ಮೊಬೈಲ್ ಸದ್ದು ಮಾಡಿದಾಗ ಮಮತಾಳ ನಿದ್ದೆ ಹಾರಿ ಹೋಯಿತು. ಅವಳು ನಿದ್ದೆಗಣ್ಣಿನಲ್ಲಿ ಫೋನ್ ದಿಟ್ಟಸಿದಾಗ ಅದು ಅಮ್ಮನ ಕರೆ ಎಂದು ಗೊತ್ತಾಯ್ತು.
``ಹಲೋ ಅಮ್ಮ.....'' ಮಮತಾ ಫೋನ್ ಎತ್ತಿಕೊಂಡು ತೂಕಡಿಸುತ್ತಾ ಕೇಳಿದಳು.
``ಏನಾಯ್ತು ಮಮ್ತಾ...... ನಿನ್ನ ಧ್ವನಿ ಯಾಕೆ ಬಾವಿಯಾಳದಿಂದ ಬಂದಂತಿದೆ? ನಿನ್ನ ಆರೋಗ್ಯ ಸರಿಯಿಲ್ಲವೇ?'' ರೇತಿಯವರು ಚಿಂತೆಯಿಂದ ವಿಚಾರಿಸುತ್ತಿದ್ದರು.
``ಇಲ್ಲಮ್ಮ...... ನಾನು ಗಡದ್ದಾಗಿ ಗೊರಕೆ ಹೊಡೆಯುತ್ತಿದ್ದೆ. ಇದೇನಮ್ಮ ನೀನು ಬೆಳ್ಳಂಬೆಳಗ್ಗೆ ಫೋನ್ ಮಾಡಿದ್ದಿ?'' ಮಮತಾ ಏರಿಳಿತವಿಲ್ಲದೆ ಹೇಳಿದಳು.
``ಬೆಳ್ಳಂಬೆಳಗ್ಗೆ ಅಂತಿದ್ದೀಯಾ..... ಏ, ಆಗಲೇ 9 ಗಂಟೆ ಆಗ್ತಾ ಬಂತು ಕಣೆ.''
``ಓ..... ಅಷ್ಟೇ ತಾನೇ ಕಣಮ್ಮ, ಇವತ್ತು ಹೇಗೂ ರಜಾ ದಿನ. ಇರೋ ಒಂದು ಭಾನುವಾರವಾದ್ರೂ ನೆಮ್ಮದಿಯಾಗಿ ನಿದ್ದೆ ಮಾಡಬೇಡವೇ? ಉಳಿದ 6 ದಿನಗಳೂ ಬೆಳಗ್ಗೆಯಿಂದ ರಾತ್ರಿಯವರೆಗೂ ಓಡಿ ಓಡಿ ಸುಸ್ತಾಗುವುದರಲ್ಲೇ ಆಗಿಹೋಗುತ್ತೆ. ಅದೆಲ್ಲ ಇರಲಿ, ಏನಮ್ಮ ವಿಷಯ.... ಫೋನ್ ಮಾಡಿದ್ದಿ?''
``ಏ.... ಎಲ್ಲಾ ಶುಭ ಸಮಾಚಾರ ಕಣೆ! ನಿನಗಾಗಿ ನಿನ್ನಕ್ಕಾ ವಿನುತಾಳ ಹಿರಿಯ ಓರಗಿತ್ತಿಯ ತಮ್ಮನ ಸಂಬಂಧ ಒದಗಿ ಬರುವ ಹಾಗಿದೆ ಕಣೆ. ಅವರಿಗೆಲ್ಲ ನಿನ್ನನ್ನು ಫೋಟೋದಲ್ಲಿ ನೋಡಿ ಬಹಳ ಇಷ್ಟವಾಗಿದೆ. ಹುಡುಗ ಎಂ.ಟೆಕ್ ಮುಗಿಸಿ ದೊಡ್ಡ ಖಾಸಗಿ ಕಂಪನಿಯಲ್ಲಿ ಚೀಫ್ ಎಂಜಿನಿಯರ್. ಅನುಕೂಲಕರ ಸಂಬಂಧ, ಆ ಮನೆಯವರೂ ಒಳ್ಳೆಯವರು, ತಿಳಿದ ಜನ.
``ಈ ಬಾರಿ ಏನೂ ಮೀನಾ ಮೇಷ ಎಣಿಸುತ್ತಾ ಕೂರಬೇಡ. ಅನಗತ್ಯವಾಗಿ ಇಲ್ಲಸಲ್ಲದ ನೆಪಗಳನ್ನು ಹೇಳಬೇಡ. ಆಫೀಸ್‌ನವರಿಗೆ ರಜಾ ಚೀಟಿ ಕೊಟ್ಟು ಆದಷ್ಟು ಬೇಗ ಮೈಸೂರಿಗೆ ಹೊರಟು ಬಾ. ನೀವಿಬ್ಬರೂ ಪರಸ್ಪರ ಭೇಟಿಯಾದರೆ ಖಂಡಿತಾ ಒಪ್ಪಿಕೊಳ್ತೀರಿ ಅಂತಾನೇ ನಾವೆಲ್ಲ ಮಾತನಾಡಿಕೊಳ್ಳುತ್ತಿದ್ದೆ. ಹಿರಿಯರು ನಾವು ನಾವು ಭೇಟಿಯಾಗಿ ಒಪ್ಪಿದ್ದಾಯ್ತು. ಹುಡುಗ ಚೆನ್ನೈನಲ್ಲಿ ಸೆಟಲ್ ಆಗಿದ್ದಾನೆ, ನಿನಗೂ ಅಲ್ಲಿ ಸುಲಭವಾಗಿ ಕೆಲಸ ಸಿಗುತ್ತದೆ....'' ರೇವತಿ ಖುಷಿಯಿಂದ ಒಂದೇ ಉಸಿರಿನಲ್ಲಿ ಎಲ್ಲಾ ಹೇಳಿಬಿಟ್ಟರು.
``ಅಯ್ಯೋ.... ಅಮ್ಮ..... ಮತ್ತೆ ಮದುವೆ ಪುರಾಣ ಶುರು ಮಾಡಿಕೊಂಡ್ಯಾ? ಇಷ್ಟು ಬೇಗ ನನಗೆ ಮದುವೆ ಬೇಡ ಅಂತ ಎಷ್ಟು ಸಲ ಹೇಳುವುದು?'' ಮಮತಾ ಬೇಸರದಿಂದ ಹೇಳಿದಳು.
``ಸಾಕು ಸುಮ್ನಿರೆ.... 2 ತಿಂಗಳು ಕಳೆದರೆ ನಿನಗೆ 27 ತುಂಬುತ್ತೆ.... ಮತ್ತೆ ಇನ್ಯಾವಾಗ ಮದುವೆ ಆಗೋದು? ಎಷ್ಟು ದಿನ ಅಂತ ಹೀಗೆ ಮದುವೆ ಮುಂದೂಡೋದು? ಮೊದಲು ಓದು, ನಂತರ ಕೆರಿಯರ್, ಆಮೇಲೆ ಪ್ರಮೋಶನ್..... ಈಗ ಯಾವ ನೆಪ ಹುಡುಕುತ್ತಿದ್ದಿ? ಮುಂದಿನ 1-2 ವರ್ಷದಲ್ಲಿ ನಿನ್ನ ಮದುವೆ ಆಗಲ್ಲಾಂದ್ರೆ ಆಮೇಲೆ ನಿನಗೆ ಮೊದಲನೇ ಸಂಬಂಧದ ವರಗಳು ಬರೋದೇ ಇಲ್ಲ ಅಂದ್ಕೋ.... ಆಮೇಲೆ ನೀನು ಯಾರಾದರೂ ವಿಧುರ, ವಿಚ್ಛೇದಿತ, ಮಕ್ಕಳ ಮನೆಗೆ ಮಲತಾಯಿ ಆಗಿಹೋಗಬೇಕಷ್ಟೆ!'' ರೇವತಿ ಕೋಪದಿಂದ ವಾಸ್ತವವನ್ನು ಕಟುವಾಗಿ ಹೇಳಿದರು.
``ಆಗಲಮ್ಮ..... 4 ದಿನ ಟೈಂ ಕೊಡು, ನಾನೇ ನಿನಗೆ ಫೋನ್ ಮಾಡಿ ಹೇಳ್ತೀನಿ,'' ಮಮತಾ ತಾಯಿ ಎದುರು ಸೋಲಲೇ ಬೇಕಾಯಿತು. ಲೈನ್ ಕಟ್ ಮಾಡಿ ಮಗ್ಗುಲಾದಳು. 9.30 ದಾಟಿತು. ಇನ್ನೆಲ್ಲಿಯ ನಿದ್ದೆ? ಅಮ್ಮ ಅವಳ ನಿದ್ದೆ ಹಾರಿಹೋಗುವಂತೆ ಯೋಚನೆಯ ಬೀಜ ಬಿತ್ತಿದ್ದರು. ಮಮತಾ ಪಕ್ಕದಲ್ಲಿ ಮಲಗಿದ್ದ ಪ್ರಮೋದ್‌ನತ್ತ ನೋಡಿದಳು. ಪ್ರಮೋದ್ ಸುಖಕರ ಕನಸು ಕಾಣುತ್ತಾ ಸಂತೃಪ್ತನಾಗಿದ್ದ. ಅವನ ಗುಂಗುರು ತಲೆಗೂದಲಲ್ಲಿ ಕೈಯಾಡಿಸುತ್ತಾ ಅವನನ್ನೇ ದಿಟ್ಟಿಸಿ, ನಿಧಾನವಾಗಿ ಎದ್ದು ಬಾತ್ ರೂಮಿನತ್ತ ನಡೆದಳು.