ಕಥೆ - ಕನಕಾ ಕೇಶವ
``ಸ್ವಲ್ಪ ದಾರಿ ಬಿಡುತ್ತೀರಾ...'' ಧ್ವನಿ ಕಿವಿಗೆ ಬೀಳುತ್ತಿದ್ದಂತೆ ಆಶಾ ಅರೆನಿದ್ರೆಯಿಂದ ಎಚ್ಚೆತ್ತಳು. ಮಹಿಳೆಯೊಬ್ಬಳು ತನ್ನ ಗರ್ಭಿಣಿ ಮಗಳ ಜೊತೆ ಅವಳಿದ್ದ ರೈಲಿನ ಕೋಚ್‌ಕಡೆ ಬರುತ್ತಿದ್ದಳು. ಆಶಾ ಆಕಳಿಸುತ್ತಾ ಸಹಪ್ರಯಾಣಿಕರ ಕಡೆ ನೋಡತೊಡಗಿದಳು. ಮಗಳಿಗೆ ಬಹುಶಃ ಒಂಬತ್ತನೇ ತಿಂಗಳು ನಡೆಯುತ್ತಿತ್ತು. ಅವಳು ತನ್ನ ದಢೂತಿ ದೇಹವನ್ನು ಬಹಳ ಪ್ರಯಾಸದಿಂದ ಸಂಭಾಳಿಸಿಕೊಂಡು ತನಗಾಗಿ ಜಾಗ ಹುಡುಕುತ್ತಿದ್ದಳು. ಅವಳ ತಾಯಿಯ ಕಣ್ಣುಗಳಲ್ಲಿ ಸಂಕಟದ ಛಾಯೆ ಸ್ಪಷ್ಟವಾಗಿ ಕಾಣುತ್ತಿತ್ತು.
ಆ ಕೋಚ್‌ನಲ್ಲಿ ಕೇವಲ ಆರು ಜನರಿಗಾಗುವಷ್ಟು ಜಾಗವಿತ್ತು. ಆದರೂ 3 ಸೀಟಿನ ಮೇಲೆ ಕೆಳಗೆ ಎಡಬಲ ಎಲ್ಲಾ ಕಡೆಗಳಲ್ಲೂ ತುಂಬಿದ್ದ ಸಾಮಾನು ನೋಡಿದರೆ ಇಡೀ ಪಟ್ಟಣವೇ ಅದರಲ್ಲಿ ತುಂಬಿದಂತೆ ಕಾಣುತಿತ್ತು. ತಾನು ಅದಕ್ಕೆ ಜವಾಬ್ದಾರಳಲ್ಲ ಅನ್ನುವಂತೆ ಆಶಾ ಅವರ ಕಡೆ ನೋಡಿದಳು.
ಜೊತೆಗೆ ಆ ಇಬ್ಬರು ಮಹಿಳೆಯರು ಕೈಕಾಲು ಚಾಚಿ ಎಲ್ಲಿ ತನ್ನ ಸ್ಥಾನಕ್ಕೆ ಧಕ್ಕೆ ತರುತ್ತಾರೋ ಅನ್ನುವ ಭಯ ಕೂಡಾ ಅವಳನ್ನು ಸತಾಯಿಸಿತು. ಎಷ್ಟೇ ಕಷ್ಟ ಬಂದರೂ ಒಂದಡಿ ಜಾಗ ಕೊಡಲು ಅವಳು ಸಿದ್ಧಳಿರಲಿಲ್ಲ. ತುಂಬಿದ ಡಬ್ಬಿಯಲ್ಲೂ ಅವಳು ತನಗಾಗಿ ಏಕಾಂತ ಹುಡುಕುತ್ತಿದ್ದಳು. ಅವಳ ಜೀವನದಲ್ಲಿ ಅವಳಿಗೆ ತನ್ನದೇ ಆದ ಜಾಗವೇ ಇರಲಿಲ್ಲ. ಬುದ್ಧಿ ಬಂದಾಗಿನಿಂದ ಅವಳು ಒಂದು ತುಂಬಿದ ಕುಟುಂಬದಲ್ಲಿದ್ದಳು, ನಾಲ್ಕೂ ಕಡೆಗಳಲ್ಲೂ ಸಹೋದರ ಸಹೋದರಿಯರು ತುಂಬಿದ್ದರು. ವಯಸ್ಸಾದ ಅಜ್ಜಿ ತಾತಾ ಮತ್ತು ಯಾವಾಗಲೂ ಮನೆ ತುಂಬಾ ಜನ ಇರುತ್ತಿದ್ದರು. ನೆಂಟರಿಂದ ಮನೆ ದೊಡ್ಡದಾಗಿದ್ದರೂ ತುಂಬಾ ಚಿಕ್ಕದೆನಿಸುತ್ತಿತ್ತು.
ಅವಳು ಏಕಾಂತಕ್ಕಾಗಿ ಒದ್ದಾಡುತ್ತಿದ್ದಳು. ಅವಳಿಗೆ ಕವಿತೆ ಬರೆಯಲು ಆಗುತ್ತಿರಲಿಲ್ಲ. ಗದ್ದಲದ ಜೊತೆ ಓದಬೇಕಿತ್ತು. ದೊಡ್ಡವಳಾದ ಮೇಲೆ ಕೆಲವೊಮ್ಮೆ ಬಸ್‌ನಲ್ಲಿ ನೂಕುನುಗ್ಗಲು. ಕೆಲವೊಮ್ಮೆ ಸ್ಕೂಲಿಗೆ ಹೋಗುವಾಗ ಸಹಪಾಠಿಗಳ ಜೊತೆ ರಿಕ್ಷಾದಲ್ಲಿ ಜಾಗಕ್ಕಾಗಿ ಯುದ್ಧ ಅವಳಿಗೆ ಸಾಕಾಗಿ ಹೋಗಿತ್ತು. ತನಗಾಗಿಯೇ ಪ್ರತ್ಯೇಕ ಸ್ಥಾನ, ವಿಶೇಷ ಅಸ್ತಿತ್ವ ಬೇಕೆನ್ನುವ ಹಂಬಲ ಅವಳ ಮನದಲ್ಲಿ ಗಟ್ಟಿಯಾಗಿ ನೆಲೆ ನಿಂತಿತ್ತು. ಕೇವಲ ಮನೆಯಲ್ಲಿ ಮಾತ್ರವಲ್ಲ. ಜೀವನದಲ್ಲಿ ಸಹ ಎಲ್ಲಿ ತಾನಿರುವೆನೋ ಅಲ್ಲಿ ತಾನು ಏಕಮಾತ್ರ ಅಧಿಕಾರಿಣಿಯಾಗಿರಬೇಕೆಂಬ ಬಯಕೆ ಅವಳಲ್ಲಿತ್ತು. ವೈವಾಹಿಕ ಜೀವನದಲ್ಲಿ ಸಹ ಅವಳಿಗೆ ತನ್ನದೇ ಆದ ಸಮಯ ಹಾಗೂ ಸಾಮ್ರಾಜ್ಯವೆನ್ನುವುದಿರಲಿಲ್ಲ. ಅವಳ ಹಣೆಯ ಮೇಲೆ ವಿಧಿ ಏನನ್ನೂ ಬರೆದಿರಲಿಲ್ಲ. ಒಳ್ಳೆಯ ಕೆಲಸ ಸಿಕ್ಕ ಕೂಡಲೇ ತಂದೆತಾಯಿ ಅವಳಿಗೆ ಮದುವೆ ಮಾಡಿಬಿಟ್ಟರು. ನಡೆ ನಿನ್ನ ಮನೆ ಅಲ್ಲಿದೆ ಎಂದು ಓಡಿಸಿದಂತೆ. ಈಗ ಮನೆಯ ಒಂದು ಮೂಲೆಯಂತೂ ಖಾಲಿಯಾಯಿತು. ಯಾವ ಪೋಷಕರು ತಮ್ಮ ಮಕ್ಕಳ ಬಗ್ಗೆ ಈ ರೀತಿ ಯೋಚನೆ ಮಾಡುವುದಿಲ್ಲವೆಂದು ಅವಳಿಗೆ ತಿಳಿದಿತ್ತು.
``ತಮ್ಮ ಸಾಮಾನನ್ನು ಸ್ವಲ್ಪ ಎತ್ತಿಕೊಳ್ಳಲು ಆಗುವುದಿಲ್ಲವೇ?'' ವೃದ್ಧ ಮಹಿಳೆ ಸಹ ಪ್ರಯಾಣಿಕರನ್ನು ಕೇಳುತ್ತಿದ್ದಳು. ಮುಂದೆ ತನ್ನ ಸರದಿ ಬರಬಹುದೆಂದು ಭಾವಿಸಿದ ಆಶಾ ತಕ್ಷಣವೇ ಕಣ್ಣು ಮುಚ್ಚಿ ಕುಳಿತಳು. ಅರ್ಧ ತೆರೆದ ಕಣ್ಣುಗಳಿಂದ ನಡೆಯುತ್ತಿರುವ ವಿದ್ಯಮಾನ ನೋಡತೊಡಗಿದಳು.