:ಕವಿತಾ ಅಡೂರು, ಪುತ್ತೂರು
ಪ್ರತಿದಿನವೂ ವಾಹನಗಳ ದಟ್ಟಣೆಯಿಂದ ಕೂಡಿದ್ದ ಆ ರಸ್ತೆಗೆ ಇಂದು ಬಹಳ ಸಡಗರ. ವರುಷಕ್ಕೊಮ್ಮೆ ಬರುವ ಜಾತ್ರೋತ್ಸವದ ಸಂಭ್ರಮ. ದೇವರ ಪುಷ್ಪಕನ್ನಡಿಯನ್ನು ಹೊತ್ತ ಬ್ರಹ್ಮವಾಹಕರು ಆ ರಸ್ತೆಯ ಮೇಲಿನಿಂದಲೇ ನಡೆಯುವವರಿದ್ದರು. ಜೊತೆಗೆ ಸಾವಿರಾರು ಭಕ್ತರೂ ಆ ರಸ್ತೆಯ ಮೇಲಿನಿಂದ ಸಾಗುವವರಿದ್ದರು. ಈ ಪುಣ್ಯ ಕ್ಷಣಕ್ಕಾಗಿ ರಸ್ತೆಯು ಕಾತರಿಸಿ ಕಾಯುತ್ತಿತ್ತು. ಭಕ್ತರು ಮುಂಜಾನೆಯೇ ರಸ್ತೆಯನ್ನು ಚೆನ್ನಾಗಿ ತೊಳೆದು ಸ್ನಾನ ಮಾಡಿಸಿದ್ದರು, ರಂಗೋಲಿ ಇಟ್ಟು,ತಳಿರು ತೋರಣ ಕಟ್ಟಿ ಸಿಂಗರಿಸಿದ್ದರು.
ಇರುಳಿನ ಹೊತ್ತು ಬಾನಂಗಣದಲ್ಲಿ ಚಂದ್ರಮನು ನಗುವಾಗ ದೇವರು ಆ ರಸ್ತೆಯ ಮೇಲಿನಿಂದ ನಡೆದು ಬಂದರು. ರಸ್ತೆಗೋ ರೋಮಾಂಚನ! ಜನರೂ ಓಡೋಡುತ್ತಾ ದೇವರ ಜೊತೆಜೊತೆಗೇ ನಡೆದರು. ಎಲ್ಲರೂ ಹೋದ ಮೇಲೆ ರಸ್ತೆಯು ಆನಂದದ ಅನುಭೂತಿಯಿಂದ ಹೊರಬಂತು. ತನ್ನನ್ನೇ ತಾನು ಕಣ್ಣರಳಿಸಿ ನೋಡಿತು.ನೋಡುವುದೇನನ್ನು?
ಕಂಡ ದೃಶ್ಯದಿಂದಾಗಿ ರಸ್ತೆಯ ಆನಂದವಳಿಯಿತು; ದುಃಖದಿಂದ ಬಿಕ್ಕಳಿಸುತ್ತಾ “ದೇವರು ನನ್ನ ಮೇಲೆ ನಡೆದದ್ದರಿಂದಾಗಿ ಪವಿತ್ರವಾಗಿದ್ದೆ. ಆದರೆ ಈಗ ದೇವರ ಜೊತೆಗೆ ನಡೆದು ಬಂದ ಭಕ್ತರ ಸೋಗಿನಲ್ಲಿದ್ದ ಮನುಷ್ಯರು ಬಿಸಾಕಿದ ಐಸ್‌ಕ್ಯಾಂಡಿ ಕವರು, ಕಲ್ಲಂಗಡಿ ಸಿಪ್ಪೆ, ಜ್ಯೂಸಿನ ಲೋಟ, ಹಾಳೆ ತಟ್ಟೆಗಳಂಥ ತ್ಯಾಜ್ಯಗಳಿಂದ ಅಪವಿತ್ರಗೊಂಡೆನಲ್ಲ!! ದೇವರು ನಡೆದ ದಾರಿಗೆ ಎಂಜಿಲೆಸೆದು ಹೋದವರು ಭಕ್ತರೇನು? ದೇವರ ಜೊತೆಗೆ ನಡೆಯುತ್ತಿದ್ದೇನೆ ಎಂಬ ಭಾವವಿರುತ್ತಿದ್ದರೆ ಅವರಿಗೆ ಹೀಗೆ ತಿನ್ನುವ ಚಪಲವಿರುತ್ತಿತ್ತೆ? ಹೊಣೆಗೇಡಿಗಳಂತೆ ರಸ್ತೆಯ ಇಕ್ಕೆಲಗಳಲ್ಲಿ ಕಸವನ್ನು ಹೀಗೆ ಎಸೆಯುತ್ತಿದ್ದರೇನು? ಇಷ್ಟಕ್ಕೂ ನಡೆದು ಬರುವ ಭಕ್ತಾದಿಗಳಿಗೆ ಐಸ್‌ಕ್ಯಾಂಡಿ, ಜ್ಯೂಸ್ ಬಾಟಲ್ ಕೊಡುವುದು ದೇವರಸೇವೆಯೇ? ಅಥವಾ ಇದು ಉಳ್ಳವರ ಹೆಚ್ಚುಗಾರಿಕೆಯೇ?ದೇವರಿಗೂ ಇದನ್ನೆಲ್ಲಾ ಕಂಡು ನೋವಾಗಿರಬಹುದೆ? ” ರಸ್ತೆಯು ಈಗಲೂ ಪ್ರಶ್ನಿಸುತ್ತಲೇ ಇದೆ.
ರಸ್ತೆಯ ಪ್ರಶ್ನೆಗಳಿಗೆ ನೀವು ಉತ್ತರಿಸಬಲ್ಲಿರಾ??!?!?!?!?!?!?!