ಕುಹೂ ಭೋಸಿ ಬಿಕಿನಿ ಅಥ್ಲಿಟ್
20 ವರ್ಷದ ಮುಂಬೈನ ಕುಹೂ ಭೋಸಿ ಫಿಟ್‌ನೆಸ್ ಕೋಚ್ ಹಾಗೂ ಭಾರತದ ಏಕೈಕ ಬಿಕಿನಿ ಅಥ್ಲಿಟ್. ಬಿಕಿನಿ ಧರಿಸಿ ಅಮೆಚೂರ್ ಒಲಿಂಪಿಯಾದಲ್ಲಿ ಇವರು ಕಂಚಿನ ಪದಕ ಗೆದ್ದರು. ಲೂಧಿಯಾನಾದಲ್ಲಿ ನಡೆಯಲಿರುವ ವುಮನ್ ಬಿಕಿನಿ ಫಿಟ್ನೆಸ್ ಸ್ಪರ್ದೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ವೇಳೆ ಅವರಿಗೆ ಈ ಸ್ಪರ್ಧೆಯಲ್ಲಿ `ಪ್ರೊ ಕಾರ್ಡ್' ದೊರೆತರೆ ವಿಶ್ವದಲ್ಲಿ ನಡೆಯುವ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದುಕೊಳ್ಳುತ್ತಾರೆ.
ಅಥ್ಲಿಟ್ ಆದದ್ದು ಹೀಗೆ
``17ನೇ ವಯಸ್ಸಿನಲ್ಲಿ ನಾನು ಜಿಮ್ ಸೇರಿದ್ದೆ. ಒಂದು ವರ್ಷದ ಬಳಿಕ ನನ್ನ ಟ್ರೇನರ್ ಒಂದು ಫಿಟ್ನೆಸ್ ಸ್ಪರ್ಧೆ ನೋಡಲು ಕಳಿಸಿಕೊಟ್ಟರು. ಆ ಸ್ಪರ್ಧೆ ನನಗೆ ಬಹಳ ಇಷ್ಟವಾಯಿತು. ಈ ಮುಂಚೆ ಈ ಕ್ರೀಡೆಯಲ್ಲಿ ಪುರುಷರದ್ದೇ ಪ್ರಾಬಲ್ಯ ಇತ್ತು. ಆ ಸ್ಪರ್ಧೆ ನೋಡಿದ ಬಳಿಕ ನನಗೂ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅಪೇಕ್ಷೆ ಮೂಡಿತು. ವಿದೇಶದಲ್ಲಿ ಮಹಿಳೆಯರು ಈ ಕ್ಷೇತ್ರದಲ್ಲಿ ಮುಂದಿದ್ದರು. ಆದರೆ ಭಾರತದಲ್ಲಿ ಯಾರೊಬ್ಬರೂ ಇರಲಿಲ್ಲ. ಫಿಟ್ನೆಸ್ ತರಬೇತಿ ಮತ್ತು ಡಯೆಟ್ ಫಾಲೋ ಮಾಡಿ ದೇಶದ ಟಾಪ್ ಬಿಕಿನಿ ಅಥ್ಲಿಟ್ ಆದೆ,'' ಎಂದು ಕುಹೂ ಹೇಳುತ್ತಾರೆ.
`ಈ ಕ್ಷೇತ್ರದಲ್ಲಿ ಪಾದಾರ್ಪಣೆ ಹೇಗೆ?' ಎಂಬ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ. ``ನನ್ನ ತಾಯಿ ಜಾಯ್ ಭೋಸಿ ಮತ್ತು ತಂದೆ ನಾಗೇಶ್ ಭೋಸಿ ಕಲೆಯ ಕ್ಷೇತ್ರದಲ್ಲಿದ್ದಾರೆ. ಹೀಗಾಗಿ ಅವರು ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು ಜೊತೆಗೆ ಪ್ರೇರಣೆ ನೀಡಿದರು. ನಾನು ಸಾಹಸಿ ಪ್ರವೃತ್ತಿಯವಳು. ಯಾವುದೇ ವಿಷಯವನ್ನು ಯಾರ ಮುಂದಾದರೂ ಹೇಳಲು ಹೆದರುವವಳಲ್ಲ.... ರಾಂಪ್‌ನಲ್ಲಿ ನನಗೆ ಯಾವುದೇ ಸಂಕೋಚ ಉಂಟಾಗುವುದಿಲ್ಲ. ಆದರೆ ಹುಡುಗಿಯರು ಈ ಕ್ಷೇತ್ರಕ್ಕೆ ಬರಲು ಹೆದರುತ್ತಾರೆ. ಈ ಕ್ಷೇತ್ರವೇ ನನಗೆ ಹೆಸರು ತಂದುಕೊಟ್ಟಿತು.''
ತಮ್ಮ ಸಂಘರ್ಷಭರಿತ ಜೀವನದ ಬಗ್ಗೆ ಅವರು ಹೇಳುವುದು ಹೀಗೆ, ``ನಾವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸಂಘರ್ಷ ಇದ್ದೇ ಇರುತ್ತದೆ. ಈ ಸಂಘರ್ಷ ನಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಮತ್ತು ಸ್ಟೇಜ್ ಮೇಲೆ ಪರ್ಫಾರ್ಮೆನ್ಸ್ ನೀಡುವುದಾಗಿರುತ್ತದೆ. ಅದಕ್ಕಾಗಿ ಸಕಾಲದಲ್ಲಿ ನಿದ್ರೆ ಮಾಡುವುದು, 7 ಗಂಟೆಯ ನಿದ್ರೆ ಪೂರೈಸುವುದು ಮತ್ತು ಮಾನಸಿಕ ಸಮತೋಲನ ಕಾಯ್ದುಕೊಂಡು ಹೋಗುವುದು ಮುಖ್ಯವಾಗಿರುತ್ತದೆ.''
ಫಿಟ್ನೆಸ್ ಕಾಯ್ದುಕೊಳ್ಳಲು ಹಲವು ಗಂಟೆ ವರ್ಕ್‌ಔಟ್ ಮಾಡುತ್ತಾರೆ. ಮುಂಜಾನೆ 6 ರಿಂದ 9 ಗಂಟೆತನಕ ವರ್ಕ್‌ಔಟ್‌ಮಾಡುತ್ತಾರೆ.
ತಲೆ ಕೆಡಿಸಿಕೊಳ್ಳುವುದಿಲ್ಲ
ಜನರು ನನ್ನ ಬಗ್ಗೆ ಏನೇ ಹೇಳಿದರೂ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಕ್ರೀಡೆಗೆ ಭಾರತದಲ್ಲಿ ಜನಪ್ರಿಯತೆ ತಂದುಕೊಡಬೇಕು ಎನ್ನುವುದೇ ನನ್ನ ಪ್ರಯತ್ನ. ಕೆಲವರು ಈ ಕ್ರೀಡೆಯ ಬಗ್ಗೆ ಅಪಹಾಸ್ಯ ಮಾಡಿದರೆ, ಇನ್ನು ಕೆಲವರು ಒಳ್ಳೆಯ ಕ್ರೀಡೆ ಎನ್ನುತ್ತಾರೆ. ನಾನು ಇದನ್ನು ವಿಶ್ವದಾದ್ಯಂತ ತೆಗೆದುಕೊಂಡು ಹೋಗಲು ಇಚ್ಛಿಸುತ್ತೇನೆ. ನಾನು ಪ್ರೊಫೆಶನಲ್ ಕೋಚ್. ಆದರೆ ಪೋಸಿಂಗ್‌ಗಾಗಿ ಕೋಚ್ ಇಟ್ಟುಕೊಂಡಿದ್ದೇನೆ.
``ವೇದಿಕೆಯಲ್ಲಿ ಬೇರೆ ಬೇರೆ ಪೋಸ್ ತೋರಿಸಲು ಅಭ್ಯಾಸ ಮಾಡಿಸುತ್ತಾರೆ. ಈ ಕ್ರೀಡೆಗಾಗಿ ನಾವು ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಏಕೆಂದರೆ ತೂಕ ಹೆಚ್ಚದಂತೆ ನೋಡಿಕೊಳ್ಳಬೇಕು. ನಾನೆಂದೂ ಜಂಕ್ ಫುಡ್ ತಿನ್ನುವುದಿಲ್ಲ. ಸದಾ ಪೌಷ್ಟಿಕ, ಆರೋಗ್ಯಕರ ಆಹಾರ ಸೇವಿಸುತ್ತೇನೆ. ಇಡೀ ತಿಂಗಳು ನನ್ನ ಆಹಾರ ಕ್ರಮ ವಿಭಿನ್ನವಾಗಿರುತ್ತದೆ. ಚಿಕನ್, ಪನೀರ್, ತುಪ್ಪ, ತರಕಾರಿಗಳನ್ನು ನಿಯಮಿತವಾಗಿ ಸೇವಿಸುವೆ.''