ತುಮಕೂರು ಜಿಲ್ಲೆಯ ವಿವಿಧ ಭಾಗದಲ್ಲಿ ಕೇವಲ ಒಂದು ವಾರದಲ್ಲಿ 32 ನವಿಲುಗಳು ಮೃತಪಟ್ಟಿದ್ದು, ಇದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
ತುಮಕೂರಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ, ಹುಲ್ಲೆನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 16ರಿಂದ 21ರವರೆಗೆ ಒಟ್ಟು 32 ನವಿಲುಗಳ ಸಾವನ್ನಪ್ಪಿವೆ.
ಸದ್ಯ ಮೃತ ನವಿಲುಗಳ ಮರಣೋತ್ತರ ಪರೀಕ್ಷೆಗಾಗಿ ಅಂಗಾಂಶಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ವರದಿ ಬಂದ ಬಳಿಕ ಸಾವಿನ ಕಾರಣ ಪತ್ತೆಯಾಗಲಿದೆ.
ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ತಂಡ ರಚಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್.ಶಶಿಧರ್ ತಿಳಿಸಿದ್ದಾರೆ.
ನಿರ್ದಿಷ್ಟವಾಗಿ ಯಾವುದೋ ಒಂದು ಗ್ರಾಮ ಅಥವಾ ಒಂದೇ ಕಡೆ ನವಿಲುಗಳು ಮೃತಪಟ್ಟಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ಸಾವನ್ನಪ್ಪುತ್ತಿವೆ. ಮರಣೋತ್ತರ ಪರೀಕ್ಷೆ ಸಮಯದಲ್ಲಿ ಮೃತ ದೇಹದಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ. ಬಿಸಿಲಿನ ತಾಪ ತಾಳಲಾರದೆ ಸತ್ತಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.





