ಮಕ್ಕಳನ್ನು ಮುಂದಿನ ಸತ್ಪ್ರಜೆಗಳಾಗಿಸಲು, ಈಗೆಲ್ಲ ಅನೇಕ ಆಧುನಿಕ ಸೌಲಭ್ಯಗಳಿವೆ. ಅದರ ಜೊತೆಗೆ ಈ ಅತ್ಯಗತ್ಯ, ಮೂಲಭೂತ ವಿಶೇಷ ವಿಷಯಗಳನ್ನೂ ಖಂಡಿತಾ ಕಲಿಸಿಕೊಡಿ!
ಯಾವ ರೀತಿ ಹಸಿ ಮಣ್ಣನ್ನು ಕಲಸಿ, ನಮಗೆ ಬೇಕಾದ ಆಕಾರ ನೀಡಬಹುದಾಗಿದೆಯೋ, ಅದೇ ತರಹ ಮಕ್ಕಳನ್ನು ಮೊದಲಿನಿಂದಲೇ ಉತ್ತಮ ರೀತಿಯಲ್ಲಿ ತಿದ್ದಿ ತೀಡಿ, ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡಿದರೆ, ದೊಡ್ಡವರಾದ ಮೇಲೆ ಅವರು ಖಂಡಿತಾ ಸತ್ಪ್ರಜೆಗಳಾಗುತ್ತಾರೆ. ಅದು ಜೀವನವಿಡೀ ಅವರ ಜೊತೆಗಿದ್ದು, ತಮ್ಮ ಮುಂದಿನ ಪೀಳಿಗೆಯನ್ನೂ ಹಾಗೇ ಬೆಳೆಸುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಬಲು ಅವಶ್ಯಕ. ಇದು ವ್ಯಕ್ತಿಯನ್ನು ಜೀವನದ ಪ್ರತಿ ಸಂಘರ್ಷವನ್ನು ಸಹಜವಾಗಿ ಎದುರಿಸಲು ತಯಾರಿ ನೀಡುತ್ತದೆ. ಮಕ್ಕಳಲ್ಲಿ ಈ ಗುಣಗಳು ಚಿಕ್ಕ ವಯಸ್ಸಿನಿಂದಲೇ ವಿಕಾಸಗೊಂಡರೆ, ಅದು ಜೀವನವಿಡೀ ಅವರ ಕೈಹಿಡಿಯುತ್ತದೆ.
ಮಕ್ಕಳಲ್ಲಿ ಸ್ವಾವಲಂಬನೆಯ ಭಾವನೆ ಬೆಳೆದು ವಿಕಾಸಗೊಳ್ಳಲು ಅವರು ಬೆಳೆಯುತ್ತಿರುವ ಮನೆಯ ವಾತಾವರಣ ಪೂರಕವಾಗಿರಬೇಕು. ಹಾಗಿದ್ದಾಗ ಅವಕ್ಕೆ ಸಹಜವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮಕ್ಕಳ ವ್ಯವಹಾರ ಮತ್ತು ವ್ಯಕ್ತಿತ್ವದಲ್ಲಿ ಸುಧಾರಣೆ ಮೂಡಲು ಅವರ ತಾಯಿತಂದೆ, ಮನೆಯ ಹಿರಿಯರು, ಅಧ್ಯಾಪಕರು, ಫ್ರೆಂಡ್ಸ್, ಸಹಪಾಠಿಗಳು ಪ್ರಧಾನ ಪಾತ್ರ ವಹಿಸುತ್ತಾರೆ. ಯಾವ ಮಗುವಿಗೆ ಉತ್ತಮ ಸಹಕಾರ, ಸಹಯೋಗ, ಪ್ರೋತ್ಸಾಹ, ಸಮರ್ಪಕ ಮಾರ್ಗದರ್ಶನ ಸಿಗುತ್ತದೋ ಅಂಥ ಮಗು ಉತ್ತಮ ವ್ಯಕ್ತಿಯಾಗಿ ವಿಕಾಸಗೊಳ್ಳುತ್ತದೆ. ಆಗ ಅವರಲ್ಲಿ ಸ್ವಾಭಿಮಾನದ ಭಾವನೆಯೂ ಜಾಗೃತವಾಗುತ್ತದೆ.
ಮಕ್ಕಳು ಸ್ವಾವಲಂಬನೆ ಕಲಿಯಲು, ತಮ್ಮ ನಿರ್ಧಾರಗಳ ಬಗ್ಗೆ ಭರವಸೆ ಹೊಂದಿರಬೇಕು. ಈ ನಿರ್ಧಾರಗಳ ಪರಿಣಾಮ ಎದುರಿಸಲು ಸಿದ್ಧರಿರಬೇಕು. ಒಬ್ಬ ವ್ಯಕ್ತಿ ದೃಢ ಆತ್ಮವಿಶ್ವಾಸ ಹೊಂದಿದ್ದಾಗ ಮಾತ್ರ ಅವನು ಜೀವನದ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನೂ ಸುಲಭವಾಗಿ ಎದುರಿಸಬಲ್ಲ. ಮಕ್ಕಳಲ್ಲಿ ಇಂಥ ತುಂಬು ಆತ್ಮವಿಶ್ವಾಸ ಬೆಳೆಸಬೇಕು. ಇದು ಕಷ್ಟ ಎಂಬುದೇನೋ ನಿಜ, ಆದರೆ ಇದು ಅತ್ಯಗತ್ಯ. ಹೀಗಾಗಿ ನಿಧಾನವಾದರೂ ಸರಿ, ಮಕ್ಕಳಿಗೆ ಈ ಭಾವನೆ ಬಲಿಯುವಂತೆ ಕಲಿಸಿ, ಇದರಿಂದ ಮುಂದೆ ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.
ಉದಾಹರಣೆ ನೀಡಿ ಕಲಿಸಿರಿ
ಮಕ್ಕಳ ಎಲ್ಲಕ್ಕಿಂತ ದೊಡ್ಡ ಶಕ್ತಿ ಎಂದರೆ ಅವರ ತಾಯಿ ತಂದೆ. ಹೀಗಾಗಿ ಮಕ್ಕಳು ಎಲ್ಲಾ ಹಂತದಲ್ಲೂ ತಮ್ಮ ಹೆತ್ತವರನ್ನು ಅನುಕರಿಸುವ ಕೆಲಸ ಮಾಡುತ್ತವೆ. ಹೀಗಾಗಿ ತಾಯಿ ತಂದೆ ಹೆಚ್ಚಿನ ಆತ್ಮವಿಶ್ವಾಸದಿಂದ ಕೂಡಿದ್ದರೆ ಮಾತ್ರ, ಮಕ್ಕಳು ಸಹ ಅದನ್ನು ಸುಲಭವಾಗಿ ರೂಢಿಸಿಕೊಳ್ಳಲು ಸಾಧ್ಯ. ಮಕ್ಕಳನ್ನು ನಿಯಂತ್ರಿಸುವ ನೆಪದಲ್ಲಿ ಸದಾ ಅವರನ್ನು ಬೈಯುವ, ಹೊಡೆಯುವ ತಾಯಿ ತಂದೆ, ಸಣ್ಣಪುಟ್ಟ ವಿಷಯಕ್ಕೂ ಮಕ್ಕಳ ಮೇಲೆ ಕೈಯೆತ್ತುವ ಹೆತ್ತವರು, ತಮ್ಮ ಮಕ್ಕಳ ಎದುರು ಕೆಟ್ಟ ಉದಾಹರಣೆಗಳಾಗಿ ನಿಲ್ಲುತ್ತಾರೆ, ಜೊತೆಗೆ ಮಕ್ಕಳೆದುರು ತಮ್ಮ ಘನತೆ ಗೌರವಗಳನ್ನೂ ಕಳೆದುಕೊಳ್ಳುತ್ತಾರೆ.
ದೈಹಿಕ, ಮಾನಸಿಕ, ಭಾವನಾತ್ಮಕ ರೂಪಗಳಲ್ಲಿ ಪೀಡಿತರಾದ ಮಕ್ಕಳು ಸಹಜವಾಗಿಯೇ ಸೆಲ್ಫ್ ರೆಸ್ಪೆಕ್ಟ್ ಕಳೆದುಕೊಳ್ಳುತ್ತಾರೆ. ಹೀಗಾಗಿ ತಾಯಿ ತಂದೆ ಆದಷ್ಟೂ ಕಠೋರ ಮಾತುಗಳಿಂದ ಬೈಯದೆ, ಕೈಯೆತ್ತಿ ದಂಡಿಸದೆ, ಪ್ರೀತಿ ವಾತ್ಸಲ್ಯದ ಆದರೆ ಶಿಸ್ತಿನ ಕ್ರಮದಿಂದ ಮಗು ತನ್ನ ತಪ್ಪನ್ನು ಅರಿತು, ತಿದ್ದಿಕೊಂಡು ಮುಂದುವರಿಯುವಂತೆ ಮಾಡಬೇಕು.