ಶಿವಮೊಗ್ಗಕ್ಕೆ ಹೊರಡಲು ಇನ್ನಿದಕ್ಕಿಂತ ಕಾರಣ ಬೇಕೇ? ಸಹ್ಯಾದ್ರಿಯ ಮಡಿಲಲ್ಲಿರುವ ಶಿವಮೊಗ್ಗ ಜಿಲ್ಲೆಯು ಅನೇಕ ಸುಂದರ ಪ್ರವಾಸಿ ತಾಣಗಳನ್ನು ಹೊಂದಿದೆ. ವಿಶ್ವವಿಖ್ಯಾತ ಜೋಗ ಜಲಪಾತ ಈ ಜಿಲ್ಲೆಯ ಪ್ರಮುಖ ಆಕರ್ಷಣೆ. ಈ ಜಿಲ್ಲೆಯಲ್ಲಿ ನೋಡಬಹುದಾದ ಸ್ಥಳಗಳೆಂದರೆ ಲಿಂಗನಮಕ್ಕಿ ಡ್ಯಾಂ, ಗಾಜನೂರು ಡ್ಯಾಂ, ಸಕ್ರೆಬೈಲು ಆನೆ ಶಿಬಿರ, ತ್ಯಾವರೆಕೊಪ್ಪದ ಹುಲಿಸಿಂಹಧಾಮ, ಗುಡವಿ, ಮಂಡಗದ್ದೆಯ ಪಕ್ಷಿಧಾಮಗಳು, ಆಗುಂಬೆ, ಕುಂದಾದ್ರಿಬೆಟ್ಟ, ಕುಪ್ಪಳ್ಳಿಯ ಕವಿಶೈಲ, ಹೊನ್ನೆಮರಡು, ಶರಾವತಿ ನದಿಯ ಉಗಮಸ್ಥಾನ ಅಂಬುತೀರ್ಥ ಮುಂತಾದವು.
ದೇವಸ್ಥಾನಗಳತ್ತ ಗಮನಹರಿಸುವುದಾದರೆ ಕೆಳದಿಯ ದೇವಾಲಯಗಳು, ಇಕ್ಕೇರಿಯ ದೇವಾಲಯಗಳು, ಬನವಾಸಿಯ ಮಧುಕೇಶ್ವರ ದೇವಾಲಯ, ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನ, ಚಂದ್ರಗುತ್ತಿಯ ರೇಣುಕಾದೇವಿ, ತುಂಗಭದ್ರಾ ನದಿಗಳು ಸಂಗಮಗೊಳ್ಳುವ `ಕೂಡ್ಲಿ' ಎಂಬ ಸ್ಥಳದಲ್ಲಿರುವ ದೇವಾಲಯಗಳನ್ನು ನೋಡಬಹುದಾಗಿದೆ.
ಜೋಗ ಜಲಪಾತ
ಸಾಗರದಿಂದ ಸುಮಾರು 35 ಕಿ.ಮೀ. (ಶಿವಮೊಗ್ಗದಿಂದ 105 ಕಿ.ಮೀ) ದೂರದಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತವಿದೆ. ಸುಮಾರು 962 ಅಡಿಗಳಷ್ಟು ಆಳದ ಕಮರಿಗೆ ಧುಮ್ಮಿಕ್ಕುವ ಈ ಜಲಪಾತ ರಾಜಾ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕವಲುಗಳನ್ನು ಹೊಂದಿದೆ. ಮಳೆಗಾಲದಲ್ಲಿ ಮೈದುಂಬಿ ಧುಮುಕುವ ಈ ಜಲಪಾತ ನಯನಮನೋಹರ. ಜಲಪಾತದ ಸಮೀಪದಲ್ಲಿ ಮಹಾತ್ಮಾ ಗಾಂಧಿ ವಿದ್ಯುದಾಗಾರವಿದೆ.
ಗಾಜನೂರು ಡ್ಯಾಂ
ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಸುಮಾರು 10 ಕಿ.ಮೀ. ಪ್ರಯಾಣಿಸಿದರೆ ಗಾಜನೂರು ಡ್ಯಾಂ ಸಿಗುತ್ತದೆ. ತುಂಗಾ ನದಿಗೆ ಕಟ್ಟಿರುವ ಹಳೆಯ ಅಣೆಕಟ್ಟು ನೋಡಲು ಸುಂದರವಾಗಿದೆ.
ಸಕ್ರೆಬೈಲು ಆನೆ ಶಿಬಿರ
ಗಾಜನೂರು ಡ್ಯಾಂ ಹಿನ್ನೀರಿನ ದಡದಲ್ಲಿ 3 ಕಿ.ಮೀ. ದೂರದಲ್ಲಿ ಸಕ್ರೆಬೈಲು ಆನೆ ಕ್ಯಾಂಪಿದೆ. ಇಲ್ಲಿ ಕಾಡಿನ ಆನೆಗಳನ್ನು ಪಳಗಿಸುತ್ತಾರೆ. ಇಲ್ಲಿ ಸಾಕಿದ ದೊಡ್ಡ ಆನೆಗಳು ಮತ್ತು ಮರಿಯಾನೆಗಳಿವೆ. ಇದು ಮಕ್ಕಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಪ್ರವಾಸಿಗರು ಬೆಳಗ್ಗೆ 10 ಗಂಟೆಯೊಳಗೆ ಭೇಟಿ ನೀಡುವುದು ಸೂಕ್ತ.
ಮಂಡಗದ್ದೆ ಪಕ್ಷಿಧಾಮ
ಸಕ್ರೆಬೈಲಿನಿಂದ ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ ಮಂಡಗದ್ದೆ ಪಕ್ಷಿಧಾಮವಿದೆ. ಗಾಜನೂರು ಡ್ಯಾಂನ ಹಿನ್ನೀರಿನಲ್ಲಿರುವ ನಡುಗಡ್ಡೆಗಳಲ್ಲಿ ದೇಶವಿದೇಶಗಳಿಂದ ವಲಸೆ ಬಂದು ಗೂಡು ಕಟ್ಟಿಕೊಂಡಿರುವ ವಿವಿಧ ಜಾತಿಯ ಹಕ್ಕಿಗಳ ಕಲರವವನ್ನು ಮೇ ತಿಂಗಳಿಂದ ನವೆಂಬರ್ ವರೆಗೆ ಕೇಳಬಹುದು.
ಗುಡವಿ ಪಕ್ಷಿಧಾಮ
ಸಾಗರದಿಂದ 47 ಕಿ.ಮೀ. ಹಾಗೂ ಸೊರಬದಿಂದ 15 ಕಿ.ಮೀ. ದೂರದಲ್ಲಿ ಗುಡವಿ ಪಕ್ಷಿಧಾಮವಿದೆ. ಇಲ್ಲಿ ಪಕ್ಷಿ ವೀಕ್ಷಣೆಗೆ ವೀಕ್ಷಣಾ ಗೋಪುರಗಳಿವೆ. ಗುಡವಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಯಿದೆ. ಸುತ್ತಮುತ್ತಲಿನ ಪರಿಸರ ಸುಂದರವಾಗಿದೆ.
ತ್ಯಾವರೆ ಕೊಪ್ಪ
ಶಿವಮೊಗ್ಗದಿಂದ 10 ಕಿ.ಮೀ. ದೂರದಲ್ಲಿ ಸಾಗರಕ್ಕೆ ಹೋಗುವ ದಾರಿಯಲ್ಲಿ ತ್ಯಾವರೆಕೊಪ್ಪ ವನ್ಯಧಾಮವಿದೆ. ಇಲ್ಲಿ 20 ಎಕರೆಯಷ್ಟು ಪ್ರದೇಶದಲ್ಲಿ `ಟೈಗರ್ ಸಫಾರಿ' ಇದೆ. ಮತ್ತೊಂದು ಬದಿಯಲ್ಲಿ ಲಯನ್ ಸಫಾರಿ ಇದೆ. ಇವುಗಳಲ್ಲದೆ ಚಿರತೆ, ಕರಡಿ, ನರಿ ಮುಂತಾದ ಪ್ರಾಣಿಗಳು, ವಿವಿಧ ರೀತಿಯ ಪಕ್ಷಿಗಳೂ ಇವೆ.
ಹೊನ್ನೆಮರಡು
ಬಂಗಾರದ ಮರಳಿನ ಪ್ರದೇಶವೆಂದು ಪ್ರಸಿದ್ಧಿಯಾಗಿರುವ ಈ ಸ್ಥಳ ದ್ವೀಪಗಳಿಂದ ಕೂಡಿದ್ದು, ಒಳ್ಳೆಯ ಪ್ರವಾಸಿ ತಾಣವಾಗಿದೆ. ಇಲ್ಲಿ ದೋಣಿ ವಿಹಾರ ಮಾಡಬಹುದು. ಪ್ರವಾಸಿಗಳಿಗೆ ತಂಗಲು ವಸತಿ ಸೌಕರ್ಯವಿದೆ. ಈ ಸ್ಥಳ ಸಾಗರದಿಂದ ಜೋಗಕ್ಕೆ ಹೋಗುವ ದಾರಿಯಲ್ಲಿ ತಾಳಗುಪ್ಪ ಸಮೀಪದಲ್ಲಿದೆ.