ತಮಿಳುನಾಡಿನ ಸಂಥಾನಕುಲಂನಲ್ಲಿ ನಡೆದ ಜಯರಾಜ ಮತ್ತು ಅವರ ಪುತ್ರ ಬೆನ್ನಿಕ್ಸ್ ಅವರ ಭೀಕರ ಕಸ್ಟೋಡಿಯಲ್‌ ಚಿತ್ರಹಿಂಸೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ನ್ಯಾಯಾಲಯವು ಒಂಬತ್ತು ಪೊಲೀಸರಿಗೆ ಮರಣದಂಡನೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ದಶಕಗಳ ಕಾಲ ನೆನಪಿಟ್ಟುಕೊಳ್ಳಬೇಕಾದ ಹೆಸರು ಮಹಿಳಾ ಕಾನ್‌ಸ್ಟೇಬಲ್ ರೇವತಿ.

2020ರಲ್ಲಿ ಈ ಘಟನೆ ನಡೆದಾಗ ರೇವತಿ ಅವರು ಸಂಥಾನಕುಲಂ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಾನ್‌ಸ್ಟೇಬಲ್ ಆಗಿದ್ದರು. ತಮ್ಮದೇ ಇಲಾಖೆಯ ಪ್ರಭಾವಿ ಅಧಿಕಾರಿಗಳ ವಿರುದ್ಧ ಸಾಕ್ಷಿ ನುಡಿಯುವುದು ಸುಲಭದ ಮಾತಾಗಿರಲಿಲ್ಲ. ಆದರೆ, ಇಬ್ಬರು ಪುಟ್ಟ ಹೆಣ್ಣುಮಕ್ಕಳ ತಾಯಿಯಾಗಿದ್ದ ರೇವತಿ, ಸತ್ಯದ ಪರವಾಗಿ ನಿಲ್ಲಲು ನಿರ್ಧರಿಸಿದರು.

ತನಿಖಾ ಮ್ಯಾಜಿಸ್ಟ್ರೇಟ್ ಭಾರತಿದಾಸನ್‌ ಅವರು ಪ್ರಕರಣದ ತನಿಖೆಗಾಗಿ ಠಾಣೆಗೆ ಭೇಟಿ ನೀಡಿದಾಗ, ರೇವತಿ ಅವರು ಧೈರ್ಯ ಪ್ರದರ್ಶಿಸಿ ಅವರ ಮುಂದೆ ಹೇಳಿಕೆ ನೀಡಿದ್ದರು. ನಾನು ಪ್ರತಿಯೊಂದು ವಿವರವನ್ನೂ, ಮುಚ್ಚಿಟ್ಟಿರುವ ಸತ್ಯವನ್ನೂ ನಿಮಗೆ ಹೇಳುತ್ತೇನೆ. ಆದರೆ ನನಗೆ ಇಬ್ಬರು ಪುಟ್ಟ ಹೆಣ್ಣುಮಕ್ಕಳಿದ್ದಾರೆ… ನನ್ನ ಕೆಲಸ ಮತ್ತು ನನ್ನ ಮಕ್ಕಳ ಸುರಕ್ಷತೆಗೆ ನೀವು ಭರವಸೆ ನೀಡಬಲ್ಲಿರಾ? ಎಂದು ಅವರನ್ನು ಕೇಳಿದ್ದರು.

ಆ ಕರಾಳ ರಾತ್ರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ರೇವತಿ, ಜಯರಾಜ ಮತ್ತು ಬೆನ್ನಿಕ್ಸ್ ಮೇಲೆ ನಡೆದ ಅಮಾನವೀಯ ದೌರ್ಜನ್ಯಕ್ಕೆ ಸಾಕ್ಷಿಯಾಗಿದ್ದರು. ಎಸ್‌ಐ ಬಾಲಕೃಷ್ಣನ್, ಇನ್‌ಸ್ಪೆಕ್ಟರ್ ಶ್ರೀಧರ ಮತ್ತು ಎಸ್‌ಐ ರಘುಗಣೇಶ ಅವರು ತಂದೆ-ಮಗನನ್ನು ಮನಬಂದಂತೆ ಥಳಿಸಿದ್ದರು. ದೌರ್ಜನ್ಯ ಎಷ್ಟಿತ್ತೆಂದರೆ, ಅವರು ನೋವಿನಿಂದ ಒದ್ದಾಡುತ್ತಿದ್ದಾಗ ಈ ಅಧಿಕಾರಿಗಳು ಮದ್ಯಪಾನ ಮಾಡುತ್ತಾ ಆರಾಮ ತೆಗೆದುಕೊಳ್ಳುತ್ತಿದ್ದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವರಿಗೆ ರೇವತಿ ಕಾಫಿ ನೀಡಲು ಹೋದಾಗ ಅಧಿಕಾರಿಗಳು ಅದನ್ನು ಚೆಲ್ಲಿದ್ದರು. ನಂತರ ಅವರು ನೀಡಿದ ನೀರೇ ಆ ಸಂತ್ರಸ್ತರಿಗೆ ಸಿಕ್ಕ ಕೊನೆಯ ಕರುಣೆಯ ಹನಿಯಾಗಿತ್ತು.

*ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸತ್ಯ ಬಹಿರಂಗ…*

ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ, ಸಂತ್ರಸ್ತರ ಬೆನ್ನಿನ ಚರ್ಮ ಸುಲಿದು ಹೋಗಿತ್ತು, ಗುಪ್ತಾಂಗಗಳಿಗೆ ಕಬ್ಬಿಣದ ರಾಡ್‌ಗಳನ್ನು ಸೇರಿಸಲಾಗಿತ್ತು ಮತ್ತು ಮಲದ್ವಾರದಿಂದ ತೀವ್ರ ರಕ್ತಸ್ರಾವವಾಗಿತ್ತು. ಇಷ್ಟೆಲ್ಲಾ ಆದರೂ ಪೊಲೀಸರು ಸಾಕ್ಷ್ಯ ನಾಶಪಡಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿ ಹಾಕಿ, ಠಾಣೆಯನ್ನು ಸ್ವಚ್ಛಗೊಳಿಸಿದ್ದರು.

ಪೊಲೀಸರು ಸಾಕ್ಷ್ಯ ನಾಶಪಡಿಸಿದ್ದರೂ, ರೇವತಿ ಅವರು ತನಿಖಾಧಿಕಾರಿಗಳಿಗೆ ಗೋಡೆಯ ಸಂದಿಗಳಲ್ಲಿ, ಪೀಠೋಪಕರಣಗಳ ಮೇಲೆ ಮತ್ತು ನೆಲದ ಮೇಲಿದ್ದ ಡಿಎನ್‌ಎ ಮಾದರಿಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದರು. ಬೆದರಿಕೆ, ಆಮಿಷ ಮತ್ತು ಕಿರುಕುಳಗಳ ನಡುವೆಯೂ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿಯಲಿಲ್ಲ.

ಈ ಅಗ್ನಿಪರೀಕ್ಷೆಯ ಉದ್ದಕ್ಕೂ, ರೇವತಿ ಅವರನ್ನು ಪ್ರಶ್ನಿಸಲಾಯಿತು, ಬೆದರಿಕೆ ಹಾಕಲಾಯಿತು, ಲಂಚದ ಆಮಿಷ ಒಡ್ಡಲಾಯಿತು ಮತ್ತು ನಿಂದಿಸಲಾಯಿತು. ಆದರೂ, ಒತ್ತಡಕ್ಕೆ ಮಣಿಯದೆ ಅವರು ಸತ್ಯದ ಪರವಾಗಿ ನಿಂತರು.

ತಮ್ಮದೇ ಸಹೋದ್ಯೋಗಿಗಳ ವಿರುದ್ಧ ನಿಂತು ರೇವತಿ ನೀಡಿದ ಅಚಲ ಸಾಕ್ಷ್ಯದ ಫಲವಾಗಿ ನ್ಯಾಯಾಲಯವು 9 ಪೊಲೀಸರಿಗೆ ಮರಣದಂಡನೆ ವಿಧಿಸಿದೆ. ಈ ತೀರ್ಪು ಕೇವಲ ಶಿಕ್ಷೆಯಲ್ಲ, ವ್ಯವಸ್ಥೆಯೊಳಗಿನ ಭ್ರಷ್ಟಾಚಾರದ ನಡುವೆಯೂ ರೇವತಿಯಂತಹ ಪ್ರಾಮಾಣಿಕ ವ್ಯಕ್ತಿಗಳು ಸತ್ಯದ ಪರ ನಿಂತರೆ ಇತಿಹಾಸವನ್ನೇ ಬದಲಿಸಬಹುದು ಎಂಬುದಕ್ಕೆ  ಸಾಕ್ಷಿಯಾಯಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ