ಕಥೆ - ಸಿ. ಶಕುಂತಲಾ
ಮದುವೆ ಆಗಿ 6 ತಿಂಗಳ ನಂತರ ದೀಪಾ ಮೊದಲ ಸಲ ಮೈಸೂರಿನ ಸಣ್ಣ ಹೋಬಳಿಯಾದ ತನ್ನ ತವರಿಗೆ ಬಂದಿದ್ದಳು. ಅಲ್ಲಿನ ಅನೇಕ ಮೊಹಲ್ಲಾಗಳಲ್ಲಿ ಇವರದೂ ಒಂದು. ಅಲ್ಲಿನ ಮನೆಗಳು ಅಕ್ಕಪಕ್ಕದಲ್ಲಿ ಬಹಳ ಅಂಟಿಕೊಂಡಂತೆ ಇದ್ದವು. ದೀಪಾಳ ಪತಿ ಸಂತೋಷ್ ಇವಳನ್ನು ತವರಲ್ಲಿ ಬಿಟ್ಟು, ತನ್ನ ಪ್ರಾಜೆಕ್ಟ್ ಕೆಲಸಕ್ಕಾಗಿ ಮುಂದಿನ ವಾರ ಲಂಡನ್ನಿಗೆ ಹೊರಡಲಿದ್ದ. ಕೆಲಸದ ಸಲುವಾಗಿ 5-6 ತಿಂಗಳಿಗೊಮ್ಮೆ ಆತ ಹೀಗೆ ವಿದೇಶ ಪ್ರವಾಸ ಹೊರಡುತ್ತಿದ್ದುದು ಅಪರೂಪವಲ್ಲ. ಒಮ್ಮೆ ಹೋದರೆ ಮರಳಿ ಬರಲು 3-4 ವಾರಗಳೇ ಆಗುತ್ತಿತ್ತು.
ಹೀಗಾಗಿಯೇ ದೀಪಾ ಮದುವೆಯ ನಂತರ ಮೊದಲ ಬಾರಿ ತವರಿಗೆ ಬಂದಿದ್ದಳು. ನಿವೃತ್ತರಾದ ಅವಳ ತಂದೆ ಯಾರೋ ಪರಿಚಿತರನ್ನು ಭೇಟಿಯಾಗಲು ಬೆಳಗ್ಗೆಯೇ ಹೊರಟಿದ್ದರು. ಏನೋ ಹರಟುತ್ತಾ ಇವಳು ತಾಯಿಯ ಜೊತೆ ಮಹಡಿಯಲ್ಲಿ ನಿಂತಿದ್ದಳು. ಆಗ ತಾನೇ ಸಂಜೆ 6 ಗಂಟೆ ಆಗಲಿತ್ತು. ಇವರ ನೆರೆಮನೆಯಂತೂ ತೀರಾ ಇವರ ಗೋಡೆಗೆ ಅಂಟಿತ್ತು. ಹಿಂದೆ ಅಲ್ಲಿ ಒಬ್ಬ ಹುಡುಗ ಅವಿನಾಶ್‌ವಾಸಿಸುತ್ತಿದ್ದ. ಇವಳಿಗಿಂತ 2-3 ವರ್ಷ ದೊಡ್ಡವನು. ಇವರಿಬ್ಬರೂ ಒಟ್ಟಿಗೆ ಹೈಸ್ಕೂಲು ಕಲಿತವರು. ಇವಳು 10ನೇ ಕ್ಲಾಸಿಗೆ ಬರುವಷ್ಟರಲ್ಲಿ ಅವನು ಡಿಗ್ರಿ ಮೊದಲ ವರ್ಷ ಸೇರಿದ್ದ. ದೀಪಾವಳಿಗೆ ಇದ್ದಕ್ಕಿದ್ದಂತೆ ಅವನ ನೆನಪಾಯಿತು. ತಕ್ಷಣ ಅವಳು ರೇವತಿಯನ್ನು ಕೇಳಿದಳು, ``ಅಮ್ಮಾ.... ಅವಿನಾಶ್ ಎಲ್ಲಿ..... ಕಾಣಿಸ್ತಾ ಇಲ್ಲ....?''
``ಓ..... ಅವನಾ.... ಈಗೆಲ್ಲಿದ್ದಾನೋ ಏನೋ, ಒಂದೂ ಗೊತ್ತಿಲ್ಲ. ಒಳ್ಳೆ ಹುಡುಗ ಕಣೆ. ನಿನ್ನ ಮದುವೆ ಫಿಕ್ಸ್ ಆಯ್ತು, ಅದಕ್ಕೆ 1 ವಾರ ಮೊದಲೇ ಈ ಬಾಡಿಗೆ ಮನೆ ಖಾಲಿ ಮಾಡಿಕೊಂಡು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಅಂತ ಹೇಳ್ತಾರಪ್ಪ..... ಅದಕ್ಕಿಂತ ಹೆಚ್ಚಿಗೇನೂ ಗೊತ್ತಿಲ್ಲ ಬಿಡು.''
ದೀಪಾ ಕೆಳಗಿಳಿದು ಅಡುಗೆಮನೆಗೆ ಹೋಗಿ ಟೀ ಮಾಡೋಣವೆಂದು ಬಿಸಿ ನೀರು ಕಾಯಿಸಿದಳು. ಅವಳಿಗೆ ತನ್ನ ಹಳೆಯ ದಿನಗಳೆಲ್ಲ ನೆನಪಿಗೆ ಬಂದವು. ಅವಳ ಮನಸ್ಸು ಅರಿಯದ ನೋವಿನಿಂದ ತುಡಿಯಿತು. ಈಗೇಕೋ ತಕ್ಷಣ ಯಾವುದರಲ್ಲೂ ಆಸಕ್ತಿ ಇಲ್ಲ ಎನಿಸತೊಡಗಿತು. ಅವಳು ಒಂದು ಟ್ರೇನಲ್ಲಿ ಎರಡು ಕಪ್ ಇರಿಸಿ ಟೀ ತುಂಬಿಸಿ, 4 ಬಿಸ್ಕತ್ತಿನ ಸಮೇತ ಮೆಟ್ಟಿಲೇರಿ ಮೇಲೆ ಬಂದಳು. ಅವಳ ಮನಸ್ಸು ಮಾತ್ರ ಎಲ್ಲೋ ತೂಗುಯ್ಯಾಲೆ ಆಡುತ್ತಿತ್ತು.
ಒಂದೊಂದೇ ಹೆಜ್ಜೆ ಎತ್ತಿಡುತ್ತಾ ನಿಧಾನವಾಗಿ ಅಮ್ಮನಿದ್ದ ಕಡೆ ನಡೆದು ಬಂದಳು. ಅಲ್ಲಿ ರೇವತಿ ಪಕ್ಕದ ಮನೆ ಪಂಕಜಾರ ಬಳಿ ಹರಟುತ್ತಿದ್ದರು. ದೀಪಾಳಿಗಿದ್ದ ಮನಸ್ಥಿತಿಯಲ್ಲಿ ಪಂಕಜಾರ ಮಾತುಗಳಿಗೆ ಉತ್ತರಿಸಲು ಆಗಲಿಲ್ಲ. ಹೀಗಾಗಿ ಅವರಿಬ್ಬರಿಗೂ ಟೀ ಕೊಟ್ಟು ತಾನು ಬೇರೆ ಬೆರೆಸಿಕೊಳ್ಳುತ್ತೇನೆ ಎಂದು ಕೆಳಗೆ ಹೊರಟುಹೋದಳು. ಅದೇಕೋ ಟೀ ಬೇಡವೆನಿಸಿ ಕೆಳಗೆ ಬಂದು ಹಿತ್ತಲಿನ ಗಿಡಗಳ ಬಳಿ ನಿಂತಳು. ಒಗೆಯೋ ಕಲ್ಲು ಬಂಡೆ ಬಳಿ ಕುಳಿತಾಗ ಹಿಂದಿನ ನೆನಪಿನ ಸುರುಳಿ ಬಿಚ್ಚಿಕೊಂಡಿತು. ಇದ್ದಕ್ಕಿದ್ದಂತೆ ಕರೆಂಟ್ ಹೋಯಿತು.