ನಾಗೇಶ್‌ : ಅಲ್ಲಯ್ಯ…. ಮನೇಲಿ ಸದಾ ನಗ್ತಾ ನಗ್ತಾ ಇರ್ತೀರಿ ನೀವಿಬ್ಬರು. ನಿಮ್ಮನ್ನು ಕಂಡರೆ ಎಷ್ಟು ಹೊಟ್ಟೆ ಉರಿಯುತ್ತೆ ಗೊತ್ತಾ….. ಅದು ಸರಿ, ನಿಮ್ಮ ಈ ಸಂತೋಷದ ರಹಸ್ಯವೇನು?

ಸುರೇಶ್‌ : ದಿನಾ ಮನೆಯಲ್ಲಿ ಪಾತ್ರೆ ತೊಳೆಯೋನು ನಾನೇ…. ಆಗ ನನ್ನ ಹೆಂಡತಿ ದೂರದಿಂದ ನನ್ನತ್ತ ಪಾತ್ರೆ ಎಸೆಯುತ್ತಾಳೆ, ಅದು ನನಗೆ ತಗುಲಿದರೆ ಅವಳು ಖುಷಿಯಿಂದ ನಗ್ತಾಳೆ. ತಗುಲದೆ ಕೆಳಗೆ ಬಿದ್ದರೆ ನಾನು ಖುಷಿಯಾಗಿ ನಗ್ತೀನಿ…. ಅಷ್ಟೆ.

ಡಾಕ್ಟರ್‌ : ಸಾರಿ ಗಿರೀಶ್‌…. ನಿಮ್ಮ ಹೆಂಡತಿ ಇನ್ನು 2-3 ದಿನ ಬದುಕಿರ್ತಾರೆ ಅಷ್ಟೇ, ಅವರು ಈ ಭೂಮಿಯಲ್ಲಿ ಕೆಲವೇ ದಿನದ ಅತಿಥಿ. ಐ ಆ್ಯಮ್ ರಿಯಲಿ ಸಾರಿ….!

ಗಿರೀಶ್‌ : ಅದಕ್ಕೆ ನೀವ್ಯಾಕೆ ಸಾರ್‌ ಸಾರಿ ಕೇಳ್ತೀರಿ? ಇಷ್ಟು ವರ್ಷ ಶೋಷಣೆ ಸಹಿಸಿದವನು ಇನ್ನು 2-3 ದಿನ ಅಡ್ಜಸ್ಟ್ ಮಾಡಿಕೊಳ್ಳಲಾರೆನೇ….?

ಗುಂಡನ ಕಾರು ಪಾರ್ಕಿಂಗ್‌ ಸ್ಪಾಟ್‌ನಿಂದ ಕಾಣೆಯಾಗಿತ್ತು. 2 ದಿನ ಬಿಟ್ಟು ನೋಡಿದಾಗ ಕಾರು ವಾಪಸ್‌ ಅದೇ ಜಾಗದಲ್ಲಿತ್ತು. ಅದರ ಒಳಗೆ ಒಂದು ಲಕೋಟೆ ಇಡಲಾಗಿತ್ತು. ಅದರಲ್ಲಿ ಹೀಗೊಂದು ಪತ್ರವಿತ್ತು :

`ಅಮ್ಮನ ಆರೋಗ್ಯ ಹದಗೆಟ್ಟು ದಿಢೀರ್‌ ಹಾರ್ಟ್‌ ಅಟ್ಯಾಕ್‌ ಆಯಿತು. ಅವರನ್ನು ದೊಡ್ಡ ಆಸ್ಪತ್ರೆಗೆ ಸೇರಿಸಲು ಬೆಂಗಳೂರಿಗೆ ಹೋಗಬೇಕಾಯಿತು. ಆದರೆ ಅಂಥ ನಡುರಾತ್ರಿಯಲ್ಲಿ ನಮಗೆ ಎಲ್ಲೂ ಗಾಡಿ ಸಿಗಲಿಲ್ಲ. ಆ ಕಾರಣದಿಂದಲೇ ನಿಮ್ಮ ಅನುಮತಿ ಇಲ್ಲದೆ ನಿಮ್ಮ ಕಾರನ್ನು ಬಳಸಿಕೊಂಡೆವು. ನಿಮಗೆ ತೊಂದರೆ ಕೊಟ್ಟಿದ್ದಕ್ಕಾಗಿ ವಿಷಾದಿಸುತ್ತೇವೆ. ನಿಮ್ಮ ಕಾರಿಗೆ ಫುಲ್ ಟ್ಯಾಂಕ್‌ ಪೆಟ್ರೋಲ್ ತುಂಬಿಸಿದ್ದೇನೆ, ಗಾಡಿ ಯಥಾಸ್ಥಿತಿಯಲ್ಲಿದೆಯೇ ದಯವಿಟ್ಟು ನೋಡಿಕೊಳ್ಳಿ. ಹೊಸದಾಗಿ ಬಿಡುಗಡೆಗೊಂಡ ಸಿನಿಮಾದ 4 ಟಿಕೆಟ್‌ ಒಂದು ಕವರ್‌ನಲ್ಲಿ, ಡ್ರೈವಿಂಗ್‌ ಸೀಟ್‌ ಮೇಲಿದೆ. ಇಂದು ನಿಮ್ಮ ಮನೆಯವರೆಲ್ಲರೂ ಈ ಈವ್ನಿಂಗ್‌ ಶೋ ನೋಡಿ, ಎಂ.ಟಿ.ಆರ್‌.ನಲ್ಲಿ ಡಿನ್ನರ್‌ ಮುಗಿಸಿ ಬರಬೇಕಾಗಿ ವಿನಂತಿ, ಅದರ ಪ್ರೀಪೇಯ್ಡ್ ಬಿಲ್‌ ಕೂಡ ಇದೆ. ನಮ್ಮನ್ನು ಕ್ಷಮಿಸಿ!’ ಈ ಕಥೆ ಓದಿ ಮನೆಯವರ ಕರುಣಾರಸ ಉಕ್ಕಿ ಹರಿಯಿತು. ತಪ್ಪು ಮಾಡಿರಬಹುದು, ಕ್ಷಮೆ ಕೋರಿ ದಂಡ ಕಟ್ಟಿದ್ದಾರೆ ಎಂದು ಹಾಯಾಗಿ ಮನೆಯವರೆಲ್ಲರೂ ಸಿನಿಮಾ, ಡಿನ್ನರ್‌ ಮುಗಿಸಿ ಬಂದಾಗ ರಾತ್ರಿ 11 ಗಂಟೆ ಆಗಿತ್ತು. ಮನೆಗೆ ಬಂದು ನೋಡುತ್ತಾರೆ….. ಬಾಗಿಲು ಹಾರು ಬಡಿದಿದೆ! ಬೆಲೆ ಬಾಳುವ ವಸ್ತುಗಳು ಒಂದೂ ಇಲ್ಲ. ಎಲ್ಲ ಲೂಟಿ ಆಗಿತ್ತು. ಟೀಪಾಯಿ ಮೇಲೆ ಒಂದು ಪತ್ರ : ಸಿನಿಮಾ ಹೇಗಿತ್ತು? ಊಟ ಚೆನ್ನಾಗಿತ್ತಾ?

ಅನಂತಯ್ಯ ಅಪರೂಪಕ್ಕೆ ಕಾರ್‌ ಕೊಂಡಿದ್ದರು. ಅವರ ಹೆಂಡತಿ ಅರವಿಂದಮ್ಮನಿಗೆ ತಾವು ಕಾರ್‌ ಡ್ರೈವಿಂಗ್‌ ಕಲಿಯಲೇಬೇಕೆಂಬ ಚಪಲ!

ರಾಯರು ಎಷ್ಟು ಹೇಳಿದರೂ ಆಕೆ ಒಪ್ಪಲಿಲ್ಲ. ಕೊನೆಗೆ ಅವರು ಒಂದು ಎಚ್ಚರಿಕೆಯ ನುಡಿ ಹೇಳುತ್ತಾ ಕಾರಿನ ಕೀ ಕೊಟ್ಟರು, “ನೋಡೆ…. ನೀನು ಡ್ರೈವಿಂಗ್‌ ಕಲಿಯುವಾಗ ಅಕಸ್ಮಾತ್‌ ಆ್ಯಕ್ಸಿಡೆಂಟ್‌ ಆಗಿ ಹೆಚ್ಚು ಕಡಿಮೆ ಆಗಿಹೋದ್ರೆ, ಆಗ ಪತ್ರಿಕೆಗಳಲ್ಲಿ ನಿನ್ನ ಒರಿಜಿನಲ್ ವಯಸ್ಸಿನ ಸಮೇತ ಫೋಟೋ ಬಂದುಬಿಡುತ್ತೆ…. ಹುಷಾರಾಗಿರು!”

ಗುಂಡ ಹೊಸದಾಗಿ ಮದುವೆಯಾಗಿದ್ದ. 6 ತಿಂಗಳ ನಂತರ ಅವನ ಗೆಳೆಯ ಕಿಟ್ಟಿ ಗುಂಡನ ಭೇಟಿಗೆಂದು ಬಂದು ನೋಡ್ತಾನೆ, ಗುಂಡನ ಎಡಗಿವಿಗೊಂದು ರಿಂಗ್‌ ಬಂದುಬಿಟ್ಟಿದೆ!

ಕಿಟ್ಟಿ : ಇದೇನೋ ಗುಂಡ ಕಿವಿಯಲ್ಲಿ ರಿಂಗು? ಇದೇನು ಹೊಸ ಫ್ಯಾಷನ್ನಾ ಏನು ಕಥೆ? ಯಾವಾಗಿನಿಂದ?

ಗುಂಡ : ಅಯ್ಯೋ… ಏನು ಹೇಳಲಪ್ಪ ನನ್ನ ಕಷ್ಟ. ನನ್ನ ಹೆಂಡತಿ ಆಷಾಡಕ್ಕೆ ತವರಿಗೆ ಹೋಗಿದ್ದಳು ಬಂದಾಗಿನಿಂದ ಈ ಕರ್ಮ!

ಕಿಟ್ಟಿ : ಓಹೋ…. ಅತ್ತಿಗೆಮ್ಮ ತವರಿನಿಂದ ಇದನ್ನು ನಿನಗೆ ಹೊಸ ಗಿಫ್ಟ್ ಅಂತ ತಂದುಕೊಟ್ಟರೇ…?

ಗುಂಡ : ಅಯ್ಯೋ ಹಾಗಲ್ಲ ಕಣೋ…. ಅವಳು ಊರಿನಿಂದ ಬಂದ ಮೊದಲ ದಿನ ಗಮನಿಸುತ್ತಾಳೆ. ನಮ್ಮ ಹಾಸಿಗೆ ಬದಿಯಲ್ಲಿ ಇದು ಬಿದ್ದಿತ್ತು. `ಯಾರದ್ದು ಇದು?’ ಅಂತ ಗುಟುರು ಹಾಕಿದಳು. ಜೀವ ಕಾಪಾಡಿಕೊಳ್ಳಲು ನಂದೇ ಅಂದುಬಿಟ್ಟೆನಪ್ಪ….’ ‘ಮತ್ತೆ ಕಿವಿಗೆ ಹಾಕ್ಕೊಳ್ಳಿ, ಯಾಕೆ ಬಿಟ್ಟಿದ್ದೀರಿ?’ ಅಂತ ದಬಾಯಿಸೋದೇ? ಬೀಸೋ ದೊಣ್ಣೆ ತಪ್ಪಿಸಿಕೊಂಡೆ, ಈ ಕರ್ಮ ಕಿವಿಗೆ ಗಂಟು ಬಿತ್ತು!

ಗಂಡನ ಸೂಕ್ಷ್ಮವಾದ ಮಾತುಗಳನ್ನು ಪಳಗಿದ ಹೆಂಡತಿ ಹೇಗೆ ಅರ್ಥ ಮಾಡಿಕೊಳ್ಳುತ್ತಾಳೆ ಎಂಬುದಕ್ಕೆ ಇಲ್ಲಿದೆ ನೋಡಿ ಸ್ಯಾಂಪಲ್ :

ಮಹೇಶ : ಡಾರ್ಲಿಂಗ್‌… ಸಂಜೆ ಹೊತ್ತು, ಮಳೆ ಜೋರಾಗಿ ಬರ್ತಿದೆ. ಮತ್ತೆ…

ಸರಳಾ : ಈಗ ಇಲ್ಲದ್ದನ್ನೆಲ್ಲ ಯೋಚಿಸಬೇಡಿ. ಮನೆಯಲ್ಲಿ ಮೊದಲೇ ಕಡಲೆಹಿಟ್ಟಿಲ್ಲ, ಈರುಳ್ಳಿ ಬೆಲೆ ನೋಡಿದ್ರೆ ಆಕಾಶಕ್ಕೇರಿದೆ. ಇವತ್ತು ಕೆಲಸದ ನಿಂಗಿ ಚಕ್ಕರ್‌, ರಾಶಿ ಪಾತ್ರೆ ನಾನೇ ಉಜ್ಜಬೇಕಿದೆ.

ಮಹೇಶ : ಸರಿ ಬಿಡು ಮತ್ತೆ…..

ಸರಳಾ : ಗೊತ್ತಾಯು…. ಗೊತ್ತಾಯ್ತು….. ಮಳೆಯಿಂದ ಚಳಿ ಜಾಸ್ತಿ ಆಗಿದೆ. ಹಾಗೇ ಒಂದು ಗ್ಲಾಸ್‌, ಸ್ವಲ್ಪ ಐಸ್‌ ಹಾಕಿಕೊಂಡು ಅಂತ ತಾನೇ? ಅದೆಲ್ಲ ಕಟ್ಟಿಟ್ಟು ಬಿಡಿ. ಮಕ್ಕಳು ದೊಡ್ಡವರಾದರು, ಈಗ ಟ್ಯೂಷನ್‌ನಿಂದ ಬರುವ ಹೊತ್ತಾಯ್ತು.

ಮಹೇಶ : ಹೋಗ್ಲಿ ಡಾರ್ಲಿಂಗ್‌… ನೀನೀಗ….

ಸರಳಾ : ಹೇಳಿದ್ನಲ್ಲ…. ಯಾವುದಕ್ಕೂ ಟೈಂ ಇಲ್ಲ! ನನ್ನ ಕಡೆ ನೋಡ್ಲೇಬೇಡಿ, ಆಗಿನಿಂದ ಒಂದೇ ಸಮ ತಲೆನೋವು, ಬಹಳ ಸುಸ್ತಾಗಿದೆ.

ಪಾಪ, ಶೋಷಿತ ಪತಿ ಬೇರೆಲ್ಲಿಗೆ ಹೋಗಬೇಕು……?

ಹೀಗೊಂದು ಬೊಂಬಾಟ್‌ ಗಝಲ್!

ಬಹಳ ದಿನಗಳ  ನಂತರ ಗಿರಿಜಾ ತವರುಮನೆಗೆ ಹೋಗಿದ್ದಳು. ಅಡುಗೆ ಬಾರದ ಗಂಡನಿಗೆ ವಾಟ್ಸ್ಆ್ಯಪ್‌ನಲ್ಲಿ ಹೀಗೆ ಮೆಸೇಜ್‌ ಕಳುಹಿಸಿದಳು :

`ನನ್ನ ಪ್ರೇಮವನ್ನು ಸದಾ ನಿಮ್ಮ ಹೃದಯದಲ್ಲಿ ಹುಡುಕಿಕೊಳ್ಳಿ,

ಚಪಾತಿಗೆ ಹಿಟ್ಟು ಸರಿಯಾಗಿ ಕಲಸಿಕೊಳ್ಳಿ.

ಅಸಲಿ ಪ್ರೇಮ ದೊರೆತಾಗ ಅದನ್ನು ಕಳೆಯಬಾರದು,

ಈರುಳ್ಳಿ ಹೆಚ್ಚುವಾಗ ಕಣ್ಣೀರು ಸುರಿಸಬಾರದು!

ಎಂದಾದರೊಮ್ಮೆ ನನ್ನ ಮೇಲೆ ಕೋಪಗೊಂಡರೆ ತಪ್ಪಿಲ್ಲ.

ಆಲೂ ಬೆಂದಿದೆಯೋ ಇಲ್ಲವೋ ನೋಡದಿದ್ರೆ ಪಲ್ಯ ರುಚಿಸಲ್ಲ.

ಜೊತೆಗೂಡಿ ನಾವು ಸಂತೋಷ ಹಂಚಿಕೊಳ್ಳೋಣ,

ಟೊಮೇಟೊ ಮಾತ್ರ ಸಣ್ಣದಾಗಿ ಹೆಚ್ಚಿಕೊಳ್ಳೋಣ.

ಜನ ನಮ್ಮ ಪ್ರೇಮ ಕಂಡು ಅಸೂಯೆ ಪಟ್ಟಾರು,

ಅಕ್ಕಿ ಬಹಳ ಬೆಂದು ಹೋದೀತು, ಸ್ವಲ್ಪ ಹುಷಾರು!

ನನ್ನ ಗಝಲ್ ಹಿಡಿಸಿತೇ ನೀವೇ ಹೇಳಿ,

ಅಡುಗೆಗೆ ಉಪ್ಪು ಕಡಿಮೆ ಆದ್ರೆ ಅಡ್ಜಸ್ಟ್ ಮಾಡ್ಕೊಳಿ.’

ಗಿರಿಜಾಳ ಗಂಡ ಉಮಾಪತಿ ಏನು ಕಿಲಾಡಿಯಲ್ಲವೇ? ತಾನೂ ಮಾರನೇ ದಿನ ಉತ್ತರ ಕೊಟ್ಟ :

`ನಿನ್ನ ಈ ಪ್ರೇಮಾನುರಾಗ ನನ್ನ ಮನಮುಟ್ಟಿತು,

ಪಕ್ಕದ್ಮನೆ ಪಂಕಜಾ ಬಂದು ಮಾಡಿದ ಅಡುಗೆ ಕಳೆಗಟ್ಟಿತು!

‘ಗಂಡಹೆಂಡತಿ ಯಾವುದೋ ವಿಷಯಕ್ಕೆ ಘನಘೋರ ಜಗಳವಾಗಿ ಒಂದು ವಾರ ಮಾತು ಬಿಟ್ಟರು. ಮಾರನೇ ದಿನ ಅವರ ವಿವಾಹ ವಾರ್ಷಿಕೋತ್ಸವ. ಇಬ್ಬರಿಗೂ ಕಸಿವಿಸಿ. ಆದರೆ ಮಾತು ಶುರು ಮಾಡಲು ಸ್ವಾಭಿಮಾನ ಅಡ್ಡಿಪಡಿಸಿತು.

ಅಂತೂ ಆಕೆ ಮಾತಾಡಿದಳು, “ನೋಡ್ರಿ ವೆಡ್ಡಿಂಗ್‌ ಆ್ಯನಿರ್ಸರಿ ದಿನ ಇಬ್ಬರೂ ಹೀಗೆ ಮುಖ ಊದಿಸಿಕೊಂಡಿರುವುದು ಚೆನ್ನಾಗಿರಲ್ಲ. ಒಂದು ಕೆಲಸ ಮಾಡೋಣ… ನೀವು ಸ್ವಲ್ಪ ಕಾಂಪ್ರಮೈಸ್‌ ಮಾಡಿಕೊಳ್ಳಿ, ಉಳಿದದ್ದು ನಾನು ಮಾಡ್ತೀನಿ.

”ಗಂಡ ಅದಕ್ಕೆ, “ಸರಿ, ಈಗ ನಾನೇನು ಮಾಡಬೇಕು?” ಎಂದು  ಕೇಳಿದ.

“ನೀವು ನಡೆದದ್ದಕ್ಕೆ ಕ್ಷಮಾಪಣೆ ಕೇಳಿಬಿಡಿ…. ನಾನು ನಿಮ್ಮನ್ನು ಧಾರಾಳವಾಗಿ ಕ್ಷಮಿಸಿಬಿಡ್ತೀನಿ…“

ಮತ್ತೆ ಲಟಾಪಟಿ ಶುರು…. !

ಯೋಗ ದಿನಾಚರಣೆ

ನಾನು ನಿನಗಾಗಿ ಏನು ಬೇಕಾದರೂ ಮಾಡಲಿಕ್ಕೆ ಸಿದ್ಧನಿದ್ದೇನೆ!

ಹೌದೇ.. ಸರಿ. ಎಲ್ಲಿ  ಭುಜಂಗಾಸನದಿಂದ ಶೀರ್ಷಾಸನದವರೆಗೂ ಚೂರೂ ತಪ್ಪಿಲ್ಲದೆ ಮಾಡಿ ತೋರಿಸು…

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ