ಕಥೆ - ವಸಂತಮಾಲಿನಿ
ನಿಶಾ ಇಲ್ಲಿಗೆ ಬಂದಂದಿನಿಂದ ಹೂಗಿಡಗಳ ನಡುವೆಯೇ ಕಾಲ ಕಾಳೆಯುತ್ತಿದ್ದಳು. ಬಣ್ಣಬಣ್ಣದ ಹೂಗಳ ಸೊಗಸು, ಅವುಗಳ ನವಿರಾದ ಪರಿಮಳ ಅವಳ ಮೈಮರೆಸಿದ್ದವು. ಆ ಪ್ರಕೃತಿ ಸೌಂದರ್ಯದಲ್ಲಿ ಒಂದಾಗಲು ಅವಳ ಮನಸ್ಸು ಮಿಡಿಯುತ್ತಿದ್ದಿತು.
``ನಿಶಾ,'' ಭಾವನಾಲೋಕದಲ್ಲಿ ವಿಹರಿಸುತ್ತಿದ್ದ ಅವಳು ತನ್ನ ಹೆಸರನ್ನು ಕೇಳಿ ವಾಸ್ತವ ಪ್ರಪಂಚಕ್ಕೆ ಇಳಿದಳು. ಹೋಟೆಲ್ಗೆ ಹೋಗುನ ದಾರಿಯಲ್ಲಿ ಶರ್ಮಿಳಾ ಮತ್ತು ನರೇಂದ್ರ ಅವಳಿಗಾಗಿ ಕಾಯುತ್ತಿದ್ದರು. ನಿಶಾ ಓಡುತ್ತಾ ಹೋಗಿ ಅವರನ್ನು ಕೂಡಿಕೊಂಡಳು.
ನಿಶಾ ಹತ್ತಿರ ಬಂದೊಡನೆ ಶರ್ಮಿಳಾ ಹೇಳಿದಳು, ``ಬಹಳ ಹೊತ್ತಾಗಿದೆ.... ಈಗ ಹೋಗೋಣ. ಬೆಳಗ್ಗೆ ಬೇಗನೆ ಪಹ್‌ಗಾಮ್ ಗೆ ಹೊರಡಬೇಕಲ್ಲ. ಸ್ವಲ್ಪ ರೆಸ್ಟ್ ತೆಗೆದುಕೊಳ್ಳೋಣ.''
``ಇಲ್ಲಿಗೆ ಬಂದ ಮೇಲೆ ಮಗುವಿನ ಹಾಗೆ ಆಗಿಬಿಟ್ಟಿದ್ದಾರೆ. ಬೆಟ್ಟದ ಮೇಲೆ ಓಡುತ್ತಾ ಇದ್ದುದನ್ನು ನೋಡಿದೆ,'' ನರೇಂದ್ರ ತಮಾಷೆ ಮಾಡಿದ.
ಆ ಮಾತನ್ನು ಕೇಳಿ ನಿಶಾ ನಾಚಿದಳು. ಅವಳು ತನ್ನಲ್ಲೇ ಅದೆಷ್ಟು ಮೈಮರೆತಿದ್ದಳೆಂದರೆ ಪತಿ ಪ್ರಸನ್ನ ಮತ್ತು ಅವನ ಗೆಳೆಯರ ಇರುವನ್ನೇ ಮರೆತುಬಿಟ್ಟಿದ್ದಳು. ಆ ಸುಂದರ ಪರ್ವತ ಶ್ರೇಣಿಯು ಅವಳ ಕಾಲುಗಳಿಗೆ ರೆಕ್ಕೆಗಳನ್ನು ಕಟ್ಟಿಕೊಟ್ಟಿದ್ದವು.
ಕಾಶ್ಮೀರದ ಸೌಂದರ್ಯದ ಬಗ್ಗೆ ನಿಶಾ ಬಹಳಷ್ಟು ಕೇಳಿದ್ದಳು, ಮ್ಯಾಗಝೀನ್‌ಗಳಲ್ಲಿ ಓದಿದ್ದಳು. ಸಿನಿಮಾಗಳ ನಾಯಕ ನಾಯಕಿಯರು ಲವ್ ಸಾಂಗ್‌ಹಾಡುತ್ತಾ, ಹಿಮಾಮೃತವಾದ ಬೆಟ್ಟ ಪ್ರದೇಶದಲ್ಲಿ ಬಳಸುತ್ತಾ ಸಾಗುವುದನ್ನು ಕಣ್ಣರಳಿಸಿ ನೋಡಿದ್ದಳು. ಹಾಗೇ ಕಲ್ಪನಾ ಲೋಕದಲ್ಲಿ ವಿಹರಿಸಿದಳು.
ಕರ್ನಾಟಕದಿಂದ ಇಷ್ಟು ದೂರದ ಕಾಶ್ಮೀರಕ್ಕೆ ತಾನು ಎಂದಾದರೂ ಬರಬಹುದೆಂಬ ಕಲ್ಪನೆಯೇ ಅವಳಿಗಿರಲಿಲ್ಲ. ಈ ಹಿಮಚ್ಛಾದಿತ ಬೆಟ್ಟ ಗುಡ್ಡಗಳಲ್ಲಿ ಸ್ವತಂತ್ರ ಪಕ್ಷಿಯಂತೆ ವಿಹರಿಸುವೆನೆಂದು ಅವಳು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಬಹಳ ಕಾಲದ ನಂತರ ಅವಳು ಸಂತೋಷವನ್ನು ಕಂಡಿದ್ದಳು.
ಸಂಜೆಯಿಂದಲೇ ಮಳೆ ಜಿನುಗುತ್ತಿತ್ತು. ರಾತ್ರಿ ವೇಳೆಗೆ ಚಳಿ ಮತ್ತಷ್ಟು ಹೆಚ್ಚಾಗತೊಡಗಿತು. ಹೋಟೆಲ್ ರೂಮಿನ ಬೆಚ್ಚನೆಯ ಹಾಸಿಗೆಯ ಮೇಲೆ ನಿಶಾಳಿಗೆ ನಿದ್ರೆ ಕಣ್ಣಾಮುಚ್ಚಾಲೆಯಾಡ ತೊಡಗಿತು. ಪಕ್ಕದಲ್ಲಿ ಮಲಗಿದ್ದ ಪ್ರಸನ್ನ ಗಾಢ ನಿದ್ರೆಯಲ್ಲಿ ಮುಳುಗಿದ್ದ. ನಿಶಾ ಗಡಿಯಾರದತ್ತ ನೋಡಿದಳು. ಆಗಲೇ ಮಧ್ಯರಾತ್ರಿ ಕಳೆದಿತ್ತು. ಸಮಯ ಸರಿಯುತ್ತಲೇ ಇರಲಿಲ್ಲ. ಸೋಜಿಗದ ಸಂಗತಿಯೆಂದರೆ, ದಿನವೆಲ್ಲ ಸುತ್ತಾಡಿದ್ದರೂ ಸಹ ಆಯಾಸದ ಕುರುಹೇ ಇರಲಿಲ್ಲ.
ನಿದ್ರೆ ಬಾರದೆ ಮಲಗಿದ್ದಂತೆ ನೆನಪುಗಳ ಮೆರವಣಿಗೆ ಸಾಗುತ್ತಿತ್ತು. ಆಗ ಇದ್ದಕ್ಕಿದ್ದಂತೆ 2 ನೀಲಿ ಕಣ್ಣುಗಳ ಚಿತ್ರ ಅವಳ ಮುಂದೆ ಮೂಡಿತು. ಸರೋವರದ ನೀಲಿ ಬಣ್ಣವುಳ್ಳ ರಶೀದನ ಕಣ್ಣುಗಳು..... ಕಳೆದ 2 ದಿನಗಳಿಂದ ರಶೀದ್ ಇವರಿಗೆ ಡ್ರೈವರ್ ಮತ್ತು ಗೈಡ್‌ಆಗಿದ್ದನು. ಇವರೆಲ್ಲ ಕಾಶ್ಮೀರವನ್ನು ತಲುಪಿದ ದಿನವೇ ಅಲ್ಲೆಲ್ಲ ಸುತ್ತಾಡಲು ಪ್ರಸನ್ನ ಟ್ಯಾಕ್ಸಿಯೊಂದನ್ನು ಗೊತ್ತು ಮಾಡಿದ್ದನು. ವಿದೇಶಿಯ ತೊಗಲು ಬಣ್ಣದ ಡ್ರೈವರ್ ರಶೀದ್ ಮೃದು ಸ್ವಭಾವದವನಾಗಿದ್ದನು. ಅವನು ಹೋಟೆಲ್‌ಸಮೀಪದಲ್ಲೇ ವಾಸಿಸುತ್ತಿದ್ದುದು ಇವರಿಗೆ ಅನುಕೂಲವಾಗಿತ್ತು. ಕರೆ ಬಂದ ಕೂಡಲೇ ಹಾಜರಾಗುತ್ತಿದ್ದ.
2 ದಿನಗಳಲ್ಲಿ ರಶೀದ್ ಅವರಿಗೆ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲ ತೋರಿಸಿದನು. ನಿಶಾ ಆ ಸ್ಥಳಗಳ ಬಗೆಗಿನ ವಿವರಗಳನ್ನೆಲ್ಲ ತನ್ನ ಡೈರಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಳು. ಅವಳಿಗೆ ಡೈರಿ ಬರೆಯುವ ಹವ್ಯಾಸವಿತ್ತು. ಅವಳ ಸಿಹಿ ಕಹಿ ಅನುಭವಗಳಿಗೆಲ್ಲ ಆ ಡೈರಿ ಸಾಕ್ಷಿಯಾಗಿತ್ತು. ನಿಶಾ ಕೊಂಚ ವಾಚಾಳಿಯಾದುದರಿಂದ ರಶೀದನೊಂದಿಗೆ ಚೆನ್ನಾಗಿ ಮಾತನಾಡ ಬಲ್ಲವಳಾಗಿದ್ದಳು. ಉಳಿದವರಿಗೆ ಭಾಷೆಯ ತೊಂದರೆ ಇದ್ದುದರಿಂದ, ಸ್ಛುಟವಾಗಿ ಹಿಂದಿ ಬಲ್ಲ ನಿಶಾಳೇ ದುಭಾಷಿಯಾಗಿ ನಿಲ್ಲುವಂತಾಗಿತ್ತು. ಇಬ್ಬರೂ ಸುಮಾರು ಒಂದೇ ವಯಸ್ಸಿನವರಾಗಿದ್ದುದರಿಂದ ಇಬ್ಬರ ಮನೋಧರ್ಮ ಒಂದೇ ಬಗೆಯಾಗಿತ್ತು.