ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಮರಣದಂಡನೆ ಎದುರಿಸುತ್ತಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಈಗ ನಿರಾಳತೆ ಸಿಕ್ಕಿದೆ. ಅಲ್ಲಿನ ಸರ್ಕಾರ ನಿಮಿಷಾಗೆ ನೀಡಲಾದ ಮರಣದಂಡನೆಯನ್ನು ರದ್ದುಪಡಿಸಿದೆ ಎಂದು ಕ್ರಿಶ್ಚಿಯನ್ ಧಾರ್ಮಿಕ ನಾಯಕ ಡಾ. ಕೆ.ಎ. ಪಾಲ್ (KA Paul) ಘೋಷಿಸಿದ್ದಾರೆ.
ಮಂಗಳವಾರ ರಾತ್ರಿ ಯೆಮೆನ್ ರಾಜಧಾನಿ ಸನಾದಿಂದ ಬಿಡುಗಡೆಯಾದ ವೀಡಿಯೊ ಸಂದೇಶದಲ್ಲಿ ಅವರು ಇದನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಯೆಮೆನ್ ನಾಯಕರೊಂದಿಗೆ ಹತ್ತು ದಿನಗಳ ಹಗಲು ರಾತ್ರಿ ಚರ್ಚೆಯ ಬಳಿಕ ಈ ಯಶಸ್ಸು ಸಾಧಿಸಲಾಗಿದೆ. ಇದು ದೇವರ ದಯೆಯಿಂದ ಸಾಧ್ಯ. ನಿಮಿಷಾ ಪ್ರಿಯಾ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ. ಭಾರತ ಸರ್ಕಾರವು ಅವರ ಸುರಕ್ಷಿತ ವರ್ಗಾವಣೆಗೆ ಈಗಾಗಲೇ ಲಾಜಿಸ್ಟಿಕಲ್ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಕೆ.ಎ. ಪಾಲ್ ಹೇಳಿದರು.
ಕೆಎ ಪಾಲ್ ತಮ್ಮ ಎಕ್ಸ್ (ಹಿಂದಿ ಟ್ವಿಟರ್) ವೇದಿಕೆಯಲ್ಲಿ ತಮ್ಮೊಂದಿಗೆ ಯೆಮೆನ್ ನಾಯಕರ ವೀಡಿಯೊವನ್ನು ಪೋಸ್ಟ್ ಮಾಡಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಭಾರತ ಸರ್ಕಾರ ವಿದೇಶಾಂಗ ಸಚಿವಾಲಯದ (MEA) ಮೂಲಕ ಕಾನೂನು ನೆರವು ನೀಡಿದೆ. ನಿಮಿಷಾ ಅವರ ಕುಟುಂಬಕ್ಕೆ ಕಾನೂನು ಬೆಂಬಲ ನೀಡಲು ವಕೀಲರನ್ನು ನೇಮಿಸಲಾಗಿದೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಸರ್ಕಾರವು ಶರಿಯಾ ಕಾನೂನಿನಡಿಯಲ್ಲಿ ಕ್ಷಮಾದಾನ ಅಥವಾ ಪರಿಹಾರ (ದಿಯಾ) ನಂತಹ ಆಯ್ಕೆಗಳನ್ನು ಸಹ ಪರಿಗಣಿಸಿದೆ.
ಮೃತ ಮಹ್ದಿ ಅವರ ಕುಟುಂಬವು ರಕ್ತದ ಹಣವನ್ನು (Blood Money) ಸ್ವೀಕರಿಸದ ಕಾರಣ ಪ್ರಕರಣವು ಮತ್ತಷ್ಟು ಜಟಿಲವಾಗಿತ್ತು. ಖಾಂತಪುರಂ ಎಪಿ ಅಬುಬಕ್ಕರ್ ಮುಸ್ಲಿಯಾರ್ ಯೆಮೆನ್ ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದರೂ, ಮೃತರ ಕುಟುಂಬವು "ನಮಗೆ ನ್ಯಾಯ ಬೇಕು, ಕ್ಷಮೆಯಲ್ಲ" ಎಂದು ಹೇಳಿಕೊಂಡಿತ್ತು. ಇನ್ನು ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
2008ರಲ್ಲಿ ನರ್ಸ್ ಆಗಿ ಯೆಮೆನ್‌ಗೆ ಹೋದ ನಿಮಿಷಾ ಪ್ರಿಯಾ ಅಲ್ಲಿ ತನ್ನದೇ ಆದ ಕ್ಲಿನಿಕ್ ಅನ್ನು ನಡೆಸುತ್ತಿದ್ದರು ಮತ್ತು ಸ್ಥಳೀಯ ಮಹ್ದಿಯೊಂದಿಗೆ ಪಾಲುದಾರಿಕೆಯನ್ನು ಸ್ಥಾಪಿಸಿದರು. ಆದರೆ ಆತ ಪ್ರಿಯಾಳಿಗೆ ಕಿರುಕುಳ ನೀಡಲು ಶುರು ಮಾಡಿದ್ದರಿಂದ ನಿಮಿಷಾ ಅವನಿಗೆ ಮಾದಕ ದ್ರವ್ಯಗಳ ಚುಚ್ಚುಮದ್ದು ನೀಡಿದ್ದಳು. ಅದು ಓವರ್ ಡೋಸ್ ಆಗಿ ಮಹ್ದಿ ಮೃತಪಟ್ಟಿದ್ದನು. ಪರಿಣಾಮವಾಗಿ ನಿಮಿಷಾ ಪ್ರಿಯಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿ, ಯೆಮೆನ್ ನ್ಯಾಯಾಲವು ಆಕೆಗೆ ಮರಣದಂಡನೆ ವಿಧಿಸಿತ್ತು. ನಂತರ ವಿಚಾರಣಾ ನ್ಯಾಯಾಲಯವು 2020ರಲ್ಲಿ ಶಿಕ್ಷೆಯನ್ನು ಎತ್ತಿಹಿಡಿಯಿತು. ಆ ಬಳಿಕ 2023ರಲ್ಲಿ ಸುಪ್ರೀಂ ಕೋರ್ಟ್ ಸಹ ಶಿಕ್ಷೆಯನ್ನು ಎತ್ತಿಹಿಡಿಯಿತು. ನಿಮಿಷಾ ಪ್ರಿಯಾ ಪ್ರಸ್ತುತ ಸನಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಕಡಿಮೆ ಮಾಡಲಾಗಿದೆ ಎಂದು ಡಾ. ಕೆ.ಎ. ಪಾಲ್ ಘೋಷಿಸಿದರೂ, ಯೆಮೆನ್ ಸರ್ಕಾರ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದಾಗ್ಯೂ, ಈ ಸುದ್ದಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಯಶಸ್ಸಿಗೆ ಭಾರತ ಮತ್ತು ಯೆಮೆನ್ ಸರ್ಕಾರಗಳ ಸಹಕಾರ, ಧಾರ್ಮಿಕ ನಾಯಕರ ಉಪಕ್ರಮ ಮತ್ತು ಕೆ.ಎ. ಪಾಲ್ ಅವರಂತಹ ಜನರ ನಿರಂತರ ರಾಜತಾಂತ್ರಿಕತೆ ಕಾರಣವೆಂದು ಹೇಳಬಹುದು. ಪ್ರಸ್ತುತ, ದೇಶಾದ್ಯಂತ ಅನೇಕ ಜನರು ನಿಮಿಷಾ ಪ್ರಿಯಾ ಮನೆಗೆ ಮರಳಲು ಕಾಯುತ್ತಿದ್ದಾರೆ.