ಶ್ರಾವಣ ಮಾಸ ಬಂತೆಂದರೆ ಹಬ್ಬ-ಹರಿದಿನಗಳ ಸಂಭ್ರಮವೂ ಜೊತೆಯಾಗುತ್ತದೆ. ಅದರಲ್ಲೂ ನಾಗಪಂಚಮಿ ಎಂದರೆ ನಮ್ಮ ಬಾಲ್ಯದ ನೆನಪುಗಳ ಬುತ್ತಿಯನ್ನೇ ತೆರೆದಂತಾಗುತ್ತದೆ. “ಉಳಿದಾವ ದಿನ ನಾಲ್ಕು ಅಣ್ಣ ಬರಲಿಲ್ಲ ಯಾಕ ಕರೆಯಾಕ?” ಎಂಬ ಹಳೆಯ ಹಾಡು ಎಲ್ಲೋ ಕೇಳಿಬರುತ್ತಿದ್ದರೆ, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಜ್ಜಿ-ಅಮ್ಮಂದಿರ ಜೊತೆಯಲ್ಲಿ ಕಳೆದ ನಮ್ಮ ಬಾಲ್ಯದ ದಿನಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ.
ನಮ್ಮದು ಬಾಗಲಕೋಟೆ ಜಿಲ್ಲೆಯ ಒಂದು ಸಣ್ಣ ಓಣಿಯಲ್ಲಿ ಬೆಳೆದ ಕುಟುಂಬ. ಅಜ್ಜಿ, ಅಜ್ಜ, ಅಪ್ಪ, ಅಮ್ಮ, ಕಾಕ, ಕಾಕಿ—ಹೀಗೆ ಕೂಡು ಕುಟುಂಬದಲ್ಲಿ ಬೆಳೆದವಳು ನಾನು. ಹಬ್ಬ-ಹರಿದಿನಗಳೆಂದರೆ ನಮಗೆ ಅದೊಂದು ದೊಡ್ಡ ಸಂಭ್ರಮ. ಹಬ್ಬಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಮನೆಯ ಸ್ವಚ್ಛತೆ, ಹೊಸ ಬಟ್ಟೆಗಳ ತಯಾರಿ, ತರಹೇವಾರಿ ಅಡುಗೆಗಳ ಸಿದ್ಧತೆ ಹೀಗೆ ಒಂದೊಂದಾಗಿ ಕೆಲಸಗಳು ಶುರುವಾಗುತ್ತಿದ್ದವು.
ಶ್ರಾವಣದಲ್ಲಿ ಬರುವ ನಾಗದೇವರ ಆರಾಧನೆಯಾದ ಪಂಚಮಿ ಹಬ್ಬದ ತಯಾರಿಯಂತೂ ಇನ್ನೂ ಜೋರಾಗಿರುತ್ತಿತ್ತು. ಮನೆಯ ದೊಡ್ಡವರೆಲ್ಲರೂ ಒಟ್ಟಿಗೆ ಕುಳಿತು ಉಂಡಿ, ಚಕ್ಕುಲಿ, ಕಾರಜಿಕಾಯಿ, ಕಬ್ಬರಿ ಕರದಂಟ, ಕೋಡಬಳೆ ಹೀಗೆ ಹಲವಾರು ಖಾದ್ಯಗಳನ್ನು ತಯಾರಿಸುತ್ತಿದ್ದರು. ಮನೆಯ ತುಂಬೆಲ್ಲ ಹರಡುತ್ತಿದ್ದ ಆ ತಿಂಡಿಗಳ ಸುವಾಸನೆ, ಅಜ್ಜಿ-ಅಮ್ಮಂದಿರ ಓಡಾಟ, ಮಕ್ಕಳಾದ ನಮ್ಮ ಕುತೂಹಲ—ಇವೆಲ್ಲ ಸೇರಿ ಹಬ್ಬದ ವಾತಾವರಣವನ್ನು ಇನ್ನಷ್ಟು ವಿಶೇಷವಾಗಿಸುತ್ತಿದ್ದವು.
ಊರಲ್ಲಿರುವ ನಮ್ಮ ಅತ್ತೆ-ಚಿಕ್ಕಮ್ಮಂದಿರನ್ನೆಲ್ಲ ಕರೆತರುವ ಚಿಂತೆ ನಮ್ಮ ಅಜ್ಜಿಗೆ. ಆದರೆ ನಮಗೇ ಅಜ್ಜಿ ಮಾಡಿದ ಉಂಡಿ ತಿನ್ನಬೇಕು, ದಿನವಿಡೀ ಆಟ ಆಡಬೇಕು ಎಂಬ ಒಂದೇ ಆಸೆ!
ನಾಗಪಂಚಮಿಗೆಂದು ಹೊಸದಾಗಿ ಹೊಲಿಸಿದ ಲಂಗ-ಬ್ಲೌಸ್ ತೊಟ್ಟು, ಕುಂಬಾರರ ಮನೆಗೆ ಹೋಗಿ ಮಣ್ಣಿನಿಂದ ಮಾಡಿದ ನಾಗಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆ ಮಾಡುತ್ತಿದ್ದೆವು. “ನನ್ನ ಪಾಲು, ನಿನ್ನ ಪಾಲು, ದೇವರ ಪಾಲು” ಎಂದು ದೇವರಿಗೆ ಹಾಲೆರೆದು, ನಾಗಪ್ಪನಿಗೆ ಪೂಜೆ ಸಲ್ಲಿಸಿ, ನಂತರ ಮನೆಯಲ್ಲಿ ಮಾಡಿದ ರುಚಿಕರವಾದ ಖಾದ್ಯಗಳನ್ನು ಸವಿದು ಸಂಭ್ರಮಿಸುತ್ತಿದ್ದೆವು.
ಅದಾದ ಮೇಲೆ ನಮ್ಮ ಅಜ್ಜಿ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಬಳೆ ತೊಡಿಸುವುದು, ಮೂಗು ಚುಚ್ಚಿಸುವುದು ಮುಂತಾದ ಸಂಪ್ರದಾಯಗಳನ್ನು ಮಾಡಿಸುತ್ತಿದ್ದರು. ಮೂಗು ಚುಚ್ಚಲು ನಮ್ಮ ಅಜ್ಜಿ ಮನೆಗೆ ಬರುತ್ತಿದ್ದವರನ್ನು ಕಂಡಾಕ್ಷಣ ನಾವೆಲ್ಲ “ಯಮಧೂತನೇ ಬಂದನೇ ಏನೇ!” ಎನ್ನುವ ಹಾಗೆ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗುತ್ತಿದ್ದೆವು.
ಆಗ ನಮ್ಮ ಚಿಕ್ಕಪ್ಪ, ಚಿಕ್ಕಮ್ಮ ನಮ್ಮನ್ನು ಹುಡುಕಿ, ಹಗಲು ಮೇಲೆ ಹಾಕಿಕೊಂಡು ಕರೆದುಕೊಂಡು ಬಂದು ಮೂಗು ಚುಚ್ಚಿಸುತ್ತಿದ್ದರು. ಅಯ್ಯೋ ದೇವರೇ! ಆ ಕೂಗಾಟ, ಆ ಕಿರಿಚಾಟ! ಈಗಲೂ ನೆನಪಿಸಿಕೊಂಡರೆ ನಗು ಬರುತ್ತದೆ. ನಮ್ಮ ನೋವು ವಾಸಿಯಾಗಲೆಂದು ಆಮೇಲೆ ನಮಗೆ ಉಂಡಿ ಕೊಡುತ್ತಿದ್ದರು. ಆ ಉಂಡಿಯನ್ನೇ ಹಿಡಿದುಕೊಂಡು, ಕಣ್ಣೀರನ್ನು ಒರೆಸಿಕೊಂಡು, ನಾವೆಲ್ಲ ಮತ್ತೆ ನಮ್ಮ ಓಣಿಯ ವಠಾರಕ್ಕೆ ಓಡುತ್ತಿದ್ದೆವು.
ಅಲ್ಲಿ ದೊಡ್ಡ ಅಕ್ಕಂದಿರು, ಅಣ್ಣಂದಿರು, ಓಣಿಯ ಮಕ್ಕಳಲ್ಲರೂ ಸೇರಿ ಒಂದು ಮರಕ್ಕೆ ಜೋಕಾಲಿ ಕಟ್ಟುತ್ತಿದ್ದರು. ಮತ್ತೊಂದು ಮರದ ಕೊಂಬೆಗೆ ಕಾರಜಿಕಾಯಿ ಕಟ್ಟಲಾಗುತ್ತಿತ್ತು. ಯಾರು ಜೋಕಾಲಿಯ ಮೇಲೆ ಕುಳಿತು ಜೋಕಾಡುತ್ತಾ ಆ ಕಾರಜಿಕಾಯಿಯನ್ನು ತಿನ್ನುತ್ತಾರೋ ಅವರೇ ವಿಜೇತರು!





