ಭಾರತದ ಬ್ಯಾಡ್ಮಿಂಟನ್ ತಾರೆ ತನ್ವಿ ಶರ್ಮಾ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಸಾಧಿಸಿದ್ದಾರೆ. ಕೇವಲ 17 ವರ್ಷ ವಯಸ್ಸಿನಲ್ಲಿ, ಅವರು ತೈಪೆ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಭಾನುವಾರ (ಆಗಸ್ಟ್ 2) ನಡೆದ ಫೈನಲ್ ಪಂದ್ಯದಲ್ಲಿ, ತನ್ವಿ ವಿಯೆಟ್ನಾಂನ ಆರನೇ ಶ್ರೇಯಾಂಕದ ಥುಯ್ ಲಿನ್ ನ್ಗುಯೆನ್ ಅವರನ್ನು 21-16, 21-16 ಅಂತರದಿಂದ ಸೋಲಿಸಿ ತಮ್ಮ ಮೊದಲ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 300 ಪ್ರಶಸ್ತಿಯನ್ನು ಗೆದ್ದರು.
ಈ ಗಮನಾರ್ಹ ಗೆಲುವಿನೊಂದಿಗೆ, ತನ್ವಿ ಸೈನಾ ನೆಹ್ವಾಲ್ ನಂತರ ತೈಪೆ ಓಪನ್‌ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ಮೊದಲ ಆಟಗಾರ್ತಿ ಎನಿಸಿಕೊಂಡರು.
ಸೈನಾ 2008ರ ಋತುವಿನಲ್ಲಿ ಇಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ಭಾರತದ 17 ವರ್ಷಗಳ ಪ್ರಶಸ್ತಿ ಕಾಯುವಿಕೆಯನ್ನು ತನ್ವಿ ಕೊನೆಗೊಳಿಸಿದ್ದಾರೆ.
ಕೇವಲ 36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ತನ್ವಿ ಕೋರ್ಟ್‌ನಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಮೊದಲ ಪಂದ್ಯದಲ್ಲಿ, ಅತ್ಯುತ್ತಮ ನೆಟ್ ನಿಯಂತ್ರಣ, ಅತ್ಯುತ್ತಮ ಡ್ರಾಪ್ ಶಾಟ್‌ಗಳು ಮತ್ತು ಕ್ರಾಸ್-ಕೋರ್ಟ್ ಸ್ಮ್ಯಾಶ್‌ಗಳಿಂದಾಗಿ ಅವರು ಆರಂಭಿಕ ಮುನ್ನಡೆ ಸಾಧಿಸಿದರು. ಮಧ್ಯದಲ್ಲಿ ಕೆಲವು ತಪ್ಪುಗಳು ನ್ಗುಯೆನ್‌ಗೆ ಮತ್ತೆ ಚೇತರಿಸಿಕೊಳ್ಳಲು ಅವಕಾಶ ನೀಡಿದ್ದರೂ, ತನ್ವಿ ತನ್ನ ಹಿಡಿತವನ್ನು ಕಾಯ್ದುಕೊಂಡು ಆರಂಭಿಕ ಗೇಮ್ಅನ್ನ 21-16 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.





