ನನಗೆ ಆ ಅದ್ಭುತ ಪ್ರಾಣಿಯನ್ನು ಕಂಡು ಬಹಳ ದುಃಖವಾಗುತ್ತದೆ. ಆ ಪ್ರಾಣಿಯನ್ನು `ಹೋರಿ’ ಅಥವಾ `ಎತ್ತು’ ಎಂದು ಹೇಳುತ್ತೇವೆ. ನಾನು ರಾಜಸ್ತಾನದ ಆಳ್ವರ್‌ನಲ್ಲಿ ಒಂದು ಬ್ಯಾಂಕ್‌ ಮೇಳಕ್ಕೆ ಹೋಗಿದ್ದೆ. ಆ ಮೇಳದ ಸಂದರ್ಭದಲ್ಲಿ  ಹೋರಿಯೊಂದು ಯಾರಿಗೂ ತೊಂದರೆ ಕೊಡದೆ ಒಮ್ಮಿಂದೊಮ್ಮಲೇ ಜನರ ಮಧ್ಯದಲ್ಲಿಯೇ ನುಗ್ಗಿಬಿಟ್ಟಿತು.

ಬ್ಯಾಂಕುಗಳ ಬಗ್ಗೆ ಮಾಹಿತಿ ಕೊಡುತ್ತಿದ್ದ ಸ್ಟಾಫ್ ನವರು, ಆ ಕೆಲಸವನ್ನು ಅಲ್ಲಿಗೆ ನಿಲ್ಲಿಸಿ ಹೋರಿಯನ್ನು ಹೊಡೆದೋಡಿಸುವಲ್ಲಿ ನಿರತರಾದರು. ದಾರಿ ಮಧ್ಯದಲ್ಲಿ ಸಿಕ್ಕ ಸಿಕ್ಕವರೆಲ್ಲ ಅದನ್ನು ಹೊಡೆದು ಓಡಿಸುತ್ತಿದ್ದರು. ಕಾವಲುಗಾರ ಸಹ ತನ್ನ ಬಳಿಯಿದ್ದ ಕೋಲಿನಿಂದ ಒಂದು ಬಾರಿಸಿದ. ಎತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಓಡುತ್ತಲಿತ್ತು. ಹೋರಿಯ ಗಾತ್ರವನ್ನು ನೋಡಿದರೆ, ಅದು ಸ್ವಲ್ಪ ನಿಧಾನ ಸ್ವಭಾವದ್ದು ಎನಿಸಿತು. ಅದು ಮೈದಾನದಿಂದ ಅಷ್ಟಿಷ್ಟು ಗಾಯಗಳೊಂದಿಗೆ ಹೊರಬಂದಿತು.

ಹೋರಿ, ಗೂಳಿಗಳು ತರಕಾರಿ ಮಾರುಕಟ್ಟೆಗಳ ಆಸುಪಾಸಿನಲ್ಲಿ ಹೆಚ್ಚು ಸುತ್ತಾಡುತ್ತಿರುತ್ತವೆ. ಏಕೆಂದರೆ ಅಲ್ಲಿ ನಿರುಪಯುಕ್ತ ತರಕಾರಿ, ಸೊಪ್ಪುಸದೆಗಳನ್ನು ಎಸೆದಿರುತ್ತಾರೆ. ಆದರೆ ಆ ವ್ಯರ್ಥ, ಯಾರಿಗೂ ಬೇಡವಾದದ್ದನ್ನು ತಿನ್ನಲು ಹೋಗಿ ಅದು ಎಷ್ಟು ಜನರಿಂದ ದೊಣ್ಣೆ ಪೆಟ್ಟು ತಿನ್ನಬೇಕಾಗಿ ಬರುತ್ತದೋ ಏನೋ! ಎಷ್ಟೋ ಕಡೆ, ಇಂತಹ ಹೋರಿಗಳ ಮೇಲೆ ಆ್ಯಸಿಡ್‌ ಕೂಡ ಸುರಿದ ದುರುಳರು ನಮ್ಮಲಿದ್ದಾರೆ. ಗಾಯಗಳಿಲ್ಲದ ಎತ್ತು ಹೋರಿಗಳನ್ನು ಹುಡುಕುವುದೇ ಕಷ್ಟ. ಗೋರಕ್ಷಣೆಗೆ ಹೆಸರುವಾಸಿಯಾದ ಗೋರಖ್‌ಪುರ ನಗರದಲ್ಲಿ ಮುನ್ಸಿಪಲ್ ಕಮಿಟಿಯು ಇವುಗಳನ್ನು ಹಿಡಿದು ಒಂದು ಕಡೆ ಇರಿಸುತ್ತದೆ. ಆದರೆ ಅಲ್ಲಿ ಅವುಗಳಿಗೆ ತಿನ್ನಲು ಏನೂ ಸಿಗುವುದಿಲ್ಲ. ಕೆಲವು ದಿನಗಳ ಬಳಿಕ ಅವು ಅಲ್ಲಿ ಸತ್ತು ಹೋಗುತ್ತವೆ.

ಗೋಶಾಲೆಗಳಲ್ಲೂ ಜಾಗ ಇಲ್ಲ

ಗೋಶಾಲೆಗಳಲ್ಲಿ ಇಂಥ ಹೋರಿ, ಇರಿಸಿಕೊಳ್ಳುವುದಿಲ್ಲ. ಹೀಗಾಗಿ ಅವು ಬೀದಿ ಬೀದಿ ಸುತ್ತುತ್ತಿರುತ್ತವೆ. ಆ ಕಾರಣದಿಂದ ಅವು ದಿನ ಜನರ ದೊಣ್ಣೆ ಪೆಟ್ಟು ತಿನ್ನುತ್ತಿರುತ್ತವೆ. ಕೆಲವೊಂದು ಕಡೆ ರಾತ್ರಿ ಹೊತ್ತಿನಲ್ಲಿ ಅವುಗಳನ್ನು ಹಿಡಿದು ಕಟ್ಟಿ ಆಹಾರ ಕೊಡದೆ ಹಿಂಸಿಸಲಾಗುತ್ತದೆ. ಗೋವುಗಳಿಗೆ ಎಲ್ಲರೂ ಆಹಾರ ಕೊಡುತ್ತಾರೆ. ಆದರೆ ಹೋರಿಗಳಿಗೆ ಮಾತ್ರ ಆಹಾರ ಕೊಡಬೇಕೆನ್ನುವ ಯಾವುದೇ ಪದ್ಧತಿ ಇಲ್ಲ. ನಂದಿ ಅಥವಾ ಹೋರಿ ಶಿವನ ವಾಹನ ಎಂದು ಪೂಜಿಸಲ್ಪಡುತ್ತದೆ. ಆದರೆ ಅದು ಹಸುವಿನ ಹಾಗೆ ಗೌರವಿಸಲ್ಪಡುವುದಿಲ್ಲ.

ಹಸುಗಳನ್ನು ಹಾಲಿಗಾಗಿ ಸಾಕಲಾಗುತ್ತದೆ. ಎತ್ತುಗಳನ್ನು ಕೃಷಿ ಕೆಲಸಕ್ಕೆ ಬಳಸಲಾಗುತ್ತದೆ. ಎತ್ತನ್ನು ಕೃಷಿ ಕೆಲಸದಲ್ಲಿ ಪಳಗಿಸಲು ಅದರ ಅಂಡಕೋಶಗಳನ್ನು ನಿರ್ದಯವಾಗಿ ಕಲ್ಲಿನಿಂದ ಜಜ್ಜಲಾಗುತ್ತದೆ. ಬಳಿಕ ಅದು ಹೋರಿ, ಗೂಳಿಯಾಗಿ ಪರಿವರ್ತನೆಗೊಂಡು ಕೃಷಿ ಕೆಲಸದಲ್ಲಿ ಬಳಸಲ್ಪಡುತ್ತದೆ. ಆಗ ಅದು ಸಂತಾನೋತ್ಪತ್ತಿ ಚಟುವಟಿಕೆಗೆ ಬಳಸಲ್ಪಡುವುದಿಲ್ಲ. 4 ವರ್ಷದ ಮೇಲ್ಪಟ್ಟು ಹೋರಿಗಳು ನೋಡಲು ಸಿಗುವುದು ಕಷ್ಟಕರವೇ. ಎಲ್ಲಿ ನಂದಿ ಪೂಜಿಸಲ್ಪಡುತ್ತದೋ ಅಲ್ಲಿಯೇ ಅದು ಮಾನವರ ಏಟು ಕೂಡ ತಿನ್ನುತ್ತಿರುತ್ತದೆ.

ಗೋವುಗಳ ಗರ್ಭಧಾರಣೆಗೆ ವಿಶಿಷ್ಟ ಬಗೆಯ ಗೂಳಿಗಳ ವೀರ್ಯವನ್ನು ಸಂಗ್ರಹಿಸಲಾಗುತ್ತದೆ. ಈ ಕೆಲಸಕ್ಕಾಗಿಯೇ ಅವನ್ನು ಒಂದು ಕಡೆ ಕಟ್ಟಲ್ಪಟ್ಟಿರುತ್ತವೆ. ವಿಶೇಷ ಔಷಧಗಳನ್ನು ನೀಡಿ ವೀರ್ಯ ಉತ್ಪತ್ತಿಗೆ ಅನುವು ಮಾಡಿಕೊಳ್ಳಲಾಗುತ್ತದೆ. ಕೃತಕ ಗರ್ಭಧಾರಣೆಯ ಮೂಲಕ ಗೋವುಗಳನ್ನು ಗರ್ಭ ಧರಿಸುವಂತೆ ಮಾಡಲಾಗುತ್ತದೆ. ಹೋರಿ ಒಂದು ಆಕರ್ಷಕ ಪ್ರಾಣಿ. ಆದರೆ ಅದು ತನ್ನದೇ ಆದ ಮನಸ್ಸಿನ ಮಾಲೀಕ. ಅದು ತನ್ನ ಈ ಗುಣ ಅಥವಾ ಅವಗುಣದಿಂದಾಗಿ ಜನರ ಹೊಡೆತಕ್ಕೆ ತುತ್ತಾಗುತ್ತಿರುತ್ತದೆ. ಶಿವಭಕ್ತರು ಕೂಡ ಅದನ್ನು ರಕ್ಷಿಸಲಾಗುತ್ತಿಲ್ಲ.

– ಮೇನಕಾ ಗಾಂಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ