ಶ್ರೀಪತಿ ಪಂಡಿತರಾದ್ಯುಲು ಬಾಲಸುಬ್ರಹ್ಮಣ್ಯಂ ಎಲ್ಲರ ಪ್ರೀತಿಯ ಎಸ್ಪಿಬಿ, ಇನ್ನೂ ಅನೇಕರಿಗೆ ಬಾಲೂ ಅವರನ್ನು ಹೇಗೆ ಪರಿಚಯಿಸ ಬೇಕು ಎಂಬುದೇ ಬಹಳ ಕಷ್ಟಕರವಾದ ವಿಷಯ. ಗಾಯಕ, ನಟ, ಸಂಗೀತ ನಿರ್ದೇಶಕ, ಕಂಠದಾನ ಕಲಾವಿದ, ಮಿಮಿಕ್ರಿ ಕಲಾವಿದ, ಸೃಜನಶೀಲವ್ಯಕ್ತಿ, ಅನೇಕ ಹೊಸಾ ಪ್ರತಿಭೆಗಳಿಗೆ ಮಾರ್ಗದರ್ಶಿ ಹೀಗೆ ಹತ್ತು ಹಲವಾರು ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೂ ತಪ್ಪಾಗಲಾರದು.
ಸ್ವಾತಂತ್ರ್ಯ ಪೂರ್ವ ಮದ್ರಾಸ್ ರೆಸೆಡೆನ್ಸಿ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಖ್ಯಾತ ಹರಿಕಥಾ ವಿದ್ವಾಸಂರಾಗಿದ್ದ ಶ್ರೀ ಸಾಂಬಮೂರ್ತಿಗಳು ಮತ್ತು ಶಕುಂತಲಮ್ಮ ದಂಪತಿಗಳ ಪುತ್ರನಾಗಿ 1946ರ ಜೂನ್ 4ರಂದು ಜನಿಸಿದರು. ಬಾಲ್ಯದಿಂದಲೂ ಬುದ್ಧಿವಂತ ಅದರೇ ಅಷ್ಟೇ ತುಂಟತನದವರಾಗಿದ್ದ ಬಾಲೂ ಕುಟುಂಬದವರೆಲ್ಲರ ಅಕ್ಕರೆ ಮತ್ತು ಪ್ರೀತಿಯನ್ನು ಗಳಿಸಿದ್ದರು.

ಓದಿನಲ್ಲಿ ಅತ್ಯಂತ ಚುರುಕಾಗಿದ್ದರಿಂದ ಇಂಜಿನೀಯರ್ ಆಗಬೇಕೆಂಬ ಉದ್ದೇಶದಿಂದ ಅನಂತಪುರದ ಜೆಎನ್‌ಟಿಯು ಕಾಲೇಜ್ ಆಫ್ ಎಂಜಿನಿಯರಿಂಗ್‌ಗೆ ಸೇರಿಕೊಂಡರಾದರೂ ಅನಾರೋಗ್ಯದ ಕಾರಣ ತಮ್ಮ ಇಂಜೀನಿಯರಿಂಗ್ ವಿದ್ಯಾಭ್ಯಾಸವನ್ನು ಅಲ್ಲಿಗೇ ಮೊಟುಕುಗಳಿಸಬೇಕಾಯಿತು. ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಸಲುವಾಗಿ ಮದ್ರಾಸಿಗೆ ಬಂದು ಅಲ್ಲಿನ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ನಲ್ಲಿ ಸಹಾಯಕ ಸದಸ್ಯರಾಗಿ ಸೇರಿಕೊಂಡರು. ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದಿದ್ದರೂ ಮನೆಯಲ್ಲಿದ್ದ ಸಂಗೀತಮಯ ವಾತಾವರಣ ಮತ್ತು ತಂದೆಯಿಂದ ಬಂದಿದ್ದ ಬಳುವಳಿಯ ಕಾರಣ ಕಾಲೇಜಿನ ಸ್ಪರ್ಥೆಗಳು ಮತ್ತು ಕಾರ್ಯಕ್ರಮಗಳಲ್ಲಿ ತಮ್ಮ ಕಂಠ ಸಿರಿಯಿಂದ ಅನೇಕ ಪ್ರಶಸ್ತಿಗಳನ್ನು ಮತ್ತು ಎಲ್ಲರ ಹೃನ್ಮಗಳನ್ನು ಗೆದ್ದಿದ್ದರು.

1964 ರಲ್ಲಿ, ಮದ್ರಾಸ್ ಮೂಲದ ತೆಲುಗು ಸಾಂಸ್ಕೃತಿಕ ಸಂಸ್ಥೆ ಹವ್ಯಾಸೀ ಗಾಯಕರಿಗಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಗೆಳೆಯರ ಒತ್ತಾದ ಮೇರೆಗೆ ಬಾಲೂ ಆ ಸ್ಪರ್ಥೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಗಳಿಸಿದರು. ಅದೃಷ್ಟವೆಂದರೆ, ಆ ಸ್ಪರ್ಥೆಯ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕರರಾದ ಶ್ರೀ ಎಸ್. ಪಿ. ಕೋದಂಡಪಾಣಿ ಮತ್ತು ಖ್ಯಾತ ಗಾಯಕರಾದ ಶ್ರೀ ಘಂಟಸಾಲ ಅವರು ಬಾಲೂ ಅವರ ಗಾಯನಕ್ಕೆ ಮನಸೋತು, ನೀವೇಕೆ ಚಲನಚಿತ್ರದಲ್ಲಿ ಹಿನ್ನಲೆ ಗಾಯಕರಾಗಬಾರದು ಎಂದು ಕೇಳುತ್ತಾರೆ. ನಾನು ಶಾಸ್ತ್ರೀಯವಾಗಿ ಯಾವುದೇ ಸಂಗೀತವನ್ನು ಅಭ್ಯಾಸ ಮಾಡಿಲ್ಲ. ಭಗವಂತಹ ಅನುಗ್ರಹದಿಂದ ಏನೋ ಅಲ್ಪ ಸ್ವಲ್ಪ ಹಾಡುತ್ತೇನೆ ಎಂದು ವಿನಮ್ರನಾಗಿ ಕೋದಂಡಪಾಣಿಯವರ ಸಲಹೆಯನ್ನು ತಿರಸ್ಕರಿದರೂ, ನಂತರ ಬಹಳ ಒತ್ತಾಯದ ಮೇರೆಗೆ ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ತೀರ್ಮಾನಿಸಿ, ಅದೇ ಕೋದಂಡಪಾಣಿಯವರ ನಿರ್ದೇಶನದಲ್ಲಿ ಡಿಸೆಂಬರ್ 15, 1966 ರಂದು ಶ್ರೀ ಶ್ರೀ ಶ್ರೀ ಮರ್ಯದಾ ರಾಮಣ್ಣ ಎಂಬ ತೆಲುಗು ಚಿತ್ರದಲ್ಲಿ ಹಾಡುತ್ತಾರೆ. ಅಚ್ಚರಿ ಎಂಬಂತೆ, ಕೇವಲ ಒಂದು ವಾರದಲ್ಲೇ ಕನ್ನಡ ಪ್ರಖ್ಯಾತ ಹಾಸ್ಯ ನಟ ನರಸಿಂಹರಾಜು ಅವರ ಚಿತ್ರ ಕನ್ನಡದಲ್ಲಿ ನಕ್ಕರೆ ಅದೇ ಸ್ವರ್ಗ ಚಿತ್ರಕ್ಕಾಗಿ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗಾಯಕರಾಗಿ ಪ್ರವೇಶ ಮಾಡುತ್ತಾರೆ.
ಬಾಲೂ ಅವರು ಹಿನ್ನಲೆ ಗಾಯಕರಾಗುವುದಕ್ಕೂ ಮೊದಲು ಕನ್ನಡ, ತೆಲುಗು, ತಮಿಳು, ಮಲಯಾಳಂ, ಸಂಸ್ಕೃತ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳನ್ನು ಸುಲಲಿತವಾಗಿ ಬಲ್ಲ ಅದ್ಭುತ ಶಾರೀರದ ಶ್ರೀ ಪಿ.ಬಿ.ಶ್ರೀನಿವಾಸ್, ಘಂಟಸಾಲ, ಸೀರ್ಕಾಳೀ ಗೋವಿಂದರಾಜನ್, ಬಾಲಮುರಳಿ ಕೃಷ್ಣ, ಏಸುದಾಸ್ ಮುಂತಾದವರು ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ದಿಗ್ಗಜರೆನಿಸಿಕೊಂಡಿರುತ್ತಾರೆ. ಈ ಎಲ್ಲಾ ಗಾಯಕರ ಅವರವರ ಶೈಲಿಗೆ ಬದ್ಧರಾಗಿದ್ದು ಅದು ನಾಯಕ ನಟರಿಗೆ ಒಗ್ಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಅಷ್ಟಾಗಿ ಯಾರೂ ಗಮನ ಹರಿಸುತ್ತಿರಲಿಲ್ಲ. ಆದರೆ ಒಮ್ಮೆ ಬಾಲೂ ಅವರು ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಿತರಾದ ಕೂಡಲೇ ಬಾಲೂರವರು ತಾವು ಹಾಡಿದ ಗೀತೆಗೆ ಯಾವ ನಟ ಅಭಿನಯಿಸುತ್ತಿದ್ದಾರೆ ಎಂಬುದನ್ನು ಮೊದಲು ವಿಚಾರಿಸಿ ಆ ನಟನ ಹಾವ ಭಾವ ಮತ್ತು ಧ್ವನಿಯನ್ನು ಒಮ್ಮೆ ಅಧ್ಯಯನ ಮಾಡಿ ನಂತರ ಆತನೇ ಹಾಡುತ್ತಿದ್ದಾನೆನೋ ಎನ್ನುವಂತೆ ಭಾಸವಾಗುವ ಹಾಗಿ ಧ್ವನಿಯನ್ನು ಅನುಕರಣೆ ಮಾಡುವ ಕಲೆಯನ್ನು ಸಿದ್ಧ ಪಡಿಸಿಕೊಂಡಿದ್ದರು.





