ದೇವರ ಪಾದ ಸೇರಿದ್ದ ಹೂವು ಮತ್ತು ತುಳಸೀಗಳಿಗೆ ಹೊಸ ಬದುಕು ಕೊಟ್ಟ ಭಾರತೀಯ ಉದ್ಯಮಿಗಳು – ಆಯುರ್ವೇದ ಔಷಧಿ, ಧೂಪ, ಗೊಬ್ಬರ, ಸಾಬೂನು, ಅಲಂಕಾರಿಕ ವಸ್ತುಗಳಿಂದ ಬಯೋ-ಲೆದರ್‌ವರೆಗೆ
ಹೂವು ಎಂದರೆ ಸೌಂದರ್ಯ, ಪರಿಮಳ, ಭಕ್ತಿ ಮತ್ತು ಶುಭದ ಸಂಕೇತ. ಮದುವೆ, ಗೃಹಪ್ರವೇಶ, ಹಬ್ಬ, ಪೂಜೆ, ದೇವಾಲಯದ ಆರಾಧನೆ, ಧಾರ್ಮಿಕ ಕಾರ್ಯಕ್ರಮ—ಯಾವುದೇ ಶುಭಸಂದರ್ಭವಿರಲಿ, ಹೂವುಗಳಿಗೆ ವಿಶೇಷ ಸ್ಥಾನವಿದೆ. ದೇವರ ಮೂರ್ತಿಗೆ ಅರ್ಪಿಸುವ ಹೂವಿನಿಂದ ಹಿಡಿದು, ಹೂಮಾಲೆ, ನೈವೇದ್ಯದ ಅಲಂಕಾರ, ಮಂಟಪದ ಸಿಂಗಾರ, ಮದುವೆಯ ವೇದಿಕೆ—ಎಲ್ಲೆಡೆ ಹೂವಿನ ಬಳಕೆ ಅಪಾರ. ಆದರೆ ಪೂಜೆ ಮುಗಿದ ಮೇಲೆ? ಮದುವೆ ಮುಗಿದ ಮೇಲೆ? ಹಬ್ಬ ಮುಗಿದ ಮೇಲೆ? ನಿನ್ನೆ ದೇವರ ಪಾದದಲ್ಲಿದ್ದ ಹೂವು ಇಂದು ಕಸದ ಬುಟ್ಟಿಗೆ ಸೇರುತ್ತದೆ. ಕೆಲವೊಮ್ಮೆ ದೇವಸ್ಥಾನದ ಆವರಣದಲ್ಲೇ ರಾಶಿಯಾಗುತ್ತದೆ. ಕೆಲವೊಮ್ಮೆ ಚರಂಡಿಗೆ ಸೇರುತ್ತದೆ. ಇನ್ನೂ ಕೆಲವೆಡೆ ನದಿಗೆ ಎಸೆಯಲಾಗುತ್ತದೆ.
ಇದೇ ಸಮಸ್ಯೆಯಲ್ಲಿ ಕೆಲ ಭಾರತೀಯ ಉದ್ಯಮಿಗಳು ಒಂದು ಅಪೂರ್ವ ಅವಕಾಶವನ್ನು ಕಂಡುಕೊಂಡಿದ್ದಾರೆ. ತ್ಯಾಜ್ಯ ಎಂದು ಬಿಸಾಡುವ ಹೂವಿಗೆ ಮತ್ತೊಂದು ಜೀವನ ಕೊಡಬಾರದೇ? ಎಂಬ ಸರಳ ಪ್ರಶ್ನೆಯಿಂದ ಆರಂಭವಾದ ಪ್ರಯತ್ನ ಇಂದು ಧೂಪ, ಅಗರಬತ್ತಿ, ಗೊಬ್ಬರ, ಸಾಬೂನು, ಸುಗಂಧ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ವಿಗ್ರಹಗಳು ಮಾತ್ರವಲ್ಲದೆ ಹೊಸ ಜೈವಿಕ ವಸ್ತುಗಳವರೆಗೂ ವಿಸ್ತರಿಸಿದೆ. ಅದರಲ್ಲೂ ಕೆಲವು ಉದ್ಯಮಗಳು ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಸಾಮಾಜಿಕ ಉದ್ಯಮಗಳಾಗಿ ಬೆಳೆದಿವೆ. ಹೂವು ಕಸದ ಬುಟ್ಟಿಗೆ ಹೋಗುವುದನ್ನು ತಡೆಯುವುದಷ್ಟೇ ಅಲ್ಲ—ಕಸವನ್ನು ಕಚ್ಚಾ ವಸ್ತುವನ್ನಾಗಿ ಪರಿವರ್ತಿಸಿ ಮೌಲ್ಯ ಸೃಷ್ಟಿಸುವ ಸರ್ಕ್ಯುಲರ್ ಎಕಾನಮಿ ಮಾದರಿಯನ್ನೇ ಈ ಉದ್ಯಮಗಳು ತೋರಿಸಿಕೊಟ್ಟಿವೆ.
ಹೂವಿನ ತ್ಯಾಜ್ಯವೂ ಪರಿಸರ ಸಮಸ್ಯೆಯೇ?
ಹೂವು ನೈಸರ್ಗಿಕವಾದುದೇನೋ ಸರಿ. ಆದರೆ ಅದನ್ನು ಹಾಗೆಯೇ ನದಿಗೆ ಎಸೆದರೆ ಸಮಸ್ಯೆಯೇ ಇಲ್ಲ ಎಂದು ಹೇಳಲಾಗದು. ಹೂವುಗಳನ್ನು ಬೆಳೆಸುವಾಗ ಬಳಸಿದ ಕೀಟನಾಶಕ ಮತ್ತು ರಾಸಾಯನಿಕಗಳ ಅವಶೇಷಗಳು, ಹೂವಿನೊಂದಿಗೆ ಸೇರಿದ ಪ್ಲಾಸ್ಟಿಕ್ ದಾರ, ಪ್ಯಾಕಿಂಗ್ ವಸ್ತುಗಳು, ಪಾಲಿಥಿನ್, ಅಲಂಕಾರಿಕ ವಸ್ತುಗಳು ಮುಂತಾದವು ನೀರು ಮತ್ತು ಮಣ್ಣಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. Phool ಸಂಸ್ಥೆಯೇ ವಿವರಿಸುವಂತೆ, ದೇವಾಲಯಗಳಲ್ಲಿ ಅರ್ಪಿಸಲಾದ ಹೂವುಗಳನ್ನು ನದಿಗೆ ಎಸೆಯುವುದರಿಂದ ಹೂವುಗಳೊಂದಿಗೆ ಕೃಷಿಯಲ್ಲಿ ಬಳಸಿದ ಕೆಲವು ರಾಸಾಯನಿಕಗಳು ನೀರಿಗೆ ಸೇರಬಹುದೆಂಬ ಆತಂಕವಿದೆ. ಅದಕ್ಕಾಗಿಯೇ ಭಕ್ತಿ ಮಾಲಿನ್ಯವಾಗಬಾರದು ಎಂಬ ಪರಿಕಲ್ಪನೆಯೊಂದಿಗೆ ಹೂವುಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಪ್ರಯತ್ನ ಆರಂಭವಾಯಿತು. ಇದೀಗ ಭಾರತದಲ್ಲಿ ಈ ಕ್ಷೇತ್ರದಲ್ಲಿ ಗಮನ ಸೆಳೆದಿರುವ ನಾಲ್ಕು ವಿಭಿನ್ನ ಪ್ರಯತ್ನಗಳನ್ನು ನೋಡೋಣ.
ಉಡುಪಿಯ ಕೃಷ್ಣನಿಗೆ ಪ್ರತೀ ದಿನವೂ ಮಾಡುವ ಲಕ್ಷ ತುಳಸಿ ಅರ್ಪಣೆಯಾದ ಏನು ಮಾಡಲಾಗುತ್ತದೆ?

ನಿತ್ಯ ಲಕ್ಷ ತುಳಸಿ ಅರ್ಚನೆ ಆರಂಭವಾದ ಸಂದರ್ಭದಲ್ಲಿ ಪ್ರತಿದಿನ ದೊಡ್ಡ ಪ್ರಮಾಣದ ತುಳಸಿ ಬಳಕೆಯಾಗುತ್ತಿತ್ತು. ಪೂಜೆಯ ನಂತರ ಅದನ್ನು ವ್ಯರ್ಥವಾಗಿ ಎಸೆಯುವ ಬದಲು ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಉದ್ದೇಶದಿಂದ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಪಣೆಯಾದ ತುಳಸಿ ಎಲೆಗಳನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ, ಕುತ್ಪಾಡಿಗೆ ಕಳುಹಿಸಿ, ಅವುಗಳಿಂದ ತುಳಸಿ ಆಧಾರಿತ ಹರ್ಬಲ್ ಕ್ಯಾಪ್ಸುಲ್‌ಗಳನ್ನು ತಯಾರಿಸುವ ವ್ಯವಸ್ಥೆ ಮಾಡಲಾಗಿದ್ದು, ಅದರ ಪ್ರಕ್ರಿಯೆ ಹೀಗಿದೆ





