ಕಾಶ್ಮೀರದ ಮೂವರು ಯುವತಿಯರಿಗೆ ಹಾಡುವ ಹವ್ಯಾಸವಿತ್ತು. ಆ ಮೂವರು ಒಂದು ಸಂಗೀತ ಶಾಲೆಯಲ್ಲಿ ಭೇಟಿಯಾಗಿದ್ದರು, ಆ ಬಳಿಕ ಗೆಳತಿಯರಾಗಿದ್ದರು. ಅವರು ತಮ್ಮ ಸಂಗೀತಯಾನದಲ್ಲಿ ಹುಡುಗಿಯರೇ ಇರುವ ಒಂದು ಬ್ಯಾಂಡ್‌ನ್ನು ಹುಟ್ಟು ಹಾಕುವ ಬಗ್ಗೆ ಯೋಚಿಸಿದರು. ಅವರು ಅಂದುಕೊಂಡಂತೆ ಬ್ಯಾಂಡ್‌ ಆರಂಭಿಸಿ ಅದಕ್ಕೆ `ಪ್ರಗಾಶ್‌ ಬ್ಯಾಂಡ್‌’ ಎಂದು ಹೆಸರಿಟ್ಟರು. ಅವರು ಬಹಳ ಉತ್ಸಾಹದೊಂದಿಗೆ ತಮ್ಮ ಮೊದಲ ಕಾರ್ಯಕ್ರಮವನ್ನು ನೀಡಿದರು. ಆದರೆ ಇದರ ಬದಲಿಗೆ ಅವರಿಗೆ ದೊರೆತದ್ದು ಟೀಕೆ ಟಿಪ್ಪಣಿಗಳ ಸುರಿಮಳೆ, ಫತ್ವಾಗಳ ಉಡುಗೊರೆ. ಕಣ್ಣಲ್ಲಿರುವ ಕನಸುಗಳು ಕೊಚ್ಚಿ ಹೋಗುವ ಆತಂಕ.

ಅವರ ಪರ್ಫಾಮೆನ್ಸ್ ಕುರಿತಾದ ವೀಡಿಯೋ ಯೂಟ್ಯೂಬ್‌ನಲ್ಲಿ ಪೋಸ್ಟ್ ಆದಾಗ ಎಲ್ಲೆಡೆಯಿಂದ ತೀಕ್ಷ್ಣ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಒಂದೇ ದಿನದಲ್ಲಿ 1,400ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದವು. ಕೆಲವರಂತೂ ಇವರನ್ನು ವೇಶ್ಯೆಯರೆಂದು ಕರೆದಿದ್ದರು. ರೇಪ್‌ ಮಾಡುವ ಹಾಗೂ ಕೊಲೆ ಮಾಡುವ ಬೆದರಿಕೆ ಕರೆಗಳು ಬಂದವು.

ಧರ್ಮಗುರು ಬಶೀರುದ್ದೀನ್‌ ಅಹಮ್ಮದ್‌ ಆ ಮೂವರು ಯುವತಿಯರ ಸಾಧನೆಯನ್ನು `ಇಸ್ಲಾಂ ವಿರುದ್ಧದ ಕೃತ್ಯ’ ಎಂದು ಹೇಳಿ ಫತ್ವಾ ಕೂಡ ಹೊರಡಿಸಿದರು.

ಆ ಮೂವರು ಯುವತಿಯರು ಮಾಡಿದ್ದ ತಪ್ಪಾದರೂ ಏನು? ತಮ್ಮ ಫ್ಯಾಷನ್‌ನ್ನು ಮುಂದುವರಿಸಿಕೊಂಡು ಹೊರಟಿದ್ದುದು ಅವರ ತಪ್ಪೆ? ಹುಡುಗಿಯರು ಬ್ಯಾಂಡ್‌ ಎಂಬ ವಾದ್ಯ ನುಡಿಸಲೇಬಾರದೆ? ಹುಡುಗಿಯರು ತಮ್ಮದೇ ಆದ ಒಂದು ನೆಲೆ ಕಂಡುಕೊಂಡದ್ದು ತಪ್ಪಾ?

ಮಹಿಳೆಯರಿಗೆ ಕಾರಣವಿಲ್ಲದೆಯೇ ಬಂಧನದ ಉರುಳನ್ನು ಹಾಕಾಗುತ್ತಿದೆಯೇ? ಅವರ ಬಟ್ಟೆಯ ಬಗ್ಗೆ, ಅವರ ರೀತಿನೀತಿಗಳ ಬಗ್ಗೆ ಅಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಅಗತ್ಯ ಇದೆಯಾ? ಅವರ ವಿರುದ್ಧ ಫತ್ವಾ ಹೊರಡಿಸಿ ಅವರ ಪ್ರಗತಿಯ ಓಟಕ್ಕೆ ಅಡ್ಡಗಾಲು ಹಾಕುವುದು ಎಷ್ಟರ ಮಟ್ಟಿಗೆ ಸರಿ? ಚಿಕ್ಕಪುಟ್ಟ ಸಂಗತಿಗಳನ್ನೇ ಗುರಿಯಾಗಿಟ್ಟುಕೊಂಡು ಅವರ ಮಾನವನ್ನು ಬೀದಿಯಲ್ಲಿ ಹರಾಜು ಹಾಕುವಂತಹ ಘಟನೆಗಳು ಕೂಡ ನಡೆಯುತ್ತಿವೆ.

21ನೇ ಶತಮಾನಕ್ಕೆ ಕಾಲಿಟ್ಟ ಬಳಿಕ ನಾವು ಅದೆಷ್ಟು ಹಿಂದುಳಿದಿದ್ದೇವೆ ಎಂದರೆ, ಅವರ ಕುರಿತಾದ ನಮ್ಮ ಯೋಚನೆ ಅತ್ಯಂತ ತಳಮಟ್ಟಕ್ಕೆ ಬಂದಿದೆ.

ಪ್ರತಿ ವರ್ಷ ಮಾರ್ಚ್‌ 8 ರಂದು ನಾವು ಮಹಿಳಾ ದಿನವನ್ನು ಆಚರಿಸುತ್ತೇವೆ. ಇದರರ್ಥ ಆ ದಿನದಂದು ನಾವು ಮಹಿಳೆಯರ ಯಶಸ್ಸನ್ನು ಗಮನಿಸಿ, ಅವರಿಗೆ ಕೆಲವು ಹೊಸ ಸೌಲಭ್ಯಗಳನ್ನು ನೀಡುವ ಕುರಿತಂತೆ ಆಶ್ವಾಸನೆ ಕೊಡುವುದನ್ನೇ ನಮ್ಮ ಕರ್ತವ್ಯ ಎಂದು ಭಾವಿಸಬಾರದು.

ಮಹಿಳೆಯರ ಸಂರಕ್ಷಣೆ ಕುರಿತಂತೆ ಸೂಕ್ತ ಕಾನೂನು ರೂಪಿಸುವುದಷ್ಟೇ ಸಾಕಾಗುವುದಿಲ್ಲ. ಮಹಿಳೆಯರ ಕುರಿತಂತೆ ಪುರುಷರ ಮಾನಸಿಕತೆ ಬದಲಾಗುವ ಅಗತ್ಯವಿದೆ. ನಾವು ಅವರ ಸಮಾನತೆಯ ಸ್ಥಾನಮಾನವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನ ಧ್ವಜ ಹಾರಿಸುತ್ತಿದ್ದಾರೆ. ಹಾಗಾದರೆ ನಾವು ಧರ್ಮಗುರುಗಳ ಮಾತಿಗೆ ಮರುಳಾಗಿ ಅವರ ಯಶಸ್ಸಿನ ಓಟಕ್ಕೆ ಈ ರೀತಿ ನಿರ್ಬಂಧ ಹಾಕುವುದು ಸರಿಯೇ? ಜಗತ್ತಿನ ಜನಸಂಖ್ಯೆಯ ಅರ್ಧದಷ್ಟಿರುವ ಇವರ ಏಕೈಕ ಬೇಡಿಕೆಯೆಂದರೆ ಪರಿಪೂರ್ಣ ಸ್ವಾತಂತ್ರ್ಯದ್ದು.

– ಗಿರಿಜಾ ಶಂಕರ್‌.   

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ