ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಜೈಲಿನಲ್ಲಿ ಹಾಸಿಗೆ, ತಲೆ ದಿಂಬು, ಬೆಡ್ ಶೀಟ್ ನೀಡಬೇಕು. ಜೈಲಿನಲ್ಲಿ ವಾಕಿಂಗ್ ಮಾಡಲು ಅವಕಾಶ ನೀಡಬೇಕು ಎನ್ನುವುದು ಸೇರಿದಂತೆ ಇತರೆ ಮೂಲಸೌಕರ್ಯ ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಬೆಂಗಳೂರಿನ 57 ಸಿಸಿಎಚ್ ಕೋರ್ಟ್ ಆದೇಶ ನೀಡಿದೆ.
ದರ್ಶನ್ ಬೇಡಿಕೆಗಳಿಗೆ ಕೋರ್ಟ್ ಮನ್ನಣೆ ನೀಡಿಲ್ಲ. ತಿಂಗಳಿಗೊಮ್ಮೆ ಹಾಸಿಗೆ , ಬಟ್ಟೆ ಒದಗಿಸಲು ಕೋರ್ಟ್ ಸೂಚಿಸಿದೆ. ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವ ಆಯ್ಕೆ ಜೈಲು ಅಧಿಕಾರಿಗಳಿಗೆ ನೀಡಿದೆ. ಪರಪ್ಪನ ಅಗ್ರಹಾರದಲ್ಲಿರುವ ಕ್ವಾರಂಟೈನ್ ಸೆಲ್‌ನಿಂದ ಮುಖ್ಯ ಸೆಲ್‌ಗೆ ವರ್ಗಾವಣೆ ಕೋರಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ಅವಕಾಶ ನೀಡಿದೆ.
ರೇಣುಕಾಸ್ವಾಮಿ ಪ್ರಕರಣದ ಶೀಘ್ರ ವಿಚಾರಣೆ ಕೋರಿದ ಎಸ್‌ಪಿಪಿ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಅಕ್ಟೋಬರ್ 31 ರಂದು ನಟ ದರ್ಶನ್, ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳ ವಿರುದ್ಧ ಯಾವ್ಯಾವ ಸೆಕ್ಷನ್ ಗಳಡಿ ಆರೋಪ ಹೊರಿಸಲಾಗುತ್ತದೆ ಎನ್ನುವುದನ್ನು ಕೋರ್ಟ್ ತಿಳಿಸಲಿದೆ.
ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಎ 5 ನಂದೀಶ್ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿದೆ. ಸಾಕ್ಷ್ಯ ವಿಚಾರಣೆಗೆ ಎರಡೂ ಕಡೆಯವರು ಸಹಕರಿಸಲು ಸೂಚಿಸಿದೆ. ಸೆಕ್ಷನ್ 91 ರ ಅಡಿ ಜೈಲಿನ ರಿಜಿಸ್ಟರ್ ಹಾಜರಿ ಕೋರಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ 6 ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿಚಾರಣೆ ಹಾಜರಾದರೆ ಉಳಿದ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.
ನನ್ನನ್ನು ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್ ಕಾಣಿಸಿಕೊಂಡಿದೆ, ಬೆನ್ನು ನೋವಿನಿಂದ ಬಳಲುತ್ತಿದ್ದೇನೆ, ಆದ್ದರಿಂದ ದಿಂಬು, ಬೆಡ್ ಶೀಟ್, ಹಾಸಿಗೆ ನೀಡುವಂತೆ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.





