ಕಥೆ - ಕರುಣಾ ಶರ್ಮ
ಎದುರಿನ ಬಂಗಲೆಯಲ್ಲಿ ಸುಣ್ಣಬಣ್ಣದ ಕೆಲಸ ನಡೆಯುತ್ತಿತ್ತು. ಎಷ್ಟೋ ವರ್ಷಗಳಿಂದ ಅದರ ಬಾಗಿಲಿಗೆ ಬೀಗ ಜಡಿಯಲ್ಪಟ್ಟಿತ್ತು. ಅಲ್ಲಿ ಯಾರೂ ಸುಳಿದಾಡದ ಕಾರಣ ಮನೆಯ ಸುತ್ತಲೂ ಗಿಡ ಮರ ಬಳ್ಳಿಗಳು ಯಥೇಚ್ಛವಾಗಿ ಬೆಳೆದು ಬಂಗಲೆಯನ್ನೇ ಅರ್ಧ ಭಾಗದಷ್ಟು ಮರೆ ಮಾಡಿ, ಅದೊಂದು ಭೂತ ಬಂಗಲೆಯಂತೆ ತೋರಿಬರುತ್ತಿತ್ತು. ಅಷ್ಟು ವರ್ಷಗಳ ಮಳೆಗಾಳಿಗಳನ್ನು ಎದುರಿಸಿ ನಿಂತ ಅದರ ಗೋಡೆಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಕಿಟಕಿ ಬಾಗಿಲುಗಳೆಲ್ಲ ಬಣ್ಣಗೆಟ್ಟು ಮಾಸಲಾಗಿದ್ದರೂ, ಅವುಗಳ ಕೊಠಡಿಗಳು ಮಾತ್ರ ಭದ್ರವಾಗಿ ಕೊಂಡಿಗಳು ಅವುಗಳನ್ನು ಹಿಡಿದಿಟ್ಟಿದ್ದವು.
ತಾರಿಣಿಗೆ ಕುತೂಹಲವಾಗತೊಡಗಿತು. ಈ ಮನೆಗೆ ವಾಸಿಸಲು ಬರುತ್ತಿರುವವರು ಯಾರಿರಬಹುದು? ಅವರು ಮನೆಯನ್ನು ಕೊಂಡುಕೊಂಡಿರಬಹುದು. ಇಷ್ಟು ದೊಡ್ಡ ಬಂಗಲೆಯನ್ನು ಕೊಂಡಿರುವವರು ಯಾರು? ಈಗಂತೂ ಜನರು ಫ್ಲಾಟ್‌ಗಳಲ್ಲಿ ವಾಸಿಸಲು ಹೆಚ್ಚು ಬಯಸುತ್ತಿದ್ದಾರೆ. ಈ ಬಂಗಲೆಯನ್ನು ಕೊಂಡಿರುವವರು ಸಾಮಾನ್ಯ ವ್ಯಕ್ತಿಯಾಗಿರಲಾರರು. ತನ್ನ ಮನೆಯ ಮುಂದಿನ ಮೆಟ್ಟಿಲ ಮೇಲೆ ಕುಳಿತು ತಾರಿಣಿ, ಎದುರಿನ ಬಂಗಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಯನ್ನು ಗಮನಿಸುತ್ತಾ ಆ ಬಗ್ಗೆಯೇ ಯೋಚಿಸುತ್ತಿದ್ದಳು.
ಆಗ ಒಬ್ಬ ಯುವಕ ಕಾರಿನಿಂದಿಳಿದು, ಆ ಬಂಗಲೆಯತ್ತ ನಡೆದು, ಅಲ್ಲಿದ್ದ ಕೆಲಸಗಾರರಿಗೆ ಪೇಂಟಿಂಗ್ ಬಗ್ಗೆ ಮತ್ತು ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಬಗ್ಗೆ ನಿರ್ದೇಶನ ನೀಡತೊಡಗಿದ. ತಾರಿಣಿ, `ಇಂತಹ ಹಳೆಯ ಬಂಗಲೆ ಕೊಳ್ಳುವುದರಲ್ಲಿ ಇವನ ಆಸಕ್ತಿ ಅಥವಾ ಯೋಜನೆ ಏನಿರಬಹುದು, ಯಾರ ಯಾರ ಇಷ್ಟ ಹೇಗಿರುತ್ತದೋ ಯಾರಿಗೆ ಗೊತ್ತು,' ಎಂದು ಭಾವಿಸಿದಳು.
``ಎಕ್ಸ್ ಕ್ಯೂಸ್ ಮಿ,'' ಆ ಯುವಕ ತಾರಿಣಿಯ ಮನೆಯ ಗೇಟ್ ಮುಂದೆಯೇ ಬಂದು ನಿಂತಿದ್ದ.
ಭಾವಲೋಕದಲ್ಲಿದ್ದ ತಾರಿಣಿಗೆ ಮನೆಯಿಂದ ಅನತಿ ದೂರದಲ್ಲಿದ್ದ ಗೇಟ್‌ನಿಂದ ಅವನು ಮಾತನಾಡಿದ್ದು ಕೂಡಲೇ ಗ್ರಹಣವಾಗಲಿಲ್ಲ. ಅವಳು ಕೊಂಚ ಬೆಚ್ಚಿ, ಪೆಚ್ಚಾಗಿ ಅವನನ್ನೇ ನೋಡಿದಳು.``ಹಲೋ ಆಂಟಿ,'' ಆ ಯುವಕ ಅವಳ ಗಮನವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದ.
ಆಂಟಿ ಎನ್ನುವ ಪದ ಅವಳಿಗೆ ವಿಚಿತ್ರವೆನಿಸಿತು. `ನಾನು ಆಂಟಿ ಎಂದು ಕರೆಸಿಕೊಳ್ಳುವಂತೆ ಇದ್ದೇನೆಯೇ? ನನ್ನ ವಯಸ್ಸೇನೋ 50 ಆಯಿತು. ಆದರೆ 35 ವರ್ಷಕ್ಕಿಂತ ಹೆಚ್ಚಾಗಿರುವಂತೆ ತೋರುವುದಿಲ್ಲವಲ್ಲ. ಒಂದೆರಡು ಬಿಳಿ ಕೂದಲು ಬಂದಿರುವುದೇನೋ ನಿಜ. ಈಗ ಹದಿ ವಯಸ್ಸಿನವರಿಗೂ ಬಿಳಿ ಕೂದಲು ಇರುತ್ತದೆ.'
ತಾರಿಣಿ ತನ್ನ ಯೋಚನೆಗಳನ್ನು ಅಡಗಿಸಿಕೊಂಡು ಗೇಟಿನತ್ತ ನಡೆದಳು.
ಯುವಕ ವಿನಯವಾಗಿ ತನ್ನ ಪರಿಚಯ ಹೇಳಿಕೊಂಡು, ``ನನ್ನ ಹೆಸರು ಅಂಜನ್‌ಕುಮಾರ್. ಈ ಮನೆಯ ರಿಪೇರಿ ಕೆಲಸ ಮಾಡಿಸುತ್ತಿದ್ದೇವೆ. ಕೆಲಸಕ್ಕೆ ನೀರು ಬೇಕಾಗಿದೆ. ನೀರಿನ ಕನೆಕ್ಷನ್ ನಾಳೆ ಕೊಡುತ್ತಾರಂತೆ. ಅಲ್ಲಿಯವರೆಗೆ ನೀರಿಲ್ಲದೆ ತೊಂದರೆಯಾಗುತ್ತಿದೆ.''
``ಆಗಲಿ, ನೀರು ಕೊಡೋಣ,'' ಎನ್ನುತ್ತಾ ತಾರಿಣಿ ತನ್ನ ತೋಟದ ಮಾಲಿಯನ್ನು ಕರೆದಳು, ``ಮುಂದೆ ಇರುವ ನಲ್ಲಿಗೆ ಪೈಪ್‌ಸೇರಿಸಿ ಎದುರು ಮನೆ ಕೆಲಸಕ್ಕೆ ನೀರು ಕೊಡು,'' ಎಂದು ಮಾಲಿಗೆ ಹೇಳಿ ಅಂಜನ್‌ನನ್ನು ಒಳಗೆ ಕರೆದಳು, ``ಬನ್ನಿ, ನೀವು ಸ್ವಲ್ಪ ಕಾಫಿ ಕುಡಿದು ಹೋಗಬಹುದು.''
ತಾರಿಣಿ ಇತ್ತ ತಿಂಡಿ ಕಾಫಿ ಸೇವಿಸುತ್ತಾ ಅಂಜನ್ ತಮ್ಮ ಕುಟುಂಬದ ಬಗ್ಗೆ ವಿವರವಾಗಿ ಹೇಳಿ ತಾರಿಣಿಯ ಕುತೂಹಲವನ್ನು ತಣಿಸಿದ. ಅದು ಅಂಜನ್ ಕುಮಾರ್‌ನ ತಾತನ ಕಾಲದ ಬಂಗಲೆ. ಅವನ ತಂದೆ ಅರವಿಂದರು ಉದ್ಯೋಗ ನಿಮಿತ್ತ ನೈರೋಬಿಗೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಈಗ ಮಗಳಿಗೆ ಇಲ್ಲಿಯ ಉದ್ಯೋಗಪತಿಯೊಬ್ಬರ ಮೊಮ್ಮಗನೊಡನೆ ಮದುವೆ ನಿಶ್ಚಯವಾಗಿರುವುದರಿಂದ ಈ ವಿಶಾಲವಾದ ಪಿತ್ರಾರ್ಜಿತ ಬಂಗಲೆಯಲ್ಲಿ ಕಾರ್ಯ ನಡೆಸಲು ಉತ್ಸುಕರಾಗಿದ್ದಾರೆ. ಅದಕ್ಕಾಗಿಯೇ ರಿಪೇರಿ ಕೆಲಸ ಮತ್ತು ಪೇಂಟಿಂಗ್ ನಡೆಯುತ್ತಿದೆ.