`ಇಂಟರ್‌ ನ್ಯಾಷನಲ್ ಅಸೋಸಿಯೇಷನ್‌ ಫಾರ್‌ ದಿ ಸ್ಟಡಿ ಆಫ್‌ ಪೇನ್‌’ ಈ ಸಂಸ್ಥೆ ನೋವಿನ ಬಗ್ಗೆ ಹೀಗೆ ವ್ಯಾಖ್ಯಾನಿಸುತ್ತದೆ, `ನೋವು ಒಂದು ಬಗೆಯ ಅಪ್ರಿಯ ಅನುಭೂತಿ ಮತ್ತು ಆವೇಶವಾಗಿದ್ದು, ಅದು ನಮ್ಮ ಪ್ರಸ್ತುತ ಊತಕಗಳನ್ನಷ್ಟೇ ಅಲ್ಲ, ಹೊಸದಾಗಿ ಸೃಷ್ಟಿಯಾಗುವ ಊತಕಗಳನ್ನು ಕೂಡ ಹಾನಿಗೀಡು ಮಾಡುತ್ತದೆ. ಅಂದಹಾಗೆ ಈ ನೋವಿನ ಅನುಭೂತಿಯನ್ನು ಬಾಯ್ಬಿಟ್ಟು ಹೇಳಲು ಆಗುವುದಿಲ್ಲ, ಆದರೆ ಆಗುವ ಅನುಭೂತಿಯನ್ನು ನಿರಾಕರಿಸಲಾಗುವುದಿಲ್ಲ.’

ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆಯೆಂದರೆ ಮೀನುಗಳಿಗೂ ನೋವಿನ ಅನುಭೂತಿ ಆಗುತ್ತದೆಯೇ? ಜೀವಜಂತುಗಳಿಗೂ ನೋವನ್ನು ಸಹಿಸಿಕೊಳ್ಳುವ ಶಕ್ತಿ ಇರುತ್ತದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ಅವುಗಳಿಗೆ ನೋವು ಸಹಿಸಿಕೊಳ್ಳುವ ಶಕ್ತಿ ಸ್ವಲ್ಪ ವಿಭಿನ್ನವಾಗಿರುತ್ತದೆ.

ವಿಕ್ಟೋರಿಯಾ ಬ್ರಿಥ್‌ ತಮ್ಮ `ಡೂ ಫಿಶ್‌ ಫೀಲ್‌ ಪೇನ್‌?’ ಪುಸ್ತಕದಲ್ಲಿ ವೈಜ್ಞಾನಿಕ ಪುರಾವೆ ನೀಡುವುದರ ಮೂಲಕ ಮೀನುಗಳು ಜಾಣ ಹಾಗೂ ಮಾನಸಿಕವಾಗಿ ಬಹಳ ಸಮರ್ಥವಾಗಿರುತ್ತವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮೀನುಗಳು ಬಹಳ ಬುದ್ಧಿವಂತ ಜಲಚರಗಳು ಹಾಗೂ ಅವುಗಳ ನೆನಪಿನ ಶಕ್ತಿ ದೀರ್ಘಾವಧಿಯ ತನಕ ಹಾಗೆಯೇ ಇರುತ್ತದೆ ಎಂಬುದನ್ನು ನೂರಾರು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. ಸಾಲ್ಮನ್‌ ಎಂಬ ಮೀನಿನ ಸ್ಮರಣಶಕ್ತಿಯಂತೂ ಜೀವನವಿಡೀ ಹಾಗೆಯೇ ಇರುತ್ತದೆ. ಮೀನುಗಳು ಚೀರುವ ಶಕ್ತಿ ಹೊಂದಿಲ್ಲ ಎನ್ನುವುದು ಗಮನಾರ್ಹ. ಆದರೆ ಮುಳ್ಳುಗಳ ನಡುವೆ ಅವು ಸಿಲುಕಿಕೊಂಡಾಗ ಅವುಗಳ ವರ್ತನೆಯಿಂದಲೇ ನೋವಿನ ಅನುಭೂತಿ ಪ್ರಕಟಗೊಳ್ಳುತ್ತದೆ. ಅದನ್ನು ನಾವು ಗಮನಿಸಬೇಕು ಅಷ್ಟೆ. ಮೀನುಗಳ ಇಂದ್ರಿಯಗಳು ನಮ್ಮ ಇಂದ್ರಿಯಗಳಿಗಿಂತ ಹೆಚ್ಚು ಸಂವೇದನಾಶೀಲವಾಗಿರುತ್ತವೆ.

ನೋವಿನ ಅನುಭೂತಿ

ಮೀನುಗಳ ದೇಹದಲ್ಲಿ ಮನುಷ್ಯನಿಗಿಂತ ಹೆಚ್ಚು ಇಂದ್ರಿಯಗಳಿವೆ. ಒಂದು ತೆಳ್ಳನೆಯ ಪಾರ್ಶ್ವ ರೇಖೆಯಂತಹ ವಿಶೇಷ ಸಂವೇದಿ ರಿಸೆಪ್ಟರ್‌ಗಳು ಅವುಗಳಿಗೆ ಅಕ್ಕಪಕ್ಕದ ವಸ್ತುಗಳು ಮತ್ತು ಜಲಚರಗಳ ಕುರಿತಾಗಿ ಅನುಭೂತಿ ಬರುವಂತೆ ಮಾಡುತ್ತವೆ.

ಬ್ಲೆಂಡ್‌ ಕೇವ್‌ ಫಿಶ್‌ ಎಂಬುದು ಮೆಕ್ಸಿಕೊ ಸಮುದ್ರದ ತಳಭಾಗದಲ್ಲಿ ಕಂದರಗಳ ನಡುವೆ ಕಂಡುಬರುತ್ತದೆ. ಇವನ್ನು ಪ್ರದರ್ಶನ ಮೀನುಗಳಾಗಿ ಉಪಯೋಗಿಸಲಾಗುತ್ತದೆ. ಎಲೆಕ್ಟ್ರಿಕ್‌ ಈಲ್ ನ ಬಾಲದ ಹಿಂಭಾಗದಲ್ಲಿ ಒಂದು ವಿಶೇಷ ಅಂಗ ಇದ್ದು, ಅದು ಬೇಟೆಯಾಡಲು ಬರುವ ಜಲಚರಕ್ಕೆ ವಿದ್ಯುತ್‌ ಆಘಾತ ನೀಡುತ್ತದೆ. ನೈಫ್‌ ಫಿಶ್‌ ಅಥವಾ ಎಲಿಫೆಂಟ್‌ ನೋಡ್‌ ಸಂದೇಶ ರವಾನೆಗಾಗಿ ಒಂದು ಬಗೆಯ ಎಲೆಕ್ಟ್ರಿಕ್‌ ಸಿಗ್ನಲ್ ನೀಡುತ್ತದೆ.

ಮೀನುಗಳ ಮೆದುಳಿನಲ್ಲೂ 3 ಭಾಗಗಳಿರುತ್ತವೆ. ಮುಮ್ಮೆದುಳು, ಮಧ್ಯ ಮೆದುಳು ಹಾಗೂ ಹಿಮ್ಮೆದುಳು. ಅಂದಹಾಗೆ ಮೀನುಗಳಲ್ಲಿ ನಿಯೊಕಾರ್ಟೆಕ್ಸ್ ಇರುವುದಿಲ್ಲ. ಈ ಭಾಗವೇ ನಮ್ಮ ದೇಹದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಇದು ಇಲ್ಲದೆ ಇರುವುದರಿಂದ ಮೀನುಗಳಿಗೆ ನೋವಿನ ಅನುಭೂತಿ ಆಗುವುದಿಲ್ಲ ಎಂದು ಕೂಡ ಹೇಳಲಾಗುತ್ತದೆ. ಜೀವಜಂತುಗಳಲ್ಲಿ ಭಾವನೆಗಳ ಅನುಭೂತಿಯ ನಿಟ್ಟಿನಲ್ಲಿ ನಿಯೊಕಾರ್ಟೆಕ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ಎಂ.ಆರ್‌.ಐ ಪರೀಕ್ಷೆಯಲ್ಲಿ ಕಂಡುಕೊಳ್ಳುವ ಸಂಗತಿಯೆಂದರೆ, ಅದು ಮೆದುಳಿನ ಒಂದು ಭಾಗವಾಗಿದ್ದು, ನೋವಿನಲ್ಲಿ ಸಕ್ರಿಯ ಪಾತ್ರ ವಹಿಸುತ್ತದೆ. ಆಗ ಮೆದುಳಿನ ಇತರೆ ಅಂಗಗಳು ತಮ್ಮ ತಮ್ಮ ಕೆಲಸದಲ್ಲಿ ತಲ್ಲೀನವಾಗುತ್ತವೆ.

ಮನುಷ್ಯನ ಹಾಗೆ ಅನುಭೂತಿ

ಡಾ. ಇಯೆನ್‌ ಡಂಕನ್‌ ಹೇಳುವುದು ಹೀಗೆ, “ನಾವು ಅವುಗಳ ದೇಹರಚನೆಯ ಬಗ್ಗೆ ಗಮನಿಸದೆ ಅವುಗಳ ವರ್ತನೆ ಮತ್ತು ದೇಹ ವಿಜ್ಞಾನದ ಬಗೆಗೂ ಅವಲೋಕನ ಮಾಡಬೇಕಾಗುತ್ತದೆ. ಮೆದುಳು ಬೇರೆ ರೀತಿಯಲ್ಲೂ ಕೆಲಸ ಮಾಡುವಂತೆ ವಿಕಸನಗೊಳಿಸುವಂತಹ ಸಾಧ್ಯತೆ ಇರುತ್ತದೆ. ಮೀನುಗಳ ಬಾಬತ್ತಿನಲ್ಲೂ ಹೀಗೆಯೇ ಆಗುತ್ತದೆ. ನೋವಿನ ಬಾಬತ್ತಿನಲ್ಲಿ ಅದರ ಮೆದುಳಿನ ಆ ಭಾಗ ಅದೇ ಮಿತಿಯಲ್ಲಿ ವಿಸಕನಗೊಂಡಿದೆ.”

ಮೀನುಗಳಂತಹ ವಿಕಸನಶೀಲ ಕಶೇರುಕ ಜೀವಜಂತುಗಳಲ್ಲಿ ಎಂಡಾರ್ಫಿನ್‌ನಂತಹ ನ್ಯೂರೊ ಟ್ರಾನ್ಸ್ ಮೀಟರ್‌ ಇದ್ದು, ಅದು ನೋವಿನಿಂದ ನಿರಾಳತೆ ನೀಡುತ್ತದೆ. ಸಂಶೋಧಕರು ನೋವಿನ ರಿಸೆಪ್ಟರ್‌ಗಳ ಜೊತೆಗೆ, ಆ ವಿಸ್ತೃತ ಅಂಗಗಳ ನಕ್ಷೆಯನ್ನು ಸಿದ್ಧಪಡಿಸಿದ್ದು, ಅಲ್ಲಿ ಮೀನುಗಳನ್ನು ಹಿಡಿಯುವ ಕೊಕ್ಕೆ ಹೋಗಿ ಸಿಲುಕಿಕೊಳ್ಳುತ್ತದೆ.

ಡಾ. ಸ್ಟೆಫಿನ್‌ಯೂಯಿ ಬರೆಯುತ್ತಾರೆ, `ನೋವಿನಲ್ಲೂ ಅನುಕೂಲತೆಯು ಕೂಡ ಕ್ರಮವಾಗಿ ವಿಕಸನಗೊಳ್ಳುತ್ತದೆ. ಅದು ಜೀವಿಯನ್ನು ಜೀವಿತವಾಗಿಡಲು ನೆರವಾಗುತ್ತದೆ. ನೋವಿನ ಅನುಭೂತಿಯಂತಹ ವಿಶೇಷತೆ ಕೆಲವು ವಿಶೇಷ ವರ್ಗದ ಜೀವಿಗಳಲ್ಲಿ ಒಮ್ಮಿಲೆ ಕಣ್ಮರೆಯಾಗುವುದಿಲ್ಲ.’

ನಾಸಿಸ್ಪೆಟರ್‌ ಒಂದು ಸಂವೇದನಾರ್ಹ  ಜೀವಕೋಶವಾಗಿದ್ದು, ಅದು ಹಾನಿಗೊಳಗಾದ ಅಥವಾ ಹಾನಿಗೊಳಗಾಗುವ ಸಾಧ್ಯತೆ ಇರುವ ಸಂದರ್ಭದಲ್ಲಿ ಪ್ರತಿಕ್ರಿಯೆಯ ರೂಪದಲ್ಲಿ ಉತ್ತೇಜನ ಮತ್ತು ಪ್ರಚೋದಕವನ್ನು ಬೆನ್ನುಮೂಳೆ ಮತ್ತು ಮೆದುಳಿನಲ್ಲಿ ಸಂಕೇತದ ರೂಪದಲ್ಲಿ ಕಳಿಸುತ್ತದೆ. ಇದರಿಂದ ನೋವಿನ ಅನುಭೂತಿಯಾಗುತ್ತದೆ. (ಲ್ಯಾಟಿನ್‌ನಲ್ಲಿ ನಾಸೀ ಅರ್ಥ ನೋವು) ನಾಸಿಸ್ಪೇಟರ್‌ ಸಸ್ತನಿಗಳಲ್ಲಿ ಹೇಗೆ ಕೆಲಸ ಮಾಡುತ್ತೊ, ಮೀನುಗಳಲ್ಲೂ ಕೂಡ ಅದೇ ರೀತಿ ಕೆಲಸ ಮಾಡುತ್ತದೆ. ಇದು ತಾಪ, ಒತ್ತಡ ಮತ್ತು ಆ್ಯಸಿಡ್‌ ಹಾಗೂ ಜೇನ್ನೊಣಗಳ ಕಚ್ಚಿದಾಗಿನ ವಿಷದಂತಹ ಹಾನಿಕಾರಕ ರಾಸಾಯನಿಕಗಳ ಸಂಪರ್ಕದಲ್ಲಿ ಬಂದಾಗ ಪ್ರತಿಕ್ರಿಯೆ ನೀಡುತ್ತದೆ.

ಬೇರೆ ಜೀವಿಗಳ ಹಾಗೆ ಅನುಭೂತಿ

ಫಿಸಿಯಾಲಜಿಸ್ಟ್ ರಾನೆ ಸೈಡೋನ್‌ 2004ರಲ್ಲಿ ನಡೆಸಿದ ಅಧ್ಯಯನದ ವರದಿ ಪ್ರಕಟಿಸಿದ್ದರು. ಈ ಅಧ್ಯಯನ ಹೀಗೆ ಹೇಳುತ್ತದೆ. ಮೀನುಗಳು ತಮ್ಮ ನೋವನ್ನು ಗುರುತಿಸುತ್ತವೆ ಹಾಗೂ ಅದರ ಅನುಭೂತಿಯೂ ಅವಕ್ಕೆ ಆಗ್ತುತದೆ. ಸೈಡೋನ್‌ರವರು ಮಾನವ ಸಹಿತ ಉಭಯವಾಸಿಗಳು, ಪಕ್ಷಿಗಳು ಸೇರಿದಂತೆ 5-8 ನೋವಿನ ರಿಸೆಪ್ಟರ್‌ಗಳನ್ನು ಕಂಡುಹಿಡಿದಿದ್ದಾರೆ.

ಅವು ನಾಸಿಸ್ಪೇಟರ್‌ ಹೆಸರಿನಲ್ಲಿ ಗುರುತಿಸಲ್ಪಡುತ್ತವೆ. ಇಂತಹ ರಿಸೆಪ್ಟರ್‌ಗಳ ಟ್ರೇಟ್‌ ಎಂಬ ಮೀನಿನ ಬಾಯಿ ಹಾಗೂ ಉಭಯವಾಸಿಗಳು, ಪಕ್ಷಿಗಳು ಮತ್ತು ಮನುಷ್ಯರ ತುಟಿಗಳಲ್ಲಿ ಒಂದೇ ರೀತಿಯಲ್ಲಿ ಇರುತ್ತವೆ. ಜೇನ್ನೊಣ ಕಚ್ಚಿದಾಗ ಉಂಟಾದ ವಿಷ ಅಥವಾ ಅಸೆಟಿಕ್‌ ಆ್ಯಸಿಡ್‌ನಂತಹ ರಾಸಾಯನಿಕದ ಸಂಪರ್ಕಕ್ಕೆ ಬಂದಾಗಲೂ ಕೂಡ ಅವು ಇತರ ಜೀವಿಗಳ ಹಾಗೆಯೇ ವರ್ತಿಸುತ್ತವೆ. ತಮ್ಮ ಮೂಗನ್ನು ಕಲ್ಲಿಗೆ ಉಜ್ಜುತ್ತವೆ ಅಥವಾ ತಮ್ಮ ಇಡೀ ದೇಹವನ್ನು ಒಮ್ಮೆಲೆ ಅಲ್ಲಾಡಿಸಿಬಿಡುತ್ತವೆ. ಮೀನುಗಳಲ್ಲೂ ಇದೇ ರೀತಿಯ ವರ್ತನೆ ಕಂಡುಬರುತ್ತದೆ. ಏಕೆಂದರೆ ಯಾವುದೇ ವಿಕಸಿತ ಕಶೇರುಕ ಸಸ್ತನಿಗಳಲ್ಲಿ ಇದು ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿರಾಳತೆ ನೀಡಲು ಮಾರ್ಫಿನ್‌ ಸಕ್ರಿಯವಾಗುತ್ತದೆ.

ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಸ್ವಭಾವದಿಂದ ಇವು `ಟ್ರೌಟ್‌ ನಿಯೋಪೆಬಿಕ್‌’ ಆಗಿರುತ್ತವೆ. ಅಂದರೆ ಯಾವುದೇ ಹೊಸ ವಸ್ತುವಿನಿಂದ ಸಾಕಷ್ಟು ದೂರ ಉಳಿದುಬಿಡುತ್ತವೆ. ಒಂದುವೇಳೆ ಅವುಗಳಿಗೆ ಚುಚ್ಚುಮದ್ದಿನ ಮೂಲಕ ಅಸಿಟಿಕ್‌ ಆ್ಯಸಿಡ್‌ನ್ನು ಕೊಟ್ಟಾಗಲೂ ಕೂಡ ಅವುಗಳಿಗೆ ಆ್ಯಸಿಡ್‌ನ ತೊಂದರೆಯಲ್ಲೂ ಯಾವುದೇ ಪ್ರತಿಕ್ರಿಯೆ ಕಾಣಿಸದು. ಅದು ಫಿಶ್‌ ಟ್ಯಾಂಕಿನಲ್ಲಿ ಹಾಕಿದ ಯಾವುದೇ ವರ್ಣರಂಜಿತ ಹಾಗೂ ಹೊಳೆಯುವ ವಸ್ತುವಿನಿಂದ ದೂರ ಉಳಿಯದೆ ಅದರ ಹತ್ತಿರದಿಂದಲೇ ಹಾಯ್ದು ಹೋಗುತ್ತದೆ. ಅದರ ಗಮನ ಯಾವುದೇ ಬಣ್ಣದ ಅಥವಾ ಹೊಳೆಯುವ ವಸ್ತುವಿನ ಕಡೆ ಹೋಗದು. ಅದಕ್ಕೆ ತದ್ವಿರುದ್ಧ ಎಂಬಂತೆ ಟ್ರೌಟ್‌ಗೆ ಸೈನ್‌ನ ಚುಚ್ಚುಮದ್ದು  ಹಾಕಲಾಗುತ್ತದೆ ಅಥವಾ ಆ್ಯಸಿಡ್‌ನ ಬಳಿಕ ನೋವು ನಿವಾರಕಗಳನ್ನು ಕೊಟ್ಟಾಗ ಅವು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಎಚ್ಚರಿಕೆಯಿಂದ ಆ ಹೊಸ ವಸ್ತುವಿನಿಂದ ದೂರ ಹೋಗುತ್ತದೆ. ಇದೇ ರೀತಿಯ ವರ್ತನೆಯನ್ನು ನಾವು ಮನುಷ್ಯರಲ್ಲೂ ಕಾಣುತ್ತೇವೆ. ಅದರಲ್ಲೂ ವಿಶೇಷವಾಗಿ ರೋಗದಿಂದ ನರಳುತ್ತಿರುವ ರೋಗಿಗಳಲ್ಲಿ ಇದು ಕಂಡುಬರುತ್ತದೆ. ಹೀಗಾಗಲು ಮುಖ್ಯ ಕಾರಣವೇನೆಂದರೆ, ನೋವು ನಮ್ಮ ಸ್ವಾಭಾವಿಕ ಯೋಚನೆ. ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ.

ನಾರ್ವೆಯ ವಿಶ್ವವಿದ್ಯಾಲಯವೊಂದರ ಸಂಶೋಧಕರ ಪ್ರಕಾರ, ಗೋಲ್ಡ್ ಫಿಶ್‌ಗಳು ಪ್ರಜ್ಞಾವಸ್ಥೆಯಲ್ಲಿಯೇ ನೋವಿನ ಅನುಭೂತಿ ಮಾಡಿಕೊಳ್ಳುತ್ತವೆ. ಅವುಗಳಿಗೆ ಸೈನ್‌ ಮಿಶ್ರಿತ ದ್ರಾವಣದ ಚುಚ್ಚುಮದ್ದು ಕೊಟ್ಟಾಗ ಅಥವಾ ಪರೀಕ್ಷೆ ನಡೆಸುವ ಟ್ಯಾಂಕ್‌ನಲ್ಲಿ ಬಿಸಿನೀರಿನ ಸಂಪರ್ಕಕ್ಕೆ ಬಂದ ನಂತರ ಅವನ್ನು ಪುನಃ ಮೊದಲಿನ ಸ್ಥಳದಲ್ಲಿ ಬಿಟ್ಟಾಗ, ಅವು ಒಂದೇ ಸ್ಥಳದಲ್ಲಿ ಸುತ್ತಾಡತೊಡಗಿದವು. ಇದರ ಅರ್ಥ ಇಷ್ಟೆ, ಹೆದರಿಕೆಯ ಸ್ಥಿತಿಯಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುವುದು ತರ್ಕಬದ್ಧ ವಿಷಯವೇ ಆಗಿದೆ.

ಬೇರೆ ಗುಂಪಿನ ಮೀನುಗಳಲ್ಲಿ ಮಾರ್ಫಿನ್‌ನ ಚುಚ್ಚುಮದ್ದು ಕೊಟ್ಟರೂ ಅವುಗಳಲ್ಲಿ ಹೆದರಿಕೆ ಉಂಟಾಗುವ ವರ್ತನೆ ಗೋಚರಿಸದು. ಬೆಲ್ ಫಾಸ್ಟ್ ನ ಕ್ವೀನ್ಸ್ ಯೂನಿವರ್ಸಿಟಿಯಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಬೇರೆ ಜೀವಿಗಳ ಹಾಗೆ ಮೀನುಗಳು ಕೂಡ ನೋವಿನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತಿರುತ್ತವೆ. ತಮಗೆ ಗಾಯ ಮಾಡಿದ ಜಾಗಕ್ಕೆ ಹೋಗಲು ಅವು ಹಿಂದೇಟು ಹಾಕುತ್ತವೆ. ಒಮ್ಮೆ ಮಾಡಿದ ತಪ್ಪನ್ನು ಅವು ಪುನರಾವರ್ತಿಸಲು ಹೋಗುವುದಿಲ್ಲ. ಅವುಗಳ ಸ್ಮರಣಶಕ್ತಿ ಬಹಳ ಚೆನ್ನಾಗಿರುತ್ತದೆ. ಹೀಗೆ ಅವು ಪರಿಸ್ಥಿತಿಗನುಗುಣವಾಗಿ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತವೆ.

ಎಫ್‌ಎಡಬ್ಲ್ಯೂಸಿಯ ಒಂದು ವರದಿಯ ಪ್ರಕಾರ, ಮೀನುಗಳಲ್ಲಿ ಹಾನಿಕಾರಕ ಪ್ರಚೋದಕರನ್ನು ಗುರುತಿಸುವ ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವಿರುತ್ತದೆ. ಮೀನುಗಳಲ್ಲಿ ನೋವಿನ ಅನುಭೂತಿ ಉಂಟಾಗುತ್ತದೆ ಎಂಬ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತ ಮೂಡಿಸಲು ಕೂಡ ಎಫ್‌ಎಡಬ್ಲ್ಯೂಸಿ ಅವರಿಗೆ ಬೆಂಬಲ ಸೂಚಿಸುತ್ತದೆ.

ಮೀನುಗಳನ್ನು ಹಿಡಿಯುವುದು ಕ್ರೂರತೆಯಿಂದ ಕೂಡಿದ ಆಟವೇ ಹೊರತು ಬೇರೇನೂ ಅಲ್ಲ, ಮೀನುಗಳನ್ನು ಕೊಕ್ಕೆಗೆ ಸಿಲುಕಿಸಿದಾಗ ಅಥವಾ ನೀರಿನಿಂದ ಹೊರತೆಗೆದಾಗ ಅವುಗಳಿಗೆ ಅದು ಆಟ ಎನಿಸದೆ, ಭಯ ಹುಟ್ಟಿಸುತ್ತದೆ. ಆ ಕ್ಷಣ ಅವು ಜೀವ ಉಳಿಸಿಕೊಳ್ಳಲು ಚಡಪಡಿಸುತ್ತವೆ.

ಕ್ರೂರ ವಿಧಾನ

ನಾರ್ಥ್‌ಕೆರೊಲಿನಾ ವಿವಿಯ ಅಕ್ವಾಟಿಕ್‌ (ಜಲಕ್ರೀಡೆ), ವನ್ಯಜೀವಿ ಹಾಗೂ ಪ್ರಾಣಿಶಾಸ್ತ್ರ ಔಷಧದ ಹೆಸರಾಂತ ಪ್ರೊಫೆಸರ್‌ ಮೈಕೆಲ್‌ ಸ್ಟ್ರೋಕ್‌ ಜೆಕ್‌ ಹೀಗೆ ಹೇಳುತ್ತಾರೆ, “ಮೀನುಗಳಿಗೆ, ಈ ಸ್ಥಿತಿಯಲ್ಲಿ ಯಾವುದೇ ನೋವು ಆಗುವುದಿಲ್ಲ ಎಂದು ಹೇಳುವುದು ಮೂರ್ಖತನದ ವಿಷಯವೇ ಸರಿ.” ಸಂಶೋಧಕ ಡಾ. ಕುಲಂ ಬ್ರೌನ್‌ ಹೀಗೆ ಹೇಳುತ್ತಾರೆ, “ಮೀನುಗಳು ಸೇರಿದಂತೆ ಇತರೆ ಜೀವಿಗಳಿಗೆ ಪ್ರಜ್ಞಾವಸ್ಥೆಯಲ್ಲಿ ನೋವಿನ ಅನುಭೂತಿ ಮಾಡಿಕೊಳ್ಳುವ ಸಾಮರ್ಥ್ಯದ ಹೊರತಾಗಿ ಜೀವಿತವಾಗಿರುವುದು ಅಸಾಧ್ಯವೇ ಸರಿ. ಮೀನುಗಳು ವಿಲಕ್ಷಣ ಪ್ರವೃತ್ತಿಯವು. ಅವುಗಳಿಗೆ ನೋವಾಗುವುದಿಲ್ಲ ಎಂದು ಹೇಳುವುದು ಕ್ರೂರತನವೇ ಸರಿ.”

ಮನುಷ್ಯರೂ ಸೇರಿದಂತೆ ವಿದ್ಯುತ್‌ ಆಘಾತ ಯಾವುದೇ ಸಸ್ತನಿಗಳಿಗೆ ಅತ್ಯಂತ ನೋವುಕಾರಕವಾಗಿರುತ್ತದೆ. ಟಾಡ್‌ ಫಿಶ್‌ ಮೇಲೆ ವಿದ್ಯುತ್‌ ಆಘಾತ ಹೇಗಿರುತ್ತದೆ ಎಂದು ಕಂಡುಕೊಳ್ಳಲು ಒಂದು ಪ್ರಯೋಗ ನಡೆಸಲಾಯಿತು. ವಿದ್ಯುತ್‌ ಶಾಕ್‌ ಕೊಟ್ಟಾಗ ಅದು ವಿಚಿತ್ರವಾಗಿ ನರಳಲಾರಂಭಿಸುತ್ತದೆ. ಒಂದಷ್ಟು ದಿನಗಳ ಬಳಿಕ ಎಲೆಕ್ಟ್ರೋಡ್‌ಗಳನ್ನು ನೋಡುತ್ತಿದ್ದಂತೆ ಅದು ನರಳುತ್ತದೆ. ಇದರಿಂದ ತಿಳಿದುಬರುವ ಸಂಗತಿಯೇನೆಂದರೆ, ಮೀನುಗಳು ನೋವಿನ ಬಗ್ಗೆ ಕ್ರಿಯಾಶೀಲವಾಗಿರುತ್ತವೆ ಹಾಗೂ ನೋವಿನ ಅನುಭೂತಿ ಅವುಗಳ ವರ್ತನೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಪೀಟರ್‌ ಸಿಂಗರ್‌ ಹೇಳುತ್ತಾರೆ, “ಮೀನುಗಳಿಗೆ ಯಾವುದೇ ಕಸಾಯಿಖಾನೆ ಬೇಕಿಲ್ಲ. ಹೆಚ್ಚಿನ ಕಡೆ ಸಮುದ್ರ ಹಾಗೂ ನದಿಗಳಲ್ಲಿ ಅವನ್ನು ಹಿಡಿದು ಸಾಯಿಸಲಾಗುತ್ತದೆ. ಟ್ರೋಲರ್‌ ಬಿ ಹರಡುವುದರಿಂದ ಮೀನುಗಳು ಅದರಲ್ಲಿ ಸಿಲುಕುತ್ತವೆ. ಬಲೆಯನ್ನು ನೀರಿನಿಂದ ಎಳೆದು ಹಡಗಿನಲ್ಲಿ ಮೀನುಗಳನ್ನು ಸುರಿಯಲಾಗುತ್ತದೆ. ಮೀನುಗಳು ಒಂದರ ಮೇಲೊಂದು ಬೀಳುತ್ತಿದ್ದಂತೆ ಅವು ಚಡಪಡಿಸುತ್ತ ಉಸಿರುಗಟ್ಟಿ ಸಾಯುತ್ತವೆ.”

ನೋವು ನೀಡದೆಯೇ ನಮ್ಮ ಗ್ರಹ ಜೀವಿತವಾಗುಳಿಯಲು ಆಗುವುದಿಲ್ಲವೆ? ಯಾವ ಗಾಳಿಯಿಂದ ನಾವು ಉಸಿರಾಡುತ್ತೇವೋ, ಅದರಲ್ಲಿ ಕ್ರೂರತೆ ಮತ್ತು ಹಿಂಸೆ ಕಣ ಕಣದಲ್ಲೂ ತುಂಬಿದೆ. ನಮ್ಮ ಆಸುಪಾಸಿನಲ್ಲಿ ಕ್ರೂರತೆಯ ಮಾಲಿನ್ಯದ ವಾತಾವರಣ ಕಪ್ಪು ಶವದ ಬಟ್ಟೆಯ ಹಾಗೆ ನೇತುಹಾಕಲ್ಪಟ್ಟಿದೆ. ಜೀವಿಗಳಿಗೆ ಈ ತೆರನಾದ ತೊಂದರೆ ಕೊಟ್ಟು ನಮ್ಮನ್ನು ನಾವು ಸುಖಿಗಳಾಗಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡರೆ ಅದರಲ್ಲಿ ಮೂರ್ಖತ್ವಕ್ಕಿಂತ ಬೇರೇನೂ ಇಲ್ಲ.

ಮೇನಕಾ ಗಾಂಧಿ

Tags:
COMMENT