ನ್ಯೂಟ್ರಿಷನಿಸ್ಟ್ ಮತ್ತು ಫಿಟ್‌ನೆಸ್‌ ಟ್ರೇನರ್‌, ಫೌಂಡರ್‌

ಆಹಾರ ಎಂದೊಡನೆ ಬಾಯಿ ರುಚಿಗೆ ಮಹತ್ವ ಕೊಡುವವರೇ ಹೆಚ್ಚು. ಅಂಥವರಿಗೆ ನ್ಯೂಟ್ರಿಷನಿಸ್ಟ್ ಸಲಹೆಗಳು ಅತ್ಯಗತ್ಯ ಬೇಕು. ಸುಮನ್ ಫಿಟ್‌ನೆಸ್‌ ಟ್ರೇನರ್ ಆಗಿ ಹೇಗೆ ಯಶಸ್ವಿಯಾದರು ಎಂದು ಅವರಿಂದಲೇ ತಿಳಿಯೋಣವೇ……..?

ಜನಸಾಮಾನ್ಯರಿಂದ ಹಿಡಿದು ಸಿನಿಮಾ ತಾರೆಯರತನಕ ಫಿಟ್‌ನೆಸ್‌ ಬಗ್ಗೆ ಗಮನಹರಿಸುವ ಸುಮನ್‌ರವರು ವೈಯಕ್ತಿಕ ಮತ್ತು ಪ್ರೊಫೆಷನಲ್ ಲೈಫ್‌ನಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದಾರೆ. ಆದರೆ ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಛಲವನ್ನು ಮಾತ್ರ ಅವರು ಎಂದೂ ಬಿಡಲಿಲ್ಲ.

3 ಮಕ್ಕಳ ತಾಯಿ ಸುಮನ್‌ ಅಗರ್ವಾಲ್, ಕೇವಲ ನ್ಯೂಟ್ರಿಷನ್‌ ಕ್ಷೇತ್ರದಲ್ಲಷ್ಟೇ ಹೆಸರುವಾಸಿಯಾಗಿಲ್ಲ. ಅವರೊಬ್ಬ ಯಶಸ್ವಿ ಲೇಖಕಿ, ಗಾಯಕಿ ಹಾಗೂ ನೃತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ. ವೆಯ್ಟ್ ಲಾಸ್‌, ವೆಯ್ಟ್ ಮೇಂಟೇನ್‌, ವೆಯ್ಟ್ ಗೇನ್‌, ಡಯೆಟ್‌ ಫಾರ್‌ ಬೂಸ್ಟಿಂಗ್‌, ಇಮ್ಯೂನಿಟಿ, ಚಿಲ್ಡ್ರನ್‌ ನ್ಯೂಟ್ರಿಷನ್‌ನಂತಹ ಸೇವೆಗಳನ್ನು ಕೊಡಲು  2001ರಲ್ಲಿ ಅವರು ಮುಂಬೈ ಮಹಾನಗರಕ್ಕೆ ಬಂದರು. ಮುಂಬೈ ಜೊತೆಗೆ ಕೊಲ್ಕತ್ತಾದಲ್ಲೂ ತಮ್ಮ ಸೆಂಟರ್‌ ತೆರೆದರು.

ಆರೋಗ್ಯದ ಬಗ್ಗೆ ಜನರಲ್ಲಿ ಜಾಗರೂಕತೆ ಮೂಡಿಸಲು ಅವರು 3 ಪುಸ್ತಕಗಳನ್ನು ಕೂಡ ಬರೆದರು. ಅವುಗಳೆಂದರೆ  ದಿ ಡೋಂಟ್‌ ಡಯೆಟ್‌ ಕುಕ್‌ ಬುಕ್‌, ಅನ್‌ಜಂಕ್ಡ್ ಹೆಲ್ದಿ ಈಟಿಂಗ್‌ ಫಾರ್‌ ವೆಯ್ಟ್ ಲಾಸ್‌ ಹಾಗೂ ಸೂಪರ್‌ ಕಿಡ್‌ ಹೆಲ್ದೀ ಈಟಿಂಗ್‌ ಫಾರ್‌ ಕಿಡ್ಸ್ ಅಂಡ್‌ ಟೀನ್ಸ್. ತಾಯಿಯಾದ ಬಳಿಕವೇ ಅವರು ತಮ್ಮ ಕೆರಿಯರ್‌ ಆರಂಭಿಸಿದ್ದು ಹಾಗೂ ಅದರಲ್ಲಿ ಯಶ ಕಂಡಿರುವ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಲೇಬೇಕು.

ನೀವು ನ್ಯೂಟ್ರಿಷನಿಸ್ಟ್ ಹಾಗೂ ಫಿಟ್ನೆಸ್‌ ಟ್ರೇನರ್‌ ಆಗಿ ಕಾರ್ಯ ಆರಂಭಿಸಿದ್ದು ಹೇಗೆ? ನಿಮ್ಮ ಈ ಪಯಣ ಹೇಗಿತ್ತು?

ಬಾಲ್ಯದಿಂದಲೇ ನನಗೆ ಈ ಕ್ಷೇತ್ರದ ಬಗ್ಗೆ ಆಸಕ್ತಿ ಇತ್ತು. 12-13ನೇ ವಯಸ್ಸಿನಿಂದಲೇ ನಾನು ಆರೋಗ್ಯ ಹಾಗೂ ರೋಗಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುತ್ತಿದ್ದೆ. ನನ್ನ ಮದುವೆ 20ನೇ ವಯಸ್ಸಿನಲ್ಲಿ ಆಯಿತು ಹಾಗೂ ಬೇಗ ಮಗು ಕೂಡ ಜನಿಸಿತು. ಹಾಗಾಗಿ ಈ ಕ್ಷೇತ್ರದಲ್ಲಿ ಹೆಜ್ಜೆ ಹಾಕಲು ಆಗಲಿಲ್ಲ. ಮೂರನೇ ಮಗು ಜನಿಸಿದ 1 ವರ್ಷದ ಬಳಿಕ ನಾನು ಫುಡ್‌ ಅಂಡ್‌ ನ್ಯೂಟ್ರಿಷನ್‌ನ 1 ವರ್ಷದ ಡಿಪ್ಲೊಮಾ ಮಾಡಿದೆ.

ನನಗೆ ಯಾವಾಗಲೂ ಒಂದು ವಿಷಯದ ಬಗ್ಗೆ ಗೊಂದಲವಿತ್ತು. ಅದೇನೆಂದರೆ, ಯಾವುದೇ ಒಂದು ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ ಎಂದಾದರೆ, ಅದೇ ಆಹಾರ ಆರೋಗ್ಯಕ್ಕೆ ಪೂರಕ ಆಗಿರಬಹುದು ಎಂದು ನಾನು ಯೋಚಿಸುತ್ತಿದ್ದೆ.

ನನ್ನ ಯೋಚನೆ ಸರಿಯಾಗೇ ಇತ್ತು. ಕೋರ್ಸ್‌ನ ಅವಧಿಯಲ್ಲಿ ನನಗೆ ಇದೇ ಸಂಗತಿಗಳ ಬಗ್ಗೆ ಮಾಹಿತಿ ಲಭಿಸಿತು. ಮಗಳಿಗೆ 3 ವರ್ಷ ಆಗುತ್ತಿದ್ದಂತೆ ನಾನು ಆಫೀಸ್‌ಗೆ ಹೋಗಲಾರಂಭಿಸಿದೆ. ನನ್ನ ಬಳಿ ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರು ಬರಲಾರಂಭಿಸಿದರು. ಹೀಗೆ ನನ್ನ ವಹಿವಾಟು ಹೆಚ್ಚುತ್ತಾ ಹೋಯಿತು. ಜನಸಾಮಾನ್ಯರ ಜೊತೆ ಜೊತೆಗೆ ಸೆಲೆಬ್ರಿಟಿಗಳು, ಉದ್ಯಮಿಗಳು ಕೂಡ ನನ್ನ ಬಳಿ ಬರಲಾರಂಭಿಸಿದರು. ನಾನು ನನ್ನ ಆಫೀಸ್‌ ಆರಂಭಿಸಿದ್ದುದು ಗಂಡನ ಆಫೀಸ್‌ನ ಒಂದು ಪುಟ್ಟ ಭಾಗದಲ್ಲಿ. ಈಗ ನನ್ನ ಆಫೀಸ್‌ 5000 ಚದರ ಅಡಿ ಜಾಗದಲ್ಲಿ ವ್ಯಾಪಿಸಿದೆ. ಮೊದಲು ನನ್ನ ಬಳಿ ಕೇವಲ ಒಬ್ಬರೇ ಸಿಬ್ಬಂದಿ ಇದ್ದರು. ಈಗ ಅವರ ಸಂಖ್ಯೆ 50 ದಾಟಿದೆ. ನಾನು ನನ್ನ ಈ ಜೀವನ ಪಯಣದ ಬಗ್ಗೆ ಬಹಳ ತೃಪ್ತಿ ಹೊಂದಿರುವೆ.

ಪುರುಷಪ್ರಧಾನ ಸಮಾಜದಲ್ಲಿ ನಿಮ್ಮ ಸ್ಥಾನ ಭದ್ರಗೊಳಿಸಲು ಎಷ್ಟರಮಟ್ಟಿಗೆ ಸಂಘರ್ಷ ಮಾಡಬೇಕಾಯಿತು?

ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿಗೆ ಇರುವುದು ಖುಷಿಯ ವಿಚಾರ! ಹೀಗಾಗಿ ಪುರುಷರ ಪೈಪೋಟಿ ಎದುರಿಸಬೇಕಾಗಿ ಬಂದದ್ದು ಕಡಿಮೆಯೇ. ನನ್ನ ಆರಂಭಿಕ ಜೀವನದಲ್ಲಿ ಮಾತ್ರ ಕೆಲವು ಪುರುಷರು ನನ್ನ ಬಗ್ಗೆ ಮಾತನಾಡುವಾಗ, ಒಬ್ಬ ಮಹಿಳೆ ಪುರುಷರನ್ನು ಹೇಗೆ ಸರಿ ಮಾಡಲು ಸಾಧ್ಯ ಎಂದಿದ್ದರಂತೆ. ಆ ಮಾತು ನನಗೆ ಅಷ್ಟಿಷ್ಟು ನಿರಾಶೆ, ಗೊಂದಲ ಮೂಡಿಸಿದ್ದು ನಿಜ. ಆದರೆ ನಾನು ಆ ಸಂಗತಿಗಳ ಬಗ್ಗೆ ನಿರ್ಲಕ್ಷ್ಯ ಮಾಡಿ, ನನ್ನೆಲ್ಲ ಗಮನವನ್ನು ಕೆಲಸದ ಮೇಲೆ ಕೊಟ್ಟೆ. ಅದರ ಪರಿಣಾಮವೆಂಬಂತೆ ನನ್ನ ಬಳಿ ಎಷ್ಟು ಮಹಿಳಾ ಕ್ಲೈಂಟ್‌ಗಳು ಬರುತ್ತಾರೋ, ಅಷ್ಟೇ ಸಂಖ್ಯೆಯಲ್ಲಿ ಪುರುಷ ಕ್ಲೈಂಟ್‌ಗಳು ಕೂಡ ಬರುತ್ತಾರೆ.

ನಿಮ್ಮ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ನಿಮ್ಮ ತಂದೆಯ ಪಾತ್ರವೇನು?

ನಿಜ ಹೇಳಬೇಕೆಂದರೆ, ನನ್ನೊಳಗೆ ನ್ಯೂಟ್ರಿಷನಿಸ್ಟ್ ಬೀಜ ಬಿತ್ತಿದ್ದವರೇ ಅವರು. ಅಂದಹಾಗೆ ಅವರು ಸಾಕಷ್ಟು ಆರೋಗ್ಯ ಪ್ರಜ್ಞೆ ಹೊಂದಿದ್ದರು. ನಮ್ಮ ಕುಟುಂಬದಲ್ಲಿ ಇದ್ದವರು 5 ಜನ. 4 ಜನ ಸೋದರ ಸೋದರಿಯರು ಮತ್ತು ಅಪ್ಪ. ನಮ್ಮ ಊಟತಿಂಡಿ ಸಾಮಾನ್ಯವಾಗಿ 1 ಗಂಟೆ ಕಾಲ ನಡೆಯುತ್ತಿತ್ತು. ಆ ಸಮಯದಲ್ಲಿ ಅವರು ಯಾವ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂಬುದನ್ನು ಹೇಳುತ್ತಿದ್ದರು. ಅವರು ಈ ಕ್ಷೇತ್ರಕ್ಕೆ ಸಂಬಂಧಪಟ್ಟವರಾಗಿರಲಿಲ್ಲ. ಆದರೆ ಆರೋಗ್ಯ ಕ್ಷೇತ್ರದ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇತ್ತು. ಅವರು ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಪುಸ್ತಕಗಳನ್ನು ತರುತ್ತಿದ್ದರು. ಈ ರೀತಿ ಆ ಕ್ಷೇತ್ರದತ್ತ ನನ್ನ ಆಸಕ್ತಿ ಹೆಚ್ಚುತ್ತಾ ಹೋಯಿತು. ನನ್ನ ತಂದೆ ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಅವರು ಎಂದೂ ನನ್ನ ಮೇಲೆ ಇಲ್ಲಸಲ್ಲದ ನಿರ್ಬಂಧಗಳನ್ನು ಹೇರಲು ಹೋಗಲಿಲ್ಲ.

ಈಗ ನೀವು ಯಾವ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತಿದೆ?

ಸ್ಟ್ರಗಲ್ ಅಥವಾ ಹೋರಾಟ ಎಲ್ಲರ ಜೀವನದಲ್ಲೂ ಇದ್ದದ್ದೇ. ನಾನು  ಮಕ್ಕಳ ಪಾಲನೆಪೋಷಣೆ ಮಾಡುತ್ತ ಇಲ್ಲಿಯವರೆಗೆ ಬಹಳ ಕಷ್ಟಪಟ್ಟು ತಲುಪಿದೆ. ಅದಕ್ಕಾಗಿ ಬಹಳಷ್ಟು ತ್ಯಾಗ ಮಾಡಿದೆ. ನಾನೆಂದು ಟಿ.ವಿ. ಕೂಡ ನೋಡಲಿಲ್ಲ. ಯಾವುದೇ ಕಿಟಿ ಪಾರ್ಟಿ ಅಟೆಂಡ್‌ ಮಾಡಲಿಲ್ಲ. ನನ್ನ ಫೋಕಸ್‌ ಯಾವಾಗಲೂ ಕುಟುಂಬ ಹಾಗೂ ಕೆಲಸದ ಮೇಲೆಯೇ ಇರುತ್ತಿತ್ತು. 2004ರಲ್ಲಿ ನಾನು ಬ್ರೇನ್‌ ಸರ್ಜರಿ ಮಾಡಿಸಿಕೊಂಡಿದ್ದೆ. ನನ್ನ ಮುಖದ ಎಡಬದಿಯ ಮೇಲೆ ನನ್ನ ಯಾವುದೇ ನಿಯಂತ್ರಣ ಇರುತ್ತಿರಲಿಲ್ಲ. ಅದು ಯಾವಾಗಲೂ ಅದುರುತ್ತಿತ್ತು. ಆ ಕಾರಣದಿಂದ ನಾನು ನಗಲು ಕೂಡ ಆಗುತ್ತಿರಲಿಲ್ಲ. ಇದರ ಪರಿಣಾಮವೆಂಬಂತೆ ನನಗೆ ಬಹಳ ಹಿಂಸೆ ಎನಿಸುತ್ತಿತ್ತು. ಖಿನ್ನತೆ ನನ್ನನ್ನು ಆವರಿಸಿಕೊಳ್ಳಲಾರಂಭಿಸಿತ್ತು. ಆದರೆ ನಾನು ಧೈರ್ಯ ಕಳೆದುಕೊಂಡಿರಲಿಲ್ಲ. ನನ್ನ ವೈದ್ಯಕೀಯ ವರದಿಗಳನ್ನು ದೇಶವಿದೇಶಗಳಿಗೆ ಕಳುಹಿಸಿದ್ದೆ. ಕೊನೆಗೊಮ್ಮೆ ಜರ್ಮನಿಗೆ ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಅದು ಯಶಸ್ವಿಯಾಯಿತು.

ನಿಮ್ಮ ಯಶಸ್ಸಿನ ಶ್ರೇಯಸ್ಸನ್ನು ಯಾರಿಗೆ ಕೊಡಲು ಇಚ್ಛಿಸುತ್ತೀರಿ?

ನನ್ನ ಯಶಸ್ಸಿನ ಹಿಂದೆ ಅನೇಕ ಜನರು ಇದ್ದಾರೆ. ಅದರಲ್ಲಿ ವಿಶೇಷವಾಗಿ ನನ್ನ ಪತಿ ಹಾಗೂ ಅವರ ಸೋದರ ಮಾವನ ಪಾತ್ರ ಗಮನಾರ್ಹ. ಅವರ ಮಾವ ಆರಂಭಿಕ ಹಂತದಲ್ಲಿ ನನಗೆ ಬಹಳ ಪ್ರೋತ್ಸಾಹ ಕೊಟ್ಟರು. ಆರಂಭದಲ್ಲಿ ನನಗೆ ಇದನ್ನು ಕಂಪನಿ ಮಾಡುವ ಅಗತ್ಯವೇನಿದೆ ಎಂದು ಹಲವರು ಕೇಳಿದ್ದರು. ಆದರೆ ಅವರ ಮಾವ ನನಗೆ ಕಂಪನಿ ಸ್ಥಾಪನೆ ಮಾಡುವಲ್ಲಿ ಬಹಳಷ್ಟು ನೆರವು ನೀಡಿದ್ದರು. ನನ್ನ ಪತಿ ಕೂಡ ಪ್ರತಿಯೊಂದು ನಿಟ್ಟಿನಲ್ಲೂ ನನಗೆ ಪ್ರೋತ್ಸಾಹ ನೀಡಿದರು. ಅವರ ಮಾರ್ಗದರ್ಶನದಿಂದ ನನ್ನಲ್ಲಿ ಸಾಕಷ್ಟು ಬದಲಾವಣೆ ಉಂಟಾಯಿತು. ನಾನು ನನ್ನ ಸ್ವಂತ ಬಲದ ಮೇಲೆ ಎಲ್ಲವನ್ನೂ ಮಾಡಬೇಕೆಂದು ಅವರು ಬಯಸಿದ್ದರು. ನಾನು ಹಾಗೇ ಮಾಡಿದೆ ಕೂಡ. ನನ್ನೆಲ್ಲ ಹಣವನ್ನು ಬಿಸ್‌ನೆಸ್‌ನಲ್ಲಿ ಹೂಡಿದೆ. ಅಲ್ಲಿ ಬಂದ ಲಾಭವನ್ನು ಪುನಃ ಅಲ್ಲಿಯೇ ವಿನಿಯೋಗಿಸಿದೆ. ಬ್ಯಾಂಕ್‌ನಿಂದ ಯಾವುದೇ ಸಾಲ ಪಡೆಯಲೇ ಇಲ್ಲ. ನನ್ನ ಅತ್ತೆ ಮತ್ತು ಮಕ್ಕಳು ಕೂಡ ನನಗೆ ಸಾಕಷ್ಟು ಬೆಂಬಲ ನೀಡಿದರು. ಈಗ ನನ್ನ ದೊಡ್ಡ ಮಗಳು ನನ್ನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ.

– ಪಿ. ಪೂರ್ಣಿಮಾ 

Tags:
COMMENT