಅಂದುಕೊಂಡ ಸಮಯಕ್ಕೆ ಅಚ್ಚುಕಟ್ಟಾಗಿ ಎಲ್ಲಾ ಮಾಡಿಡೋ ಮಲ್ಟಿ-ಟಾಸ್ಕಿಂಗ್ ಎಬಿಲಿಟಿ ಇರಬೇಕು.*

 

*ಸಣ್ಣ ಪುಟ್ಟ ಅವಘಡಗಳಾದಾಗ (ಕಟ್ಸು, ಬರ್ನ್ಸು) ಧೃತಿಗೆಡದೆ ಗಾಬರಿಯಾಗದೆ ನಿಭಾಯಿಸೋ ಅಷ್ಟು ಸೈನ್ಸು, ಸಮಯಪ್ರಜ್ಞೆ, ಕಾಮನ್‌ಸೆನ್ಸು ಇರಬೇಕು.*

 

*ಇಷ್ಟನ್ನೂ ಯಾವುದೇ ಕೋರ್ಸಿಗೆ ಹೋಗದೇ ತಲೆತಲೆಮಾರುಗಳಿಂದ ಕಲಿತು ಮಾಡ್ತಾ ಬಂದಿರೋ ಎಲ್ಲ ಶ್ರಮಜೀವಿಗಳಿಗೂ ಗೌರವ ಕೊಡೋ ದೊಡ್ಡಮನಸ್ಸಿರಬೇಕು.*

 

*"ಅಡುಗೆಮನೆ ಕೆಲ್ಸಾನಾ? ಅದೇನ್ ಮಹಾ!" ಅಂತ ಒಮ್ಮೆ ತಾತ್ಸಾರ ಮಾಡಿ ಹೀಗಳೆಯೋ ಮುನ್ನ ಇಷ್ಟೆಲ್ಲ ಕ್ವಾಲಿಟಿ, ಕೆಪ್ಯಾಸಿಟಿ ನಿಮಗಿದ್ಯಾ ಅಂತ ಯೋಚಿಸಿ.*

 

*ಅಡುಗೆ ಮನೆ ಎಲ್ಲರ ಅವಶ್ಯಕತೆ. ಅಡುಗೆ ಎಲ್ಲರ ಜೀವನಾಧಾರ.*

 

*ಅಡುಗೆ ಮನೆ ಕೆಲಸ.....*

*...ಅದೊಂದು ಧ್ಯಾನ,*

*...ಅದೊಂದು ಭಕ್ತಿ,*

*...ಅದೊಂದು ದಿನಚರಿ,*

*...ಅದೊಂದು ಕಲೆ,*

*...ಅದೊಂದು ವಿಜ್ಞಾನ,*

*...ಅದೊಂದು ಅನುಭೂತಿ,*

*...ಅದೊಂದು ಸೇವೆ,*

*...ಅದೊಂದು ಪ್ರೀತಿ,*

*...ಅದೊಂದು ಗೌರವ,*

*...ಅದೊಂದು ಮೌಲ್ಯ.*

*ಅದರ ಬಗ್ಗೆ ತಾತ್ಸಾರ ಬೇಡ.*

 

*ಎಲ್ಲಾ ಅಡುಗೆ ಮನೆ ಕಲಾವಿದರಿಗೂ ಒಂದು ದೊಡ್ಡ ನಮಸ್ಕಾರ.*

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ