ಗೀತಾ ಮತ್ತು ಸೋನಿಯ ಈ ಕಥೆ ಓದಿ. ಅದರ ಮಹತ್ವ ನಿಮಗೆ ಗೊತ್ತಾಗುತ್ತದೆ.
ಕೌಟುಂಬಿಕ ಸಂಬಂಧದ ಎಳೆ ತುಂಡರಿಸಿದಾಗ ನಮ್ಮ ಜೀವನದಲ್ಲಿ ಮತ್ತೊಂದು ಸಂಬಂಧ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಅದೇ ಸ್ನೇಹ ಸಂಬಂಧ. ಅದು ನಂಬಿಕೆ ಮತ್ತು ಸಹಕಾರ ಎಂಬ ಬಲದ ಮೇಲೆ ನಿಂತಿದೆ. ಸ್ನೇಹಿತೆ ಗೌಪ್ಯ ರಕ್ಷಕಿ ಹಾಗೂ ಸುಖದುಃಖದ ಪಾಲುಗಾರ್ತಿ ಕೂಡ ಆಗಿರುತ್ತಾಳೆ. ಯಾರು ಮದುವೆಯ ಬಗ್ಗೆ ಯೋಚಿಸುದಿಲ್ಲವೋ ಅವರು ಸ್ನೇಹದ ನೆರಳಿನಲ್ಲಿ ಸುರಕ್ಷಿತವಾಗಿ ಇರಬಹುದು.
ಕೇರಳದ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಗೀತಾ ಮೆನನ್‌ಹಾಗೂ ಹಿನ್ನೆಲೆ ಗಾಯಕಿ ಸೋನಿ ಸಾಯಿ ಇವರಿಬ್ಬರೂ ಜೀವನದಲ್ಲಿ ಏಕಾಂಗಿತನದ ನೋವು ಅನುಭವಿಸುತ್ತಿರುವವರಿಗೆ ಮಾದರಿಯಾಗಿ ನಿಲ್ಲುತ್ತಾರೆ.
ಗೀತಾ ಸೋನಿ ಸ್ನೇಹ ಎಲ್ಲ ವ್ಯಾಖ್ಯೆಗಳಿಗಿಂತ ವಿಭಿನ್ನವಾಗಿದೆ. ಇಂದಿನ ದಿನಗಳಲ್ಲಿ ಮದುವೆ, ವಿಚ್ಛೇದನ ಮತ್ತು ನಿರಾಶೆ ಸಾಮಾನ್ಯ ಸಂಗತಿ. ಅಂತಹದರಲ್ಲಿ ಈ ಸ್ನೇಹ ಒಂದು ಒಳ್ಳೆಯ ಉದಾಹರಣೆ.
ಮನೋತಜ್ಞರ ಪ್ರಕಾರ, ಜೀವನದಲ್ಲಿ ನೈಜ ಸ್ನೇಹಿತೆ ಇರುವುದು ಅತ್ಯವಶ್ಯಕ. ಎಂತಹ ಒಬ್ಬ ಸ್ನೇಹಿತೆ ಎಂದರೆ, ನೀವು ಆ ಸ್ನೇಹಿತೆಯ ಬಳಿ ನಿಮ್ಮ ದುಃಖ ದುಮ್ಮಾನ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು. ಸ್ನೇಹದ ಇಂತಹ ಅದೆಷ್ಟೋ ಕಥೆಗಳಿವೆ. ಆದರೆ ನಾವಿಲ್ಲಿ ಎಂತಹ ಒಂದು ಉದಾಹರಣೆಯನ್ನು ಪ್ರಸ್ತುತಪಡಿಸಿದ್ದೇವೆ ಎಂದರೆ ಅದು ಎಲ್ಲರಿಗಿಂತ ಭಿನ್ನವಾಗಿದೆ.
ಮೊದಲ ಭೇಟಿ
ಅವರಿಬ್ಬರೂ ಮೊದಲು ಭೇಟಿಯಾದದ್ದು ಮಳೆಯಲ್ಲಿ. ತಾವಿಬ್ಬರು ಪರಸ್ಪರ ಒಂದೇ ಕೊಡೆಯಡಿ ಅಪರಿಚಿತರ ನಡುವೆ ನಿಂತು ಸ್ನೇಹಿತೆಯರಾಗಬಹುದು ಎಂದು ಅವರು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಗಾಯಕಿ ಸೋನಿ ಸಾಯಿ ತನ್ನ ಮಗನೊಂದಿಗೆ ಬಾಸ್ಕೆಟ್ ಬಾಲ್ ಪ್ರಾಕ್ಟೀಸ್‌ಗೆಂದು ಬಂದಿದ್ದರು. ಗೀತಾ ಬಾಸ್ಕೆಟ್ ಬಾಲ್‌ಆಟಗಾರ್ತಿ ಹಾಗೂ ತರಬೇತುಗಾರ್ತಿ. ಅವರು ಸುರಿಯುತ್ತಿರುವ ಮಳೆಯಲ್ಲಿ ಕೊಡೆಯೊಂದನ್ನು ತೆಗೆದುಕೊಂಡು ಬಂದು ಹೇಳಿದರು `ಪ್ಲೀಸ್‌ಕಮ್. 'ಆ ಎರಡು ಶಬ್ದಗಳಿಂದಲೇ ಅವರ ಸ್ನೇಹ ಸಂಬಂಧ ಚಿಗುರೊಡೆಯಿತು.
ಪರಸ್ಪರರೊಂದಿಗೆ ಜೊತೆ ಜೊತೆಯಲಿ
ಗೀತಾ ಹಾಗೂ ಸೋನಿ ಪರಸ್ಪರ ಭೇಟಿಯಾದಾಗ ಅವರಿಬ್ಬರ ಜೀವನ ಏಕಾಂಗಿತನದಿಂದ ಕೂಡಿತ್ತು. ಇಬ್ಬರೂ ಪರಸ್ಪರರಿಗೆ ಆಧಾರ ಆಗಬಹುದು ಎಂಬ ಯೋಚನೆ ಅವರಿಬ್ಬರ ನಡುವೆ ಕ್ರಮೇಣ ವ್ಯಾಪಿಸಿಕೊಳ್ಳುತ್ತಾ ಹೋಯಿತು. ಬಳಿಕ ಅದೇ ವಾಸ್ತವ ಎಂಬಂತೆ ಆಯಿತು. ಈಗ ಅವರಿಬ್ಬರೂ ಕೇರಳದ ಎಲಮ್ ಕರಾ ಎಂಬಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಗೀತಾ ಬಾಸ್ಕೆಟ್ ಬಾಲ್‌ನಲ್ಲಿ ಉದಯೋನ್ಮುಖ ಕ್ರೀಡಾಪಟುಗಳಿಗೆ ತರಬೇತಿ ಕೊಡಲು ಅಕಾಡೆಮಿ ಸ್ಥಾಪಿಸಲು ಯೋಚಿಸುತ್ತಿರುವ ಹಂತದಲ್ಲಿ ಸೋನಿ ಬೆಂಬಲವಾಗಿ ನಿಂತರು. ಸೋನಿ ಆ ಕನಸನ್ನು ನನಸಾಗಿಸಲು ಸಹಕಾರ ನೀಡಿದರು. `ಪೆಗಾಸಸ್' ಎಂಬ ಹೆಸರಿನ ಈ ಅಕಾಡೆಮಿ ಮುಪ್ಪಾಥದಮ್ ಎಂಬ ಸರ್ಕಾರಿ ಶಾಲೆಯಲ್ಲಿ ಶುರುವಾಗಿದೆ. ಸಚಿ ಇಬ್ರಾಹಿಂ ಕುಂಜು ಇದೇ ಶಾಲೆಯಲ್ಲಿ ಅದನ್ನು ಸ್ಥಾಪನೆ ಮಾಡಬೇಕೆಂದು ಸೂಚಿಸಿದ್ದರಿಂದ ಅದು ಅಲ್ಲಿ ಸ್ಥಾಪನೆಗೊಂಡಿತು.
5 ರಿಂದ 15 ವರ್ಷದ ಮಕ್ಕಳಿಗೆ ಇಲ್ಲಿ ತರಬೇತಿ ಕೊಡಲಾಗುತ್ತದೆ. ಸೋನಿ ಪೆಗಾಸಸ್‌ನ ಮ್ಯಾನೇಜರ್‌ಆಗಿದ್ದುಕೊಂಡು ಅಲ್ಲಿನ ಪ್ರತಿಯೊಂದು ಆಗುಹೋಗುಗಳ ಮೇಲೆ ಗಮನಕೊಡುತ್ತಾರೆ. ಬಹಳಷ್ಟು ಮಕ್ಕಳು ಇಲ್ಲಿ ತರಬೇತಿ ಪಡೆಯಲು ಬರುತ್ತಾರೆ. ಅವರೆಲ್ಲ ಬಡ ವಿದ್ಯಾರ್ಥಿಗಳು. ಅವರಿಗೆ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡುತ್ತಾರೆ. ಅದರಿಂದ ಬರುವ ಹಣ ಈ ಅಕಾಡೆಮಿ ಮುನ್ನಡೆಸಲು ಸಹಕಾರಿ. ಗೀತಾ ಪ್ರಕಾರ, ಆಕೆ ತನ್ನ ಗುರಿಯಿಂದ ಎಂದೂ ಹಿಮ್ಮೆಟ್ಟುವುದಿಲ್ಲ.