ಎರಡು ಬೇರೆ ಬೇರೆ ಸಂಸ್ಕೃತಿಯಿಂದ ಬಂದ ನನ್ನ ತಾಯಿ ಹಾಗೂ ತಂದೆ ವಿವಾಹವಾದಾಗ, ಅವರು ಎಲ್ಲವನ್ನೂ ತೊರೆದು ತಮ್ಮ ಕುಟುಂಬ ನೆಲೆಯಾಗಿಸಿಕೊಳ್ಳಲು ಬಹಳಷ್ಚು ತೊಂದರೆಗಳನ್ನು ಎದುರಿಸಬೇಕಾಯಿತು……”

ಅದು 1975ರ ಮಾತು. ಆಗ ಸಂಧ್ಯಾ ಸಿನ್ಹಾ ಬಿಹಾರದಲ್ಲಿ ವಾಸಿಸುತ್ತಿದ್ದರು ಮತ್ತು ಎ.ಎ.ಎಸ್‌ನ ಸಿದ್ಧತೆ ನಡೆಸಿದ್ದರು. ಆಗ ಅವರ ತಾಯಿ ಸಂಧ್ಯಾಗೆ ಹೇಳಿದ್ದೇನೆಂದರೆ, “ನೀನು ಐಎಎಸ್‌ ಅಧಿಕಾರಿ ಆಗುವ ಬದಲು ವಿಕಲಚೇತನರಿಗಾಗಿ ಏನನ್ನಾದರೂ ಮಾಡು,” ಎಂದು ಸಲಹೆ ನೀಡಿದರು. ಅಂದಹಾಗೆ ಸಂಧ್ಯಾ ಅವರ ಅಮ್ಮ ಓರ್ವ ವಿಕಲಚೇತನರಾಗಿದ್ದರು. ಅವರು ಲಾಹೋರ್‌ ನ ಸೇಂಟ್‌ ಮೇರಿಯಲ್ಲಿ ಓದಿದ್ದರು. ಆದರೆ ದೈಹಿಕವಾಗಿ ನಿಶ್ಶಕ್ತರಾಗಿದ್ದರಿಂದ ಅವರಿಗೆ ಶಿಕ್ಷಕಿಯ ನೌಕರಿ ಸಿಗಲಿಲ್ಲ. ಅವರ ಅರ್ಧ ದೇಹ ಲಕ್ವಾಗ್ರಸ್ತವಾಗಿತ್ತು. ಆದರೂ ಅವರು ಬಹಳ ಪ್ರಯತ್ನಪಟ್ಟು 3 ಮಕ್ಕಳನ್ನು ಬೆಳೆಸಿ, ಓದಿಸಿದರು. ಮೂವರು ದೊಡ್ಡವರಾದಾಗ ಅವರು ತಮ್ಮ ನೋವನ್ನು ಮಕ್ಕಳ ಮುಂದೆ ಹಂಚಿಕೊಂಡರು.

ಸಂಧ್ಯಾರಿಗೆ ಅವರ ಅಮ್ಮ, “ನೀನು ಯಾವುದೋ ಒಂದು ಉದ್ಯೋಗ ಪಡೆಯಬೇಕು ಎಂದುಕೊಂಡಿರುವೆ. ನಾನು ಬಯಸುವುದೇನೆಂದರೆ, ನೀನು ನಮ್ಮಂಥವರಿಗಾಗಿ ಏನನ್ನಾದರೂ ಮಾಡು. ಯಾರು ಓದಿದ್ದಾರೊ, ಧೈರ್ಯ ಹೊಂದಿದ್ದಾರೊ, ಆದರೆ ವಿಕಲ ಚೇತನರಾಗಿರುವ ಕಾರಣದಿಂದ ಅವರಿಗೆ ಅವಕಾಶ ಸಿಕ್ಕಿರಲಿಕ್ಕಿಲ್ಲ. ಅಂಥವರಿಗಾಗಿ ಏನನ್ನಾದರೂ ಮಾಡು. ನಮ್ಮ ದೇಹವೇನೊ ಡ್ಯಾಮೇಜ್‌ ಆಗಿದೆ. ಅದಕ್ಕೆ ಮೇಲಾಗಿ ಸಮಾಜದ ವ್ಯಂಗ್ಯದ ಮಾತುಗಳಿಂದ ಮನಸ್ಸು ಕೂಡ ಘಾಸಿಯಾಗುತ್ತದೆ. ಹೀಗಾಗಿ ನಾವು ಎಲ್ಲಿಯೇ ಹೋಗಬೇಕೆಂದರೂ ಹಿಂದೇಟು ಹಾಕುತ್ತೇವೆ. ಅಂಥವರಿಗಾಗಿ ನೀನು ಮುಂದೆ ಬರಬೇಕು,” ಎಂದು ಹೇಳಿದರು.

ಸಂಧ್ಯಾರ ಯುವ ಮನಸ್ಸಿನ ಮೇಲೆ ಆ ಮಾತುಗಳು ಗಾಢ ಪರಿಣಾಮ ಬೀರಿದವು. ನಿಜ ಹೇಳಬೇಕೆಂದರೆ, ಆ ದಿನಗಳಲ್ಲಿ ವಿಕಲಚೇತನರಿಗಾಗಿ ಯಾವುದೇ ಸೌಲಭ್ಯಗಳಿರಲಿಲ್ಲ. ಅವರು ಬಾಲ್ಯದಿಂದಲೇ ಅಮ್ಮನ ಕಷ್ಟ ಕಾರ್ಪಣ್ಯಗಳನ್ನು ಕಂಡಿದ್ದರು. ಅಮ್ಮನ ಹೇಳಿಕೆಯ ಮೇರೆಗೆ ಅಂಥ ಜನರಿಗಾಗಿ ಕೆಲಸ ಮಾಡಲು ಸಂಧ್ಯಾ ಮನಸ್ಸಲ್ಲಿಯೇ ನಿರ್ಧರಿಸಿದರು. ಆ ಬಳಿಕ ಆ ಕೆಲಸದಲ್ಲಿಯೇ ತೊಡಗಿಕೊಂಡರು.

“ನನ್ನ ಅಮ್ಮ ಹಾಗೂ ಅಪ್ಪ ನನಗೆ ಪ್ರೇರಣೆ ಆಗಿದ್ದಾರೆ. ಅಮ್ಮ ವಿಕಲಚೇತನ ಮಹಿಳೆ. ಅಪ್ಪ ರಾವ್ ‌ಬಹಾದ್ದೂರ್‌ ಸಾಹೇಬರ ಮಗ. ನನ್ನ ತಾಯಿಯ ತಂದೆ ಸಾಕಷ್ಟು ಓದಿದವರಾಗಿದ್ದರು. ಅವರು ಪಟಿಯಾಲಾ ಮಹಾರಾಜರ ಬಳಿ ಚೀಫ್‌ ಎಂಜಿನಿಯರ್ ಆಗಿದ್ದರು. ಅವರು ಬಾಕ್ರಾ ನಂಗಾಲ್ ‌ಡ್ಯಾಮ್ ಚೀಫ್‌ ಎಂಜಿನಿಯರ್‌ ಆಗಿ ಡ್ಯಾಮ್ ಗೆ ಅಂತಿಮ ರೂಪ ಕೊಟ್ಟಿದ್ದರು. ನನ್ನ ತಂದೆ ಬಿಹಾರದ ಜಮೀನುದಾರರೊಬ್ಬರ ಮಗನಾಗಿದ್ದು, ಅವರಿಗೆ ರಾವ್ ಬಹಾದ್ದೂರ್‌ ಬಿರುದು ಸಿಕ್ಕಿತ್ತು. ಓದು ಬರಹದಲ್ಲಿ ಅವರಿಗೂ ಆಸಕ್ತಿ ಇರಲಿಲ್ಲ ಎರಡು ವಿಭಿನ್ನ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ನನ್ನ ತಂದೆ ಹಾಗೂ ತಾಯಿ, ವಿವಾಹವಾದಾಗ, ಎಲ್ಲವನ್ನೂ ಬಿಟ್ಟುಕೊಟ್ಟು ತಮ್ಮ ಕುಟುಂಬ ನೆಲೆ ಕಂಡುಕೊಳ್ಳಲು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಿ ಬಂತು.”

ಹೊಸ ಜೀವನದ ಆರಂಭ

ಸಂಧ್ಯಾ 7ನೇ ತರಗತಿಯಲ್ಲಿದ್ದಾಗ `ಫಾದರ್‌ ಡೆಮಿಯನ್‌’ ಎಂಬ ನಾಟಕ ನೋಡಿದ್ದರು. ಅದರಲ್ಲಿ ಡೆಮಿಯನ್‌ ಕುಷ್ಠರೋಗಿಗಳ ಸೇವೆಯಲ್ಲಿ ನಿರತರಾದ ವ್ಯಕ್ತಿ. ಕುಷ್ಠರೋಗಿಗಳ ಮಧ್ಯೆ ಇದ್ದೂ ಇದ್ದೂ ಅವರೇ ಕುಷ್ಠರೋಗಿಯಾಗಿ ತೀರಿಕೊಂಡರು. ಆದರೆ ಹಲವು ರೋಗಿಗಳ ಜೀವನ ಸುಧಾರಣೆ ಆಯಿತು. ಈ ನಾಟಕ ಸಂಧ್ಯಾ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಿತೆಂದರೆ, ಅವರು ಕುಷ್ಠರೋಗಿಗಳಿರುವ ಕಡೆ ಹೋಗಿ ಕೆಲಸ ಮಾಡಿದರು. ಗಯಾದ ಒಂದು ಹಳ್ಳಿಗೆ ಹೋಗಿ ಕೆಲಸ ಮಾಡುತ್ತಿರುವ ಬಗ್ಗೆ ಮನೆಯಲ್ಲಿ ಹೇಳಿದಾಗ, ಸಂಧ್ಯಾರನ್ನೇ ಪ್ರತ್ಯೇಕವಾಗಿ ಇಡಲಾರಂಭಿಸಿದರು.

ಆ ಬಳಿಕ ಸಂಧ್ಯಾ ಸುಟ್ಟ ರೋಗಿಗಳಿಗಾಗಿ ಕೆಲಸ ಮಾಡಿದರು. ಅಂತಹ ಮಹಿಳಾ ರೋಗಿಗಳು ಸೇಂಟ್‌ ಸ್ಟೀಫನ್‌ ಹಾಸ್ಪಿಟಲ್ ನಲ್ಲಿ ಇದ್ದರು. ಸುಮಾರು. 10 ವರ್ಷಗಳ ಕಾಲ ಈ ಭಾಗದಲ್ಲಿ ಕೆಲಸ ಮಾಡಿದರು. ಅವರು ತಮ್ಮ ಬಳಿ ಇದ್ದ ಎಲ್ಲ ನಿಧಿಯನ್ನು ಒಗ್ಗೂಡಿಸಿ 1982ರಲ್ಲಿ `ಗೃಹಸ್ಥ ನಾಮ’ ಹೆಸರಿನ ಸಂಸ್ಥೆಯೊಂದನ್ನು ತೆರೆದರು. ಇಲ್ಲಿ ವಿಕಲಚೇತನ ಮಹಿಳೆಯರಿಗೆ ಶಿಲ್ಪಕಲೆ ಹಾಗೂ ಮನೆಗೆಲಸಗಳನ್ನೆಲ್ಲ ಕಲಿಸಿಕೊಡಲಾಗುತ್ತಿತ್ತು. 1991ರಲ್ಲಿ ಅದು ಅಧಿಕೃತವಾಗಿ ನೋಂದಣಿಯಾಯಿತು.

ಮದುವೆಯ ಬಳಿಕ ಮುಂಬೈಗೆ ಶಿಫ್ಟ್ ಆದರು. ಅಲ್ಲಿ ಅವರು ಮುಂಬೈ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೆಲಸ ಮಾಡಿದರು. ಸಾಂತಾಕ್ರೂಸ್‌ ನಲ್ಲಿ `ಕ್ರಿಶ್ಚಿಯನ್‌ ಮಿಷಿನರೀಸ್‌ ನ ಹೋಮ್ ಫಾರ್‌ ಡೆಸ್ಟಿಟ್ಯೂಟ್ಸ್’ಗಾಗಿಯೂ ಸ್ವಯಂ ಸೇವಕಿಯಾಗಿ ಕೆಲಸ ಮಾಡಿದರು. ಅಲ್ಲಿ ಸಮಾಜದಿಂದ ತಿರಸ್ಕೃತರಾದ ಮಹಿಳೆಯರಿಗೆ ನೆರವು ನೀಡಲಾಗುತ್ತದೆ. ಅದರಲ್ಲಿ ಅವರು ವಿಮಾನ ನಿಲ್ದಾಣಗಳ ವಿಮಾನದಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ತರುವುದು ಹಾಗೂ ಬೇರೆಯವರಿಂದ ಬಟ್ಟೆ ಸಂಗ್ರಹಿಸಿ ತಂದು ಇಂಥ ಮಹಿಳೆಯರಿಗೆ ನೀಡುವ ಕೆಲಸ ಮಾಡಿದರು.

ಮೂಕ ಕಿವುಡರಿಗಾಗಿ ದುಡಿದ ಸಂಧ್ಯಾ

ಮುಂಬೈನ ಮಸಯಿಯಲ್ಲಿ ಮೂಕ ಕಿವುಡ ಹುಡುಗಿಯರಿಗಾಗಿಯೂ ಅವರು ವರ್ಕ್‌ ಶಾಪ್‌ ಆರಂಭಿಸಿದರು. ಅಲ್ಲಿ ದೂರ ದೂರದಿಂದ ಹುಡುಗಿಯರು ಬರುತ್ತಿದ್ದರು. ಅವರಿಗೆ ಹೊಲಿಗೆ, ಕಸೂತಿ ಕೆಲಸ ಕಲಿಸಿ ಕೊಡಲಾಗುತ್ತದೆ. ಅಲ್ಲಿ ಕಲಿತ ಹುಡುಗಿಯರು ಹೊರಗಡೆ ನೌಕರಿ ಹುಡುಕಬೇಕಿತ್ತು. ಹೀಗೆಯೇ ನೌಕರಿ ಹುಡುಕಲು ಹೋಗಿದ್ದ ಹುಡುಗಿಯೊಬ್ಬಳ ಮೇಲೆ ಹಲ್ಲೆಯ ಪ್ರಯತ್ನ ನಡೆದಿತ್ತು. ಆ ಹುಡುಗಿ ಸಂಧ್ಯಾಗೆ “ನೀವೇ ನೌಕರಿಯ ವ್ಯವಸ್ಥೆ ಮಾಡಿ ಹಾಗೂ ನಾವು ಇಲ್ಲಿಯೇ ಉಳಿದುಕೊಳ್ಳುತ್ತೇವೆ,” ಎಂದು ಹೇಳಿದ್ದಳು.

ಆ ಹುಡುಗಿಯ ಮೇಲಾದ ಹಲ್ಲೆ ಸಂಧ್ಯಾರ ಮನಸ್ಸನ್ನು ಘಾಸಿಗೊಳಿಸಿತು. ಆ ಬಳಿಕ ಸಂಧ್ಯಾ ನೌಕರಿ ಬಿಟ್ಟು ಸಾಕ್ಸ್ ತಯಾರಿಸುವ ಕಾರ್ಖಾನೆಯೊಂದನ್ನು ಸ್ಥಾಪಿಸಿದರು. ಅಲ್ಲಿ ಹಲವು ಹೊಲಿಗೆ ಯಂತ್ರಗಳನ್ನು ಅಳವಡಿಸಿ ನಿರ್ಗತಿಕ ಮಹಿಳೆಯರಿಗೆ ಉದ್ಯೋಗ ಕೊಟ್ಟರು.

ಮೊದಲ ವರ್ಷವೇ ಆ ಕಾರ್ಖಾನೆ 40 ಲಕ್ಷ ರೂ. ಟರ್ನ್‌ ಓವರ್‌ ಕೊಟ್ಟಿತು. ಆಗ ಆ ಕಾರ್ಖಾನೆಗೆ ವಾಣಿಜ್ಯ ರೂಪ ದೊರಕಿತು.

ಸದ್ಯ ಅವರು ಪರಿಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸಮಾಜ ಸೇವೆಗಾಗಿ ಅವರು 1991ರಲ್ಲಿ ತಮ್ಮ ಅಮ್ಮ ಹಾಗೂ ಅತ್ತೆಯ ಹೆಸರಿನಲ್ಲಿ `ಸೂರ್ಯ ಮೋಹಿನಿ ಚಾರಿಟೆಬಲ್ ಟ್ರಸ್ಟ್’ ಆರಂಭಿಸಿದ್ದಾರೆ. ಆ ಟ್ರಸ್ಟ್ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದೆ. ಅಲ್ಲೀಗ 3 ಬಗೆಯ ಕೆಲಸ ಕಾರ್ಯಗಳು ನಡೆಯುತ್ತವೆ.

ಹಪ್ಪಳ, ಉಪ್ಪಿನಕಾಯಿ, ಕಸೂತಿ, ಆಹಾರ ತಯಾರಿಕೆ, ಸ್ವೆಟರ್‌ ತಯಾರಿಕೆ ಹಾಗೂ ಕೃಷಿಗೆ ಸಂಬಂಧಿಸಿದ ಕೆಲಸ ಕಲಿಸಲಾಗುತ್ತದೆ. ಐಎಸ್‌ಟಿ ಎನ್ನುವುದು ಎರಡನೇ ಬಗೆಯ ತರಬೇತಿ. ಇದರಲ್ಲಿ ಪುನರ್ವಸತಿ ಜೊತೆಗೆ ಶಿಕ್ಷಣ ಕ್ರಿಯಾಶೀಲ ತರಬೇತಿ, ಸಮಾಜದ ಕೆಟ್ಟ ಪದ್ಧತಿಗಳ ವಿರುದ್ಧ ಹೋರಾಡಲು ಜಾಗರೂಕರಾಗಿಸಲಾಗುತ್ತದೆ. ನಾಟಕ, ಚಿತ್ರಕಲೆ, ಸ್ತಬ್ಧ ಚಿತ್ರಗಳ ಮೂಲಕ ಅರಿವು ಮೂಡಿಸಲಾಗುತ್ತದೆ.

2005ರಲ್ಲಿ ವುಮನ್ಸ್ ಪೊಲಿಟಿಕ್‌ ಫೋರಮ್ ಆರಂಭಿಸಲಾಯಿತು. ಗ್ರಾಮೀಣ ಮಹಿಳೆಯರಿಗೆ ರಾಜಕೀಯ ಸಂಬಂಧಿ ಮಾಹಿತಿ ನೀಡಲಾಗುತ್ತದೆ.

ಸಮಾಜ ಸೇವೆಯ ಈ ಕೆಲಸದಲ್ಲಿ ನಿಮಗೆ ಎಂದಾದರೂ ಸಮಸ್ಯೆಗಳು ಬಂದಿವೆಯೇ? ಎಂದು ಕೇಳಿದಾಗ ಅವರು ನಗುತ್ತಲೇ, “ಕಷ್ಟಗಳಂತೂ ಬಂದೇ ಬರುತ್ತವೆ. ಅವು ಯಾರಿಗೆ ತಾನೇ ಬರುವುದಿಲ್ಲ? ಒಂದು ವೇಳೆ ನಮ್ಮ ಕರ್ಮ ಸತ್ಯವಾಗಿದ್ದರೆ ಎಲ್ಲವೂ ಸರಿಯಾಗುತ್ತದೆ,” ಎಂದು ಹೇಳುತ್ತಾರೆ.

ಪ್ರತಿನಿಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ