ಅಮೆರಿಕಾ ಅಮೆರಿಕಾ ಅಮೆರಿಕಾ…. ಅಬ್ಬಾ ಅದೊಂದು ಅದ್ಭುತ ಲೋಕವೇ ಹೌದು! ಮಯಾನಗರಿ. ಅಲ್ಲೊಂದು ಸೆಳೆತವಿದೆ, ಆಕರ್ಷಣೆ ಇದೆ, ಮನಮೋಹಕತೆ ಇದೆ, ಏನೋ ಮೋಹ ಅದೇನೋ ಮೋಹಕ!

ಮಗಳ ಗ್ರಾಜ್ಯುಯೇಷನ್‌ ಸಲುವಾಗಿ ನಾವಿಬ್ಬರೂ ಬೆಂಗಳೂರಿನಿಂದ ಪ್ಯಾರಿಸ್‌ ಮಾರ್ಗವಾಗಿ ನ್ಯೂಯಾರ್ಕ್‌ ನ ಜಾನ್‌ ಎಫ್‌. ಕೆನಡಿ ವಿಮಾನ ನಿಲ್ದಾಣದಲ್ಲಿ ಇಳಿದೆ. ಹಡ್ಸನ್‌ ನದಿಯ ಮೇಲೆ ಹಾರುತ್ತಾ ಬಂದು ಭೂಸ್ಪರ್ಶ ಮಾಡಿದ ವಿಮಾನಕ್ಕೊಂದು ಜೈ ಎಂದೆ. ಗೂಗಲ್ ನಲ್ಲಿ ಈ ದೃಶ್ಯ ನೋಡಿದ್ದ ನನಗೆ ಸ್ವತಃ ಅನುಭವಕ್ಕೆ ಬಂದ ಕ್ಷಣ ಮೈ ಝುಮ್ ಎಂದಿತು. ಹಾಗೇ ತಂಗಿಯ ಮಗ ಹೇಳಿದ ಅಂದಿನ ಘಟನೆ ನೆನೆದು ಒಂದು ಕ್ಷಣ ಭಯವಾಯಿತು, ಮತ್ತೊಂದು ಕ್ಷಣ ಹೆಮ್ಮೆ ಎನಿಸಿತು. ವಿಮಾನದ ಒಂದು ಎಂಜಿನ್ ನೊಳಗೆ ಹಕ್ಕಿಗಳ ಗುಂಪೊಂದು ಅಚಾನಕ್ಕಾಗಿ ನುಗ್ಗಿತ್ತು. ಎಂಜಿನ್‌ ತನ್ನ ಕಾರ್ಯ ನಿಲ್ಲಿಸಿತು. ಇದ್ದ ಮತ್ತೊಂದು ಎಂಜಿನ್‌ ನಿಂದ ವಿಮಾನ ಹಾರಾಡಲು ಅಸಾಧ್ಯವಾಯಿತು. ಆ ಕ್ಷಣದಲ್ಲಿ ಕ್ಯಾಪ್ಟನ್‌ ಸಲಿನ್‌ ಬರ್ಗರ್‌ ವಿಚಲಿತರಾಗದೆ, ತಮ್ಮ ಬುದ್ಧಿವಂತಿಕೆಯಿಂದ ಸುಮಾರು 150 ಪ್ರಯಾಣಿಕರಿದ್ದ ವಿಮಾನವನ್ನು ಹಡ್ಸನ್‌ ನದಿಯ ಮೇಲೆಯೇ ಸುರಕ್ಷಿತವಾಗಿ ನಿಲ್ಲುವಂತೆ ಮಾಡಿದರು. ಏಕಮಾತ್ರ ಪ್ರಯಾಣಿಕನಿಗೂ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಂಡರು!

ತಮ್ಮ ಮೂರು ದಶಕಗಳ ಅನುಭವದಿಂದ, ಕಾರ್ಯಕ್ಷಮತೆ ಮೆರೆದ ಕಾವ್ಯಾ. ಸಲ್ಲಿ (ಪ್ರೀತಿಯಿಂದ ಅಲ್ಲಿನವರು ಕರೆಯುತ್ತಿದ್ದ ಹೆಸರು) ರಿಗೆ ಮನದಿಂದಲೇ ಒಂದು ಹ್ಯಾಟ್ಸ್ ಆಫ್‌ ಎಂದೆ!

ಜಾನ್‌ ಎಫ್‌. ಕೆನಡಿ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಮಗಳು ಬಂದು ನಮ್ಮನ್ನು ಅಪ್ಪಿಕೊಂಡು ಸ್ವಾಗತಿಸಿದಳು. ಮಗಳನ್ನು ಕಂಡ ನಮ್ಮ ಕಣ್ಣಾಲಿಗಳು ತುಂಬಿ ಬಂದವು. ಇದೊಂದು ದೊಡ್ಡ ವಿಮಾನ ನಿಲ್ದಾಣ. ಇದಕ್ಕೆ 9 ದ್ವಾರಗಳಿದ್ದು, ಹೊರ ಬರಲು ಬಸ್ ವ್ಯವಸ್ಥೆಯಿದ್ದವು. ನ್ಯೂಜೆರ್ಸಿಯಲ್ಲಿ ನನ್ನ ತಮ್ಮನೇ ಆಗಿದ್ದ ಹರಿಚರಣ್‌ ಮನೆಯಲ್ಲಿ ಲ್ಯಾಂಡ್‌ ಆದೆ. ಅವರ ಪ್ರೀತಿಯ ಒತ್ತಾಯದ ಮೇರೆಗೆ! ಅವರ ಮನೆಯಲ್ಲೇ ಮೂರು ದಿನಗಳ ವಾಸ್ತವ್ಯ.

ಅಲ್ಲಿ ಲ್ಯಾಂಡ್‌ ಆದ ದಿನವೇ ನನ್ನ ಹುಟ್ಟುಹಬ್ಬ. ಹಾಗಾಗಿ ಸಂಜೆ ಟೆಂಪಲ್ ರನ್‌! ನ್ಯೂಜೆರ್ಸಿಯ ಬ್ರಿಜ್‌ ವಾಟರ್ಸ್‌ ನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಕಾರಿನಲ್ಲಿ ಕರೆದೊಯ್ದರು. ಬಹಳ ವಿಸ್ತಾರವಾದ ದೇಗುಲ. ಒಳಗಡೆ ಪಾರ್ಟಿ ಹಾಲ್‌, ಕ್ಯಾಂಟಿನ್ ಗಳಿವೆ. ಹೊರಗೆ ಬಂದರೆ ಹುಲ್ಲು ಹಾಸಿನ ವಿಶಾಲವಾದ ಜಾಗ, ಬಹಳ ಅಚ್ಚುಕಟ್ಟಾಗಿದೆ, ಅಷ್ಟು ಶುಭ್ರವಾಗಿದೆ.

c30145f9-5fe6-4c0d-ac29-c60261cd489d

ಪರ್ಯಟನೆ ಆರಂಭ

ನಮ್ಮ ನಗರ ಪರ್ಯಟನೆಯ ಕಾರ್ಯಕ್ರಮ ಇಲ್ಲಿಂದ ಶುಭಾರಂಭ ಆಯಿತು. ಎಲ್ಲಾ ದೇವರುಗಳೂ ಒಂದೇ ಸೂರಿನಡಿ ದೊರಕಿದ್ದು ನಮ್ಮ ಅದೃಷ್ಟವೇ ಸರಿ! ಅಮ್ಮನಿಗೆ ಕೇಕ್‌ ಕಟ್‌ ಮಾಡಿದರೆ ಇಷ್ಟ ಆಗೋಲ್ಲ. ದೇವಸ್ಥಾನ ಎಂದರೆ ಇಷ್ಟ, ಅಲ್ಲಿಗೇ ಕರೆದುಕೊಂಡು ಹೋಗೋಣ, ಆಗ ಅದೊಂದು ಅರ್ಥಪೂರ್ಣ ಹುಟ್ಟುಹಬ್ಬವಾಗುತ್ತೆ ಎಂಬ ಮಗಳ ಮಾತಿಗೆ ಓ.ಕೆ. ಎಂದಿದ್ದರು ಹರಿಪ್ರಿಯ ದಂಪತಿಗಳು.

19 ದೇವರುಗಳು ಹಾಗೂ ಉತ್ಸವ ಮೂರ್ತಿಗಳಿದ್ದ ದೇವಸ್ಥಾನವದು. ಆನಂದದಿಂದ ಸಮಯ ಕಳೆದವು. ಪೊಂಗಲ್ ಪ್ರಸಾದವಂತೂ ಬಾಯಲ್ಲಿ ನೀರೂರಿಸಿತು. ಶನಿವಾರವಾದ್ದರಿಂದ  ರಶ್ಶೋ ರಶ್ಶು. ನಮ್ಮ ದಕ್ಷಿಣ ಭಾರತದವರೇ ತುಂಬಿದ್ದರು. ದೇವಸ್ಥಾನದ ಕೆಳಗಿದ್ದ ಕ್ಯಾಂಟಿನ್‌ ಗೆ ಬಂದು ಮೆಣಸಿನಕಾಯಿ ಬಜ್ಜಿ, ಖಾರಾ ಪೊಂಗಲ್, ಹುಣಿಸೇ ಚಿತ್ರಾನ್ನ, ಕಾಫಿ/ಟೀ ಜೊತೆಗೆ ಫೋಟೋ ಶೂಟ್‌!

ಬಾಲಾಜಿಗೊಂದು ನಮಸ್ಕಾರ ಸಲ್ಲಿಸಿ ಮುಂದಿನ ನಿಲ್ದಾಣ, ಎಡಿಸನ್‌ ನಲ್ಲಿದ್ದ ಪುತ್ತಿಗೆ ಮಠಕ್ಕೆ ಪ್ರಯಾಣಿಸಿದೆವು. ಇದಂತೂ ಇನ್ನೂ ಅದ್ಭುತ. ಕೇವಲ ಆಯ್ದ ಭಕ್ತಾದಿಗಳು ಮಾತ್ರವೇ ಇಲ್ಲಿಗೆ ಬರುವುದು. ಶ್ರೀಕೃಷ್ಣನ ಬೃಂದಾವನವಿತ್ತು. ಪ್ರಶಾಂತ ವಾತಾವರಣ. ಪೂಜೆಯ ನಂತರ ಆರತಿ, ಫಲಮಂತ್ರಾಕ್ಷತೆ! ಆಚಾರ್ಯರು ನೀಡಿದ ದಪ್ಪ ಸೇಬಿನ ಹಣ್ಣುಗಳಿಂದಾಗಿ ನನ್ನ ಮುಖ ಅರಳಿತು. ನಂತರ ಅವರನ್ನು ಮಾತಾಡಿಸಿದೆವು. `ತಡೆಯಿರಿ’ ಎಂದು ಒಳಗೆ ಹೋಗಿ ಕೃಷ್ಣನ 2 ಫೋಟೋ ಜೊತೆಗೆ ಕೈತುಂಬ ಮಂತ್ರಾಕ್ಷತೆ ನೀಡಿದಾಗ `ಧನ್ಯೋಸ್ಮಿ’ ಎಂದು ನಮಸ್ಕರಿಸಿದೆವು.

ಹೊರ ಬಂದರೆ ಟೇಕ್‌ ಹೋಂ ಪ್ರಸಾದ ನೀಟಾಗಿ ಪ್ಯಾಕ್‌ ಆಗಿ ಡಬ್ಬಿಗಳಲ್ಲಿ ನೀಡಿದರು. ಮನೆಗೆ ಬಂದು ಪ್ರಸಾದ ಸ್ವೀಕರಿಸಿದೆವು. ತರಕಾರಿ ಹುಳಿಯನ್ನ, ಶ್ಯಾವಿಗೆ ಪಾಯಸ, ರಾಯತ, ಪುಳಿಯೋಗರೆ. ನಿಜವಾಗಿಯೂ ಸಂತಸ ಕೊಟ್ಟ ನನ್ನ ಹುಟ್ಟುಹಬ್ಬ, ಮರೆಯಲಾಗದ ಹುಟ್ಟುಹಬ್ಬ.

13987219-48f8-45d7-8429-533656e3fa15

ನ್ಯೂಜೆರ್ಸಿಯ ಜರ್ನಲ್ ಸ್ಕ್ವೇರ್

ನ್ಯೂಜೆರ್ಸಿಯ ಜರ್ನಲ್ ಸ್ಕ್ವೇರ್‌ ನಲ್ಲಿ ಹರಿಯ ಮನೆ. ಅಲ್ಲೇ ಇದ್ದ `ಪಟೇಲ್ಸ್’ನಲ್ಲಿ ನಮ್ಮ ಶಾಪಿಂಗ್‌. ಏನ್‌ ಬೇಕು ಎಲ್ಲಾ ಸಿಗುತ್ತೆ, ಎಲ್ಲಾ ನಮ್ಮ ಕರ್ನಾಟಕದಲ್ಲಿ ಸಿಗುವಂಥವೇ. ಹೂ, ತುಳಸಿಗೀಡ, ಅರಿಶಿನದ ಕೊಂಬಿನಿಂದ ಹಿಡಿದು ಎಲ್ಲಾ ತರಹದ ದಿನಸಿ ಧಾನ್ಯಗಳು, ಕಡಲೆಕಾಯಿ, ಸೊಪ್ಪು, ತರಕಾರಿ ಅಬ್ಬಾ, ನಮಗೆ ಅದು ಅಮೆರಿಕಾ ಅಂತಲೇ ಅನಿಸಲಿಲ್ಲ.  ಅಲ್ಲಿನ ಅಂಗಡಿಗಳಲ್ಲಿ, ಹೋಟೆಲ್ ‌ಗಳಲ್ಲಿ ಹಿಂದಿ, ತಮಿಳು, ತೆಲುಗಿನ ಹಾಡುಗಳೇ ಕೇಳುತ್ತಿದ್ದವು. ನನ್ನ ಹಣೆಯಲ್ಲಿ ಕುಂಕುಮ ನೋಡಿದ ನಮ್ಮ ದಕ್ಷಿಣ ಭಾರತದ ಮಹಿಳೆಯರು ನಗುತ್ತಾ ಮಾತನಾಡಿಸಿ, ಸ್ನೇಹ ಬೆಳೆಸುತ್ತಿದ್ದರು!

ಹಡ್ಸನ್‌ ನದಿಯ ತೀರದ ಹೋಬೋಕೆನ್‌ ನ ವ್ಯೂವ್ ಪಾಯಿಂಟ್‌ ಗೆ ಹೋದೆವು. ಬೇಸಿಗೆಯಾದ್ದರಿಂದ ಕತ್ತಲಾಗುವುದು ಬಹಳ ನಿಧಾನ. ಬೇಸಿಗೆ ಆದ್ದರಿಂದ ರಾತ್ರಿ 8.30ರವರೆಗೂ ಬಿಸಿಲು ಬೆಳಕು ಇದ್ದೇ ಇರುತ್ತದೆ. ಬೃಹತ್‌ ಕಟ್ಟಡಗಳು, ವಿವಿಧ ರೀತಿಯ ಪಕ್ಷಿಗಳ ಹಾರಾಟ, ಹಸಿರು ಮರಗಳಿಂದ ಬೀಸುತ್ತಿದ್ದ ತಣ್ಣನೆಯ ಗಾಳಿ, ಹೆಲಿಕ್ಯಾಫ್ಟರ್‌ ಗಳ ಹಾರಾಟ ದೋಣಿಗಳ ಓಡಾಟ ಖುಷಿಕೊಟ್ಟಿತು!

ಕತ್ತಲಾಗುತ್ತಿದ್ದಂತೆಯೇ ಗಗನಚುಂಬಿ ಕಟ್ಟಡಗಳ ದೀಪಗಳು ಒಂದೊಂದಾಗಿ ಹತ್ತಿಕೊಳ್ಳಲು ಪ್ರಾರಂಭಿಸಿತು. ಆ ಸುಂದರ ಕ್ಷಣವನ್ನು ನೋಡುವುದೇ ಒಂದು ವಿಸ್ಮಯ. `ಅಮ್ಮಾ ನೋಡು, ಅದೇ ಎಂಪೈರ್‌ ಸ್ಟೇಟ್‌ ಬಿಲ್ಡಿಂಗ್‌, ಅದು ಡಬ್ಲ್ಯುಟಿಸಿ,’ ಎಂದು ಮಗಳು ವಿವರಿಸುತ್ತಾ ಹೋಗುತ್ತಿದ್ದಂತೆ ಮೈಮರೆತೆವು. ಸುಂದರ ದೀಪಗಳ ನಗರಿ. `ನೋಡಲ್ಲಿ, ಲ್ಯಾವೆಂಡರ್‌ ಬಣ್ಣದ ಬಿಲ್ಡಿಂಗ್ ಅದೇ ನಮ್ಮ ನ್ಯೂಯಾರ್ಕ್‌ ಯೂನಿವರ್ಸಿಟಿ!’ ಎಂದಾಗ ಆ ಸರಸ್ವತಿ ಮಂದಿರಕ್ಕೆ ಕೈಮುಗಿದೆವು. ನಂತರ ರಸಾಯ್‌ ಹೋಟೆಲ್ ‌ನಲ್ಲಿ ರಾತ್ರಿಯ ಪುಷ್ಕಳವಾದ ಊಟ ಮುಗಿಸಿದೆವು.

169e8793-25c4-414d-ab8f-5d04d1efa522

ಬ್ರುಕ್ಲಿನ್ಬ್ರಿಜ್

ಮಾರನೇ ದಿನ ಬ್ರುಕ್ಲಿನ್‌ ನಲ್ಲಿದ್ದ ನನ್ನ ಮಗಳ ಮನೆಗೆ, ಅವಳ ಸಹಪಾಠಿ ಅನಿಲ್ ಕರೆದೊಯ್ದರು. ದಾರಿಯುದ್ದಕ್ಕೂ ಅಂಡರ್ ವಾಟರ್‌ ಬ್ರಿಜ್‌, ವಾಟರ್‌ ಮೇಲಿನ ಬ್ರಿಜ್‌ಎನ್ನುತ್ತಾ ಅಲ್ಲಿನ ಸಬ್‌ ವೇಗಳ ವಿವರಗಳನ್ನು ನೀಡುತ್ತಿದ್ದರು. ಸಿಮೆಂಟ್‌ ಮತ್ತು ಮರಳಿಗಿಂತ ಸ್ಟೀಲ್ ನ ಬಳಕೆ ಹೆಚ್ಚು. ಬ್ರೂಕ್ಲಿನ್‌ ಬ್ರಿಜ್‌, ಮ್ಯಾನ್‌ ಹ್ಯಾಟನ್‌ ಬ್ರಿಜ್‌ ಗಳನ್ನು ಬಣ್ಣದ ಬೆಳಕಲ್ಲಿ ನೋಡಿ ಮನಸ್ಸು ಉಲ್ಲಾಸಗೊಂಡಿತು. ನ್ಯೂಯಾರ್ಕ್‌ ನಲ್ಲಿ ಎಲ್ಲಿಯೇ ಇದ್ದರೂ, ಈ ಎರಡೂ ಬ್ರಿಜ್‌ ಗಳು ಹಾಗೂ ಸ್ಟ್ಯಾಚ್ಯು ಆಫ್‌ ಲಿಬರ್ಟಿಯ ದರ್ಶನ ಓಡಾಡುವಾಗೆಲ್ಲ ಆಗುತ್ತಿತ್ತು. ಮಗಳ ಮನೆ ನಗರದ ಮಧ್ಯಭಾಗದಲ್ಲಿದ್ದ ಕಾರಣ ನಮಗೆ ಸುತ್ತಾಡಲು ಅನುಕೂಲವೇ ಆಯಿತು. ಈಗಷ್ಟೇ ಓದು ಮುಗಿಸಿ ಕೆಲಸಕ್ಕೆ ಸೇರಿದ್ದ ಮಗಳ ಬಗ್ಗೆ ನಮಗೆ ಎಲ್ಲಿಲ್ಲದ ಹೆಮ್ಮೆ!

ಟ್ವಿನ್ಟವರ್

ಟ್ವಿನ್‌ ಟವರ್‌ ಮೆಮೋರಿಯಲ್ ನಿಂದ ನಮ್ಮ ಈ ದಿನದ ನಗರ ಪ್ರದಕ್ಷಿಣೆ ಪ್ರಾರಂಭವಾಯಿತು. 2001 ಸೆಪ್ಟೆಂಬರ್‌ 11ರಂದು ಅದು ಉಗ್ರರ ದಾಳಿಗೆ ಒಳಗಾಗಿತ್ತು. 2977 ಮಂದಿಯ ಮಾರಣ ಹೋಮವಾದ ಕರಾಳದಿನ. ಆ ಸ್ಥಳದಲ್ಲಿ ಸತ್ತವರ ಹೆಸರುಗಳನ್ನು ಕೆತ್ತನೆ ಮಾಡಿದ್ದಾರೆ. ಜ್ಞಾಪಕಾರ್ಥವಾಗಿ ಅದೇ ಕಾಂಪೌಂಡ್‌ ಒಳಗೆ ಇಂದು ಅತಿ ಎತ್ತರದ ವರ್ಲ್ಡ್ ಟ್ರೇಡ್‌ ಸೆಂಟರ್‌ ಕಟ್ಟಿರುವರು. ಅದು ಅರ್ಧ ಕಿ.ಮೀ.ನಷ್ಟು ಎತ್ತರವಿದೆ (1700 ಫೀಟ್‌).

c8893150-1fbd-42d6-84ef-faa1257bb072

ಲೆಕ್ಸಿಂಗ್ಟನ್

ಅವೆನ್ಯೂಗೆ ಹೋದರೆ ನಮ್ಮ ರೆಸ್ಟೋರೆಂಟ್‌ ಗಳೇ! ಸರವಣ ಭವನ, ಕೈಲಾಶ್‌ ಪರ್ಬತ್‌, ಭಟ್ಟಿ ಹೀಗೆ…. ನಾವು ಭಟ್ಟಿಯಲ್ಲಿ ರಾತ್ರಿಯ ಊಟ ಮುಗಿಸಿದೆ. ನಿಗದಿತ ದಿನ ಎರಡು ಬೃಹತ್‌ ಕಟ್ಟಡಗಳ ನಡುವೆ ಗೋಚರಿಸುವ ಸೂರ್ಯಾಸ್ತಮಾನದ ದೃಶ್ಯ ನೋಡಲು 34ನೇ ಸ್ಟ್ರೀಟ್‌ ನಲ್ಲಿ ಜನಜಂಗುಳಿಯೇ ಸೇರಿತ್ತು. ಅದ್ಭುತ ದೃಶ್ಯಾವಳಿಯನ್ನು ನೋಡಲು ನಾವು ಉತ್ಸುಕರಾಗಿದ್ದೆವು. ಎಲ್ಲರ ಕೈಯಲ್ಲೂ ಮೊಬೈಲೇ‌, ಕ್ಯಾಮೆರಾಗಳು, ಕಾಪ್ಸ್ ಜನದಟ್ಟಣೆ, ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಆ ಸುಂದರ ಕ್ಷಣ ಬಂದಾಗ ಕೆಲವು ಹೊತ್ತು ವಾಹನ ಸಂಚಾರವನ್ನು ನಿಲ್ಲಿಸಿಬಿಡುತ್ತಾರೆ. ಸೂರ್ಯನು ತನ್ನ ಸೌಂದರ್ಯವನ್ನೆಲ್ಲ ಬೀರುತ್ತ ಸಾಗುವ ಆ ದೃಶ್ಯ ಮನಮೋಹಕವಾಗಿತ್ತು. ನಂತರ ಅಲ್ಲೇ ಇದ್ದ ಅತಿ ದೊಡ್ಡ ಶಾಪಿಂಗ್‌ ಮಾಲ್ `ಮೇಸೀಸ್‌’ನಲ್ಲಿ ಸುತ್ತಾಡಿದೆವು. ಅಲ್ಲಿದ್ದ ಅದೆಷ್ಟೋ ಅಂಗಡಿಗಳು ನಮ್ಮ ಒರಾಯನ್‌ ಮಾಲ್ ‌ನಲ್ಲೂ ಇವೆ! ಇಲ್ಲಿನ ಹಳೆಯ ರೈಲ್ವೇ ಸ್ಟೇಷನ್‌, ರೈಲುಗಳ ಓಡಾಟವನ್ನು ನೋಡಿದೆವು. ಆ್ಯಪಲ್ ಕಂಪನಿಯವರ ಓಪನ್‌ಶೋರೂಂ ನೋಡಿದೆವು. ಅದ್ಭುತ ಶಾಪಿಂಗ್‌ ಸ್ಟ್ರೀಟ್‌ ನಂತರ ಒಂದು ದೊಡ್ಡ ಶಾಪಿಂಗ್‌ ಸ್ಟ್ರೀಟ್‌ ಗೆ ಹೋದೆವು. ಎಲ್ಲಾ ಬ್ರಾಂಡೆಡ್‌ ಅಂಗಡಿಗಳು, ನೋಡುವುದೇ ಒಂದು ಖುಷಿ. ಅಲ್ಲೇ ಸಿಕ್ಕ ಒಂದು ಚರ್ಚ್‌ ನಲ್ಲಿ ಕೆಲವು ಸಮಯ ಕುಳಿತು ಧ್ಯಾನ ಮಾಡಿದೆವು. ಅಲ್ಲಿ ಮದರ್‌ ತೆರೇಸಾರ ಪ್ರತಿಮೆಯನ್ನು ನೋಡಿ ಆನಂದವಾಯಿತು. ಮುಂದೆ ವರ್ಣರಂಜಿತ `ಟೈಮ್ಸ್ ಸ್ಕ್ವೇರ್‌’ಗೆ ತೆರಳಿದೆವು. ಜನ ತುಂಬಿದ್ದರು. ಶಾಪಿಂಗ್‌, ಮೀಟಿಂಗ್‌, ಸಿಂಗಿಂಗ್‌, ಡ್ಯಾನ್ಸಿಂಗ್‌, ಡೇಟಿಂಗ್‌, ಈಟಿಂಗ್‌, ರಿಲ್ಯಾಕ್ಸಿಂಗ್‌, ಒಂದಾ ಎರಡಾ…. ಬಣ್ಣಿಸಲು ಮಾತುಗಳೇ ಇಲ್ಲ. ಬೃಹತ್‌ ಸ್ಕ್ರೀನ್‌ ಗಳದ್ದೇ ಇಲ್ಲಿನ ವಿಶೇಷ. ವಿಧವಿಧವಾದ ಜಾಹೀರಾತುಗಳು, ವಿಡಿಯೋ ತುಣುಕುಗಳು, ಅದನ್ನು ನಿಬ್ಬೆರಗಾಗಿ ನೋಡುವ ನಮ್ಮಂಥ ಪ್ರೇಕ್ಷಕರು, ಸ್ಕ್ರೀನ್‌ ಗಳಲ್ಲಿ ದುಡ್ಡು ಕೊಟ್ಟು, ತಮ್ಮ ವಿಡಿಯೋಗಳನ್ನು ಹಾಕಿಸಿಕೊಳ್ಳುವ ಆಸಕ್ತರು, ಒಟ್ಟಿನಲ್ಲಿ `ಟೈಮ್ಸ್ ಸ್ಕ್ವೇರ್‌’ ನೋಡಿದಷ್ಟೂ ಕಣ್ತಣಿಸುವ ಚೌಕ! ನೋಡೇ ತೀರಬೇಕು.

f02583ad-86f6-444f-8e69-50698660584a-1

ಮ್ಯಾನ್ಹ್ಯಾಟನ್

ಇಲ್ಲಿ ಮನೆಗಳು ಬಹಳ ದುಬಾರಿ! ಬಾಡಿಗೆಗೆ ಹಾಗೂ ಸ್ವಂತಕ್ಕೆ, ಬಿಸ್‌ ನೆಸ್‌ ಏರಿಯಾ. ಮಗಳ ಆಫೀಸ್‌ ಇಲ್ಲೇ ಇರುವುದರಿಂದ ಇಲ್ಲೊಂದು ಸುತ್ತು ಬಂದೆವು. ವಿಜ್ಞಾನಿಯಾದ ಮಗಳ ಲ್ಯಾಬ್‌ ಕಮ್ ಆಫೀಸ್‌ ನೋಡಿ ಸಂತೃಪ್ತರಾದೆವು!

ಸೆಂಟ್ರಲ್ ಪಾರ್ಕ್

ಇಲ್ಲಿನ ಹಸಿರು ಹುಲ್ಲು ಹಾಸಿನ ಮೇಲೆ ಆಸೀನರಾದೆವು. ನುಚ್ಚಿನುಂಡೆ ಮಾಡಿಕೊಂಡು ಹೋಗಿದ್ದೆವು. ಸುತ್ತಲಿನ ಕಟ್ಟಡಗಳು, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ನುಚ್ಚಿನುಂಡೆಗೆ ತುಪ್ಪ ಹಾಕಿಕೊಂಡು ಸವಿಯುತ್ತಾ ಕೆಲವು ಹೊತ್ತು ಕಳೆದೆವು. ಬ್ರುಕ್ಲಿನ್‌ ನ ಡೌನ್‌ ಟೌನ್‌ ನಲ್ಲಿ ಸಣ್ಣ ಶಾಪಿಂಗ್‌. ಮಕ್ಕಳಿಗೆ ಒಂದಷ್ಟು ಆಟಿಕೆ ಪ್ರಸಾದನಗಳು, ಓಲ್ಡ್ ನೇವಿಯಲ್ಲಿ ಬಟ್ಟೆಗಳನ್ನು ಕೊಂಡೆವು. ಅಲ್ಲಿಂದ ಆಚೆ ಬರುತ್ತಿದ್ದಂತೆ ಹೋಮ್ ಲೆಸ್‌ ಮನುಜನೊಬ್ಬ ಎದುರಿಗೆ ಬಂದ. ತನ್ನ ಮುಷ್ಟಿಯನ್ನು ಮುಂದೆ ಚಾಚುತ್ತಾ ನನ್ನ ಯಜಮಾನರ ಬಳಿಗೆ ಬಂದ. ಬಾಯಲ್ಲಿ ಏನೋ ಹೇಳುತ್ತಿದ್ದ. ಈ ಮುಂಚೆಯೇ ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆಂದು ಮಗಳು ಎಚ್ಚರಿಸಿದ್ದಳು. ಇಂಥವರನ್ನು ನೋಡಲು ಬಾರದು, ಮಾತಾಡಿಸಲೂ ಬಾರದು ಎಂದಿದ್ದಳು. ಈಗ ಅದೇ ಘಟನೆ ಎದುರಿಗೆ ಬಂದಾಗ ಕೊಂಚ ಎಲ್ಲವೂ ಮರೆತುಹೋಗಿ, ದಿಕ್ಕು ತೋಚದಂತಾಯಿತು. ಇವರು ಅವನಿಗೆ ಪ್ರತಿಕ್ರಿಯಿಸಲಿಲ್ಲ. ಆಗ ಜೋರಾಗಿ ಕೂಗುತ್ತಾ ಅಲ್ಲೇ ಇದ್ದ ಅಂಗಡಿಯ ಬಾಗಿಲಿಗೆ ಕೈ ಕಾಲುಗಳಿಂದ ಜೋರಾಗಿ ಗುದ್ದಿ , ಕೂಗುತ್ತಾ, ಕಿರುಚುತ್ತಾ ರೋಷದಿಂದ ಹೊರಟುಹೋದ. ಈ ಘಟನೆಯಿಂದ ಸುಮಾರು ಹೊತ್ತು ನನಗೆ ಎದೆ ಹೊಡೆದುಕೊಳ್ಳುತ್ತಲೇ ಇತ್ತು!

ff7403c4-e4e7-4597-88e5-03fda0ec91ea

ಕ್ವೀನ್ಸ್ ಮಂದಿರಗಳು

ಕ್ವೀನ್ಸ್ ನಲ್ಲಿರುವ ಗಣೇಶ ದೇವಸ್ಥಾನ. 3 ರೈಲುಗಳಲ್ಲಿ ಹಾಗೂ ಬಸ್‌ ಮುಖೇನ ಸಾಗಿದೆವು. ಸಬ್‌ ವೇ ಟಿಕೆಟ್‌ ಇದ್ದರೆ ಬಸ್‌ ನಲ್ಲಿ ಉಚಿತ! ದೇವಸ್ಥಾನದ ಮುಂದೆಯೇ ಬಸ್‌ ನಿಲ್ದಾಣ! ಇಳಿಯುತ್ತಿದ್ದಂತೆಯೇ ನಮ್ಮ ಭಾರತದ ತ್ರಿವರ್ಣ ಧ್ವಜ ಕಂಡು ಹೆಮ್ಮೆ ಎನಿಸಿತು. ಅದರ ಮುಂದೆ ನಿಂತು ಫೋಟೋ ತೆಗೆಸಿಕೊಂಡೆವು.

ಕಳೆದ ಫೆಬ್ರವರಿಯಲ್ಲಿ ಆ ರಸ್ತೆಗೆ ಗಣೇಶ ಟೆಂಪಲ್ ಸ್ಟ್ರೀಟ್‌ ಎಂದು ನಾಮಕರಣವಾದದ್ದನ್ನು ನೆನೆದೆವು. ಮುದ್ದಾದ ಗಣೇಶ, ಸುತ್ತಲೂ ಎಲ್ಲಾ ದೇವಾನುದೇವತೆಗಳ ವಿಗ್ರಹಗಳು, ಎಲ್ಲಕ್ಕೂ ಪುಟ್ಟ ಪುಟ್ಟ ಗುಡಿಗಳು! ಉತ್ಸವ ಮೂರ್ತಿಗಳು ಭಕ್ತಿಭಾವ ಮೂಡಿಸಿತು. ಅರ್ಚನೆ ಮಾಡಿಸಿ ಮಂಗಳಾರತಿ, ತೀರ್ಥ ಪಡೆದೆವು.

ಅರ್ಚಕರನ್ನು ಮಾತನಾಡಿಸಿದಾಗ, `ನಾನು ಅಲ್ಲೇ ಕೃಷ್ಣನ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದೆ. ಈಗ 20 ವರ್ಷ ಆಯಿತು ಇಲ್ಲೇ ನೆಲೆಸಿರುವೆ,’ ಎಂದು ಹೇಳಿದಾಗ, ಸಾಗರದಾಚೆಯ ಆ ಊರಿನಲ್ಲೂ ನಮ್ಮ ಏರಿಯಾದೇ ಹವಾನಾ ಎಂದು ಖುಷಿಯಾಯಿತು. ನಮಸ್ಕರಿಸಿ ಕೇಸರಿ ಭಾತ್‌ ಪ್ರಸಾದ ಸ್ವೀಕರಿಸಿ ಹೊರ ಬಂದೆವು. ನಾನು `ಈ ದೇವಸ್ಥಾನದ ಮುಖ್ಯಸ್ಥರು ಮೈಸೂರಿನ ಉಮಾ ಮೇಡಂರವರನ್ನು ನೋಡಬೇಕು,’ ಎಂದಾಗ, `ಅಲ್ಲಿ ಚೇರ್‌ ನಲ್ಲಿ ಕುಳಿತಿದ್ದಾರಲ್ಲಾ ಅವರೇ ಉಮಾ ಮೇಡಂ. ಅವರು ಸದಾ ಧ್ಯಾನದಲ್ಲೇ ಇರುತ್ತಾರೆ. ಯಾರನ್ನೂ ಅಷ್ಟಾಗಿ ಮಾತನಾಡಿಸೋಲ್ಲ,’ ಎಂದೆಲ್ಲಾ ಹೇಳಿದರು.

ಅವರನ್ನು ನೋಡುವ ಹಂಬಲದಿಂದ ಮತ್ತೆ ಒಳಗೆ ಹೋದೆವು. ಅವರು ಅದೇ ಸ್ಥಿತಿಯಲ್ಲಿ ಕುಳಿತಿದ್ದರು. ಅರ್ಚಕರನ್ನು ಕೇಳಿದೆವು, ಮ್ಯಾನೇಜರ್‌ ನ್ನು ಕೇಳಿ ಎಂದರು. ಸರಿ ಅವರನ್ನು ಭೇಟಿ ಮಾಡಿದೆವು, ಅವರು ಹೊರ ಬಂದು ಆಕೆಯನ್ನು ನೋಡಿ, `ಅಯ್ಯೋ, ಅವರು ಉಮಾ ಅಲ್ಲ ಮೇಡಂ. ಅವರು ಬಂದರೂ ಬರಬಹುದೂ ಬಾರದೆಯೂ ಇರಬಹುದು ಗೊತ್ತಾಗೋಲ್ಲ…..’ ಎಂದಾಗ ನಿರಾಸೆಯಾಯಿತು.

ಸರಿ, ಮ್ಯಾನೇಜರ್‌ ರನ್ನೇ ಮಾತಿಗೆಳೆದಾಗ ತಿಳಿಯಿತು. ಅವರೂ ನಮ್ಮ ಮಲ್ಲೇಶ್ವರಂನವರೇ ಎಂದು ತಿಳಿಯಿತು. ಬಹಳ ಹೊತ್ತು ಅವರೊಂದಿಗೆ ಮಾತಾಡಿದೆವು. ಅಲ್ಲಿಂದ ದೇವಸ್ಥಾನದ ಕ್ಯಾಂಟೀನ್‌ ಗೆ ತೆರಳಿ ಮಧ್ಯಾಹ್ನದ ಊಟ ಮುಗಿಸಿದೆವು. ಮಗಳಿಗೂ ಪೊಂಗಲ್ ನ್ನು ಪಾರ್ಸೆಲ್ ತಂದೆವು! ಹೊರ ಬಂದು ಎದುರಿಗೆ ನೋಡಿದರೆ ರಾಯರ ಮಠ! ಅಬ್ಬಾ ಖುಷಿಯೋ ಖುಷಿ. ಪಾಹಿ ಪಾಹಿ ರಾಘವೇಂದ್ರ ಗುರು ಹೇಳುತ್ತಾ ಪ್ರದಕ್ಷಿಣೆ ನಮಸ್ಕಾರ ಮಾಡಿದೆವು. ಬೃಂದಾನವನ್ನು ಗಾಜಿನ ಬಾಗಿಲಿನಿಂದ ನೋಡಿ ನಮಸ್ಕರಿಸಿದೆವು.

ಮತ್ತೆ ಅದೇ ರೀತಿ ಬಸ್‌ ಹತ್ತಿ ಸಬ್‌ ವೇಗಳಲ್ಲಿ ಸಾಗಿ ಮನೆ ಮುಟ್ಟಿದೆವು. ಒಟ್ಟಿನಲ್ಲಿ ಪ್ರಥಮ ದಿನ ದೇವರ ದರ್ಶನ, ಹೊರಡುವ ಮುನ್ನಾ ದಿನ ದೇವರ ದರ್ಶನ ಭಾಗ್ಯದಿಂದ ಧನ್ಯರಾದೆವು. ಅಮೆರಿಕಾ ಸುಭಿಕ್ಷವಾಗಿರಲಿ, ಭಾರತ ಸುಭಿಕ್ಷವಾಗಿರಲಿ ಎಂದು ಆ ಭಗವಂತನಲ್ಲಿ ಬೇಡುತ್ತಾ ನಮ್ಮ ಕರ್ಮಭೂಮಿ ಧರ್ಮಭೂಮಿ ಭಾರತಕ್ಕೆ ಬಂದು, ಸೌಖ್ಯವಾಗಿ ಸವಿ ನೆನಪುಗಳ ಭಂಡಾರದೊಂದಿಗೆ ಬೆಂಗಳೂರಿನ ಮಲ್ಲೇಶ್ವರಂನ ಮನೆ ಸೇರಿದೆವು.

ಸವಿತಾ ನಾಗೇಶ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ