ಫೈನಲ್ ಎಗ್ಸಾಮ್ ಮುಗಿಯುತ್ತಲೇ 10 ವರ್ಷದ ಕೀರ್ತಿ ಮತ್ತು 13 ವರ್ಷದ ಕಿರಣ್‌ ಅತ್ಯಂತ ರೋಮಾಂಚಿತರಾಗಿದ್ದರು. ಇಬ್ಬರೂ ಬಹಳ ಪರಿಶ್ರಮ ಪಟ್ಟು ಓದಿ ಪರೀಕ್ಷೆ ಬರೆದಿದ್ದರು. ಇಬ್ಬರಿಗೂ ಒಳ್ಳೆಯ ರಿಸಲ್ಟ್ ಬರುವ ಭರವಸೆ ಇತ್ತು. ತಮ್ಮ ಈ ಪರಿಶ್ರಮಕ್ಕಾಗಿ ಅವರು ತಮ್ಮ ತಂದೆ ರಾಘವ್ ರಿಂದ ಯಾವುದಾದರೂ ವಿದೇಶೀ ಟೂರಿಸ್ಟ್ ಪ್ಲೇಸ್‌ನಲ್ಲಿ 15 ದಿನಗಳ ಹಾಲಿಡೆ ಟೂರ್‌ ಮಾಡಿಸುವ ಭರವಸೆ ಹೊಂದಿದ್ದರು.

ಅವರ ಕುಟುಂಬದಲ್ಲಿ ಇದು ಮೊಟ್ಟ ಮೊದಲ ವಿದೇಶ ಪ್ರವಾಸವಾಗಿತ್ತು. ರಾಘವ್ ಹೋಲ್ ‌ಸೇಲ್ ‌ಬಟ್ಟೆ ವ್ಯಾಪಾರಿಯಾಗಿದ್ದರು. ಕಳೆದ ವರ್ಷ ಅವರಿಗೆ ಬಹಳ ಲಾಭ ಬಂದಿತ್ತು. ಅವರು ಹೆಂಡತಿ ರೂಪಾ ಮತ್ತು ಮಕ್ಕಳಿಗೆ ವಿದೇಶೀ ಟ್ರಿಪ್‌ಗೆ ಕರೆದೊಯ್ಯುತ್ತೇನೆಂದು ಹೇಳಿದ್ದರು. ಎಲ್ಲ ಸರಿಯಾಗಿತ್ತು. ಆದರೆ 40 ವರ್ಷದ ರಾಘವ್ ಗೆ ತಾವು ಟ್ರಿಪ್‌ಗೆಂದೇ ಪ್ರತ್ಯೇಕವಾಗಿ ಇಟ್ಟಿದ್ದ ಹಣ ಸಾಕಷ್ಟು ಇಲ್ಲ ಎಂದು ತಿಳಿದಿರಲಿಲ್ಲ.

ಅವರು ಆಫ್‌ಸೀಸನ್‌ ಅಥವಾ ಪೀಕ್‌ ಸೀಸನ್‌ ಮತ್ತು ಮಕ್ಕಳ ರಜೆ ಗಮನದಲ್ಲಿಟ್ಟುಕೊಂಡು ಟ್ರಿಪ್‌ನ ಯೋಜನೆ ರೂಪಿಸಿದ್ದರು. ಆದರೆ ಟ್ರಿಪ್‌ನ್ನು ಫೈನಲೈಸ್‌ ಮಾಡುವುದರಲ್ಲಿ ತಡವಾದ್ದರಿಂದ ಏರ್‌ ಲೈನ್ಸ್ ಟಿಕೆಟ್‌ ದರ ಹೆಚ್ಚಾಗಿ, ಲಾಡ್ಜಿಂಗ್‌ ದರಗಳೂ ಹೆಚ್ಚಾಗಿದ್ದವು.

ರಾಘವ್ ರ ಪರಿಸ್ಥಿತಿ ಬಹಳ ಇಕ್ಕಟ್ಟಾಗಿತ್ತು. ಅವರು ಹೋಲ್ ಸೇಲ್ ‌ಮಾರಾಟಗಾರರಾಗಿದ್ದರಿಂದ ತಮ್ಮ ಬಿಸ್‌ನೆಸ್‌ನಿಂದ ಹಣ ತೆಗೆಯಲು ಆಗುತ್ತಿರಲಿಲ್ಲ. ಅದರಿಂದ ಅವರ ಸಾಲ ಪಡೆಯುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದಿತ್ತು. ಜೊತೆಗೆ ಅವರು ಟ್ರಿಪ್‌ ಕ್ಯಾನ್ಸಲ್ ಮಾಡುವುದು ಕಷ್ಟವಾಗಿತ್ತು. ಹಾಗೆ ಮಾಡಿದ್ದರೆ ಮನೆಯವರಿಗೆ ನಿರಾಸೆಯಾಗುತ್ತಿತ್ತು.

ಇದು ರಾಘವ್ ಒಬ್ಬರ ವಿಷಯವಲ್ಲ. ಭಾರತೀಯರು ಒಳ್ಳೆಯ ಹಾಲಿಡೆ ಪ್ಲ್ಯಾನರ್‌ಗಳಲ್ಲ. ಅವರಲ್ಲಿ ಟೂರ್‌ ತಪ್ಪಿಸಿಕೊಳ್ಳುವ ಪ್ರವೃತ್ತಿ ಸಾಮಾನ್ಯ. ಒಮ್ಮೆ ಆಲಸ್ಯದಿಂದಾಗಿ ತಪ್ಪಿಸಿಕೊಂಡರೆ, ಇನ್ನೊಮ್ಮೆ ಸರಿಯಾಗಿ ಗಮನ ಇಡದೆ ತಪ್ಪಿಸಿಕೊಳ್ಳುತ್ತಾರೆ.

ಹೆಚ್ಚಿನ ಸಂದರ್ಭಗಳಲ್ಲಿ ಲಾಡ್ಜಿಂಗ್‌ನ್ನು ಟ್ರಿಪ್‌ಗೆ ಮುಂಚೆಯೇ ಬುಕ್‌ ಮಾಡಲಾಗುತ್ತದೆ ಮತ್ತು ಪ್ರವಾಸದ ಟಿಕೆಟ್‌ನ್ನು 2-3 ವಾರ ಮುಂಚೆಯೇ ಪಡೆಯಲಾಗುತ್ತದೆ. ಇದರಿಂದಾಗಿ ಆರಂಭದ ಬಜೆಟ್‌ ಹೆಚ್ಚಾಗಿರುವುದಿಲ್ಲ ಮತ್ತು ಸರಿಯಾಗಿ ಪ್ಲ್ಯಾನಿಂಗ್ ಮಾಡಿಕೊಳ್ಳದಿದ್ದರೆ ಅನೇಕ ಲಕ್ಷುರಿಗಳ ಮೇಲಿನ ರಿಯಾಯಿತಿ ಸಿಗುವುದಿಲ್ಲ.

ಇಂತಹ ತೊಂದರೆಗಳಿಂದ ಪಾರಾಗಲು ಕಡಿಮೆ ಖರ್ಚಿನ ಮತ್ತು ಮೋಜಿನಿಂದ ಕೂಡಿದ ವೆಕೇಶನ್‌ ಪ್ಲ್ಯಾನಿಂಗ್‌ ಮಾಡಲು ಕೆಳಗೆ ಕೊಟ್ಟಿರುವ ಸಲಹೆಗಳನ್ನು ಗಮನಿಸಿ :

ಅರ್ಲಿ ಬರ್ಡ್‌ ಆಗಿ ಬೇಗನೆ ಆರಂಭಿಸಿದರೆ ಅರ್ಧ ಪಂದ್ಯ ಗೆದ್ದಂತೆ. ಎಕ್ಸಾಟಿಕ್‌ ಹಾಲಿಡೆ ಅಂದರೆ ವಿದೇಶ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ ಅಂದಾಜು ಎರಡರಿಂದ ಎರಡೂವರೆ ಲಕ್ಷ ರೂ. ಖರ್ಚಾಗುತ್ತದೆ. ಆದ್ದರಿಂದ ಟೂರ್‌ನಲ್ಲಿ ನೀವೆಷ್ಟು ಖರ್ಚು ಮಾಡಲು ಬಯಸುತ್ತೀರೆಂದು ನಿಶ್ಚಯಿಸಿಕೊಳ್ಳಿ.

ನಿಮ್ಮ ಮುಂದಿನ ಹೆಜ್ಜೆ ಬಜೆಟ್‌ನ್ನು ಆಧರಿಸಿ ಪ್ರವಾಸದ ದಿನಾಂಕ ಹಾಗೂ ಸ್ಥಳ ನಿರ್ಧರಿಸುವುದು. ನಂತರ ಪ್ರವಾಸದಲ್ಲಿ ಮಾಡಲಾಗುವ ಖರ್ಚಿನ ಅಂದಾಜು ಮಾಡುವುದು. ಇವೆಲ್ಲವನ್ನೂ ಪ್ರವಾಸದ ವಾಸ್ತವಿಕ ದಿನಾಂಕಕ್ಕೆ ಸುಮಾರು 6-7 ತಿಂಗಳ ಮೊದಲೇ ಮಾಡಿಕೊಳ್ಳಬೇಕು. ಇದರಿಂದ ನೀವು ಮಾಡಿಕೊಂಡ ಹಾಲಿಡೇಗೆ ರೋಡ್‌ ಮ್ಯಾಪ್‌ ತಯಾರಿಸಿಕೊಳ್ಳಲು ಅವಕಾಶ ಸಿಗುತ್ತದೆ.

ಒಂದುವೇಳೆ ಹಣವನ್ನು ಒಟ್ಟಿಗೆ ತೆಗೆಯಲು ಕಷ್ಟವಾದರೆ ಪ್ರತ್ಯೇಕ ಖಾತೆಯನ್ನೇ ತೆರೆಯುವುದು ಉತ್ತಮ. ಅದರಲ್ಲಿ ನಿಮ್ಮ ಒಟ್ಟು ಬಜೆಟ್‌ನ್ನು ಗಮನದಲ್ಲಿಟ್ಟುಕೊಂಡು ಒಂದು ನಿಶ್ಚಿತ ಮೊತ್ತ ನಿಯಮಿತವಾಗಿ ಟ್ರಾನ್ಸ್ ಫರ್‌ ಮಾಡುತ್ತಿರಬಹುದು.

ಇದಕ್ಕಾಗಿ ಒಂದು ರಿಕರಿಂಗ್‌ ಡಿಪಾಸಿಟ್‌ ಅಕೌಂಟ್‌ ತೆರೆಯಬೇಕು ಅಥವಾ ಮ್ಯೂಚುಯಲ್ ಫಂಡ್‌ಗಳಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಚ್ ಮೆಂಟ್‌ ಪ್ಲ್ಯಾನ್‌ ಅಂದರೆ ಸಿಪ್‌ ಆರಂಭಿಸಬಹುದು. ಇದರಿಂದ ಸೇವಿಂಗ್ಸ್ ಅಕೌಂಟ್‌ ಅಥವಾ ಕರೆಂಟ್‌ ಅಕೌಂಟ್‌ನಲ್ಲಿ ಆಗುವಂತಹ ವ್ಯರ್ಥ ಖರ್ಚುಗಳಿಂದ ಪಾರಾಗಬಹುದು ಎಂದು  ಕೇರ್‌ ಸೆಕ್ಯೂರಿಟೀಸ್‌ನ ಸರ್ಟಿಫೈಡ್‌ ಫೈನಾನ್ಶಿಯಲ್ ಪ್ಲ್ಯಾನರ್ ಮತ್ತು ಡೈರೆಕ್ಟರ್‌ ಮುಕೇಶ್‌ ಗುಪ್ತ ಹೇಳುತ್ತಾರೆ.

ಸಾಕಷ್ಟು ಬಜೆಟ್‌ ಇಟ್ಟುಕೊಳ್ಳಿ

ನಿಮ್ಮ ಆರಂಭದ ಬಜೆಟ್‌ ಎಷ್ಟೇ ಇರಲಿ, ಶೇ.10-15ರಷ್ಟು ಹೆಚ್ಚುವರಿ ಮೊತ್ತವನ್ನು ಬೇರೆಯೇ ಇಟ್ಟುಕೊಳ್ಳುವುದು ಉತ್ತಮ. ಇದರಿಂದ ನೆಮ್ಮದಿ. ವಿಶೇಷವಾಗಿ ನೀವು ಹಾಲಿಡೆ ಸೀಸನ್‌ನಲ್ಲಿ ಪ್ರವಾಸ ಮಾಡುವವರಿದ್ದರೆ, ಬೆಲೆ ಹೆಚ್ಚಾದಾಗ ಉಂಟಾಗುವ ಸಮಸ್ಯೆಯಿಂದ ಪಾರು ಮಾಡುತ್ತದೆ ಹಾಗೂ ಟ್ರ್ಯಾವೆಲ್ ‌ಪ್ಲ್ಯಾನ್‌ನಲ್ಲಿ ಕೊನೆ ಗಳಿಗೆಯಲ್ಲಿ ಆಗುವ ಬದಲಾವಣೆಯ ಸಮಯದಲ್ಲೂ ಕೆಲಸಕ್ಕೆ ಬರುತ್ತದೆ.

ಹಾಲಿಡೆ ಪ್ಲ್ಯಾನ್‌ನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಖಂಡಿತಾ ಲಾಭ ಪಡೆಯುತ್ತಾರೆ ಎಂದು ಟ್ರ್ಯಾವೆಲ್ಸ್ ‌ಕಂಪನಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಡೀಲ್ಸ್ ಬಾಚಿಕೊಳ್ಳಿ

ಟ್ರ್ಯಾವೆಲ್ ಆಪರೇಟರ್‌ಗಳ ಪ್ರಕಾರ ಹಾಲಿಡೆ ಬುಕ್‌ ಮಾಡಲು ಅತ್ಯಂತ ಪ್ರಶಸ್ತ ಸಮಯ ಪ್ರವಾಸಕ್ಕಿಂತ 2 ತಿಂಗಳು ಮೊದಲು. ಆಗ ಹೋಟೆಲ್ ‌ರೂಮ್ ಕೈಗೆಟುಕುವ ದರದಲ್ಲಿ ಸಿಗುತ್ತದೆಯೇ, ಪ್ರೈವೇಟ್‌ ಟ್ಯಾಕ್ಸಿಗಳು ಸರಿಯಾದ ದರದಲ್ಲಿ ಸಿಗುತ್ತಿಯೇ, ಏರ್‌ಟಿಕೆಟ್‌ ರೆಗ್ಯುಲರ್‌ ದರದಲ್ಲಿ ಸಿಗುತ್ತದೆಯೇ ಎಂದೆಲ್ಲಾ ನಿರ್ಧರಿಸಿಕೊಳ್ಳಬಹುದು.

ಇದಲ್ಲದೆ ಹೆಚ್ಚಿದ ಹಾಲಿಡೆ ದರಗಳೂ ಬಾಧಿಸುವುದಿಲ್ಲ. ನೀವು ಸ್ಪೆಷಲ್ ಅಕೇಶನ್‌ಗಳನ್ನು ಸೆಲೆಬ್ರೇಟ್‌ ಮಾಡಬಹುದು. ಜೊತೆಗೆ ನೀವು ಮಾಡಬಹುದಾದ ವಾಸ್ತ ಖರ್ಚಿನ ಲೆಕ್ಕವನ್ನು ಇಡಬಹುದು.

ನೀವು ಎಷ್ಟು ಬೇಗ ಬುಕ್‌ ಮಾಡುತ್ತೀರೋ ಅಷ್ಟು ಹೆಚ್ಚು ಅರ್ಲಿ ಬರ್ಡ್‌ ಆಫರ್‌ಗಳು ಸಿಗುವ ಚಾನ್ಸ್ ಇರುತ್ತದೆ ಎಂದು ಒಬ್ಬ ಟ್ರ್ಯಾವೆಲ್ಸ್ ಕಂಪನಿಯ ಅಧಿಕಾರಿ ಹೇಳುತ್ತಾರೆ.

ಒಂದುವೇಳೆ ನೀವು ಎರಡಕ್ಕಿಂತ ಹೆಚ್ಚು ದೇಶಗಳ ಪ್ರವಾಸ ಮಾಡುತ್ತಿದ್ದರೆ, ಆದಷ್ಟು ಬೇಗ ಬುಕಿಂಗ್‌ ಮಾಡಿದರೆ ಅವುಗಳ ವೀಸಾ ಬೇಗ ಪಡೆಯಬಹುದು. ಏಕೆಂದರೆ ಪೀಕ್‌ ಸೀಸನ್‌ನಲ್ಲಿ ರಾಯಭಾರಿ ಕಛೇರಿಯಲ್ಲಿ ಉಂಟಾಗುವ ರಶ್‌ನಿಂದಾಗಿ ತಡವಾಗುತ್ತದೆ.

ಆದರೆ ಬಹಳ ಬೇಗ ಅಂದರೆ 5-6 ತಿಂಗಳ ಮೊದಲು ಬುಕಿಂಗ್‌ ಮಾಡುವುದು ಕೆಲವು ಅನುಮಾನಗಳನ್ನು ಉಂಟುಮಾಡುತ್ತದೆ. ಎಷ್ಟೋ ಬಾರಿ ಟ್ರಿಪ್‌ ರದ್ದಾಗುವ ಸಂಭವವಿರುತ್ತದೆ. ಆದ್ದರಿಂದ ತುಂಬಾ ಬೇಗ ಬುಕಿಂಗ್‌ ಮಾಡುವಾಗ ಈ ವಿಷಯವನ್ನೂ ಗಮನದಲ್ಲಿಟ್ಟುಕೊಳ್ಳಿ.

ಸ್ಮಾರ್ಟ್‌ ಪ್ಯಾಕಿಂಗ್‌ ಮತ್ತು ಅಡಚಣೆಗಳು

ನಿಮ್ಮ ಲಗೇಜನ್ನು 8-10 ದಿನಗಳ ಮೊದಲು ಪ್ಯಾಕ್‌ ಮಾಡಲು ಶುರು ಮಾಡಿ. ಇದರಿಂದ ಹಲವು ಅನಗತ್ಯ ಖರ್ಚುಗಳಿಂದ ಪಾರಾಗುತ್ತೀರಿ. ಏಕೆಂದರೆ ಅನೇಕ ಬಾರಿ ಪ್ರವಾಸಿಗರು ಗಡಿಬಿಡಿಯಲ್ಲಿ ಬಹಳ ಅಗತ್ಯ ವಸ್ತುಗಳನ್ನು ಪ್ಯಾಕ್‌ ಮಾಡಿಕೊಳ್ಳಲು ಮರೆತುಬಿಡುತ್ತಾರೆ.

ಇದಲ್ಲದೆ, ಪ್ರವಾಸದಲ್ಲಿ ಪ್ಲೈಟುಗಳು ತಡವಾಗಬಹುದು, ಅದಕ್ಕೂ ಸಿದ್ದವಾಗಿರಿ. ಎಲ್ಲ ಯೋಜನೆಗಳಿಗೆ ಅನುಗುಣವಾಗಿಯೇ ನಡೆಯುವುದಿಲ್ಲ. ಆದ್ದರಿಂದ ಅಡಚಣೆಗಳ ಬಗ್ಗೆಯೂ ಮೊದಲೇ ಊಹಿಸಿ ಸಿದ್ಧರಾಗಿರಿ. ಪ್ರವಾಸದಿಂದ ಹಿಂತಿರುಗಿ ನೀವು ಕೂಡಲೇ ನೌಕರಿಗೆ ಹೋಗಬೇಕಾಗಬಹುದು ಅಥವಾ ಯಾವುದಾದರೂ ಮಹತ್ವಪೂರ್ಣ ಮೀಟಿಂಗ್‌ ಅಟೆಂಡ್‌ ಮಾಡಬೇಕಾಗಿರಬಹುದು. ಆದ್ದರಿಂದ ಅದಕ್ಕೂ 1-2 ರಜಾ ದಿನಗಳನ್ನು ಉಳಿಸಿಡಿ.

– ಆರ್‌. ಕಲ್ಯಾಣಿ

ಫಾರಿನ್‌ ಟ್ರಿಪ್‌ಗಾಗಿ ಒಂದಿಷ್ಟು ಟಿಪ್ಸ್

ನೀವು ಎಂಥ ಪ್ರವಾಸದ ಪ್ಲ್ಯಾನಿಂಗ್‌ ಮಾಡಬೇಕೆಂದರೆ, ಅದರಲ್ಲಿ ಪೂರ್ಣ ಟ್ರಿಪ್‌ನ ಕಾಲಾವಧಿ, ಭಾರತೀಯ ಊಟ ತಿಂಡಿಗಳ ಲಭ್ಯತೆ, ಹೋಟೆಲ್‌ಗೆ ಬಂದು ಹೋಗುವ ವಿಧಾನ ಅಂದರೆ ಮೇಡ್‌ ಆಫ್‌ ಟ್ರಾನ್ಸ್ ಫರ್‌, ಟೂರ್‌ ವಿಮೆ, ಏರ್‌ ಟಿಕೆಟ್‌, ಸೈಟ್ ಸೀಯಿಂಗ್‌ ಸೆಂಟರ್‌ಗಳ ವಿವರಣೆ….. ಇತ್ಯಾದಿ ಎಲ್ಲ ಒಳಗೊಂಡಿರಬೇಕು.

ಏರ್‌ ಫೇರ್‌, ರೆಂಟ್‌ ಕಾರ್‌, ಹೋಟೆಲ್ ‌ಕೋಣೆಗಳು, ಟೂರ್‌ ವಿಮೆ ಇತ್ಯಾದಿಗಳೆಲ್ಲ ಒಂದೇ ಪ್ಯಾಕೇಜಿನಲ್ಲಿ ಲಭ್ಯವಿರುವಂಥ ಟ್ರ್ಯಾವೆಲ್ ‌ಪ್ಯಾಕೇಜ್‌ನ್ನೇ ಆರಿಸಿಕೊಳ್ಳಬೇಕು.

ಸಂಬಂಧಿಸಿದ ನಗರದ ಪ್ರವಾಸಿ ಸ್ಥಳಗಳ ಮಾಹಿತಿಗಾಗಿ ಬ್ಲಾಗ್ಸ್ ಮತ್ತು ಟ್ರ್ಯಾವೆಲ್ ‌ಸೈಟ್ಸ್ ನ್ನು ಇಂಟರ್‌ ನೆಟ್‌ನಲ್ಲಿ ಅಗತ್ಯವಾಗಿ ಗಮನಿಸಿ.

ಕಾಲಾವಕಾಶದ ಇತಿಮಿತಿಗಳನ್ನು ಗಮನದಲ್ಲಿರಿಸಿಕೊಂಡು ಅದರ ಪ್ರಕಾರ ಪ್ಯಾಕೇಜ್‌ ಟೂರ್‌ ಪ್ರೋಗ್ರಾಂ ಫಿಕ್ಸ್ ಮಾಡಿ. ಅಕಸ್ಮಾತ್‌ ನೀವು ವಿದೇಶೀ ಪ್ರವಾಸದಲ್ಲಿದ್ದು, ಇಲ್ಲಿ ಆಕಸ್ಮಿಕವಾಗಿ ಬಂಧು ಬಾಂಧವರು ತೀರಿಕೊಂಡರೆ ಅಥವಾ ಇನ್ನಾವುದೇ ತುರ್ತುಸ್ಥಿತಿ ಎದುರಾದರೆ, ಅಲ್ಲಿಂದ ತಕ್ಷಣ ಹೊರಟು ಬರಲು ಅನುಕೂಲಗಳಿವೆಯೇ ಎಂಬುದನ್ನೂ ಗಮನಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ