ಆಂಧ್ರದ ಪುಟ್ಟುಲೂರಿನಲ್ಲಿ ಕಣ್ಣೀರಾಗಿಸಿದ ದೃಶ್ಯ. ಪ್ರಕೃತಿಯ ವಿಕೋಪದ ನಡುವೆ ವಿಘ್ನ ವಿನಾಶಕನಿಗೂ ಎದುರಾದ ವಿಸರ್ಜನೆಯ ಕಂಟಕ
ನಾವೆಲ್ಲರೂ ಚಿಕ್ಕವರಿರುವಾಗ ಗಣೇಶನ ಹಬ್ಬದ ದಿನ ಗಣೇಶ ಬಂದ, ಕಾಯಿ ಕಡುಬು ತಿಂದ, ದೊಡ್ಡಕೆರೇಲಿ ಬಿದ್ದ, ಚಿಕ್ಕೆರೇಲಿ ಎದ್ದ ಎಂಬ ಘೋಷಣೆಯನ್ನು ಕೂಗುತ್ತಿದ್ದ ನೆನಪು ಇನ್ನೂ ಹಚ್ಚ ಹಸಿರಾಗಿಯೇ ಇದೆ. ಹಿಂದೆಲ್ಲಾ ಗಣೇಶನ ಹಬ್ಬಕ್ಕೂ ಮೊದಲು ಹತ್ತಿರದ ನದಿ, ಕೆರೆ, ಕೊಳ್ಳಗಳಿಂದ ಜೇಡಿ ಮಣ್ಣನ್ನು ತಂದು ಅದನ್ನು ಹದಗೊಳಿಸಿ ಚಂದನೆಯ ಗೌರಿ ಮತ್ತು ಗಣೇಶನ ಮೂರ್ತಿಯನ್ನು ತಯಾರಿಸಿ ಭಾದ್ರಪದ ಶುಕ್ಲ ಚೌತಿಯಂದು ಭಕ್ತಿಯಿಂದ ಯಥಾ ಶಕ್ತಿ 1,3,5,7,9 ಇಲ್ಲವೇ 11ದಿನಗಳ ಕಾಲ ಪೂಜಿಸಿ ನಂತರ ಮತ್ತೆ ಅದೇ ಹತ್ತಿರದ ನದಿ, ಕೊಳ್ಳ, ಭಾವಿಗಳಲ್ಲಿ ವಿಸರ್ಜಿಸುವ ಸಂಪ್ರದಾಯವಿದೆ.
ವಿಘ್ನ ವಿನಾಶಕ, ಸಂಕಷ್ಟಹರ, ಇಷ್ಟಾರ್ಥ ಸಿದ್ಧಿ ನೀಡುವ ದೇವರು ಎಂದು ಭಕ್ತಿಯಿಂದ ಪೂಜಿಸುವ ಶ್ರೀ ಗಣೇಶನಿಗೆ ಗಣೇಶ ಚತುರ್ಥಿಯ ನಂತರ ವಿಸರ್ಜನೆ ಮಾಡುವುದು ನಮ್ಮ ದೇಶದ ಅನೇಕ ಭಾಗಗಳಲ್ಲಿನ ಪ್ರಮುಖ ಆಚರಣೆ. ಆದರೆ ಈ ಬಾರಿ ಆಂಧ್ರಪ್ರದೇಶದ ರಾಯಲಸೀಮೆ ಭಾಗದಲ್ಲಿ ಕಂಡುಬಂದಿರುವ ಒಂದು ದೃಶ್ಯ ಹಬ್ಬದ ಸಂಭ್ರಮದ ನಡುವೆ ಪ್ರಕೃತಿಯ ಮತ್ತೊಂದು ಮುಖವನ್ನು ನಮ್ಮ ಮುಂದೆ ತೆರೆದಿಟ್ಟಿದೆ. ನದಿಯಲ್ಲಿ ನೀರೇ ಇಲ್ಲ. ಆದರೆ ಗಣೇಶನ ವಿಸರ್ಜನೆ ಮಾಡಲೇಬೇಕು!

ಆಂಧ್ರಪ್ರದೇಶದ ಪುಟ್ಟುಲೂರು ಪ್ರದೇಶದಲ್ಲಿ ಸಂಪೂರ್ಣವಾಗಿ ಒಣಗಿ ಹೋಗಿರುವ ಚಿತ್ರಾವತಿ ನದಿಯ ಪಾತ್ರದಲ್ಲೇ ಗಣೇಶನ ಮೂರ್ತಿಗಳನ್ನು ತಂದು ಇಡುತ್ತಿರುವ ದೃಶ್ಯಗಳು ಇದೀಗ ಗಮನ ಸೆಳೆದಿವೆ. ಸೆಪ್ಟೆಂಬರ್ 2026ರ ಗಣೇಶೋತ್ಸವದ ಸಂದರ್ಭದಲ್ಲಿ ಪುಟ್ಟುಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನೀರಿನ ಕೊರತೆಯಿಂದ ಚಿತ್ರಾವತಿ ನದಿ ಹಾಗೂ ಕೆಲವು ಸ್ಥಳೀಯ ಕಾಲುವೆಗಳು ಒಣಗಿದ್ದು ನೀರಿನಲ್ಲಿ ವಿಸರ್ಜನೆಗೊಳ್ಳಬೇಕಿದ್ದ ಗಣಪ, ಮರಳಿನ ಮಧ್ಯೆ ಏಕಾಂಗಿಯಾಗಿ ನಿಂತಿರುವ ಗಣೇಶನ ಮೂರ್ತಿಗಳ ಚಿತ್ರಗಳು ನಿಜಕ್ಕೂ ಮನಕಲಕುವಂತಿವೆ.
ವಿಸರ್ಜನೆಗೆ ನೀರೇ ಇಲ್ಲ!

ಗಣೇಶನನ್ನು ಪ್ರತಿಷ್ಠಾಪಿಸುವುದು, ಪೂಜಿಸುವುದು ಮತ್ತು ಕೊನೆಯಲ್ಲಿ ಜಲದಲ್ಲಿ ವಿಸರ್ಜಿಸುವುದು ಹಲವು ಪ್ರದೇಶಗಳಲ್ಲಿನ ಸಾಂಪ್ರದಾಯಿಕ ಆಚರಣೆ. ವಿಸರ್ಜನೆ ಎಂಬ ಪದವೇ ದೇವರ ಮೂರ್ತಿಯನ್ನು ಜಲದಲ್ಲಿ ಲೀನಗೊಳಿಸುವ ಆಚರಣೆಯ ಅರ್ಥವನ್ನು ಒಳಗೊಂಡಿದೆ. ಆದರೆ ಪುಟ್ಟುಲೂರಿನ ಚಿತ್ರಾವತಿ ನದಿಯ ಪರಿಸ್ಥಿತಿ ಸಂಪೂರ್ಣ ಭಿನ್ನ. ನದಿಯಿದೆ ಆದರೆ ನೀರಿಲ್ಲ, ವಿಸರ್ಜನೆ ಇದೆ ಆದರೆ ಜಲವಿಲ್ಲ. ಭಕ್ತರು ಮೂರ್ತಿಗಳನ್ನು ನದಿಯ ಪಾತ್ರಕ್ಕೆ ತಂದರೂ ಅವುಗಳನ್ನು ನೀರಿನಲ್ಲಿ ಲೀನಗೊಳಿಸಲು ಸಾಧ್ಯವಾಗದೆ, ಒಣ ಮರಳಿನ ಮೇಲೆ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಒಂದು ಧಾರ್ಮಿಕ ಆಚರಣೆಯ ಸಮಸ್ಯೆಯಲ್ಲ. ಇದು ನಮ್ಮ ನದಿಗಳ ಸ್ಥಿತಿ, ಮಳೆಯ ಅನಿಶ್ಚಿತತೆ, ನೀರಿನ ನಿರ್ವಹಣೆ ಮತ್ತು ಪರಿಸರದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುವ ಸಂಕೇತವೂ ಹೌದು.
ಚಿತ್ರಾವತಿ ನದಿ, ರಾಯಲಸೀಮೆಯ ಜೀವನಾಡಿಗಳಲ್ಲೊಂದು
ಚಿತ್ರಾವತಿ ನದಿ ಆಂಧ್ರಪ್ರದೇಶದ ರಾಯಲಸೀಮೆ ಪ್ರದೇಶದ ಪ್ರಮುಖ ನದಿಗಳಲ್ಲಿ ಒಂದು. ಈ ಭಾಗವು ಸಾಮಾನ್ಯವಾಗಿ ಕಡಿಮೆ ಮಳೆಯ ಪ್ರದೇಶವಾಗಿದ್ದು, ಮಳೆ ಮತ್ತು ಜಲಾಶಯಗಳ ಮೇಲಿನ ಅವಲಂಬನೆ ಇಲ್ಲಿ ಹೆಚ್ಚು. ಇಂತಹ ಪ್ರದೇಶದಲ್ಲಿ ಒಂದು ನದಿ ಸಂಪೂರ್ಣವಾಗಿ ಒಣಗಿದಾಗ ಅದರ ಪರಿಣಾಮ ಕೇವಲ ನದಿಯ ಮೇಲಲ್ಲ. ಅದರ ಸುತ್ತಮುತ್ತಲಿನ ಕೃಷಿ, ಕುಡಿಯುವ ನೀರು, ಪಶುಸಂಗೋಪನೆ, ಅಂತರ್ಜಲ, ಗ್ರಾಮೀಣ ಜೀವನ, ಸಣ್ಣ ವ್ಯಾಪಾರ, ಸ್ಥಳೀಯ ಪರಿಸರ ವ್ಯವಸ್ಥೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಚಿತ್ರಾವತಿ ನದಿಯ ಒಣಗಿರುವ ದೃಶ್ಯವನ್ನು ಕೇವಲ ನೀರಿಲ್ಲದ ನದಿ ಎಂದು ನೋಡುವುದಕ್ಕಿಂತ ಒಂದು ದೊಡ್ಡ ಜಲಸಂಕಷ್ಟದ ಸಂಕೇತವಾಗಿ ನೋಡಬೇಕಾಗಿದೆ.





