ಕಥೆ - ಪೂರ್ಣಿಮಾ ಆನಂದ್
ಸುನೀತಾ ಆಫೀಸಿಗೆ ಹೊರಡಲು ತಯಾರಾಗುತ್ತಿದ್ದಳು. ಅವಳ ಅತ್ತೆ ಮಾಧವಿ ಹಾಲ್‌ನಲ್ಲಿ ಕುಳಿತು ಕಾಫಿ ಹೀರುತ್ತಾ ಪೇಪರ್ ಓದುತ್ತಿದ್ದರು. ಆದರೆ ಆಕೆಯ ಗಮನವೆಲ್ಲ ಸೊಸೆ ಸುನೀತಾ ಏನು ಮಾಡುತ್ತಿದ್ದಾಳೆ ಎಂಬುದರ ಕಡೆಗೇ ಇತ್ತು. ಉದ್ದನೆ ವ್ಯಕ್ತಿತ್ವ, ಸುಪುಷ್ಠ ಅಂಗಸೌಷ್ಠವ ಹೊಂದಿದ್ದ ಸುನೀತಾ ಭುಜದವರೆಗೂ ಕತ್ತರಿಸಿದ್ದ ಕೂದಲನ್ನು ಇಳಿಬಿಟ್ಟು, ಲಿಪ್‌ಸ್ಟಿಕ್ ತೀಡುತ್ತಿದ್ದಳು. ಉನ್ನತ ವಿದ್ಯಾಭ್ಯಾಸ, ಪ್ರತಿಷ್ಠಿತ ಹುದ್ದೆಯ ಖಾಸಗಿ ನೌಕರಿ, ವರ್ಚಸ್ಸಿಗೆ ತಕ್ಕಂತೆ ನಡೆನುಡಿ..... ಒಟ್ಟಾರೆ ಮಗ ತಾನಾಗಿ ಮೆಚ್ಚಿ ಆರಿಸಿಕೊಂಡಿದ್ದ ಹುಡುಗಿ ಅವಳು. ಮಗನ ಆಶ್ರಯದಲ್ಲಿದ್ದ ವಿಧವೆ ತಾಯಿ ಮಾಧವಿಗೆ ಈ ಪ್ರೇಮ ವಿವಾಹಕ್ಕೆ ಆಕ್ಷೇಪಣೆ ಸೂಚಿಸಲು ಕಾರಣಗಳೇನೂ ಸಿಕ್ಕಿರಲಿಲ್ಲ. ಇರುವ ಒಬ್ಬನೇ ಮಗ ಅಪರೂಪಕ್ಕೆ ಮೊದಲ ಸಲ ತನ್ನ ಮನಸ್ಸಿನ ಆಸೆ ಹೇಳಿಕೊಂಡು ಇಂಥ ಹುಡುಗಿಯನ್ನು ಮದುವೆ ಆಗುತ್ತೇನೆ ಎಂದಾಗ ಇದ್ದೊಬ್ಬ ಮಗನನ್ನು ಎದುರು ಹಾಕಿಕೊಂಡು ಆಕೆ ತಾನೇ ಏನು ಮಾಡಬೇಕಿತ್ತು? ಆಕೆ ಮೌನ ಸಮ್ಮತಿ ನೀಡಿದ್ದರು. ಆದರೆ ಮಾನಸಿಕವಾಗಿ ಸೊಸೆ ತಮ್ಮಿಂದ ದೂರವೇ ಉಳಿದಿದ್ದಾಳೆ, ತಮ್ಮ ಆತ್ಮೀಯತೆಯ ಗರಡಿಗೆ ಬಂದಿಲ್ಲ ಎಂದೇ ಅನಿಸುತ್ತಿತ್ತು. ಸೊಸೆಯ ಪ್ರಭಾವಶಾಲಿ ವರ್ಚಸ್ವಿ ವ್ಯಕ್ತಿತ್ವವೇ ಹಾಗಿತ್ತು. ಸಾಗರದ ಮೂಲೆಯೊಂದರಲ್ಲಿ ಪ್ರೈಮರಿ ಸ್ಕೂಲ್ ಟೀಚರ್ ಆಗಿದ್ದ ಪತಿಯ ಜೊತೆ ಮಧ್ಯಮ ವರ್ಗದ ಜಂಜಾಟದ ಗೃಹಿಣಿಯಾಗಿ ಬದುಕು ಕಂಡಿದ್ದ ಮಾಧವಿಗೆ, ಅನುಕೂಲಸ್ಥರ ಮನೆಯ ಸೊಸೆ, ಇಂಗ್ಲಿಷ್‌ನಲ್ಲಿ ಗಂಡನೊಂದಿಗೆ ಡೈಲಾಗ್ ಹೊಡೆಯುತ್ತಿದ್ದರೆ ಅರಿಯದೆ ಮನದಲ್ಲಿ ಕೀಳರಿಮೆ ಮೂಡದಿದ್ದೀತೇ?
ಹಾಗೆಂದು ಮಗ ಎಂದೂ ತಾಯಿಯನ್ನು ಬಿಟ್ಟುಕೊಟ್ಟವನಲ್ಲ..... ಅಥವಾ ಸೊಸೆ ಎದುರು ವಾದಿಸುವವಳಲ್ಲ. ಏನೇ ಆಗಲಿ, ತಮ್ಮ ಗರಡಿಗೆ ಬೇಕಾದಂತೆ ಅವಳನ್ನು ಪಳಗಿಸಲಾಗದು ಎಂಬುದು ಗೊತ್ತಿರುವ ವಿಚಾರ. ಮಗ ಬಿ.ಇ ಮುಗಿಸಿ, ಬೆಂಗಳೂರಿಗೆ ಟ್ರೇನಿಂಗ್‌ಗೆಂದು ಹೋಗಿ, ಅಲ್ಲೇ ಉನ್ನತ ಖಾಸಗಿ ಐ.ಟಿ. ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಮನೆ ಮಾಡಿ, ಮೆಚ್ಚಿನ ಹುಡುಗಿಯನ್ನು ಮದುವೆಗೆ ಆರಿಸಿಕೊಂಡು, ಅಮ್ಮನನ್ನು ಗಡಿಬಿಡಿ ತುಂಬಿದ ಪಾಷ್ ಬೆಂಗಳೂರಿನ ಸ್ವಂತ ಫ್ಲಾಟ್‌ಗೆ ಕರೆತಂದಾಗ, ಅಷ್ಟು ವರ್ಷ ಬಾಳಿ ಬದುಕಿದ ಊರನ್ನು ತೊರೆದು, ಬೆಂಗಳೂರಿನ ಮಾಯಾನಗರಿಯ ಯಾಂತ್ರಿಕ ಜೀವನಕ್ಕೆ ಹೊಂದಿಕೊಳ್ಳುವುದು ನಿಜಕ್ಕೂ ಆಕೆಗೆ ಕಷ್ಟ ಎನಿಸಿತು. ಆ ಊರನ್ನು ತೊರೆಯುವಾಗ ಆಪ್ತೇಷ್ಟರು ಕಿವಿ ಮಾತು ಹೇಳಿದ್ದರು, ``ನಿನ್ನ ಪುಣ್ಯ ಮಾಧವಿ..... ಮಗ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾನೆ. ಆಸ್ಟ್ರೇಲಿಯಾ, ಅಮೆರಿಕಾ ಎಂದು ಹೋಗಿಬಿಟ್ಟಿದ್ದರೆ ಜೀವನಪೂರ್ತಿ ನೀನು ಒಬ್ಬಂಟಿಯೇ ಆಗಿಬಿಡುತ್ತಿದ್ದಿ..... ಈಗ ನೆನೆದಾಗ ಸಾಗರದ ಈ ತುದಿಗೆ ಬಂದು ಹೋಗುವುದು ಕಷ್ಟವೇನಲ್ಲ ಬಿಡು,'' ಎಂದು ಸಮಾಧಾನ ಹೇಳಿದ್ದರು. ಹೀಗೆ ಊರಿನಲ್ಲಿ ನಡೆಯುತ್ತಿದ್ದ ಮದುವೆ, ಮುಂಜಿ ಶುಭ ಸಮಾರಂಭಗಳಿಗೆ ಹೋಗಿ ಬಂದು ಮಾಧವಿ ನೆಂಟಸ್ತನ ಉಳಿಸಿಕೊಂಡಿದ್ದರು. ಮಗ-ಸೊಸೆ ಬೆಳಗ್ಗೆ ಕೆಲಸಕ್ಕೆ ಹೋಗಿ ರಾತ್ರಿ 9ಕ್ಕೆ ಮನೆಗೆ ಮರಳುವಷ್ಟರಲ್ಲಿ ಅವರು ಇಡೀ ಫ್ಲಾಟ್‌ಗೆ ತೀರಾ ಒಬ್ಬಂಟಿ.... ಒಂದು ಗಂಟೆಯೊಳಗೆ ಇರುವ ಮೂವರ ಮನೆಗೆಲಸ ಮುಗಿಸಿ, ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕಿ, ಪಾತ್ರೆ ತೊಳೆದು, ಮನೆ ಶುಚಿಗೊಳಿಸಿ ಕಮಲಿ ಹೊರಟುಬಿಟ್ಟರೆ ಮಾರನೇ ದಿನವೇ ಅವಳ ದರ್ಶನ. ನೀನಾ ಎನ್ನುವರಿಲ್ಲದೆ ಸದಾ ಟಿವಿ, ಪುಸ್ತಕ ಬೇಸರವಾದಾಗ ಸಂಜೆ ಹರಿಕಥೆ, ಪಾರ್ಕು ಎಂದು ಮಾಧವಿ ತಮ್ಮಷ್ಟಕ್ಕೇ ಒಂಟಿಯಾಗಿ ಇದ್ದುಬಿಟ್ಟಿದ್ದರು. ಸದಾ ಬಾಗಿಲು ಹಾಕಿರುತ್ತಿದ್ದ ಅಕ್ಕಪಕ್ಕದ ಫ್ಲಾಟ್‌ಗಳು, ಅರ್ಥವಾಗದ ಭಾಷೆಯ ಅಪಾರ್ಟ್‌ಮೆಂಟ್‌ನವರು ಆಕೆಗೆ ಆಪ್ತರಾಗಲೇ ಇಲ್ಲ.