ರಾಷ್ಟ್ರ, ಅಂತಾರಾಷ್ಟ್ರೀಯ ಖ್ಯಾತಿಯ ಸಾಧಕರನ್ನು ಕಂಡಾಗೆಲ್ಲಾ ಅವರ ಹಿಂದೆ ಅದೇ ಹಿನ್ನೆಲೆಯ ಕುಟುಂಬ, ಆ ಕ್ಷೇತ್ರದ ಪ್ರಭಾವಿ ವ್ಯಕ್ತಿಗಳ ಪರಿಚಯ ಒಡನಾಟ, ತರತರಹದ ತರಬೇತಿ, ಪ್ರೋತ್ಸಾಹ ಹೀಗೆ ಅವರ ಸುತ್ತ ಅದರದೇ ವಾತಾವರಣ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತದೆ. ಎಷ್ಟೋ ಸಾರಿ ಅಂತಹ ಪರಿಸರ ನಮಗೆ ಲಭಿಸಿದ್ದರೆ ನಾವು ಆ ಎತ್ತರಕ್ಕೆ ಏರುತ್ತಿದ್ದೆವೇನೋ ಎನಿಸುವುದಿದೆ.

ಅದಕ್ಕೆ ಹೊರತಾಗಿ ಪ್ರತಿಭೆ ಎಲ್ಲಿದ್ದರೂ ಎಂತಹ ಪರಸರದಲ್ಲಿದ್ದರೂ ಜಿಗಿದು ಜಗತ್ತನ್ನು ಜಯಿಸಬಲ್ಲದು. ಯಾರ ಮಾರ್ಗದರ್ಶನ ಯಾವ ತರಬೇತಿ ಇಲ್ಲದಿದ್ದರೂ ತಾನೇರುವ ಎತ್ತರವನ್ನು ತಲುಪಬಲ್ಲದು ಎಂಬುದನ್ನು ಸಾಬೀತುಪಡಿಸಿದ ಸಾಧಕಿಯೊಬ್ಬರು ನಮ್ಮೊಡನಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕಿನ ಕಿರುಗುಳಿಗೆ ಎಂಬ ಪುಟ್ಟ ಹಳ್ಳಿಯಲ್ಲಿರುವ ಸ್ವಾತಿ ರವಿ ಅವರ ಯಶೋಗಾಥೆ ಇದು.

1973ರ ಫೆಬ್ರವರಿ 11 ರಂದು ಹೊಸನಗರ ತಾಲ್ಲೂಕಿನ ಎಂಬ ಪುಟ್ಟ ಗ್ರಾಮದ ಹೊಳೆಮನೆ ಎಂಬಲ್ಲಿ ಸರೋಜಮ್ಮ ಮತ್ತು ನರಸಿಂಹ ಜೋಯ್ಸ್ ದಂಪತಿಗಳ ಮಗಳಾಗಿ ಸ್ವಾತಿ ಜನಿಸಿದರು. ನಾಡಿಗೆಲ್ಲಾ ಬೆಳಕಾದ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಹಿನ್ನೆಲೆಯಲ್ಲಿ ಅಲ್ಲಿಂದ ಹುಂಚ ಸಮೀಪದ ಹೊನ್ನೆಬೈಲು ಎಂಬಲ್ಲಿಗೆ ಈ ಕುಟುಂಬದ ವಲಸೆ. ಅಮ್ಮ, ಅಪ್ಪ, ಅಕ್ಕ. ತಮ್ಮನ  ಜೊತೆ ಹುಟ್ಟೂರಿನಿಂದ ಹೊನ್ನೆಬೈಲಿಗೆ ಬಂದ ಸ್ವಾತಿಯನ್ನು ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಲ್ವೇಶ್ವರಕ್ಕೆ ಸೇರಿಸಲಾಯಿತು. ಅಲ್ಲಿ 1 ರಿಂದ 4ನೇ ತರಗತಿವರೆಗೆ ನಂತರ ಹುಂಚ ಶಾಲೆಯಲ್ಲಿ 5 ರಿಂದ 7ನೇ ತರಗತಿವರೆಗೆ ಓದಿ ಅಲ್ಲಿನ  ಪದ್ಮಾಂಭ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಆ ದಿನಗಳಲ್ಲಿ ಶಾಲಾ ಕ್ರೀಡಾಕೂಟದ ಡಿಸ್ಕಸ್‌, ಜಾವೆಲಿನ್‌ ಥ್ರೋಗಳಲ್ಲಿ ರಾಜ್ಯ ಮಟ್ಟದವರೆಗೆ ಸ್ಪರ್ಧಿಸಿ ಜಯ ಗಳಿಸಿದ್ದು ಈ ಗ್ರಾಮೀಣ ಪ್ರತಿಭೆಯ ಬಾಲ್ಯದ ಸಾಧನೆ.

ಉನ್ನತ ವ್ಯಾಸಂಗ ಕನಸಿನ ಮಾತಾಗಿದ್ದ ಅಂದಿನ ಸಾಂಪ್ರದಾಯಿಕ ಕುಟುಂಬದ ಹೆಣ್ಣುಮಗಳು ಪ್ರೌಢಶಿಕ್ಷಣ ಮುಗಿದೊಡನೆ ಕೌಟುಂಬಿಕ ವಾತಾವರಣದೊಳಗೆ ಬಂಧಿಯಾದರು. ಆದರೂ ಗ್ರಾಮೀಣ ಕ್ರೀಡಾಕೂಟ, ದಸರಾ ಕ್ರೀಡಾಕೂಟಗಳಲ್ಲಿ ರಾಜ್ಯ ಮಟ್ಟದವರೆಗೆ ಭಾಗವಹಿಸಿ ಬಹುಮಾನ ಗಳಿಸಿ ತಮ್ಮೊಡಲಿನ ತುಡಿತಕ್ಕೆ ಕೊಂಚ ಸಾಂತ್ವನ ನೀಡುತ್ತಾರೆ. ಇವರಿಗೆ ಯಾರ ಮಾರ್ಗದರ್ಶನ, ತರಬೇತಿಯೂ ಇರಲಿಲ್ಲ. ಸ್ವಯಂ ಅಭ್ಯಾಸವೇ ಇವರ ಗುರು. ಹೀಗಿದ್ದ ಸ್ವಾತಿ 1995, ಜೂನ್‌ 23 ರಂದು ತಮ್ಮದೇ ತಾಲ್ಲೂಕಿನ ಬ್ರಾಹ್ಮಣತರುವೆ ಗ್ರಾಮದ ಕಿರುಗುಳಿಗೆ ಎಂಬ ಪುಟ್ಟ ಹಳ್ಳಿಯಲ್ಲಿದ್ದ ರವಿ ಕೆ.ಎಸ್‌, ಎಂಬುವರೊಂದಿಗೆ ವಿವಾಹವಾದರು. ಅತ್ತೆ, ಮಾವ, ನಾದಿನಿ, ಮೈದುನರೊಂದಿಗೆ ತುಂಬು ಕುಟುಂಬಕ್ಕೆ ಸೇರಿದ ಸ್ವಾತಿಗೆ ಜವಾಬ್ದಾರಿ ಹೆಗಲೇರಿತು. ಜೊತೆಗೆ  6 ವರ್ಷಗಳಲ್ಲಿ ಸ್ನೇಹಾ, ಸೌಮ್ಯಾ, ಸಂಜಯ ಎಂಬ 3 ಮುದ್ದಾದ ಮಕ್ಕಳು ಮಡಿಲು ತುಂಬಿದರು. ಮಕ್ಕಳ ಜವಾಬ್ದಾರಿ, ಹಿರಿಯರ ಆರೈಕೆ, ದನಕರು, ತೋಟಗದ್ದೆ, ಆಳುಕಾಳು, ಅಡುಗೆ ಊಟ ಎಂದು ಮೈತುಂಬಾ ಕೆಲಸ. ಕ್ಷಣ ಬಿಡುವಿಲ್ಲದ ಬದುಕು. ಅಪ್ಪಟ ಗೃಹಿಣಿಯಾಗಿ ಮನೆಯ 4 ಗೋಡೆಯೊಳಗೆ ತಮ್ಮ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಳ್ಳುವ ಅನಿವಾರ್ಯತೆ.  ಇಂತಹ ಬದುಕಿಗೆ ಹೊಂದಿಕೊಂಡು ಸುಮಾರು 12 ವರ್ಷ ಸಂತಸದಿಂದ ಸಾಂಸಾರಿಕ ಜೀವನ ಸವೆಸಿದರೂ ಆಂತರ್ಯದಲ್ಲಿ ಆಟದ ಹಂಬಲ ಜೀವಂತವಾಗಿತ್ತು. ಅದನ್ನರಿತ ಅಪಾರ ಕ್ರೀಡಾಭಿಮಾನಿಯೂ, ವಿಶಾಲ ಮನೋಭಾವದವರೂ ಆದ ಪತಿ ರವಿ 2007ರಲ್ಲಿ ಪುನಃ ಹೊರ ಜಗತ್ತಿಗೆ ತಮ್ಮ ಮಡದಿ ಅಡಿ ಇಡಲು ಪ್ರೋತ್ಸಾಹದ ನೀರೆರೆದರು. `ಇಳಿಗ್ಯಾಕಪ್ಪಾ ಈ ವಯಸ್ಸಿಲ್ಲಿ ಇಂತಹ ಹುಚ್ಚು?’ ಎಂಬ ಕುಹಕದ ಮಾತುಗಳಿಗೆಲ್ಲಾ ಕಿವಿಗೊಡದೇ, ಸ್ವಾತಿ ನಿರ್ಲಿಪ್ತತೆಯಿಂದ ಅವಕಾಶಗಳನ್ನು ಬಳಸಿಕೊಳ್ಳುತ್ತಾ ತಮ್ಮ ಗುರಿಯತ್ತ ದೃಷ್ಟಿ ನೆಟ್ಟರು.

2007 ರಿಂದ 2011-12ರವರೆಗೆ ಸತತವಾಗಿ 5 ವರ್ಷ ದಸರಾ ಕ್ರೀಡಾಕೂಟದಲ್ಲಿ ಜಾವೆಲಿನ್‌, ಡಿಸ್ಕಸ್‌ ಮತ್ತು ಶಾಟ್‌ಪುಟ್ ಎಸೆತಗಳಲ್ಲಿ ರಾಜ್ಯ ಮಟ್ಟದ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. 2013-14 ಸ್ವಾತಿಯವರ ಬದುಕಿನ ಬಹು ದೊಡ್ಡ ದಿನ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗುವ ಕನಸು ನನಸಾಗುವ ಸಮಯ. ರಾಜೀವ್ ‌ಗಾಂಧಿ ಖೇಲ್ ‌ಅಭಿಯಾನದಡಿ ನಡೆಸುವ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ಸಂಭ್ರಮ. 2014ರ ನವೆಂಬರ್‌ನಲ್ಲಿ ಶ್ರೀಲಂಕಾದ ಡಯಾಗಾಮೇಯ ಮಹೇಂದ್ರ ರಾಜ ಪಕ್ಸೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತದ ಪ್ರತಿನಿಧಿಯಾಗಿ ಹೋಗಿ ತಮ್ಮ ಜೀವನದ ಸಾರ್ಥಕ ಕ್ಷಣ ಕಂಡುಕೊಂಡರು. ಜೊತೆಗೆ ಸ್ಪರ್ಧಿಸಿದ 3 ಆಟಗಳಲ್ಲಿ ಅಂದರೆ ಶಾಟ್‌ಪುಟ್‌ನಲ್ಲಿ ಪ್ರಥಮ, ಡಿಸ್ಕಸ್‌ನಲ್ಲಿ ದ್ವಿತೀಯ, ಜಾವೆಲಿನ್‌ ಥ್ರೋನಲ್ಲಿ ತೃತೀಯ ಸ್ಥಾನದೊಂದಿಗೆ ರೋಮಾಂಚಕ ಗೆಲುವು ಪಡೆದು ಹೆಮ್ಮೆಯಿಂದ ಸಂಭ್ರಮಿಸಿದರು. ಇದು ಮಲೆನಾಡಿನ ದಟ್ಟ ಮೂಲೆಯ ಗೃಹಿಣಿಯೊಬ್ಬರ ದಿಟ್ಟ ಸಾಧನೆಯಾಗಿದೆ.

ಹೀಗೆ ಸವಾಲುಗಳನ್ನೇ ಮೇಲೇರುವ ಮೆಟ್ಟಲನ್ನಾಗಿಸಿಕೊಂಡು ಸ್ವಾತಿ, ಹರಿಯಾಣಾದಲ್ಲಿ ನಡೆದ 2014-15ರ ರಾಷ್ಟ್ರ ಮಟ್ಟದ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಜಾವೆಲಿನ್‌, ಡಿಸ್ಕಸ್‌ ಮತ್ತು ಶಾಟ್‌ಪುಟ್‌ಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಆದರೆ ಕೌಟುಂಬಿಕ ಕಾರಣಗಳಿಂದ 2015ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಹಾಗೆಂದು ನಿರಾಶರಾಗದೇ, 2015-16ರ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ ಶಾಟ್‌ಪುಟ್‌, ಡಿಸ್ಕಸ್‌ ಮತ್ತು ಜಾವೆಲಿನ್‌ಗಳಲ್ಲಿ ಪ್ರಥಮ ಸ್ಥಾನ ಗಳಿಸಿ, ಮಾರ್ಚ್‌ನಲ್ಲಿ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ  ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಈ ಪ್ರತಿಭೆಯ ಸಾಧನೆಗೆ ನಿರಂತರ ಯಶಸ್ಸು ಸಿಗಲೆಂಬ ಆಶಯ ಗೃಹಶೋಭಾ ಮತ್ತು ಓದುಗ ಸಮುದಾಯದ್ದು. ಹಾಗೆಯೇ ಸರ್ಕಾರದಿಂದಲೂ ಸಹಕಾರ, ಪ್ರೋತ್ಸಾಹ ಸಿಕ್ಕಿದರೆ ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹದ ಜೊತೆಗೆ ದೇಶದ ಕೀರ್ತಿಯೂ ಬೆಳಗಬಲ್ಲದು.

ಡಾ. ಕೆ.ಎನ್‌. ಅಂಜಲಿ ಅಶ್ವಿನ್

Tags:
COMMENT