ಕಥೆ - ಆಶಾ ರಾವ್
ಪ್ರಕಾಶ್ ಎರಡು ಬ್ಯಾಗ್‌ಗಳನ್ನೂ ಚೆಕ್ ಇನ್ ಮಾಡಿ ತನ್ನ ನವಿವಾಹಿತ ಪತ್ನಿ ಕೋಕಿಲಾಳ ಕೈ ಹಿಡಿದು ಅವಳನ್ನು ವಿಮಾನದ ಸೀಟ್‌ನಲ್ಲಿ ಕುಳ್ಳಿರಿಸಿದ. ಹನಿಮೂನ್ ಕಾಲವೆಂದರೆ ಅದೆಷ್ಟು ಮಧುರ! ಬೇಕಾದರೆ ಪತ್ನಿಯ ಪರ್ಸ್‌ನ್ನು ಪತಿರಾಯ ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಾನೆ. ಪತ್ನಿಗೆ ಆಯಾಸವಾದರೆ ಅವಳನ್ನು ಎತ್ತಿಕೊಳ್ಳಲು ಮುಂದಾಗುತ್ತಾನೆ. ಅವಳ ಮುಖ ಸಪ್ಪೆಯಾಗಿದ್ದರೆ ಸಂತೋಷಗೊಳಿಸಲು ನಗೆಗಡಲನ್ನು ಹರಿಸಲು ಉತ್ಸುಕನಾಗುತ್ತಾನೆ.
ಹೊಸತಾಗಿ ಮದುವೆಯಾದವರು. ಆದ್ದರಿಂದ ತುಟಿಗಳ ಮೇಲೆ ಮಂದಹಾಸ, ಕಣ್ಣುಗಳಲ್ಲಿ ಕನಸುಗಳನ್ನು ತುಂಬಿಕೊಂಡು ಪರಸ್ಪರ ಕೈ ಹಿಡಿದು ವಿವಾಹ ಜೀವನವನ್ನು ಪ್ರಾರಂಭಿಸಲು ಹೊರಟಿದ್ದರು. ಹನಿಮೂನ್ ವೇಳೆಯಲ್ಲಿ ಪ್ರೀತಿಯಲ್ಲಿ ತೇಲಾಡುತ್ತಲೇ ಪರಸ್ಪರರ ಆಸೆ ಆಕಾಂಕ್ಷೆಗಳು, ಅಭ್ಯಾಸ ಆಚರಣೆಗಳು ಮತ್ತು ಕುಟುಂಬಗಳ ಸದಸ್ಯರ ಬಗ್ಗೆ ತಿಳಿದುಕೊಂಡು, ಭದ್ರವಾದ ದಾಂಪತ್ಯ ಜೀವನವನ್ನು ನಡೆಸುವ ವಚನ ತೆಗೆದುಕೊಂಡರು.
ಪ್ರಕಾಶ್ ಒಂದು ಸ್ವಂತ ಕಂಪನಿಯನ್ನು ನಡೆಸುತ್ತಿದ್ದ. ಅದಕ್ಕಾಗಿ ಹಗಲು ರಾತ್ರಿಯ ಪರಿವೆ ಇಲ್ಲದೆ ಶ್ರಮವಹಿಸಿ ದುಡಿಯುತ್ತಿದ್ದ. ದಿನದ ಅರ್ಧ ಭಾಗ ಉದ್ಯೋಗಕ್ಕೆ ಮೀಸಲಾದರೆ ಉಳಿದರ್ಧ ಭಾಗ ಪತ್ನಿ ಕೋಕಿಲಾ ಮತ್ತು ಮನೆಗೆ ಮೀಸಲಾಗಿತ್ತು. ಒಂದು ಸುಖೀ ಸಂಸಾರಕ್ಕೆ ಇದಕ್ಕಿಂತ ಮತ್ತೇನು ಬೇಕು?
ಕೋಕಿಲಾ ಕೂಡ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಳು.
``ಈವತ್ತು ಮತ್ತೆ ತಡವಾಗಿ ಬಂದೆಯಲ್ಲ ಪಾರ್ವತಿ, ಏನಾಯಿತು?'' ತಡವಾಗಿ ಬಂದ ಮನೆಗೆಲಸದಾಕೆಯನ್ನು ಕೋಕಿಲಾ ಪ್ರಶ್ನಿಸಿದಳು.
``ಏನು ಅಂತ ಹೇಳಲಿ, ನಿನ್ನೆ ರಾತ್ರಿ ನನ್ನ ಗಂಡ ಮತ್ತೆ ಕುಡಿದು ಬಂದು ನನಗೆ ಹೊಡೆದ. ತಾನು ಸಂಪಾದಿಸುವುದಿಲ್ಲ, ನನ್ನ ದುಡ್ಡನ್ನೂ ಬಿಡುವುದಿಲ್ಲ. ದುಡ್ಡು ಕಿತ್ತುಕೊಂಡು ಹೋಗಿ ಕುಡಿದು ಬರುತ್ತಾನೆ. ಬಂದು ನನಗೇ ಹೊಡೆಯುತ್ತಾನೆ,'' ಪಾರ್ವತಿ ಅಳುದನಿಯಲ್ಲಿ ಮುಖ, ಮೈ ಮೇಲಿನ ಗುರುತುಗಳನ್ನು ತೋರಿಸಿದಳು.
``ನೀನು ಎಷ್ಟು ಅಂತ ಸಹಿಸುತ್ತೀಯೆ? ನೀವುಗಳು.... ಒಂದಿಷ್ಟು ವಿದ್ಯೆ ಕಲಿಯುವುದಿಲ್ಲ. ಕಲಿತಿದ್ದರೆ ಹೀಗೆ ಗಂಡನ ಮುಂದೆ ತಲೆ ಬಗ್ಗಿಸಿಕೊಂಡು ನಿಲ್ಲಬೇಕಾಗಿರಲಿಲ್ಲ. ಸಂಪಾದಿಸುವವಳು ನೀನೇ.... ಮತ್ತೆ ಏಟು ತಿನ್ನುವವಳೂ ನೀನೇ.....''
ಕೋಕಿಲಾ ಇಂದಿನ ಕಾಲದ ಮಹಿಳೆ. ಅಸಹಾಯ ಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದಕ್ಕಿಂತ ಅದಕ್ಕೊಂದು ಪರಿಹಾರ ಹುಡುಕುವ ಮನೋಭಾವದವಳು.
ಸಾಯಂಕಾಲ ಪ್ರಕಾಶ್ ಮನೆಗೆ ಬಂದಾಗ ಅವನಿಗೆ ಕಾಫಿ ಕೊಟ್ಟು ಸಿಹಿ ಸುದ್ದಿಯನ್ನು ಅವನ ಕಿವಿಯಲ್ಲಿ ಉಸುರಿದಳು.
``ನಿಜವಾಗಲೂ? ಓಹ್ ಕೋಕಿ, ನೀನು ನನ್ನ ಬಾಳಿಗೆ ಸುಂದರ ಬಣ್ಣವನ್ನು ತುಂಬುತ್ತಿದ್ದೀಯ. ನಮ್ಮ ಸಂಸಾರಕ್ಕೆ ಇನ್ನೊಬ್ಬ ಸದಸ್ಯನ ಆಗಮನವಾಗುತ್ತಿದೆ ಎಂದರೆ, ಅದೆಷ್ಟು ಸಂತೋಷವಾಗುತ್ತದೆ! ಈ ಸಿಹಿ ಸುದ್ದಿ ಹೇಳಿದುದಕ್ಕೆ ನಿನಗೇನು ಬೇಕು, ಹೇಳು.''
``ನನಗೆ ಬೇಕಾದದ್ದಲ್ಲೇ ನೀವು ಆಗಲೇ ಕೊಟ್ಟುಬಿಟ್ಟಿದ್ದೀರಿ,'' ಕೋಕಿಲಾ ಸಹ ಖುಷಿಯಾಗಿದ್ದಳು.
ಈ ಸಂತಸದ ಸುದ್ದಿಯನ್ನು ಕೋಕಿಲಾಳ ತಂದೆ ತಾಯಿಯೊಡನೆ ಹಂಚಿಕೊಳ್ಳಲು ಪ್ರಕಾಶ್ ಅವಳನ್ನು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಅವಳ ತವರು ಮನೆಗೆ ಕರೆದೊಯ್ದ.
ವಿಷಯ ತಿಳಿದ ಕೋಕಿಲಾಳ ತಾಯಿ ಸಡಗರದಿಂದ ಹಸುವಿನ ತುಪ್ಪ ಹಾಕಿ ಕೇಸರಿಭಾತ್ ತಯಾರಿಸಿದರು. ಮಗಳಿಗೆ ಒತ್ತಾಯ ಮಾಡಿ ತಿಂಡಿ ಮತ್ತು ಹಾಲು ಹಣ್ಣುಗಳನ್ನು ತಿನ್ನಿಸತೊಡಗಿದರು. ಆ ಕಡೆ ಅವಳ ತಂದೆ ತಾವು ಅಜ್ಜನಾಗುವೆನೆಂಬ ಸಂತೋಷವನ್ನು ಅಳಿಯನೊಡನೆ, ಸೆಲೆಬ್ರೇಟ್ ಮಾಡಲು 2 ಗ್ಲಾಸ್‌ಗಳಲ್ಲಿ ಮದ್ಯವನ್ನು ತಂದರು.