ನಾ. ಡಿಸೋಜ
ಎಪ್ಪತ್ತರ ದಶಕದಲ್ಲಿ ಆಗತಾನೇ ಓದಲು ಕಲಿತದ್ದೇ ತಡಾ, ನಮ್ಮಮ್ಮ, ಪ್ರಜಾವಾಣಿ ಪತ್ರಿಕೆಯ ಹೆಡ್ ಲೈನ್ ಮತ್ತು ಕ್ರೀಡಾ ಪುಟಗಳನ್ನು ಓದಲು ನನ್ನನ್ನು ಶುರು ಹಚ್ಚಿದರು. ಕೆಲವೇ ತಿಂಗಳಲ್ಲಿ ಪತ್ರಿಕೆ ಓದುವುದು ಸರಾಗವಾದಾಗ ಪತ್ರಿಕೆಯ ಜೊತೆ, ಸುಧಾ, ಪ್ರಜಾಮತ, ಮಯೂರ ಪುಸ್ತಗಳು ಕೈಗೆ ಬಂದವು. ಇನ್ನೂ ನಾಲ್ಕೈದನೇಯ ತರಗತಿಗೆ ಬರುವಷ್ಟರಲ್ಲಿಯೇ ಮಜ್ನೂ, ಶೂಜಾ, ಡಾಬು, ಫ್ಯಾಂಟೆಮ್, ಪುಟ್ಟಿ ಗಳನ್ನು ದಾಟಿ ಧಾರಾವಾಹಿಗಳನ್ನು ಓದಲು ಶುರು ಮಾಡಿಕೊಂಡಾಗಲೇ ನನಗೆ ಪರಿಚಯವಾದ ಮೊದಲ ಲೇಖಕರೇ ಶ್ರೀ ನಾರ್ಬಟ್ ಡಿಸೋಜ ಅಂದರೆ ನಾ. ಡಿಸೋಜಾ. ಆವರ ಮಾತೃಭಾಷೆ ಕೊಂಕಣಿ ಆದರೂ ಅಪ್ಪಟ ಕನ್ನಡಿಗ, ಆಚರಿಸುವುದು ಕ್ರೈಸ್ತ ಧರ್ಮವಾದರೂ ಅಪ್ಪಟ ಭಾರತೀಯ. ಕೇವಲ ಕವಿಯಲ್ಲದೇ, ಅಪ್ಪಟ ಪರಿಸರವಾದಿಯಾದ ನಾ. ಡಿಸೋಜಾವರು ಭಾನುವಾರ 2025ರ ಜನವರಿ 5ರ ರಾತ್ರಿ ನಿಧನರಾಗಿರುವುದು ಬಹಳ ದುಃಖಕರವಾದ ವಿಷಯವಾಗಿದ್ದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ತಿಳಿಯೋಣ ಬನ್ನಿ.
ಶಿವಮೊಗ್ಗದ ಸಾಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಶ್ರೀ ಫಿಲಿಪ್ ಡಿಸೋಜ ಮತ್ತು ಶ್ರೀಮತಿ ರೂಪೀನಾ ಡಿಸೋಜ ದಂಪತಿಗಳ ಸುಪುತ್ರರಾಗಿ 1937 ಜೂನ್ 6ರಂದು ಪೋಷಕರು ನಾರ್ಬಟ್ ಡಿಸೋಜ ಎಂದು ನಾಮಕರಣ ಮಾಡಿದರೂ, ಸಾಹಿತ್ಯ ಲೋಕದಲ್ಲಿ ನಾ.ಡಿಸೋಜ ಎಂದೇ ಚಿರಪರಿಚಿತರು ಮತ್ತು ಆತ್ಮೀಯ ಒಡನಾಡಿಗಳ ಪ್ರೀತಿಯ ನಾಡಿ.
ಅಪ್ಪಟ ಕನ್ನಡಾಭಿಮಾನಿ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಅವರ ತಂದೆಯವರು ತಮ್ಮ ಶಾಲೆಯ ಮಕ್ಕಳಿಗೆ ಕಲಿಸಲು ಜಿ.ಪಿ. ರಾಜರತ್ನಂ, ಕುವೆಂಪು, ಬೇಂದ್ರೆ ಮುಂತಾದವರ ಪದ್ಯಗಳನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟಿದ್ದರು. ತಮ್ಮ 6ನೇ ವಯಸ್ಸಿಗೆ ಆ ಪುಸ್ತಕವನ್ನು ಓದಿ ಪ್ರಭಾವಿತರಾಗಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡರು ಡಿಸೋಜರವರು. ಅವರು ಓದುತ್ತಿದ್ದ ಸಾಗರದ ಹೈಸ್ಕೂಲಿನಲ್ಲಿ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ತಮ್ಮ ಗೊರೂರು ನರಸಿಂಹಾಚಾರ್ಯರು ಶಿಕ್ಷಕರಾಗಿದ್ದರು. ಅವರ ಪಾಠ ಪ್ರವಚನಗಳು ಕಗ್ಗಂಟಾಗಿರದೆ, ಕಥೆಗಳ ರೂಪದಲ್ಲಿ ಇರುತ್ತಿದ್ದವು. ಅವರ ಪ್ರಭಾವದಿಂದಾಗಿ ಬಾಲ್ಯದಲ್ಲೇ ಡಿಸೋಜ ಅವರಿಗೆ ಸಾಹಿತ್ಯಸಕ್ತಿಯನ್ನು ಹೆಚ್ಚಿಸಿತು.
ಇವರ ಕಲಿಯುತ್ತಿದ್ದ ಶಾಲೆಯಲ್ಲಿ ಸರ್ವಧರ್ಮ ಸಮಾನತೆಯ ಪ್ರತೀಕವಾಗಿ ಪ್ರತೀ ಬುಧವಾರ ಬಸವಣ್ಣನವರ ವಚನಗಳು, ಗುರುವಾರ ಭಗವದ್ಗೀತೆ, ಶುಕ್ರವಾರ ಕುರಾನ್ ಮತ್ತು ಶನಿವಾರ ಬೈಬಲ್ ಪಠಿಸಬೇಕಾಗಿತ್ತು. ಈ ವಿಷಯವನ್ನು ತಿಳಿದ ಅವರ ಚರ್ಚಿನ ಪಾದ್ರಿಯವರು ಮಗೂ, ನೀನು ಕ್ರಿಶ್ಚಿಯನ್. ನಿನ್ನ ಶಾಲೆಯಲ್ಲಿ ಇತರೇ ಧರ್ಮಗಳ ಬಗ್ಗೆ ಪ್ರಾರ್ಥನೆ ಮಾಡುವಾಗ ನೀನು ದೂರ ಹೋಗಿ ನಿಂತು ಬೈಬಲ್ ಮಾತ್ರ ಓದಬೇಕು ಎಂದು ಬುದ್ಧಿ ಹೇಳಲು ಬಂದಾಗ, ಬಾಲಕ ಡಿಸೋಜ ಪಾದ್ರಿಗಳಿಗೆ ಫಾದರ್, ನನಗೆ ಕ್ರಿಸ್ತನ ಬಗ್ಗೆ ಮತ್ತು ಕ್ರೈಸ್ತ ಧರ್ಮದ ಬಗ್ಗೆ ನಂಬಿಕೆ ಮತ್ತು ಭಕ್ತಿ ಇದೆ. ಅದೇ ರೀತಿ ಭಾರತದಲ್ಲಿರುವ ಇತರೇ ಧರ್ಮಗಳ ಬಗ್ಗೆಯೂ ಶ್ರದ್ಧಾ ಭಕ್ತಿಯಿದೆ. ಏಕೆಂದರೆ, ಕ್ರಿಶ್ಫಿಯನ್ ಧರ್ಮವೊಂದೇ ನಿಜವಾದ ಧರ್ಮವಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದರಂತೆ. ಇದರ ಪರಿಣಾಮವಾಗಿ ಆ ಪಾದ್ರಿಗಳು ಪ್ರತೀ ಭಾನುವಾರ ಡಿಸೋಜರವರನ್ನು ಚರ್ಚಿನ ಪ್ರಾರ್ಥನೆಗಳಿಗೆ ಬಾರದಂತೆ ತಡೆದಿದ್ದರಂತೆ ಮತ್ತು ದಿವ್ಯ ಪ್ರಸಾದವನ್ನು ಕೊಡುವುದನ್ನು ನಿಲ್ಲಿಸಿದ್ದರಂತೆ. ಈ ರೀತಿಯಾಗಿ ವಿದ್ಯಾರ್ಥಿ ದಿಶೆಯಲ್ಲೇ ನಾ ಡಿಸೋಜರವರು ಸರ್ವ ಧರ್ಮ ಸಮನ್ವಯಕಾರಾಗಿದ್ದರು. ಅವರನ್ನು ಎಂದಿಗೂ ಸಹಾ ಬರಿಯ ಹಣೆಯಲ್ಲಿ ನೋಡೇ ಇಲ್ಲ. ಸದಾಕಾಲವೂ ಅವರ ಹಣೆಯ ಮೇಲೆ ಕುಂಕುಮ ಇದ್ದೇ ಇರುತ್ತಿತ್ತು.