ಪ್ರೇಮಿಗಳು ತಮ್ಮ ಭವಿಷ್ಯದ ಚಿಂತೆ ಮಾಡುತ್ತಾ, ಮದುವೆಯ ಕುರಿತಾಗಿ ಮಾತನಾಡುತ್ತಿದ್ದರು.
ಪ್ರೇಯಸಿ : ನಾನು ಈಗಲೇ ಹೇಳಿಬಿಡ್ತೀನಿ, ನನಗಂತೂ ಅಡುಗೆ ಮಾಡೋಕ್ಕೆ ಬರೋಲ್ಲ ನೀವೇ ಮಾಡಬೇಕು.
ಪ್ರೇಮಿ : ನಾನೂ ಹೇಳಿಬಿಡ್ತೀನಿ, ನಾನೊಬ್ಬ ಹೊಸ ಕವಿ. ನನ್ನ ಕವಿತೆಗಳನ್ನು ನಾನೇ ಜೋರಾಗಿ ಹಾಡಿಕೊಂಡರೆ ಮಾತ್ರ ನನಗೆ ಅಡುಗೆ ಮಾಡಲು ಮೂಡ್ ಬರುತ್ತೆ.
ಪ್ರೇಯಸಿ : ಯಾಕೋ ನಾನೇ ಅಡುಗೆ ಕಲಿಯೋದು ವಾಸಿ ಅನ್ಸುತ್ತೆ....
ಒಬ್ಬ ಮಹಿಳೆ ಭಾರಿ ಲಗೇಜ್‌ನೊಂದಿಗೆ ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಕುಳಿತು ಯಾರಿಗೋ ಕಾಯುತ್ತಿದ್ದಳು.
ಆಕೆಯನ್ನು ಗಮನಿಸಿದ ಒಬ್ಬ ಕೂಲಿ ಕೇಳಿದ, `ಮೇಡಂ, ಲಗೇಜ್ ಜಾಸ್ತಿ ಇದೆ. ಕೂಲಿ ಬೇಕಿತ್ತೆ?'`ಅದೆಲ್ಲ ಏನೂ ಬೇಡಪ್ಪ, ಇದನ್ನು ಹೊರೋದಿಕ್ಕೆ ನಮ್ಮೆಜಮಾನ್ರು ಇದ್ದಾರೆ. ನೀರಿನ ಬಾಟಲಿ ತರಲು ಹೋಗಿದ್ದಾರಷ್ಟೆ.....' ಎಂದು ಆಕೆ ಸಾವಧಾನವಾಗಿ ಹೇಳುವುದೆ?
ಮಗರಾಯ ಹೈಸ್ಕೂಲ್ ಟೆಸ್ಟ್ ನಲ್ಲಿ ಫೇಲಾಗಿ ಬಂದದ್ದು ತಂದೆಗೆ ಕೆಂಡಾಮಂಡಲ ಸಿಟ್ಟು ತರಿಸಿತ್ತು.
ತಂದೆ : ಮುಠ್ಠಾಳ.... ನಿನ್ನ ಮುಖ ತೋರಿಸಬೇಡ..... ಇನ್ನು ಮೇಲೆ ನನ್ನ ಅಪ್ಪ ಅಂತ ಕರೆಯಲೇಬೇಡ!
ಮಗ : ಹೋಗಲಿ ಬಿಡಪ್ಪ, ಇದಕ್ಕೆ ಯಾಕೆ ಇಷ್ಟು ಕೋಪ? ಇದು ಸಾಧಾರಣ ಕ್ಲಾಸ್ ಟೆಸ್ಟ್ ತಾನೇ? ಡಿ.ಎನ್.ಎ. ಟೆಸ್ಟ್ ಏನೂ ಅಲ್ಲವಲ್ಲ?
ಒಂದು ರಾಜಕೀಯ ಪಕ್ಷ ಚುನಾವಣೆಯ ಟಿಕೆಟ್ ನೀಡುವ ಮೊದಲು ಅಭ್ಯರ್ಥಿಗಳ ಸಂದರ್ಶನ ನಡೆಸಿತು.
ಪಕ್ಷದ ಹಿರಿಯ ಮುಖಂಡ : ಯಾರಾದರೂ ಬಾಯಾರಿಕೆಯಿಂದ ಸಾಯುವಂತಾಗಿದ್ದರೆ ನೀವು ಏನು ಮಾಡುತ್ತೀರಿ?
ಅಭ್ಯರ್ಥಿ : ಅವರಿಗೆ ತಕ್ಷಣ ನೀರು ಕುಡಿಸುವ ವ್ಯವಸ್ಥೆ ಮಾಡುತ್ತೇನೆ.
ಮುಖಂಡ : ನಿಮ್ಮ ಸುತ್ತಮುತ್ತಲೂ ಒಂದು ಹನಿ ನೀರೂ ಸಿಗುತ್ತಿಲ್ಲ. ಆಗೇನು ಮಾಡುತ್ತೀರಿ?
ಅಭ್ಯರ್ಥಿ : ಏನೂ ಚಿಂತೆ ಇಲ್ಲ. ಆದಷ್ಟು ಬೇಗ ಬಾವಿ ತೋಡಿಸಿ ನೀರು ತರಿಸುತ್ತೇನೆ ಎಂದು ಅವನಿಗೆ ಆಶ್ವಾಸನೆ ತುಂಬುತ್ತೇನೆ.
ಮುಖಂಡ : ಶಭಾಷ್! ನಿಮ್ಮಂಥವರೇ ನಮಗೆ ಬೇಕು.
ಒಂದು ಮನೆಯ ಕಾಲಿಂಗ್ ಬೆಲ್ ಕೆಳಗೆ ಹೀಗೆ ಬರೆಯಲಾಗಿತ್ತು, `ದಯವಿಟ್ಟು ಬೆಲ್‌ಮಾಡಿದ ನಂತರ ಕಾಯುವ ತಾಳ್ಮೆ ಇರಲಿ. ಸತತ ಬೆಲ್ ಒತ್ತುತ್ತಲೇ ಇರಬೇಡಿ. ಒಳಗಿರುವವರು ನಡೆದುಕೊಂಡು ಬರಬೇಕೇ ಹೊರತು ಹಾರಿಕೊಂಡು ಬರಲಾಗದು.'
ಒಂದೇ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಏಳು ಮಂದಿ ಮಹಿಳೆಯರ ನಡುವೆ ಯಾವ ಯಾವುದೋ ಕಾರಣಕ್ಕೆ ಜಗಳವಾಯಿತು. ಅದು ವಿಪರೀತಕ್ಕೆ ಹೋಗಲು ಎಲ್ಲರೂ ಕೋರ್ಟ್ ಬಾಗಿಲನ್ನು ತಟ್ಟಿದರು. ನ್ಯಾಯಾಧೀಶರು ಆಣತಿ ನೀಡಿದ ನಂತರ ಅವರ ಮುಂದೆ ಹಾಜರಾದ ಈ ಮಹಿಳೆಯರು ನಾ ಮುಂದು ತಾ ಮುಂದು ಎಂದು ಪರಸ್ಪರರ ಮೇಲೆ ಆರೋಪ ಹೊರಿಸತೊಡಗಿದರು. ಇದರಿಂದ ನ್ಯಾಯಾಧೀಶರೇ ಕಕ್ಕಾಬಿಕ್ಕಿಯಾದರು. ಮಹಿಳೆಯರ ಆರೋಪ ಪ್ರತ್ಯಾರೋಪ ಮುಗಿಲು ಮುಟ್ಟಿದಾಗ, ಇವರು ಮೇಜು ಮುರಿಯುವಂತೆ ಸುತ್ತಿಗೆಯಿಂದ ಬಡಿದು, ``ಆರ್ಡರ್! ಆರ್ಡರ್!'' ಎಂದು ಗುಡುಗುತ್ತಾ ಹೇಳಿದರು, ``ಈಗ ಒಬ್ಬೊಬ್ಬರಾಗಿ ನಿಮ್ಮ ಅಹವಾಲನ್ನು ಹೇಳಿಕೊಳ್ಳಬೇಕು. ಎಲ್ಲಕ್ಕೂ ಮೊದಲು ನಿಮ್ಮಲ್ಲಿ ಯಾರಿಗೆ ಅತ್ಯಧಿಕ ವಯಸ್ಸಾಗಿದೆಯೋ ಅವರಿಂದ ಅರೋಹಣ ಕ್ರಮದಲ್ಲಿ ಮುಂದುವರಿಸಿ....'' ಎಂದಾಗ ತಂತಮ್ಮಲ್ಲೇ ಮಾತನಾಡಿಕೊಂಡು ಶಾಂತರಾದ ಮಹಿಳೆಯರು, ದೂರನ್ನು ಹಿಂಪಡೆದು ಹೊರಟೇಬಿಡವುದೇ?