ಪಶ್ಚಿಮ ಏಷ್ಯಾದಲ್ಲಿ ದಿನೇ ದಿನೇ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದು, ಇರಾನ್ ನ ಅತಿ ಪ್ರಮುಖ ಇಂಧನ ತಾಣವಾದ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಸಹ ಇದೀಗ ಇಸ್ರೇಲ್‌ನ ಉತ್ತರ ಬಂದರು ನಗರವಾದ ಹೈಫಾದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಇಸ್ರೇಲ್ ನ 3ನೇ ಅತಿದೊಡ್ಡ ನಗರವಾದ ಹೈಫಾ ಹಾಗೂ ದಕ್ಷಿಣದಲ್ಲಿರುವ ಅಶ್ಡೋಡ್‌ನಲ್ಲಿರುವ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಇದರ ಜೊತೆಗೆ ಇಸ್ರೇಲ್ ನಲ್ಲಿರುವ ಭದ್ರತಾ ನೆಲೆಗಳು ಹಾಗೂ ಮಿಲಿಟರಿ ಬೆಂಬಲ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ತೀಕ್ಷ್ಣ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ ಎಂದು ಇರಾನ್ ನ IRGC ತಿಳಿಸಿದೆ.
ಈ ಕುರಿತು ಇಸ್ರೇಲ್ ಕೂಡಾ ದೃಢಪಡಿಸಿದ್ದು, ಹೈಫಾ ನಗರದ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ಅಪ್ಪಳಿಸಿದೆ. ಇದರಿಂದಾಗಿ ಈ ನಗರದಲ್ಲಿನ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಉತ್ತರದಲ್ಲಿ ವಿದ್ಯುತ್ ಗ್ರಿಡ್‌ಗೆ ಆಗಿರುವ ಹಾನಿ ಸ್ಥಳೀಯವಾಗಿದ್ದು, ಗಮನಾರ್ಹವಾಗಿಲ್ಲ. ಈಗಾಗಲೇ ವಿದ್ಯುತ್ ಪುನಸ್ಥಾಪಿಸುವ ಕಾರ್ಯ ಮಾಡಲಾಗುತ್ತಿದೆ. ಆದಾಗ್ಯೂ, ಮೂಲಸೌಕರ್ಯ ತಾಣಗಳಿಗೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ ಎಂದು ಇಸ್ರೇಲ್ ನ ಇಂಧನ ಸಚಿವ ಎಲಿ ಕೋಹೆನ್ ತಿಳಿಸಿದ್ದಾರೆ.
ಇನ್ನು, ಇಸ್ರೇಲ್ ಪೊಲೀಸರು ಹಾಗೂ ಇಸ್ರೇಲ್‌ನ ಪರಿಸರ ಸಂರಕ್ಷಣಾ ಸಚಿವಾಲಯದ ಪ್ರಕಾರ, ಹೈಫಾದ ಹಲವಾರು ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ಘಟಕಗಳು ಇದ್ದು, ದಾಳಿಯಿಂದಾಗಿ ಕ್ಷಿಪಣಿಯ ತುಂಡುಗಳು ಬಿದ್ದಿದೆ. ಆದಾಗ್ಯೂ, ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಮೂಲಸೌಕರ್ಯಗಳೇ ಟಾರ್ಗೆಟ್!
ಇಸ್ರೇಲ್ ಮಾ.18ರಂದು ಇರಾನ್‌ನ ಸೌತ್ ಪಾರ್ಸ್ ಅನಿಲ ಕ್ಷೇತ್ರದ ವಿಧ್ವಂಸಕ ದಾಳಿ ನಡೆಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇರಾನ್ ಕೂಡಾ ಇಸ್ರೇಲ್ ಮೇಲೆ ಮಾತ್ರವಲ್ಲದೆ, ಗಲ್ಫ್ ರಾಷ್ಟ್ರಗಳಲ್ಲಿನ ಇಂಧನ ಘಟಕಗಳನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿದ್ದು, ಸೌತ್ ಪಾರ್ಸ್ ದಾಳಿಗೆ ಪ್ರತೀಕಾರವಾಗಿ ಕರಾತ್ ನ ರಾಸ್ ಲಫಾನ್ LNG ಗ್ಯಾಸ್ ಸೌಲಭ್ಯದ ಮೇಲೆ ದಾಳಿ ಮಾಡಿತ್ತು. ಕುವೈತ್ ನ ಮಿನಾ ಅಬ್ದುಲ್ಲಾ ಸಂಸ್ಕರಣಾಗಾರ, ಮಿನಾ ಅಲ್-ಅಹ್ಮದಿ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿತ್ತು. ಸೌದಿ ಅರೇಬಿಯಾದ ತೈಲ ಮೂಲ ಸೌಕರ್ಯಗಳನ್ನೇ ಅತಿ ಹೆಚ್ಚಾಗಿ ಗುರಿಯಾಗಿಸುತ್ತಿದ್ದು, ಮ್ರೆಫ್ ಸಂಸ್ಕರಣಾಗಾರ, ರಾಸ್ ತನುರಾ ತೈಲ ಘಟಕ, ಯುಎಇಯ ರುವಾಯಿಸ್ ಸಂಸ್ಕರಣಾಗಾರ ಸಂಕೀರ್ಣ ಹೀಗೆ ಹಲವು ದೇಶಗಳ ಇಂಧನ ಮೂಲಸೌಕರ್ಯಗಳ ಮೇಲೂ ದಾಳಿ ಮಾಡುತ್ತಿದೆ.





