ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೊಂದು ನದಿ ಇದೆ ಎಂದು ಹೇಳಿದರೆ, ಏ! ಬೆಂಗಳೂರಿನಲ್ಲಿ ಯಾವ ನದಿ ಇದೇ? ಎಂದು ಮೂಗು ಮುರಿಯುವವರೇ ಹೆಚ್ಚು. ಬೆಂಗಳೂರಿನಲ್ಲಿ ವೃಷಭಾವತಿ ನದಿ ಇದ್ಯಲ್ಲಾ!! ಎಂದು ಹೇಳಿದರೆ, ಅದು ನದಿಯಲ್ಲಾ!! ಕೊಳಚಿ ಮೋರಿ ಎಂದು ಮೂಗು ಮುಚ್ಚಿಕೊಳ್ಳುವವರಿಗೂ ಅಚ್ಚರಿ ಎನಿಸುವಂತೆ ಇಂದಿಗೂ ಬಸವನಗುಡಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ ಪ್ರತಿ ದಿನವೂ ಸಾವಿರಾರು ಜನರಿಗಾಗಿ ತಯಾರಿಸುವ ಅಡುಗೆಗೆ ಇದೇ ವೃಷಭಾವತಿ ನದಿಯ ನೀರನ್ನು ಬಳಸುತ್ತಿದ್ದು, ವೃಷಭಾವತಿ ನದಿಯ ಉಗಮ ಅದಕ್ಕೆ ಆ ಹೆಸರು ಬರಲು ಕಾರಣವೇನು? ಈ ನದಿಯ ಪಾತ್ರ ಅಂದು ಹೇಗಿತ್ತು ಮತ್ತು ಇಂದು ಹೇಗಿದೆ ಅದರ ಪುನರುಜ್ಜೀವನಕ್ಕಾಗಿ ಯಾವ ರೀತಿಯ ಕೆಲಸಗಳು ನಡೆಯುತ್ತಿದೆ ಎಂಬೆಲ್ಲಾ ಅದ್ಭುತವಾದ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸಾಮಾನ್ಯವಾಗಿ ಬಹುತೇಕ ದೊಡ್ಡ ದೊಡ್ಡ ನಗರಗಳು ನದಿ ಪಾತ್ರಗಳಲ್ಲಿಯೇ ಇರುವುದನ್ನು ಕಾಣಬಹುದಾಗಿದೆ. ಉದಾ. ದೆಹಲಿಯಲ್ಲಿ ಯಮುನಾ, ವಾರಣಾಸಿಯಲ್ಲಿ ಗಂಗಾ, ಹೈದರಾಬಾದಿನಲ್ಲಿ ಮೂಸಿ ನದಿ ಇರುವ ಕಾರಣ, ಈ ನದಿಗಳು ಅಯಾಯಾ ನಗರದ ಜೀವನಾಡಿಯಾಗಿ ಕಾರ್ಯನಿರ್ವಹಿಸುವುದಲ್ಲದೇ, ಅಗತ್ಯವಾದ ಕುಡಿಯುವ ನೀರು, ನೈಸರ್ಗಿಕ ಒಳಚರಂಡಿ ಮತ್ತು ಆರ್ಥಿಕ ಜೀವನಾಡಿಗಳನ್ನು ಒದಗಿಸುತ್ತವೆ. ಇದರ ಜೊತೆಗೆ ನಗರದ ಹೊರವಲಯದ ಕೃಷಿಗೆ ಕೇವಲ ನೀರುಣಿಸುವುದಷ್ಟೇ ಅಲ್ಲದೇ ಫಲವತ್ತಾದ ಮೆಕ್ಕಲು ಮಣ್ಣನ್ನು ಸಹಾ ನೀಡುತ್ತವೆ. ಅಷ್ಟೇ ಅಲ್ಲದೇ ವ್ಯಾಪಾರ ಮತ್ತು ಸಾರಿಗೆಗೆ ಐತಿಹಾಸಿಕ ಮಾರ್ಗಗಳಾಗಿಯೂ ಸಹಾ ಕಾರ್ಯನಿರ್ವಹಿಸುತ್ತವೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿಸುವಾಗ ಬೆಂಗಳೂರಿನಲ್ಲಿ ಇಂತಹ ಜಲ ಜೀವ ನಾಡಿ ಇಲ್ಲದ್ದದ್ದನ್ನೇ ಗಮನಿಸಿ ಬಹು ದೊಡ್ಡ ಕೋಟೆಗಳು, ಮಾರುಕಟ್ಟೆಗಳು ಮತ್ತು ರಸ್ತೆಗಳಿಗಿಂತಲೂ, ಪರಸ್ಪರ ಸಂಪರ್ಕ ಹೊಂದಿದ್ದ ನೂರಾರು ಕೆರೆಕಟ್ಟೆಗಳನ್ನು ಕಟ್ಟಿಸುವ ಮೂಲಕ ಬೆಂಗಳೂರಿನ ಗಮನಾರ್ಹ ನೀರು ನಿರ್ವಹಣಾ ವ್ಯವಸ್ಥೆಗೆ ಅಡಿಪಾಯ ಹಾಕಿದರು.

ಬೆಂಗಳೂರು ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿರುವ ಕಲ್ಲಿನ ಪ್ರಸ್ಥಭೂಮಿಯ ಮೇಲೆ ನಿರ್ಮಿಸಲ್ಪಟ್ಟಿರುವ ಕಾರಣ, ಸಾಧಾರಣವಾಗಿ ಎಲ್ಲರೂ ಬೆಂಗಳೂರಿನಲ್ಲಿ ಯಾವುದೇ ಪ್ರಮುಖ ನದಿ ಅಥವಾ ದೀರ್ಘಕಾಲಿಕವಾಗಿ ಹರಿಯುವ ಯಾವುದೇ ನದಿ ಇಲ್ಲಾ ಎಂಬುದೇ ಎಲ್ಲರ ನಂಬಿಕೆಯಾಗಿದೆ. ಆದರೆ, ಕಾವೇರಿಯ ಉಪನದಿಯಾದ ಐತಿಹಾಸಿಕ ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯ ಉಪನದಿಯಾದ ವೃಷಭಾವತಿ ಎಂಬ ನದಿಯು ಬೆಂಗಳೂರಿನ ಹೃದಯಭಾಗ ಎನಿಸಿಕೊಂಡಿರುವ ಬಸವನಗುಡಿಯ ದೊಡ್ಡ ಬಸವಣ್ಣನ ದೇವಾಲಯದ ತಪ್ಪಲಿನಲ್ಲಿ ಹುಟ್ಟುತ್ತಿದ್ದು ವೃಷಭಾವತಿ ಎಂಬ ಹೆಸರೇ ಬಹಳ ಸುಂದರವಾಗಿದೆ. ಮೂಲತಃ ವೃಷಭಾವತಿ ಎಂಬ ಪದವು ಸಂಸ್ಕೃತ ಭಾಷೆಯ ವೃಷಭ ಮತ್ತು ವತಿ ಎಂಬ ಎರಡು ಪದಗಳಿಂದ ಉತ್ಪತ್ತಿಯಾಗಿದೆ. ವೃಷಭ ಎಂದರೆ ಶಿವನ ವಾಹನ ನಂದಿ (ಎತ್ತು) ಮತ್ತು ವತಿ ಎಂದರೆ ಹೊಳೆ ಅಥವಾ ನದಿ ಎಂಬ ಅರ್ಥ ಬರುತ್ತದೆ. ಬೆಂಗಳೂರಿನ ಹೃದಯಭಾಗವಾದ ಬಸವನಗುಡಿಯಲ್ಲಿರುವ ಏಕಶಿಲೆಯ ನಂದಿ ಪ್ರತಿಮೆಯ (ದೊಡ್ದ ಬಸವಣ್ಣ) ಪದತಲದಲ್ಲಿಯೇ ಈ ನದಿ ಹುಟ್ಟುವುದರಿಂದ ವೃಷಭಾವತಿ ಎಂಬ ಅನ್ವರ್ಥ ಹೆಸರು ಬಂದಿದೆ. 16ನೇ ಶತಮಾನದ ಕೆಲವು ಶಾಸನಗಳಲ್ಲಿಯೂ “ಬಸವೇಶ್ವರನ ಪಾದದ ಬಳಿ ನದಿ ಹುಟ್ಟುತ್ತದೆ” ಎಂಬ ಉಲ್ಲೇಖ ಕಂಡುಬರುತ್ತದೆ.





