ಕಥೆ - ರಾಧಿಕಾ ರಾವ್
``ಮೇಡಂ, ನಾನು ಒಳಗೆ ಬರಬಹುದೆ?'' ಅಭಿಷೇಕ್ ಬಾಗಿಲ ಹೊರಗಿನಿಂದ ಕೂಗಿ ಕೇಳಿದ.
``ಹೇಳಿ ಏನು ಕೆಲಸವಿದೆ?'' ಒಳಗಿನಿಂದ ಧ್ವನಿ ಬಂತು.
``ನಾನು ಒಬ್ಬ ಸೇಲ್ಸ್ ಮನ್. ಹೌಸ್ ವೈಫ್ ಗಳಿಗೆ ಒಂದು ವಿನೂತನ ಆಫರ್ ತೆಗೆದುಕೊಂಡು ಬಂದಿದ್ದೇನೆ,'' ಅಭಿಷೇಕ್ ಒಳಗೆ ಇಣುಕುತ್ತಾ ಹೇಳಿದ.
ಸುನಯನಾ ತನ್ನ ಕೂದಲನ್ನು ನೇವರಿಸಿಕೊಳ್ಳುತ್ತಾ ಹೊರಗೆ ಬಂದಳು. ಆ ಸಮಯದಲ್ಲಿ ಅವಳು ನೈಟಿಯಲ್ಲಿದ್ದಳು. ಹಾಲಿನ ಮೈಬಣ್ಣ, ಆಕರ್ಷಕ ಕಣ್ಣುಗಳ ಸುನಯನಾಳ ಸೌಂದರ್ಯ ಯಾರನ್ನಾದರೂ ಮೋಹಿಸುವಂತಿತ್ತು. ಅವಳ ದೊಡ್ಡ ದೊಡ್ಡ ಕಣ್ಣುಗಳಲ್ಲಿ ಕುತೂಹಲ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಅಭಿಷೇಕ್ ನ ಕಣ್ಣುಗಳಲ್ಲಿ ಇಣುಕುತ್ತಿದ್ದಂತೆಯೇ ಇಬ್ಬರೂ ಸ್ವಲ್ಪ ಹೊತ್ತು ಒಬ್ಬರನ್ನೊಬ್ಬರು ನೋಡುತ್ತಿದ್ದರು. ತನ್ನನ್ನು ತಾನು ಸೇಲ್ಸ್ ಮನ್ ಎಂದು ಹೇಳಿಕೊಳ್ಳುತ್ತಿದ್ದ ಅಭಿಷೇಕ್ ನೀಳ ಕಾಯದ ಸದೃಢ ಯುವಕನಾಗಿದ್ದ.
``ಬನ್ನಿ ಒಳಗೆ, '' ಸುನಯನಾ ಅವನಿಗೆ ಕುಳಿತುಕೊಳ್ಳಲು ಆಗ್ರಹಿಸಿ ಹಾಗೂ ತಾನೂ ಕೂಡ ಸಮೀಪದಲ್ಲಿಯೇ ಕುಳಿತಳು.
``ಹೇಳಿ ಏನು ವಿಷಯ?'' ಸುನಯನಾ ಕೇಳಿದಳು.
``ನಾನು ಹೌಸ್ ವೈಫ್ ಗಳಿಗೆ ಒಂದು ಆಫರ್ ತೆಗೆದುಕೊಂಡು ಬಂದಿದ್ದೇನೆ,'' ಎಂದ ಅಭಿಷೇಕ್.
``ಎಂತಹ ಆಫರ್....?'' ಸುನಯನಾ ಮುಗುಳ್ನಗುತ್ತಾ ಕೇಳಿದಳು.
``ಅಂದಹಾಗೆ, ನನ್ನ ಬಳಿ ಕಿಚನ್ ಅಪ್ಲಯನ್ಸ್ ನ ಒಂದು ಬಿಗ್ ರೇಂಜ್ ಇದೆ. ನಿಮಗೆ ಇಷ್ಟವಾದರೆ ಆನ್ ಲೈನ್ ಆರ್ಡರ್ ಕೂಡ ಕೊಡಬಹುದು. ಮಿಕ್ಸರ್ ಗ್ರೈಂಡರ್, ಜ್ಯೂಸರ್ ಒಂದು ರೇಂಜ್ ಜೊತೆಗೇ ತೆಗೆದುಕೊಂಡು ಬಂದಿದ್ದೇನೆ. ಫಾರ್ ಎ ಟ್ರಯಲ್ ನೀವು ಇದರ ಪ್ರಯೋಗ ಮಾಡಿ ನೋಡಿ. ಇದರ ಜೊತೆಗೆ ಒಂದು ಐರನ್ ಬಾಕ್ಸ್ ಫ್ರೀ. ನಮ್ಮ ಬಳಿ ಬೇರೆ ಯಾವುದೇ ಕಂಪನಿಗಳಿಗಿಂತಲೂ ಕಡಿಮೆ ಬೆಲೆಯ ಬೆಸ್ಟ್ ಆಫರ್ಸ್ ಗಳಿವೆ. ನಮ್ಮ ಈ ಪ್ರಾಡಕ್ಟ್ ಬೇರೆಯವರಿಗಿಂತ ಭಿನ್ನ. ನಾನು ಇವುಗಳ ವಿಶೇಷತೆಯನ್ನು ಒಂದೊಂದಾಗಿ ತಿಳಿಸುತ್ತೇನೆ.''
ಸುನಯನಾ ಬಿಟ್ಟಕಣ್ಣು ಬಿಡದೆ ಅಭಿಷೇಕನ ಕಡೆ ನೋಡುತ್ತಾ, ``ಈ ಮಾತಿಲ್ಲದ ಮೂಕ ವಸ್ತುಗಳಲ್ಲಿ ಅದೇನು ವಿಶೇಷತೆ ಇದೆಯೋ ನನಗೆ ಗೊತ್ತಿಲ್ಲ. ಆದರೆ ನನಗಂತೂ ನಿಮ್ಮ ಮಾತಿನಲ್ಲಿ ಗತ್ತುಗಾರಿಕೆ ಇಲ್ಲ ವಿಶೇಷತೆ ಇದೆ ಅನಿಸುತ್ತಿದೆ,'' ಹೇಳಿದಳು.
ಅಭಿಷೇಕ್ ಒಮ್ಮೆಲೆ ಸಂಕೋಚಗೊಂಡ. ಬಳಿಕ ನಗುತ್ತಾ, ``ಮೇಡಂ, ನೀವು ಹೀಗೆ ಮಾತನಾಡುವುದರ ಮೂಲಕ ಈ ಅನಪೇಕ್ಷಿತ ವಸ್ತುವಿನ ಬೆಲೆಯನ್ನು ಹೆಚ್ಚಿಸುತ್ತಿರುವಿರಿ,'' ಎಂದು ಹೇಳಿದ.
``ನಾನೆಲ್ಲಿ ಬೆಲೆ ಹೆಚ್ಚಿಸುತ್ತಿರುವೆ? ಜೀವನದಲ್ಲಿ ಯಾವುದೇ ಒಂದು ವಸ್ತುವಿನ ಬೆಲೆಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಆಗುವುದಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಒಂದೇ ವಸ್ತುವಿನ ಬೆಲೆ ಬೇರೆ ಬೇರೆ ಆಗಿರುತ್ತದೆ. ನನ್ನ ಪತಿಗೆ ಇಂತಹ ವಸ್ತುಗಳೇ ಬೆಲೆ ಬಾಳುವಂಥವಾಗಿವೆ. ಅವು ಜನರ ಮುಂದೆ ಅವರ ಪ್ರತಿಷ್ಠೆಯನ್ನು ಹೆಚ್ಚಿಸುತ್ತವೆ. ಆದರೆ ನನಗೆ ಎಂತಹ ವಸ್ತುಗಳು ಬೆಲೆ ಬಾಳುವಂಥವಾಗಿಯೆಂದರೆ, ಅವು ಬೇರೊಬ್ಬರ ಕಣ್ಣುಗಳಲ್ಲಿ ಮುಗುಳ್ನಗೆ ಸೂಸುವಂತಹವಾಗಿರಬೇಕು.''
``ಎಷ್ಟೊಂದು ಸುಂದರ ಯೋಚನೆ ನಿಮ್ಮದು, ಪ್ರತಿಯೊಬ್ಬ ಮನುಷ್ಯನ ಯೋಚನೆ ಹೀಗೆಯೇ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ? ನೀವು ತಪ್ಪು ತಿಳಿದುಕೊಳ್ಳುವುದಿಲ್ಲವೆಂದರೆ ಒಂದು ವಿಷಯ ಹೇಳಲಾ ಮೇಡಂ, ನೀವು ಬೇರೆ ಮಹಿಳೆಯರಿಗಿಂತ ಭಿನ್ನವಾಗಿರುವಿರಿ,'' ಎಂದು ಅಭಿಷೇಕ್ ಸ್ವಲ್ಪ ಗಂಭೀರನಾಗಿ ಹೇಳಿದ.