ರಂಗಭೂಮಿಯ ನಾಟಕ ಮತ್ತು ಚಲನಚಿತ್ರಗಳು ಎರಡೂ ಸಹಾ ಕಥೆ ಹೇಳುವ ಪ್ರಬಲ ಮಾಧ್ಯಮಗಳಾದ್ದರೂ, ಪಾತ್ರಧಾರಿಗಳು ಮತ್ತು ಪ್ರೇಕ್ಷಕರ ಅನುಭವದಲ್ಲಿ ಅವೆರಡೂ ಸಹಾ ಭಿನ್ನವಾಗಿವೆ. ಚಲನಚಿತ್ರದಲ್ಲಿ ಕ್ಯಾಮೆರಾ ಮುಂದೆ ಅದೊಂದೋ ಮಾಡಿದ ಅಭಿನಯಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಸಿಗುವುದು ಮತ್ತೆಂದೋ ಆಗಿದ್ದು, ಇಲ್ಲಿ ತಪ್ಪಾದಲ್ಲಿ ಮತ್ತೆ ಮತ್ತೆ ಅಭಿನಯಿಸಿ ಮುದ್ರಿಸಬಹುದಾದ ಅವಕಾಶವಿದೆ..
ಆದರೆ ರಂಗಭೂಮಿಯಲ್ಲಿ ನಟ ನಟಿಯರು ಪ್ರೇಕ್ಷಕರ ಮುಂದೆ ನೇರ ಮತ್ತು ನಿರಂತರವಾದ ಭಾವನಾತ್ಮಕ ಸಂಪರ್ಕವನ್ನು ಕಾಯ್ದಿಟ್ಟು ಕೊಳ್ಳಬೇಕಾದ ಅನಿವಾರ್ಯವಿದ್ದು ಇಲ್ಲಿ ನಟ ನಟಿಯರು ಸಂಭಾಷಣೆ, ಅಭಿನಯ ಎಲ್ಲವನ್ನೂ ನೆನಪಿಟ್ಟುಕೊಂಡು ತಪ್ಪಿಲ್ಲದೇ ಅಭಿನಯಿಸಬೇಕಾಗುತ್ತದೆ.
ಇನ್ನು ಪೌರಾಣಿಕ ಹಿನ್ನೆಲೆಯುಳ್ಳ ನಾಟಕವಾದರಂತೂ ಸುಧೀರ್ಘವಾದ ಸಂಭಾಷಣೆ, ಭಾಷಾ ಶುದ್ದತೆ, ಶರೀರ ಮತ್ತು ಶಾರೀರದೊಂದಿಗೆ ನವರಸಗಳನ್ನು ಅಭಿನಯದ ಮೂಲಕವೇ ಆಭಿವ್ಯಕ್ತಗೊಳಿಸುತ್ತಲೇ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಭಿನಯಿಸಬೇಕಾಗುತ್ತದೆ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ, 2026ರ ಏಪ್ರಿಲ್ 15, ಬುಧವಾರದಂದು ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರೇವಾ ವಿಶ್ವವಿದ್ಯಾಲಯದಲ್ಲಿ ಬೆಂಗಳೂರಿನ ರಂಗಸಂಪದ ತಂಡದವರ ಬೇಲೂರು ರಘುನಂದನ್ ಅವರು ಬರೆದಿರುವ ಮತ್ತು ಚಿದಂಬರ ರಾವ್ ಜಂಬೆ ನಿರ್ದೇಶನ ಮಾಡಿದ ಏಕವ್ಯಕ್ತಿ ನಾಟಕ ಶರ್ಮಿಷ್ಠೆಯನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿ ವರ್ಗದವರಿಂದಲೇ ಕಿಕ್ಕಿರಿದು ತುಂಬಿದ್ದ ಕುವೆಂಪು ರಂಗಮಂಟಪದಲ್ಲಿ ಹಿರಿಯ ರಂಗಕರ್ಮಿ, ಚಲನಚಿತ್ರ ಮತ್ತು ಕಿರುತೆಯೆಯ ಜನಪ್ರಿಯ ನಟಿ, ಮಾಜೀ ಮಂತ್ರಿಯೂ ಆಗಿ ಸಕ್ರೀಯ ರಾಜಕಾರಣಿಯೂ ಆಗಿರುವ ಉಮಾಶ್ರೀ ಅಭಿನಯಿಸಿ, ಸುಮಾರು 70-75 ನಿಮಿಷಗಳ ಕಾಲ ಮತ್ತೊಂದು ಲೋಕಕ್ಕೆ ಕರೆದೊಯ್ಯಿತು ಎಂದರೂ ತಪ್ಪಾಗದು. ಸುಮಾರು ವರ್ಷಗಳ ನಂತರ ರಂಗಸಂಪದ ಹೊರತಂದಿರುವ ಶರ್ಮಿಷ್ಠೆಯಲ್ಲಿ ಹಿರಿಯ ನಟಿ ಉಮಾಶ್ರೀ ಅಭಿನಯಿಸಿದ್ದಾರೆ ಎನ್ನುವುದಕ್ಕಿಂತಲೂ ಪರಕಾಯ ಪ್ರವೇಶ ಮಾಡಿದ್ದರು ಎಂದರೂ ಅತಿಶಯವಾಗದು.

ಮಹಾಭಾರತದ ಚಂದ್ರವಂಶದ ಯಯಾತಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಮರಾಠಿಯ ವಿ.ಸ ಖಾಂಡೇಕರ ಅವರ ಯಯಾತಿ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಮ್.ಇನಾಮದಾರ ಅವರು ಅನುವಾದಿದ್ದರೆ, ಇದೇ ಕಾದಂಬರಿ ಆಧಾರಿತವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ ಕಾರ್ನಾಡರೂ ಸಹಾ ಯಯಾತಿ ನಾಟಕವನ್ನು ಬರೆದಿದ್ದಾರೆ. ಅದೇ ರೀತಿಯಲ್ಲಿ ಹಿರಿಯ ಸಾಹಿತಿಗಳಾದ ಶ್ರೀರಂಗರೂ ಸಹಾ ಇದೇ ವಿಷಯದ ಕುರಿತಾಗಿ ಬರೆದಿದ್ದರೂ, ಸುಮಾರು 8 ವರ್ಷಗಳ ಕಾಲ ಅಧ್ಯಯನ ನಡೆಸಿ ಬೇಲೂರು ರಘುನಂದನ ಅವರು ಉಮಾಶ್ರೀಗೆಂದೇ ಬರೆದಿರುವ ಈ ನಾಟಕದಲ್ಲಿ ಸಮಾಜದಲ್ಲಿನ ವರ್ಣಬೇಧ, ರಾಕ್ಷಸ-ದೇವಮಾನವ, ಹೀನಕುಲ-ಉತ್ತಮ ಕುಲ ಇವೆಲ್ಲವನ್ನೂ ದಾಟಿ ಮಾನವೀಯತೆಯ ಅಂತಿಮ ರೂಪವನ್ನು ಶರ್ಮಿಷ್ಠೆಯ ರೂಪದಲ್ಲಿ ತೋರಿಸುವ ಪ್ರಯತ್ನವಾಗಿದ್ದು, ಇದರಲ್ಲಿ ರಾಜಕೀಯ, ವಯಸ್ಸಿಗೆ ಬಂದ ಹೆಣ್ಣಿನ ತುಮಲತೆ, ದಾಸಿಯ ರೂಪದ ಹೆಣ್ಣಿನ ಮೇಲಿನ ಶೋಷಣೆ ಜೀವಶಾಸ್ತ್ರ, ಎಲ್ಲದಕ್ಕೂ ವಿಭಿನ್ನವಾಗಿ ವಸ್ತ್ರದ ರೂಪದಲ್ಲಿ ಸಂಘರ್ಷವನ್ನು ರೂಪಕವಾಗಿ ಕಟ್ಟಿಕೊಡಲಾಗಿದೆ.

ಕ್ಷಣಿಕ ಸುಖ ಹಾಗೂ ದೀರ್ಘಕಾಲದ ಸಂತೋಷಗಳ ನಡುವಿನ ವ್ಯತ್ಯಾಸಗಳನ್ನೇ ಅರಿಯದ ಯಯಾತಿಯ ಸುತ್ತಲೇ ಸಾಗುವ ಈ ನಾಟಕದಲ್ಲಿ ಹಟಮಾರಿತನ ಮತ್ತು ಲಂಪಟತನ ಯಯಾತಿಯಾಗಿ, ದೈತ್ಯರ ಅರಸು ವೃಷಪರ್ವನ ಮಗಳಾಗಿ, ರಾಜಕುಮಾರಿಯಾಗಿ, ಪಟ್ಟದರಸಿಯಾಗಿ ಮೆರೆಯಬೇಕಿದ್ದರೂ ವಿಧಿಯಾಟದಿಂದಾಗಿ ರಾಕ್ಷಸರ ಗುರು ಶುಕ್ರಾಚಾರ್ಯರ ಮಗಳು ದೇವಯಾನಿಯ ದಾಸಿಯಾಗಿ ನರಳುವ ಶರ್ಮಿಷ್ಠೆಯಾಗಿ,







