ಬಹಳ ವರ್ಷಗಳಿಂದ ಮನದಲ್ಲಿರುವ ಆಸೆ ಹಿಮಾಲಯನ್ ಟ್ರೆಕ್ಕಿಂಗ್! ಯಾರ ಮೂಲಕ ಹೋಗಬೇಕೆಂದು ವಿಚಾರಿಸಿದಾಗ ಯೂತ್ ಹಾಸ್ಟೆಲ್ ಅಸೋಸಿಯೇಶನ್ ಅವರು ಪ್ರತಿ ವರ್ಷ ಹಿಮಾಲಯದಲ್ಲಿ ಎರಡು ಬಾರಿ ಟ್ರೆಕ್ಕಿಂಗ್ ಪ್ರೋಗ್ರಾಂ ನಿರ್ವಹಿಸುತ್ತಾರೆಂದು, ಅದರಲ್ಲಿ ನಮಗೆ ಇಷ್ಟಬಂದ ಪ್ರೋಗ್ರಾಂ ನಾವು ಆಯ್ಕೆ ಮಾಡಿಕೊಂಡು ಭಾಗಹಿಸಬಹುದೆಂದು ತಿಳಿಯಿತು. ಮಕ್ಕಳಿಗೆ ಹದಿನೈದು ವರ್ಷ ತುಂಬಿರಬೇಕೆನ್ನುವುದು ಅವರ ಕಂಡೀಷನ್. ಇದಕ್ಕೆ ಮುಂಚಿತವಾಗಿ ಟ್ರೆಕ್ಕಿಂಗ್ ಅನುಭವ ಬೇಕಾಗಿಲ್ಲ, ಟ್ರೆಕ್ಕಿಂಗ್‌ಮಾಡಬೇಕೆಂಬ ದೃಢ ಸಂಕಲ್ಪ ಸಾಕಷ್ಟೆ. ಮತ್ತೆ ತಡ ಏಕೆ? ಆನ್ ಲೈನ್ ಮೆಂಬರ್‌ಶಿಪ್ ತಗೊಂಡು, ಅವರ ಸರ್ಪಾಸ್ ಟ್ರೆಕ್ಕಿಂಗ್‌ನಲ್ಲಿ ನಾನು, ಹದಿನೈದು ವರ್ಷ ತುಂಬಿದ ನನ್ನ ಮಗಳೂ ಸೇರಿ ಬಿಟ್ವಿ.
ಸರ್ಪಾಸ್ ಟ್ರೆಕ್ಕಿಂಗ್ ಹನ್ನೊಂದು ದಿನಗಳ ಪ್ರೋಗ್ರಾಂ. ಹಿಮಾಚಲ ಪ್ರದೇಶದ ಮನಾಲಿಗೆ 40 ಕಿ.ಮೀ. ದೂರದಲ್ಲಿರುವ ಕಸೋಲ್ ಗ್ರಾಮದಲ್ಲಿ ಅವರ ಬೇಸ್ ಕ್ಯಾಂಪ್. ಅಂದರೆ ಅವರ ಟ್ರೆಕ್ಕಿಂಗ್ ಪ್ರೋಗ್ರಾಂ ಅಲ್ಲಿಂದ ಆರಂಭ ಆಗುತ್ತೆ. ಬೆಂಗಳೂರಿನಿಂದ ದೆಹಲಿಗೆ ತಲುಪಿ ಅಲ್ಲಿಂದ ಮನಾಲಿಗೆ ಬಸ್‌ನಲ್ಲಿ ಹೋಗಿ, ಕೊನೆಯ 40 ಕಿ.ಮೀ. ಜೀಪ್‌ನಲ್ಲಿ ಪ್ರಯಾಣ ಮಾಡಿ ಕಸೋಲ್ ಸೇರಿದೆವು. 6500 ಅಡಿ ಎತ್ತರದಲ್ಲಿನ ಕಸೋಲ್, ಪಾರ್ವತಿ ನದಿ ತೀರದಲ್ಲಿರುವ ಒಂದು ಸುಂದರ ಊರು. ಹಸಿರಾಗಿ, ತಂಪಾಗಿ, ಬಹಳ ಪ್ರಶಾಂತವಾಗಿ ಇರುವ ತಾಣ ಅದು. ಯೂತ್ ಹಾಸ್ಟಲ್ ಅವರ ವೆಲ್‌ಕಮ್ ಬ್ಯಾನರ್ ನೋಡಿ, ಘಾಟ್ ರಸ್ತೆಯ ದಣಿವು ಮರೆತು ಎಲ್ಲರೂ ಕೇಕೆ ಹಾಕಿದರು. ಅಲ್ಲೇ ನದಿ ತೀರದಲ್ಲಿ ಹಾಕಿಟ್ಟ ಟೆಂಟ್ಸ್ ನಲ್ಲಿ ನಮ್ಮ ನಿವಾಸ.
ಮೊದಲ ಮೂರು ದಿನ ಬೇಸ್ ಕ್ಯಾಂಪ್‌ನಲ್ಲಿ ಓರಿಯಂಟೇಷನ್. ಅಂದರೆ ಟ್ರೆಕ್ಕಿಂಗ್‌ಗೆ ಬೇಕಾದ ರೀತಿಯಲ್ಲಿ ನಮ್ಮನ್ನು ಅವರು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ತಯಾರು ಮಾಡುತ್ತಾರೆ. ದಿನಾಲು ವ್ಯಾಯಾಮ, ಮಿನಿ ಟ್ರೆಕ್ಕಿಂಗ್, ಓರಿಯೆಂಟೇಶನ್‌ಟಾಕ್ ಹೀಗೆ ಬಗೆಬಗೆಯ ಚಟುವಟಿಕೆಗಳು. ಒಂದೊಂದು ಟೆಂಟ್‌ನ್ನು 12-16 ಜನರಿಗೆ ಕೊಡುತ್ತಾರೆ. ಗಂಡಸರಿಗೆ, ಹೆಂಗಸರಿಗೆ ಬೇರೆ ಬೇರೆ ಟೆಂಟ್ಸ್. ಹನಿಮೂನ್ ಕಪ್ಸ್‌ಗೆ ಬಹುಶಃ ಇದು ಸೂಟ್ ಆಗೋಲ್ಲ ಅನ್ಸುತ್ತೆ. ವೈಎಚ್‌ಎಐ ತಂಡ ಟೈಮಿಂಗ್ಸ್ ಮತ್ತು ಶಿಸ್ತಿಗೆ ತುಂಬ ಪ್ರಾಮುಖ್ಯತೆ ಕೊಡುತ್ತದೆ. ಶುರುವಿನಲ್ಲಿ ಅದು ನಮಗೆ ಸ್ವಲ್ಪ ಕಿರಿಕಿರಿ ಅನಿಸಿದರೂ, ದಿನದಲ್ಲಿ 7-8 ಗಂಟೆಗಳು ನಡೆಯುವಾಗ, ಗುಂಪಿನಲ್ಲಿ ಸೇರಿ ಕೆಲಸ ಮಾಡುವಾಗ, ಟ್ರೆಕ್ಕಿಂಗ್ ಮಾಡುವಾಗ ಇದು ನಮಗೆ ಅತ್ಯಂತ ಅವಶ್ಯಕ ಎಂದು ಗೊತ್ತಾಗುತ್ತೆ. ಬೆಳಗಿನ ಜಾವ ಎದ್ದು ಐಸ್‌ನಂತೆ ತಣ್ಣಗಿರುವ ನೀರಿನಲ್ಲಿ ಮುಖ ತೊಳೆದು, ಸ್ನಾನ ಮಾಡಿ, ಬಿಸಿಬಿಸಿ ಟೀ ಕುಡಿಯುವ ಹೊತ್ತಿಗೆ ಬರ್‌ರ್‌ರ್‌ರ್..... ಎನ್ನುವ ಚಳಿ! ಅವರು ಕೊಡುವ ಊಟ, ತಿಂಡಿ ಬಹಳ ಸಿಂಪಲ್ ಆಗಿದ್ದರೂ, ಹೊಟ್ಟೆ ತುಂಬಾ ತಿನ್ನಲು ಹೇಳ್ತಾರೆ. ಟ್ರೆಕ್ಕಿಂಗ್‌ನಲ್ಲಿ ಎತ್ತರ (ಆಲ್ಟಿಟ್ಯೂಡ್) ಹೆಚ್ಚಾದಷ್ಟು ಚಳಿ ವಿಪರೀತ ಜಾಸ್ತಿ ಆಗುತ್ತೆ. ಆದಕಾರಣ ಕಸೋಲ್ ಬಿಡುವ ಮುನ್ನ ಚಳಿ ಅನ್ನಿಸಿದರೂ ಚೆನ್ನಾಗಿ ಸ್ನಾನ ಮಾಡೋದು ಒಳ್ಳೆಯದು. ಮತ್ತೆ ಸ್ನಾನ ವಾಪಸ್ ಬಂದ ಮೇಲೇನೆ.