ಕಥೆ - ಸುಮಾ ವೀಣಾ
ಅರುಣಿಮಾ ಗರ್ಭಿಣಿ ಎಂದು ರಿಪೋರ್ಟ್ ಬಂದ ದಿನ ಎಲ್ಲರಿಗೂ ಖುಷಿಯೋ ಖುಷಿ! ಹೊಸದಾಗಿ ಬಂದ `ಶಬ್ದವೇದಿ' ಚಿತ್ರವನ್ನು ಅರುಣಿಮಾ ದಂಪತಿಗಳು ಥಿಯೇಟರ್ ನಲ್ಲಿ ನೋಡಿದ್ದೆ ಕೊನೆ, ಅವರಿಬ್ಬರ ಖುಷಿಗೆ ತಾತ್ಕಾಲಿಕ ವಿಘ್ನವಾಯಿತು. ಈ ಹೊಸ ಅತಿಥಿಯ ಆಗಮನದ ಸುದ್ದಿ ಗೊತ್ತಾಗುತ್ತಿದ್ದಂತೆ ಆಪ್ತರು, ಬಂಧುಗಳು, ಸ್ನೇಹಿತರು ಅರುಣಿಮಾಳ ಬಗ್ಗೆ ವಿಶೇಷ ಕಾಳಜಿ ಮಾಡಲಾರಂಭಿಸಿದರು.
ಪ್ರಾರಂಭದಲ್ಲಿ ಅವರತ್ತೆ ಪ್ರೀತಿಯಿಂದ ಇದ್ದರೂ ಐದಾರು ತಿಂಗಳಾಗುತ್ತಿದ್ದಂತೆ ಆಧಾರವಿಲ್ಲದ ತಮ್ಮ ಆಲೋಚನೆಗೆ ಬದ್ಧರಾಗಿ ವರಸೆ ಬದಲಿಸಿದರು.
``ಹೆಣ್ಣು ಮಗು ಹುಟ್ಟುತ್ತೆ.... ನೀನು ಮಲಗೊ ರೀತಿ ಕುಳಿತುಕೊಳ್ಳೋ ರೀತಿ ಹಾಗನ್ನಿಸುತ್ತೆ,'' ಎಂದು ದರ್ಪ ತೋರುತ್ತಿದ್ದರು. ಕ್ರಮೇಣ ಅದೇ ಮಾತುಗಳು ಅರುಣಿಮಾಗೆ ಮುಳ್ಳುಗಳಾಗಿ ಕಾಡಿ ಕರ್ಕಶ ಅನ್ನಿಸುತ್ತಿದ್ದವು. ಮೊದಮೊದಲು ಅರುಣಿಮಾ ಗಂಡನೂ ಆರಾಮಾಗಿದ್ದ ಅನ್ನಿಸಿತು. ಅಮ್ಮನ ಮಾತುಗಳು ಅವನಿಗೆ, `ಗಂಡು ಮಗು ಹುಟ್ಟುತ್ತಿಲ್ಲ,' ಅನ್ನೋ ಕೊರಗು ತರಿಸಿದ್ದು ನಿಜ! ಆದರೆ ಅದನ್ನು ತೋರಗೊಡದೆ ಹೆಂಡತಿಗೆ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದ. ಅದರಿಂದ ಅರುಣಿಮಾ ಕೊರತೆ ನೀಗಿತೆ ವಿನಾ ಕೊರಗು ನೀಗಲಿಲ್ಲ.
ಇನ್ನೇನು ಸೀಮಂತ ಕಾರ್ಯ ಆಗಬೇಕು ಅನ್ನುವಾಗಲೇ ಅರುಣಿಮಾಳ ಅತ್ತೆ, ``ಹುಟ್ಟೋ ಮಗು ಹೆಣ್ಣೂ ಅಂತ ಗೊತ್ತಾದ ಮೇಲೂ ಆ ಆಡಂಬರ ಬೇಕಾ?'' ಎಂದು ಮಗನ ಕೈ ತಡೆದರು. ಸೂಕ್ಷ್ಮ ಮನಸ್ಸಿನ ಅರುಣಿಮಾ ಗಂಡನ ಮನೆಯವರ ತಾತ್ಸಾರವನ್ನು ಗಮನಿಸಿ ತವರು ಮನೆಯವರಿಗೆ ಫೋನ್ ಮಾಡಿ, ``ನನಗೆ ಸೀಮಂತ ಬೇಡ.... ಅದೆಲ್ಲಾ ಏಕೆ? ನನಗಿಷ್ಟವಿಲ್ಲ ಯಾರೂ ಏನೂ ತರಬೇಡಿ, ಬರಬೇಡಿ,'' ಎಂದು ಹಠ ಹಿಡಿದಳು. ಆದರೆ ಅರುಣಿಮಾಳ ತವರು ಮನೆಯವರು ಬಿಡಬೇಕೇ? ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿ ಕರೆದುಕೊಂಡು ಹೋಗಲು ಹೊಸ ಸೀರೆ, ಹಸಿರು ಹರಳಿನ ಉಂಗುರ ಸಹಿತ ಬಂದು ಸೀಮಂತ ಶಾಸ್ತ್ರಕ್ಕೆಂದು ಕೂರಿಸಿದಾಗ ಅರುಣಿಮಾಳ ಗಂಡನ ಸಂಬಂಧಿಯೊಬ್ಬರು ಸಿಹಿ, ಖಾರ ತಿಂಡಿಗಳಿರುವ ಹರಿವಾಣಗಳನ್ನು ಹಿಡಿದು, ``ಯಾವುದು ಬೇಕು?'' ಎಂದರು.
ಅರುಣಿಮಾ, ``ಚಕ್ಕುಲಿ!'' ಎನ್ನುತ್ತಾ ಚಕ್ಕುಲಿ, ಕೋಡುಬಳೆ ಇರುವ ಹರಿವಾಣನ್ನು ಮುಟ್ಟಿದಳು.
ಆ ಹೆಂಗಸು, ``ಹುಟ್ಟೋದು ಹೆಣ್ಣೇ ಬಿಡು!'' ಎಂದು ಮೆಲ್ಲಗೆ ಯಾರಿಗೂ ಕೇಳಿಸದ ಹಾಗೆ ಅರುಣಿಮಾ ಒಬ್ಬಳಿಗೆ ಮಾತ್ರ ಕೇಳಿಸುವಂತೆ ಅಣಕವಾಡಿದರು.
ಅಲ್ಲಿಂದಸೇ ಅರುಣಿಮಾಗೆ ಇನ್ನಿಲ್ಲದ ಅವ್ಯಕ್ತ ನೋವು ತಲ್ಲಣಗಳು ಪ್ರಾರಂಭವಾದವು. ಈ ಕೆಟ್ಟ ಜನರು ಈಗಲೇ ಹೀಗಾಡುತ್ತಾರಲ್ಲಾ ಮುಂದೇನು? ಎಂದು ನಿಟ್ಟುಸಿರು ಬಿಟ್ಟಳು. ಸೀಮಂತಕ್ಕೆ ಬಂದವರೆಲ್ಲಾ ಸಂಭ್ರಮದಿಂದ ಫೋಟೋ ತೆಗೆಸಿಕೊಂಡರೂ ಗಂಡ ಏನೋ ಕೆಲಸದ ನೆಪ ಹೇಳಿ ದೂರಕ್ಕೆ ದೂರವೇ ಉಳಿದಿದ್ದ. ಇವತ್ತಾದ್ರೂ ಗಂಡನ ಜೊತೆ ಕುಳಿತು ಊಟ ಮಾಡಬೇಕು ಅನ್ನೋ ಆಸೆ ಇರಿಸಿಕೊಂಡಿದ್ದಳು ಅರುಣಿಮಾ. ಆದರೆ ಅವರತ್ತೆ ಏನೋ ಕೆಲಸ ಹೇಳಿ ತಪ್ಪಿಸಿದ್ದರು. ಇನ್ನೇನು ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾರೆ ಎನ್ನುವಾಗಲೂ ಗಂಡ ಅನ್ನಿಸಿಕೊಂಡವನು, `ಹೋಗಿ ಬಾ ಒಳ್ಳೆಯದಾಗಲಿ,' ಎಂದೊಂದು ಒಳ್ಳೆಯ ಮಾತು ಹೇಳಬಹುದಿತ್ತು. ಆದರೆ ಹೇಳಲಿಲ್ಲ. ಕಡೆಯದಾಗಿ ಮುಖ ತೋರಿಸಿದ ಹಾಗೆ ಮಾಡಿ ತುಂಬಾ ಕೆಲಸವಿದೆ ಅನ್ನುವ ಹಾಗೆ ಹೋಗಿ ಮರೆಯಾದ.