ರಾಧಿಕಾ ಅಗ್ರವಾಲ್
ಶಾಪ್ ಕ್ಲೂಸ್ ಡಾಟ್ಕಾಮ್ ನ ಸಹಸಂಸ್ಥಾಪಕಿ
ಆತ್ಮವಿಶ್ವಾಸದಿಂದ ಸದಾ ಮಂದಸ್ಮಿತೆಯಾದ ರಾಧಿಕಾ, ಇಬ್ಬರು ಮಕ್ಕಳ ತಾಯಿ. ತನ್ನ ಸಂಸ್ಥೆಯನ್ನು 3ನೇ ಮಗುವೆಂದೇ ಭಾವಿಸುವ ಈಕೆ, `ಗೋ ಟು ಮಾರ್ಕೆಟ್' ಎಂಬ ಸಣ್ಣ ಸಂಸ್ಥೆ ಆರಂಭಿಸಿ, 5 ವರ್ಷಗಳಲ್ಲೇ ಈಕೆ ತಮ್ಮ ಬ್ರಾಂಡ್‌ನ್ನು ಜನಪ್ರಿಯ ಆಗಿಸುವಲ್ಲಿ ಯಶಸ್ವಿಯಾದರು. ಇವರ ಮೊದಲ ಅಡ್ವೆಂಚರ್ 2006ರಲ್ಲಿ ಫ್ಯಾಷನ್ ಕ್ಲೂಸ್ ಹೆಸರಲ್ಲಿ ಶುರುವಾಯ್ತು. ನಂತರ 2011ರಲ್ಲಿ ಕೇವಲ 10 ಸದಸ್ಯರ ತಂಡದೊಂದಿಗೆ ಒಂದು ಬೇಸ್‌ಮೆಂಟ್‌ನಲ್ಲಿ ಶುರುವಾದ ಶಾಪ್ ಕ್ಲೂಸ್ ಇಂದು 1200 ಸದಸ್ಯರನ್ನು ಹೊಂದುವಷ್ಟು ಬೆಳೆದಿದೆ.
ಗ್ಲಾಸ್ ಸೀಲಿಂಗ್ನ್ನೇ ಮುರಿದರು
ಈ ಮಟ್ಟ ತಲುಪಲು ಎಂದಾದರೂ ಗ್ಲಾಸ್ ಸೀಲಿಂಗ್‌ನ್ನು ಎದುರಿಸಬೇಕಾಯ್ತೇ? ಇದಕ್ಕೆ ಆಕೆ, ``ಗ್ಲಾಸ್ ಸೀಲಿಂಗ್ ಮಹಿಳೆಯರಿಗೆ ಒಂದು ಮೂಕ ಬಾಧೆ. ಆರಂಭದಲ್ಲಿ ಇದರ ಹಿಂಸೆ ಅನುಭವಿಸಿದೆ. ನನ್ನ ಪುರುಷ ಸಹೋದ್ಯೋಗಿಗಳಿಗೆ ನನ್ನ ಮುಂದೆ ಹೆಚ್ಚು ಅವಕಾಶ ನೀಡುತ್ತಿದ್ದರು.``ಆದರೆ ಈಗ ಶಾಪ್ ಕ್ಲೂಸ್ ಮೂಲಕ ಈ ಅಸಮಾನತೆಯನ್ನು ದೂರಗೊಳಿಸಿದ್ದೇವೆ. ಈ ಸಂಸ್ಥೆಗೆ ಹಲವು ಹೆಂಗಸರು ಹೆಗಲು ನೀಡಿದ್ದಾರೆ. ನೀವು ಹೆಣ್ಣಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಆಕೆ ಏನು ಬೇಕಾದರೂ ಸಾಧಿಸಿ ನಿರೂಪಿಸುತ್ತಾಳೆ, ಅಷ್ಟು ಸಮರ್ಥೆ.''
ಎಲ್ಲಕ್ಕಿಂತ ಹೆಚ್ಚಿನ ತಾಕತ್ತು
ಮಕ್ಕಳು ಹಾಗೂ ಸಂಸ್ಥೆಯನ್ನೇ ಈಕೆ ತನ್ನ ಹಿರಿದಾದ ಶಕ್ತಿ ಎಂದು ಭಾವಿಸುತ್ತಾರೆ. ಇವೆರಡೂ ಅಭಿವೃದ್ಧಿಗೊಂಡಷ್ಟೂ ಆಕೆಗೆ ಸಂತಸ. ಶಾಪ್ ಕ್ಲೂಸ್ ಸಂಸ್ಥೆಗೆ ಹೋಗಿ ತನ್ನ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡುವುದನ್ನು ನೋಡಿದರೆ ಹೆಚ್ಚಿನ ಹಿಗ್ಗು ಸಿಗುತ್ತದೆ ಎನ್ನುತ್ತಾರೆ. ಈಕೆಯ ಪ್ರಕಾರ ಯಶಸ್ವಿ ಎನಿಸಲು ಸಾಹಸ ಮತ್ತು ಶ್ರದ್ಧೆ ಇರಬೇಕಾದುದು ಅತ್ಯಗತ್ಯ. ತಮ್ಮ ಯೋಜನೆ ಕಾರ್ಯರೂಪಕ್ಕಿಳಿಸಲು ಕಠಿಣ ಶ್ರಮ ಹಾಗೂ ನಿರಂತರ ಕಾರ್ಯ ಚಟುವಟಿಕೆ ಅಗತ್ಯ ಎನ್ನುತ್ತಾರೆ.
ಕಾರ್ಪೊರೇಟ್ ಜಗತ್ತು ಮತ್ತು ಮಹಿಳೆ
ಈ ಕಾರ್ಪೊರೇಟ್ ಜಗತ್ತಿನಲ್ಲಿ ಮಹಿಳಾ ಉದ್ಯಮಿ ಏನೆಲ್ಲ ಸವಾಲು ಎದುರಿಸಬೇಕು? ಇದಕ್ಕೆ ಈಕೆ, ``ಇಲ್ಲಿ ಮಹಿಳೆಯರನ್ನು ಪುರುಷರಿಗೆ ಹೋಲಿಸಿ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. ಅವರಿಗೇ ಬೇರೆ ಪ್ರಶ್ನೆ, ನಮಗೇ ಬೇರೆಯದು. ಅವರು ಬಿಸ್‌ನೆಸ್, ಮನೆ ಎರಡನ್ನೂ ಸಂಭಾಳಿಸಬೇಕಾದ ಅಗತ್ಯವಿಲ್ಲ. ಅವರು ಈ ಜಗತ್ತಿನಲ್ಲಿ ಇನ್ನೂ ಎತ್ತರೆತ್ತರಕ್ಕೆ ಬೆಳೆಯಬೇಕೆಂದು ಹುರಿದುಂಬಿಸುತ್ತಾರೆ. ಆದರೆ ಮಹಿಳೆಗೆ ಹಾಗಲ್ಲ....
``ನನಗನಿಸುತ್ತೆ, ಇಂದಿನ ಸಂಸ್ಥೆಗಳು ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಆಫೀಸ್‌ನಲ್ಲಿ ಹಿಂಸೆಯ ವಾತಾವರಣ ಇರಬಾರದು. ಮಹಿಳೆಯರ ದೂರುಗಳಿಗೆ ಸ್ಪಂದಿಸುವ ಉತ್ತಮ ವ್ಯವಸ್ಥೆ ಇರಬೇಕು.''
ಕೆಲಸ ಕುಟುಂಬದ ಸಾಮರಸ್ಯ
ಎರಡೂ ಕಡೆ ಬ್ಯಾಲೆನ್ಸ್ ಮಾಡಿಕೊಳ್ಳಬೇಕಾದ ಸಂದರ್ಭದ ಕುರಿತಾಗಿ, ``ಇದೇನೂ ಅಸಾಧ್ಯದ ಕೆಲಸವಲ್ಲ. ಮಹಿಳೆ ಯಾವುದರ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾಳೆ ಎಂಬುದೇ ಮುಖ್ಯ. ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂಬುದರ ಮೇಲೆ ಎಲ್ಲ ನಿಂತಿದೆ.''
ರಾಧಿಕಾ ಪ್ರಕಾರ, ಆಫೀಸ್‌ನಲ್ಲಿ ಕೆಲಸ ಮಾಡುವಾಗ ಆಕೆಯ ಪೂರ್ತಿ ಗಮನ ಅಲ್ಲೇ ಇರುತ್ತದೆ ಹಾಗೂ ಮನೆಯಲ್ಲಿರುವಾಗ ಆಫೀಸ್ ಕುರಿತು ಚಿಂತೆ ಮಾಡುವುದಿಲ್ಲ. ಮನೆಯಲ್ಲಿದ್ದಾಗ ಮನೆಯವರ ಯೋಗಕ್ಷೇಮವಷ್ಟೇ ಮುಖ್ಯ.