ಬೇಸಿಗೆಯಲ್ಲಿ ಪ್ರವಾಸ ಹೊರಡುವುದು ಎಂಬುದು ಸಹಜ. ಈ ಬಾರಿ ಹಿಮಾಲಯಕ್ಕೆ ಹೊರಟಿದ್ದಾಗ ಅಲ್ಲಿನ ಗುಲಾಬಿ ಗಮನ ಸೆಳೆದವು. ಅದರ ಬಗ್ಗೆ ವಿವರಗಳನ್ನು ತಿಳಿಯೋಣವೇ………?

ಪರ್ವತ ಪ್ರವಾಸೋದ್ಯಮದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿರುವ ಎಲ್ಲ ಅಂಶಗಳನ್ನೂ ಬಳಸಿಕೊಳ್ಳಲಾಗುತ್ತದೆ. ಹಿಮಾಲಯದ ಮಟ್ಟಿಗಂತೂ ಇದು ನೂರಕ್ಕೆ ನೂರರಷ್ಟು ನಿಜ. ಸರೋವರಗಳಲ್ಲಿ ವಿಹರಿಸುವುದು, ಪರ್ವತಗಳನ್ನು ಏರುವುದು, ನದಿಗಳಲ್ಲಿ ರಾಫ್ಟಿಂಗ್‌ ಮಾಡುವುದು, ಚಾರಣಗಳಲ್ಲಿ ಪಾಲ್ಗೊಳ್ಳುವುದು, ತೀರ್ಥಯಾತ್ರೆ ಕೈಗೊಳ್ಳುವುದು….

ಹೀಗೆ ಹಿಮಾಲಯದಲ್ಲಿ ಅನೇಕ ಚಟುವಟಿಕೆಗಳಲ್ಲಿ ಪ್ರವಾಸಿಗರು ಭಾಗವಹಿಸಿ ಆನಂದದ ಹಿಮದ ಮೇಲೆ ನಲಿಯುತ್ತಾರೆ. ಹಾಗಿದ್ದರೆ ಇಷ್ಟು ಮಾತ್ರವೇ ಹಿಮಾಲಯದ ಆಕರ್ಷಣೆಯೇ? ಇಲ್ಲ, ಹಾಗಿಲ್ಲ.

ಇಪ್ಪತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಹಿಮಾಲಯವನ್ನು ಸಂದರ್ಶಿಸಿದಾಗ ಉತ್ತರಖಂಡದ ಹೂವಿನ ಕಣಿವೆಗೆ ನಾವು ಗೆಳೆಯರು ಚಾರಣ ಹೋಗಿದ್ದೆವು. ಅಲ್ಲಿ ಗಂಗಾರಿಯಾ ಎಂಬ ತಂಗುದಾಣದಲ್ಲಿ ಒಬ್ಬ ಯುವಕ ತಾನು ಆಸ್ಥೆಯಿಂದ ತೆಗೆದ ಹಿಮಾಲಯದ ಚಿಟ್ಟೆ ಮತ್ತು ಹೂವುಗಳ ಫೋಟೋಗಳನ್ನು ಮಾರುತ್ತಿದ್ದ. ಅವುಗಳಲ್ಲಿ ನನ್ನ ಗಮನವನ್ನು ತೀವ್ರವಾಗಿ ಸೆಳೆದದ್ದು ರೋಡೋಡೆಂಡ್ರಾನ್‌ ಹೂವುಗಳು. ಅವುಗಳ ನಿರ್ಮಲ ಚೆಲುವನ್ನು ಕಂಡು ನಾನು ಮಾರುಹೋಗಿದ್ದೆ. ಒಂದಷ್ಟು ಚಿತ್ರಗಳನ್ನು ಕೊಂಡು ನನ್ನ ನೆನಪಿನ ಆಲ್ಬಮ್ಗೆ ಸೇರಿಸಿದ್ದೆ (ಇಂದು ಅವು ಮಾಸಿಹೋಗಿವೆ). ಡಿಜಿಟಲ್ ಛಾಯಾಗ್ರಹಣ ಬಂದ ಮೇಲೆ ಹಿಮಾಲಯದ ಪ್ರತಿ ಪ್ರವಾಸದಲ್ಲೂ ರೋಡೋಡೆಂಡ್ರಾನ್‌ಗಳ ಫೋಟೋ ತೆಗೆಯುವುದು ನನ್ನ ಹವ್ಯಾಸವೇ ಆಗಿಹೋಯಿತು. ನಂಬಲೇ ಆಗದು, ಅದೆಷ್ಟು ಬಗೆಯ ರೋಡೋಡೆಂಡ್ರಾನ್‌ಗಳು! ಅವುಗಳ ವರ್ಣ ವೈವಿಧ್ಯತೆಯಿಂದಲೇ ಅವುಗಳ ಭಿನ್ನತೆಯನ್ನು ಗುರುತಿಸಬೇಕು. ಕೆಲವು ನೆಲಮಟ್ಟದಲ್ಲಿ ಹೂವು ಅರಳಿಸಿದರೆ, ಮತ್ತೆ ಕೆಲವು ದೈತ್ಯ ಮರಗಳಾಗಿ ಬೆಳೆದು ಹೂದಳೆಯುತ್ತವೆ. ಕೆಲವೊಮ್ಮೆ ಬೆಟ್ಟ ಬೆಟ್ಟವೇ ಒಂದೇ ಬಗೆ ಅಥವಾ ಬೇರೆ ಬೇರೆ ಬಣ್ಣಗಳಲ್ಲಿ ಮಿಂದು ಕಂಗೊಳಿಸುವ ದೃಶ್ಯವನ್ನು ನೋಡಿಯೇ ಅನುಭವಿಸಬೇಕು. ರೋಡೋಡೆಂಡ್ರಾನ್‌ ಎಂಬ ಶಬ್ದ ಗ್ರೀಕ್‌ನ `ರೋಡಾನ್‌’ ಅಂದರೆ ಗುಲಾಬಿ ಮತ್ತು `ಡೆಂಡ್ರಾನ್‌’ ಅಂದರೆ ಮರ ಎಂಬ ಶಬ್ದಗಳಿಂದ ವ್ಯುತ್ಪತ್ತಿ ಹೊಂದಿದೆ. ಗುಲಾಬಿಗಳಲ್ಲಿರುವ ವರ್ಣ ವೈವಿಧ್ಯತೆ ಹಾಗೂ ದೊಡ್ಡ ಗಿಡಮರಗಳಲ್ಲಿ ಅರಳುವುದರಿಂದ ಈ ಹೆಸರು ಅರ್ಧ ರೂಪಕವಾಗಿ, ಅರ್ಧ ವಾಸ್ತವವಾಗಿ ಬಳಕೆಯಲ್ಲಿದೆ.

ನಮ್ಮ ಹಿಮಾಲಯದಲ್ಲಿ 107 ಪ್ರಭೇದದ ರೋಡೋಡೆಂಡ್ರಾನ್‌ಗಳನ್ನು ಗುರುತಿಸಲಾಗಿದೆ. 800 ಮೀ. ಎತ್ತರದಿಂದ ಹಿಡಿದು 5000 ಮೀ. ಎತ್ತರದವರೆಗೂ ಇವು ಬೆಳೆಯುವುದನ್ನು ನಾವು ಕಾಣಬಹುದು. ಚಳಿಗಾಲ ಮುಗಿಯುವ ಹೊತ್ತಿಗೆ ಇವು ಅರಳಲು ಶುರುವಾದರೆ ಬೇಸಿಗೆಯ ನಡುವಿನವರೆಗೂ ತಮ್ಮ ಸೊಬಗನ್ನು ಚೆಲ್ಲುತ್ತವೆ.

ಸದಾ ತಂಪು ಹವೆಯನ್ನು ಬೇಡುವುದರಿಂದ ರೋಡೋಡೆಂಡ್ರಾನ್‌ಗಳನ್ನು ನಮಗಿಷ್ಟ ಬಂದ ಕಡೆಯಲ್ಲಿ ಬೆಳೆಸಲು ಸಾಧ್ಯವಿಲ್ಲ (ಹಿಮಾಲಯ ಬಿಟ್ಟರೆ ದಕ್ಷಿಣದ ಕೊಡೈಕೆನಾಲ್ ಮತ್ತು ಊಟಿಗಳಲ್ಲಿ ಇವನ್ನು ಬೆಳೆಯುವ ಪ್ರಯತ್ನ ಯಶಸ್ವಿಯಾಗಿದೆ). ನಮ್ಮ ಕೈತೋಟದಲ್ಲಿ ಗುಲಾಬಿ ಅರಳಿಸಿ ನಲಿಯಬಹುದು, ನಿಜ. ಆದರೆ ರೋಡೋಡೆಂಡ್ರಾನ್‌ಗೆ ಆ ಭಾಗ್ಯವಿಲ್ಲ. ಹೀಗಾಗಿ ಫೆಬ್ರವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ನಾವು ಹಿಮಾಲಯಕ್ಕೆ ಭೇಟಿಕೊಟ್ಟರೆ ಒಂದಲ್ಲ ವಿವಿಧ ಬಗೆಯ ರೋಡೋಡೆಂಡ್ರಾನ್‌ ಹೂವುಗಳನ್ನು ಕಾಣಬಹುದು.

ರೋಡೋಡೆಂಡ್ರಾನ್‌ ನೇಪಾಳದ ರಾಷ್ಟ್ರೀಯ ಪುಷ್ಪವಾಗಿದೆ. ಇಲ್ಲಿ ಅದರ ಕಾಡು ಕಾಡುಗಳನ್ನೇ ಸಂರಕ್ಷಿಸಲಾಗಿದೆ. ಏಪ್ರಿಲ್‌ ತಿಂಗಳಲ್ಲಿ `ರೋಡೋಡೆಂಡ್ರಾನ್‌ ಚಾರಣವನ್ನು ಏರ್ಪಡಿಸಿ ದೇಶವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ. ಅವರು ರೋಡೋಡೆಂಡ್ರಾನ್‌ ಹೂವುಗಳ ಛಾಯಾಗ್ರಹಣ ಮತ್ತು ಅಧ್ಯಯನದಲ್ಲಿ ತೊಡಗಲು ಉತ್ತೇಜನ ನೀಡಲಾಗುತ್ತದೆ. ಕಲಾವಿದರು ಕುಂಚದಲ್ಲಿ ಅವುಗಳ ಸೌಂದರ್ಯವನ್ನು ಸಾಕಾರಗೊಳಿಸಬಹುದು. ನಮ್ಮ ಹಿಮಾಲಯದಲ್ಲೂ ಈ ಬಗೆಯ ಚಟುಟಿಕೆಗಳನ್ನು ಹಮ್ಮಿಕೊಂಡರೆ ಮನುಷ್ಯರು ಹೆಚ್ಚು ಹೆಚ್ಚು ನಿಸರ್ಗಕ್ಕೆ ಹತ್ತಿರವಾಗಬಹುದು. ಜಾಗತಿಕ ತಾಪ ಏರಿಕೆಯ ದುಷ್ಪರಿಣಾಮಗಳು ರೋಡೋಡೆಂಡ್ರಾನ್‌ಗಳ ಮೇಲೂ ಆಗುತ್ತವೆ ಎಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ತಾವು ಸಾಮಾನ್ಯವಾಗಿ ಅರಳಬೇಕಾದ ಅವಧಿಗಿಂತ ಮುಂಚೆಯೇ ಅರಳಿಬಿಡುವ ಅವುಗಳ ವಿಚಿತ್ರ ವರ್ತನೆಯನ್ನು ದಾಖಲಿಸಲಾಗಿದೆ. ಏಪ್ರಿಲ್‌ನಲ್ಲಿ ನಿರ್ದಿಷ್ಟವಾಗಿ ಅರಳುವ ಒಂದು ಅಪರೂಪದ ಪ್ರಭೇದದ ಫೋಟೋ ತೆಗೆಯಬೇಕೆಂದು ಹಿಮಾಲಯಕ್ಕೆ ಬಂದರೆ `ಸಾಬ್‌, ಆ ಜಾತಿಯದು ಆಗಲೇ ಮಾರ್ಚ್‌ ತಿಂಗಳಲ್ಲಿ ಅರಳಿಬಿಟ್ಟಿತು. ಈಗೆಲ್ಲಿದೆ?’ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. `ಅಯ್ಯಯ್ಯೋ…, ಹೀಗಾಯಿತಲ್ಲ’ ಎಂದು ಕೈ ಕೈ ಹಿಸುಕಿಕೊಳ್ಳುವುದಷ್ಟೆ ನಮ್ಮ ಪಾಲಿಗಿರುತ್ತದೆ. ವಿಷಯ ಏನೇ ಇರಲಿ ಹಿಮಾಲಯಕ್ಕೆ ಭೇಟಿ ಕೊಟ್ಟಾಗ ರೋಡೋಡೆಂಡ್ರಾನ್‌ಗಳನ್ನು ಕಾಣುವ ಅವಕಾಶ ನಿಮಗಿರಲಿ. ನಿಮ್ಮ ಪ್ರವಾಸದ ಅನುಭವಗಳು ಬಣ್ಣ ಬಣ್ಣಗಳಿಂದ ಲೇಪನಗೊಂಡು ಸುಮಧುರವೆನಿಸಲಿ.

– ಕೆ.ಎಸ್‌. ರವಿಕುಮಾರ್‌  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ