ಮಿನಿ ಕಥೆ - ಡಾ. ದೀಪಾ ಹಿರೇಮಠ್
ಎರಡು ದಿನದಿಂದ ಮನೆಯಲ್ಲಿ ಸ್ಮಶಾನ ಮೌನ. ಆಫೀಸಿನಿಂದ ಬಂದ ಹರೀಶ್ ನಿರುತ್ಸಾಹದಿಂದ ಭಾರವಾದ ಕಾಲುಗಳನ್ನು ಎಳೆಯುತ್ತಾ ರೂಮಿಗೆ ಹೊರಟ.
ಮಧ್ಯೆ ಮಗನ ರೂಮಿನ ಕಡೆ ಇಣುಕಿದ. ಸದಾ ನಗು, ಮಾತು, ಹಾಡಿನ ಕಲರವ ಇರುವ ಆ ಕೋಣೆ ಇಂದು ತನ್ನ ನಗುವನ್ನು ಕಳೆದುಕೊಂಡು ಮೌನವಾಗಿ ರೋದಿಸುತ್ತಿತ್ತು.
ವಿಶಾಲ್ ಮೂಲೆಯಲ್ಲಿ ಮೊಬೈಲ್ ಹಿಡಿದು ಕುಳಿತಿದ್ದ. ಮುಖದಲ್ಲಿ ಮೊದಲಿನ ನಗು ಇರಲಿಲ್ಲ. ಮನಸ್ಸು ಹಿಂಡಿದಂತಾಯಿತು. ಬಟ್ಟೆ ಬದಲಿಸಿ, ಕಿಟಕಿ ಪಕ್ಕ ಬಂದು ನಿಂತ. ಮನೆಗೆ ಹೋಗುವ ಧಾವಂತದಲ್ಲಿದ್ದ ನೇಸರ, ನನ್ನ ಮನೆಯ ಬೆಳಕನ್ನು ತನ್ನೊಡನೆ ತೆಗೆದುಕೊಂಡು ಹೋಗಿಬಿಟ್ಟ ಹಾಗಾಯಿತು. ಕಣ್ಣಿನಿಂದ ನೀರು ಸುರಿಯಿತು.
ಆಫೀಸಿನಿಂದ ಬಂದ ತಕ್ಷಣ, `ಬಂದೇ ಮಗನೇ, ಕಾಫಿ ತರುವೆ....' ಎನ್ನುತ್ತಾ ನಿಷ್ಕಲ್ಮಶ ನಗುವಿನೊಂದಿಗೆ ಮಾತನಾಡುತ್ತಾ ಬರುತ್ತಿದ್ದರು ಚಿಕ್ಕಮ್ಮ. ನನ್ನನ್ನು ಕ್ಷಮಿಸು ಚಿಕ್ಕಮ್ಮ ಎನ್ನುತ್ತಾ ಎರಡು ಕೈಗಳನ್ನು ಮುಖಕ್ಕೆ ಹಿಡಿದು ಬಿಕ್ಕಿದ ಹರೀಶ್.
``ಡ್ಯಾಡಿ ಬಂದರಾ....'' ಎನ್ನುತ್ತಾ ತನ್ನ ವ್ಯಾನಿಟಿ ಬ್ಯಾಗ್ ಬೀಸುತ್ತಾ ಬಂದ ತಾಯಿ ರಿಯಾಳನ್ನು ನೋಡಿ ಕಣ್ಣು ಒರೆಸಿಕೊಂಡು ಹೊರಬಂದ ವಿಶಾಲ್.
``ಯಾವಾಗ ಬಂದ್ರಿ ಹರೀಶ್, ನನ್ನ ಊಟವಾಗಿದೆ. ನಿಮಗೆ ವಿಶಾಲ್ ಗೆ ಅಂತ ನೂಡಲ್ಸ್ ತಂದಿದ್ದೇನೆ ನನಗೆ ತುಂಬಾ ಸುಸ್ತಾಗಿದೆ,'' ಎನ್ನುತ್ತಾ ಒಂದೇ ಉಸಿರಿನಲ್ಲಿ ಬಟ್ಟೆ ಬದಲಿಸಿ ಮಲಗಿಬಿಟ್ಟಳು.
ಹರೀಶ್ ಉಸಿರನ್ನು ದಬ್ಬಿ ಮಗನನ್ನು ಅರಸಿ ಹೊರಟ.
``ಡ್ಯಾಡಿ, ನನಗೆ ನೂಡಲ್ಸ್ ಬೇಡ. ಮೂರು ದಿನದಿಂದ ನೂಡಲ್ಸ್ ತಿಂತಾ ಇದ್ದೀನಿ. ಅಜ್ಜಿ ಬೇಕು. ಅವರು ರುಚಿ ರುಚಿ ಅಡುಗೆ ಮಾಡುತ್ತಿದ್ದರು. ಪ್ಲೀಸ್ ಡ್ಯಾಡಿ ಅಜ್ಜೀನಾ ಕರೆದುಕೊಂಡು ಬಾ,'' ಎನ್ನುತ್ತಾ ಅಳುತ್ತಲೇ ಮಗ ಮಲಗಿಕೊಂಡ.
ಹರೀಶ್ ಮೂಕನಾಗಿ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟ. `ಚಿಕ್ಕಮ್ಮಾ ಎಲ್ಲಿ ಹೋಗಿದ್ದೀರಾ....? ನೋಡಿ ನಿಮ್ಮ ಮೊಮ್ಮಗನ ಗಲಾಟೆ,' ಮನ ಅರಚಿತು.
ಮನೆಯಲ್ಲಿ ಬೆಳಗ್ಗೆ ಎದ್ದ ತಕ್ಷಣ ಘಂಟೆನಾದ, ಊದಬತ್ತಿಯ ಸುವಾಸನೆ, ಆ ಭಕ್ತಿ ಗಾನವಿಲ್ಲದೆ ಎಲ್ಲಾ ಬೋಳು ಬೋಳು. ಅಡುಗೆಮನೆ ತನ್ನ ಒಡತಿ ಇಲ್ಲದೆ ಅನಾಥವಾಗಿದೆ. ರಿಯಾ ಒಂದು ದಿನ ಅಡುಗೆಮನೆ ಕಡೆ ತಲೆ ಹಾಕಿಲ್ಲ. ಚಿಕ್ಕಮ್ಮ ಹಾಕಲೂ ಬಿಟ್ಟಿರಲಿಲ್ಲ. ನಾನಿರುವಾಗ ಅವಳೇಕೆ ಅಡುಗೆ ಮಾಡಿ ಕೈ ಸುಟ್ಟುಕೊಳ್ಳಬೇಕು? ನಿನಗೇನು ಬೇಕು ಹೇಳು, ನಾನೇ ಮಾಡಿಕೊಡುವೆ ಎನ್ನುತ್ತಿದ್ದರು. ರಿಯಾಳಿಗೆ ಮೋಮೋಸ್ ಇಷ್ಟ ಅಂತ ಅದನ್ನು ಮಾಡುವುದನ್ನೂ ಕಲಿತರು.
ಕೂಡು ಕುಟುಂಬದಲ್ಲಿ ಬೆಳೆದ ನಾನು, ಅಪ್ಪ ಅಮ್ಮ ಅಪಘಾತದಲ್ಲಿ ನಿಧನರಾದಾಗ ಹತ್ತು ವರ್ಷದವನು. ಚಿಕ್ಕಮ್ಮ ಚಿಕ್ಕಪ್ಪರಿಗೆ ಮೊದಲಿನಿಂದಲೂ ನಾನೆಂದರೆ ತುಂಬಾ ಪ್ರೀತಿ. ಜ್ಯೋತಿ ಹಾಗೂ ನನಗೆ ಎಂದೂ ಭೇದಭಾವ ಮಾಡದೆ ಬೆಳೆಸಿದರು. ಕೃಷ್ಣನ ಯಶೋಧೆಯ ಹಾಗೆ ನನ್ನನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಿ ದೊಡ್ಡವನನ್ನಾಗಿ ಮಾಡಿದಳು ನನ್ನ ಚಿಕ್ಕಮ್ಮ.
ಚಿಕ್ಕಪ್ಪ ಕಾಯಿಲೆಯಿಂದ ಅಸುನೀಗಿದಾಗ ನಾನು ಡಿಗ್ರಿ ಸೆಕೆಂಡ್ ಇಯರ್ ಪರೀಕ್ಷೆ ಬರೆಯುತ್ತಿದ್ದೆ. ನನ್ನ ಜೀವನ, ಮುಂದಿನ ಭವಿಷ್ಯ ಉಜ್ವಲವಾಗಲು ಹಗಲಿರುಳು ಶ್ರಮಿಸಿದರು ಚಿಕ್ಕಮ್ಮ. ನನ್ನ ಇಂದಿನ ಈ ಜೀವನ ಚಿಕ್ಕಮ್ಮನ ತ್ಯಾಗ ಹಾಗೂ ಪರಿಶ್ರಮದ ಫಲ. ನನ್ನ ಜೀವನದ ಪ್ರತಿಯೊಂದು ಸನ್ನಿವೇಶಗಳಲ್ಲಿಯೂ ನೆರಳಾಗಿ ನಿಂತು ಮುನ್ನಡೆಸಿದರು.