ಅಮೆರಿಕಾದ ದೈತ್ಯ ಬಾಹ್ಯಾಕಾಶ ಸಂಸ್ಥೆ ನಾಸಾದ 22 ವರ್ಷ ಹಳೆಯ ಸ್ವಿಫ್ಟ್ ಬಾಹ್ಯಾಕಾಶ ದೂರದರ್ಶಕ/ಟೆಲಿಸ್ಕೋಪ್ ( Swift Space Telescope ) ತನ್ನ ಪಯಣವನ್ನು ಅಂತ್ಯಗೊಳಿಸಿದೆ. ಈ ಟೆಲಿಸ್ಕೋಪ್ ಬಾಹಾಕ್ಯಾಶದಿಂದ ಭೂಮಿಯತ್ತ ಮರಳಿದ್ದು ಇದೀಗ ಇಂಡೋನೇಷ್ಯಾದ ವಾತಾವರಣದಲ್ಲಿ ಪತನಗೊಂಡ ಸುಟ್ಟು ಭಸ್ಮವಾಗಿದೆ.
ಸುಮಾರು 2 ದಶಕಗಳ ಕಾಲ ಬಾಹ್ಯಾಕಾಶದಲ್ಲಿ ಬ್ರಹ್ಮಾಂಡದ ಕೆಲವು ಶಕ್ತಿಶಾಲಿ ಗಾಮಾ-ಕಿರಣಗಳ ಸ್ಪೋಟ ಸೇರಿ ವಿಸ್ಮಯಕಾರಿ ವಿಚಾರಗಳನ್ನು ಸೆರೆಹಿಡಿದು ಅಧ್ಯಯನ ಮಾಡಿದ ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ವೀಕ್ಷಣಾಲಯದ ಜೀವಿತಾವಧಿಯನ್ನು ವಿಸ್ತರಿಸುವಲ್ಲಿ ನಾಸಾ ನಡೆಸಿದ ರಕ್ಷಣಾ ಕಾರ್ಯಾಚರಣೆ ವಿಫಲವಾದ 3 ತಿಂಗಳ ಬಳಿಕ ಇದೀಗ ಈ ಟೆಲಿಸ್ಕೋಪ್ ಭೂಮಿಗೆ ಮರಳಿ ಪತನವಾಗಿದೆ.
ತನ್ನ 22 ವರ್ಷದ ಪಯಣವನ್ನು ಮುಗಿಸಿದ ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಟೆಲಿಸ್ಕೋಪ್ ನವೆಂಬರ್ 04ರಂದು ಬೆಳಿಗ್ಗೆ 7.39 EST ಸುಮಾರಿಗೆ ಇಂಡೋನೇಷ್ಯಾದ ಉತ್ತರ ಸುಮಾತ್ರಾ ಪ್ರಾಂತ್ಯದ ವಾತಾವರಣದಲ್ಲಿ 3 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 99 ಡಿಗ್ರಿ ಪೂರ್ವ ರೇಖಾಂಶದ ಬಳಿ ಮರುಪ್ರವೇಶಿಸಿದೆ ಎಂದು US ಬಾಹ್ಯಾಕಾಶ ಪಡೆಯ ಟ್ರ್ಯಾಕಿಂಗ್ ದತ್ತಾಂಶವು ತಿಳಿಸಿದೆ. ಈ ಬಳಿಕ ಈ ಟೆಲಿಸ್ಕೋಪ್ ಶಬ್ದದ ವೇಗಕ್ಕಿಂತ ಸುಮಾರು 22 ಪಟ್ಟು ಹೆಚ್ಚು ಪ್ರಯಾಣಿಸಿದೆ ಎಂದು ನಾಸಾ ಸಂಸ್ಥೆ ತಿಳಿಸಿದೆ.
ಈ ಸ್ವಿಫ್ಟ್ ಬಾಹ್ಯಾಕಾಶ ಟೆಲಿಸ್ಕೋಪ್ ರಕ್ಷಣೆ ವಿಫಲವಾದ ಬಳಿಕ ಇದು ತೀವ್ರವಾದ ಘರ್ಷಣೆಯ ಶಾಖದಿಂದಾಗಿ 1,452 ಕೆಜಿ ತೂಕದ ಬಾಹ್ಯಾಕಾಶ ನೌಕೆಯ ಹೆಚ್ಚಿನ ಭಾಗವು ಸುಟ್ಟುಹೋಗುತ್ತದೆ ಎಂದು ನಾಸಾ ನಿರೀಕ್ಷಿಸಿತ್ತು. ಇದರ ಶಿಲಾಖಂಡರಾಶಿಗಳು ಭೂಮಿಯ ಮೇಲೆ ಬೀಳುವ ಅಪಾಯ ತುಂಬಾ ಕಡಿಮೆಯಾಗಿದ್ದು, ಇದರ ಪತನದಿಂದ ಭೂಮಿಯ ಮೇಲೆ 2,100 ರಲ್ಲಿ ಕೇವಲ ಒಬ್ಬರಿಗೆ ಹಾನಿ ಮಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಿತ್ತು. ಸದ್ಯ ಈ ಪತನದ ಬಳಿಕ ಟೆಲಿಸ್ಕೋಪ್ನ ಕೆಲವು ಭಗ್ನಾವಶೇಷಗಳು ಉಳಿದುಕೊಂಡಿರಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ, ಇದರ ಪತನದಿಂದಾಗಿ ಈವರೆಗೂ ಯಾವುದೇ ಹಾನಿ ಅಥವಾ ಗಾಯಗಳು ವರದಿಯಾಗಿಲ್ಲ.
2004ರ ನ.20ರಂದು ಕೇಪ್ ಕೆನವೆರಲ್ನಿಂದ ಡೆಲ್ಟಾ 2 ರಾಕೆಟ್ನ ಮೇಲೆ ಉಡಾವಣೆ ಮಾಡುವ ಮೂಲಕ ಸ್ವಿಫ್ಟ್ ಬಾಹ್ಯಾಕಾಶ ಟೆಲಿಸ್ಕೋಪ್ ಅನ್ನು ನಾಸಾ ಬಾಹ್ಯಾಕಾಶ ಕಕ್ಷೆಗೆ ಕಳುಹಿಸಿತ್ತು. ಇದನ್ನು ಆರಂಭಿಕವಾಗಿ ಕೇವಲ 2 ವರ್ಷಗಳ ಕಾಲದವರೆಗೆ ಕಾರ್ಯ ನಿರ್ವಹಿಸಿ ಬಾಹ್ಯಾಕಾಶದಲ್ಲಿ ಅತ್ಯಂತ ಶಕ್ತಿಶಾಲಿ ಸ್ಫೋಟಗಳಲ್ಲಿ ಒಂದಾದ ಗಾಮಾ-ಕಿರಣ ಸ್ಫೋಟಗಳನ್ನು ಅಧ್ಯಯನ ಮಾಡಲು ನಾಸಾ ವಿನ್ಯಾಸಗೊಳಿಸಿತ್ತು. ಆದರೆ, ಬರೋಬ್ಬರಿ 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ.
ಈ ಸ್ವಿಫ್ಟ್ ಬಾಹ್ಯಾಕಾಶ ಟೆಲಿಸ್ಕೋಪ್ ಬರೋಬ್ಬರಿ 2,000 ಕ್ಕೂ ಹೆಚ್ಚು ಗಾಮಾ-ಕಿರಣ ಸ್ಫೋಟಗಳನ್ನು ಅಧ್ಯಯನ ಮಾಡಿದ್ದು, 1,400 ಕ್ಕೂ ಹೆಚ್ಚು ಸೂಪರ್ನೋವಾಗಳನ್ನು ಅಧ್ಯಯನ ಮಾಡಿದೆ. ಅಷ್ಟೇ ಅಲ್ಲದೆ, ಈ ಅವಧಿಯಲ್ಲಿ ಸ್ವಿಫ್ಟ್ ಬಾಹ್ಯಾಕಾಶ ಟೆಲಿಸ್ಕೋಪ್ ಗಾಮಾ-ಕಿರಣ ಸ್ಪೋಟ, ಸೂಪರ್ನೋವಾಗಳು, ಕಪ್ಪು ಕುಳಿಗಳು, ಎಕ್ಸ್-ರೇ ಜ್ವಾಲೆಗಳು, ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳನ್ನು ಗಮನಿಸಿದ್ದು, ಈ ಮೂಲಕ ಈ ಟೆಲಿಸ್ಕೋಪ್ ಬರೋಬ್ಬರಿ 7 ಸಾವಿರ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳಿಗೆ ಕೊಡುಗೆ ನೀಡಿದೆ.
ಎರಡು ದಶಕಕ್ಕೂ ಅಧಿಕ ಕಾಲ ಬಾಹ್ಯಾಕಾಶದಲ್ಲಿ ಬ್ರಹ್ಮಾಂಡದ ವಿಸ್ಮಯಗಳನ್ನು ಸೆರೆಹಿಡಿದ ಸ್ವಿಫ್ಟ್ ಬಾಹ್ಯಾಕಾಶ ಟೆಲಿಸ್ಕೋಪ್ ಈ ವರ್ಷ ಅಕ್ಟೋಬರ್ 20ರಂದು ತನ್ನ ಅಂತಿಮ ವೀಕ್ಷಣೆಯನ್ನು ದಾಖಲಿಸಿದೆ. ಇದಕ್ಕೂ ಮುನ್ನ ಜುಲೈನಲ್ಲೇ ನಾಸಾ ಈ ಟೆಲಿಸ್ಕೋಪ್ನ ಅವಧಿಯನ್ನು ವಿಸ್ತರಿಸಲು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಬಾಹ್ಯಾಕಾಶ ನೌಕೆಯನ್ನು ಉಳಿಸಲು ಪ್ರಯತ್ನಿಸಲು ನಾಸಾ ಕ್ಯಾಟಲಿಸ್ಟ್ ಸ್ಪೇಸ್ ಅನ್ನು ಕಳುಹಿಸಿದೆ. ಆದಾಗ್ಯೂ, ಇದು ವಿಫಲವಾಗಿದ್ದು, ಕೊನೆಗೆ ಇದೀಗ ಪತನಗೊಳ್ಳುವ ಮೂಲಕ ತನ್ನ ಬಾಹ್ಯಾಕಾಶ ಪಯಣವನ್ನು ಅಂತ್ಯಗೊಳಿಸಿದೆ.





