ಎಲ್ಲರ ಪ್ರಾಥಮಿಕ ಅಗತ್ಯಗಳೂ ಒಂದೇ ಅಲ್ಲದಿರುವುದರಿಂದ ಸಂಕಲ್ಪಗಳು ಬೇರಾಗುತ್ತವೆ. ಮುಂದಿನ ವರ್ಷಕ್ಕಾಗಿ ನೀವು ತೊಡುವ ಸಂಕಲ್ಪ, ಸಮೃದ್ಧಿ ಹೆಚ್ಚಿಸುವ ಕುರಿತಾಗಿ ಏಕಿರಬಾರದು?

ಉಳಿತಾಯ ಮತ್ತು ಹೂಡಿಕೆಯ ಮೂಲಕ ನಾವು ಹಣ ಉಳಿಸಿ, ಹೆಚ್ಚಿಸಬಹುದು. ಇದರಿಂದ ಸಮೃದ್ಧ ಜೀವನ ಹೊಂದಬಹುದು. ನಮಗೆ ಅತ್ಯಗತ್ಯ ವಸ್ತುಗಳನ್ನು ಖರೀದಿಸಲು ಹಣ ಇರಬೇಕಾಗುತ್ತದೆ ಎಂಬುದೇ ಇಲ್ಲಿ ಸಮೃದ್ಧಿಯ ಸಂಕೇತ.

ಇಂದಿನ ಕೊಳ್ಳುಬಾಕ ಸಂಸ್ಕೃತಿಯ ಯುಗದಲ್ಲಿ ಜನ ಹೆಚ್ಚು ಹೆಚ್ಚು ಖರ್ಚು ಮಾಡುತ್ತಲೇ ಇರುತ್ತಾರೆ. ಉಳಿತಾಯ ಅಥವಾ ಹೂಡಿಕೆ ಕುರಿತಾಗಿ ಯಾರೂ ಹೆಚ್ಚು ಯೋಚಿಸುವುದಿಲ್ಲ. ಇಂದಿನ ಯುವಜನತೆ ಪ್ರೊಫೆಶನಲ್ಸ್ ಆಗಿ ಉತ್ತಮ ಪ್ಯಾಕೇಜ್‌ಗಳಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಆರ್ಥಿಕ ಸ್ವಾತಂತ್ರ್ಯ ಲಭಿಸುವುದರಿಂದ ಇವರು ಉಳಿತಾಯದ ಕಡೆ ನಿರ್ಲಕ್ಷ್ಯ ವಹಿಸುವಂತಾಗಿದೆ. ಎಷ್ಟೋ ಅನುಭವಿ ಜನ ಸಹ ಸರಿಯಾದ ಕ್ರಮದಲ್ಲಿ ಹೂಡಿಕೆ ಮಾಡದೆ ನಷ್ಟ ಅನುಭವಿಸುತ್ತಾರೆ.

ಮಹೇಶ್‌ ಕುಲಕರ್ಣಿಯ ಉದಾಹರಣೆ ಗಮನಿಸಿ. ಒಂದು ಪಬ್ಲಿಕ್‌ ಸೆಕ್ಟರ್‌ ಕಂಪನಿಯಿಂದ ನಿವೃತ್ತರಾದ ಇವರು 18 ಲಕ್ಷ ರೂ.ಗಳ ಮೊತ್ತ ಪಡೆದರು. ಅವರಿಗೆ ಅರ್ಜೆಂಟಾಗಿ ಅಷ್ಟು ದೊಡ್ಡ ಮೊತ್ತದ ಹಣದ ಅಗತ್ಯವಿಲ್ಲದ ಕಾರಣ, ಅವರು ತಮ್ಮ ಉಳಿತಾಯ ಖಾತೆಯಲ್ಲಿ 1 ವರ್ಷ ಹಾಗೆ ಬಿಟ್ಟಿದ್ದರು. ಅದರ ಬದಲಿಗೆ ಇದನ್ನು ಅವರು ಫಿಕ್ಸ್ಡ್ ಡೆಪಾಸಿಟ್‌ನಲ್ಲಿರಿಸಿದ್ದರೆ, 1 ವರ್ಷದ ಅವಧಿಯಲ್ಲಿ 1 ಲಕ್ಷ ಹೆಚ್ಚಿನ ಮೊತ್ತ ಸಿಗುತ್ತಿತ್ತು.

ಇತರ ಪ್ರಕರಣಗಳಲ್ಲಿ ಹಾಗೇ ಹಣಕಾಸಿನ ವ್ಯವಹಾರದಲ್ಲೂ ನಮ್ಮ ಸೋಮಾರಿತನ ಹೆಚ್ಚಿನ ನಷ್ಟ ತರುತ್ತದೆ. ಒಂದು ಕಡೆ ಜನ ಹಣಕಾಸಿನ ಕೊರತೆಯ ಮಾತನಾಡಿದರೆ, ಇನ್ನೊಂದೆಡೆ ಯಾವ ಹೂಡಿಕೆಯಿಂದ ಹೆಚ್ಚಿನ ಲಾಭ ಬರುತ್ತದೋ ಅದರ ಕಡೆ ಗಮನ ಕೊಡುವುದಿಲ್ಲ. ಹೀಗೆ ಹೂಡಿಕೆಯ ವಿಚಾರದಲ್ಲಿ ತಡ ಮಾಡಿದಷ್ಟೂ, ಮುಂದೆ ಹಣಕಾಸಿನ ಪರಿಸ್ಥಿತಿ ತ್ರಾಸದಾಯಕ ಆಗಬಹುದು.

ಒಂದು ಉದಾಹರಣೆ ಗಮನಿಸಿ. ಹಣದುಬ್ಬರದ ಇಂದಿನ ಪರಿಸ್ಥಿತಿಯಲ್ಲಿ ಎಂಬಿಎ ಶಿಕ್ಷಣ ಪೂರೈಸಲು ತಗಲುವ ಖರ್ಚು 8 ಲಕ್ಷ ರೂ.ಗಳಾದರೆ, ಮುಂದಿನ 15 ವರ್ಷಗಳ ನಂತರ ಅದು 40 ಲಕ್ಷ ದಾಟಬಹುದು. ಎಷ್ಟು ಮಂದಿ ಪೋಷಕರು ತಮ್ಮ ನಿವೃತ್ತಿಯ ಹಣದಲ್ಲಿ ಇಂಥ ಭಾರಿ ಮೊತ್ತ ಭರಿಸಲು ಸಾಧ್ಯ?

ಕೆಲವು ತಿಂಗಳ ಹಿಂದೆ ದೇಶದ 12 ನಗರಗಳಲ್ಲಿ ನಡೆಸಿದ  ಒಂದು ಸಮೀಕ್ಷೆಯ ಪ್ರಕಾರ, ಶೇ.72ರಷ್ಟು ತಂದೆ ತಾಯಂದಿರ ಪ್ರಾಮುಖ್ಯತೆ ತಮ್ಮ ಮಕ್ಕಳ ಶಿಕ್ಷಣವೇ ಆಗಿರುತ್ತದೆ ಎಂದು ತಿಳಿಯಿತು. ಆದರೆ ಇವರಲ್ಲಿ ಶೇ.81ರಷ್ಟು ಜನರಿಗೆ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಲು ಹಣ ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಿರುವುದಿಲ್ಲ. ಹೀಗಾಗಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಕಾಲದಲ್ಲಿಯೇ ಉಳಿತಾಯ ಮಾಡಲು ಆರಂಭಿಸಬೇಕು. ಏಕೆಂದರೆ ಮುಂದೆ ಅದೇ ಒಂದು ಹೊರೆ ಎಂದೆನಿಸಬಾರದು.

ಮಕ್ಕಳ ಶಿಕ್ಷಣವಂತೂ ಇದ್ದೇ ಇದೆ. ಒಂದು ವೇಳೆ ಮನೆ ಖರೀದಿಸುವುದಿದ್ದರೆ, ಮಕ್ಕಳ ಮದುವೆ ಮಾಡುವುದಿದ್ದರೆ, ಕಾರು ಖರೀದಿಸುವುದಿದ್ದರೆ ನಿಮಗೆ ದೊಡ್ಡ ಪ್ರಮಾಣದಲ್ಲಿ ಹಣದ ಅವಶ್ಯಕತೆ ಉಂಟಾಗುತ್ತದೆ. ಈ ಎಲ್ಲದಕ್ಕಾಗಿ ಸಾಲ ದೊರೆಯುತ್ತದೆ. ಆದರೆ ಸಾಲದ ಮೊತ್ತ ಒಂದು ನಿಯಮಿತ ಮಿತಿಯಲ್ಲಿರಬೇಕು. ಏಕೆಂದರೆ ಪಡೆದ ಸಾಲಕ್ಕಾಗಿ ನೀವು ಬಡ್ಡಿ ಕೂಡ ನೀಡಬೇಕಾಗುತ್ತದೆ.

ನಿಮ್ಮ ಮುಂಬರುವ ದೊಡ್ಡ ಅವಶ್ಯಕತೆಗಳೇನಿರಬಹುದು?

ಈ ಅವಶ್ಯಕತೆಗಳಿಗೆ ಸುಮಾರು ಎಷ್ಟು ಮೊತ್ತ ಖರ್ಚಾಗಬಹುದು, ಇವೆಲ್ಲ ನಿಮಗೆ ಸ್ಪಷ್ಟವಾಗಿ ತಿಳಿದಿರಬೇಕು. ನಂತರ ನಿಮ್ಮ ಆದಾಯವನ್ನು ಗಮನಿಸಿ ಹಾಗೂ ಖರ್ಚು ಮಾಡುವ ವಿಧಾನಗಳ ಬಗ್ಗೆಯೂ ಸಮಾಲೋಚನೆ ಮಾಡಿ.

ಒಂದೇ ಬ್ರ್ಯಾಂಡ್‌ಗೆ ಜೋತು ಬಿದ್ದು ಅದೇ ಸಾಮಗ್ರಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬಗ್ಗೆ ಹಾಗೂ ಅದಕ್ಕೂ ಉತ್ತಮ ಗುಣಮಟ್ಟದ ವಸ್ತು ಲಭ್ಯವಿರುವ ಬಗ್ಗೆ ನಮ್ಮ ಗಮನ ಅತ್ತ ಕಡೆ ಹೋಗುವುದೇ ಇಲ್ಲ.

ಕೆಲವು ಬ್ರ್ಯಾಂಡ್‌ಗಳು ಹೇಗಿವೆಯೆಂದರೆ, ಅವು ತಮ್ಮ ಬ್ರ್ಯಾಂಡ್‌ಗಾಗಿ ಗ್ರಾಹಕರಿಂದ ಸಾಕಷ್ಟು ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುತ್ತವೆ. ಗ್ರಾಹಕ ಕಡಿಮೆ ಖರ್ಚಿನಲ್ಲೂ ನಿರ್ವಹಣೆ ಮಾಡಬಲ್ಲವನಾಗಿರುತ್ತಾನೆ. ನೀವು ಜಿಪುಣತನ ತೋರಿಸಬೇಡಿ. ಆದರೆ ಮುಂಬರುವ ದಿನಗಳಿಗಾಗಿ ಕಡಿಮೆ ಹಾಗೂ ಎಷ್ಟು ಬೇಕೊ ಅಷ್ಟೇ ಖರ್ಚು ಮಾಡಿ ಭವಿಷ್ಯಕ್ಕಾಗಿ ಸಾಕಷ್ಟು ಹಣ ಉಳಿಸಬಹುದು.

ಉಳಿತಾಯ ಶಿಸ್ತಾಗಿರಬೇಕು. ಅನಿವಾರ್ಯ ಉಳಿತಾಯದ ದೃಷ್ಟಿಯಿಂದ ರೆಕರಿಂಗ್‌ ಡೆಪಾಸಿಟ್‌ ಖಾತೆಗೆ ಯಾವುದೇ ಪರ್ಯಾಯವಿಲ್ಲ. ಪ್ರತಿ ತಿಂಗಳೂ ಮೊತ್ತ ನಿಗದಿ ಮಾಡಿಕೊಂಡು ಆ ಖಾತೆಗೆ ಹಣ ಸೇರಿಸುತ್ತ ಹೋಗಿ. ಒಂದು ವರ್ಷದಿಂದ ಹಿಡಿದು 10 ವರ್ಷದ ತನಕ ಬ್ಯಾಂಕಿನವರು ಅವಧಿ ನಿಗದಿ ಮಾಡಿದ ಪ್ರಕಾರ, ಬಡ್ಡಿ ಸಹಿತ ಹಣ ವಾಪಸ್ಸು ದೊರೆಯುತ್ತದೆ. ಈ ಬಡ್ಡಿ ಹಣಕ್ಕೆ ಯಾವುದೇ ಟಿಡಿಎಸ್‌ ಅನ್ವಯಿಸದು. ಕೆಲವು ಬ್ಯಾಂಕ್‌ಗಳು ಸಮಾನ ಕಂತುಗಳಲ್ಲಿ ಹಣ ಜಮೆ ಮಾಡಲು ಅವಕಾಶ ನೀಡುತ್ತವೆ. ನೀವು ಬ್ಯಾಂಕಿನವರಿಗೆ ನಿಮ್ಮ ಖಾತೆಯಿಂದ ಕಂತನ್ನು ನೇರವಾಗಿ ಕಡಿತ ಮಾಡುವ ಅವಕಾಶವನ್ನು ಕೂಡ ನೀಡಬಹುದು. ಇದರಿಂದಾಗಿ ನಿಮಗೆ ನೆನಪಿಟ್ಟುಕೊಳ್ಳಬೇಕಾದ ಅವಕಾಶ ಇರದು.

ಉಳಿತಾಯ ಖಾತೆಯಲ್ಲಿ ಅಗತ್ಯವಿರುವಷ್ಟು ಹಣ ಮಾತ್ರ ಇರಿಸಿಕೊಳ್ಳಿ. ಉಳಿದ ಮೊತ್ತವನ್ನು ಫಿಕ್ಸ್ಡ್ ಅಥವಾ ರೆಕರಿಂಗ್‌ ಡೆಪಾಸಿಟ್‌ನಲ್ಲಿಡಿ. ಇದರಿಂದ ಹೆಚ್ಚಿನ ಬಡ್ಡಿ ಸಿಗುತ್ತದೆ. ಏನಾದರೂ ತುರ್ತು ಸಮಸ್ಯೆ ಎದುರಾದಾಗ, ಈ ಖಾತೆಗಳನ್ನು ಕ್ಲೋಸ್ ಮಾಡಿ ಕಾಲಾವಧಿಗೆ ಮೊದಲೇ ಅಥವಾ ಇದರ ಮೇಲೆ ಸಾಲ ಪಡೆಯಬಹುದು.

ಉಳಿತಾಯ ಮತ್ತು ಹೂಡಿಕೆಯ ವಿಷಯದಲ್ಲಿ ಹೆಚ್ಚು ಎಚ್ಚರ ವಹಿಸುವುದರಿಂದ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಸುರಕ್ಷೆ ದೊರಕುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ