ಕಥೆ – ವತ್ಸಲಾ ವಿಶ್ವನಾಥ್‌

”ಹರಿಣಿ ತವರಿನಿಂದ ಹಿಂದಿರುಗಿ ಬಂದಂದಿನಿಂದ ಕೊಂಚ ಬದಲಾಗಿರುವಂತೆ ಉಮೇಶನಿಗೆ ಭಾಸವಾಯಿತು. ಈ ಹಿಂದೆ ಅವನು ಆಫೀಸಿಗೆ ಹೊರಡುವ ಸಮಯದಲ್ಲಿ ಅವನಿಗೆ ಬೇಕಾದ ಎಲ್ಲ ವಸ್ತುಗಳ ಬಗ್ಗೆಯೂ ಗಮನಿಸುತ್ತಿದ್ದಳು. ಅವನ ಬೆಳಗಿನ ತಿಂಡಿ, ಆಫೀಸಿನ ಲಂಚ್‌ ಬಾಕ್ಸ್, ಮೊಬೈಲ್‌ ಫೋನ್‌, ಪರ್ಸ್‌, ಪೆನ್‌, ವಾಚ್‌, ಕರ್ಚೀಫ್‌ ಎಲ್ಲ ಕೈಗೆಟುಕುವಂತೆ ಇರುತ್ತಿದ್ದವು.

ಸ್ನಾನ ಮಾಡಿ ಹೊರಬರುತ್ತಿದ್ದಂತೆ ಒಗೆದು ಇಸ್ತ್ರೀ ಮಾಡಿದ ಉಡುಪು, ಪಾಲಿಶ್‌ ಮಾಡಿದ ಬೂಟುಗಳು ಸಿದ್ಧವಾಗಿರುತ್ತಿದ್ದವು. ದಿನ ರುಚಿಯಾದ ಡಿನ್ನರ್‌, ಭಾನುವಾರದಂದು ಸ್ಪೆಶಲ್ ಲಂಚ್‌, ಅಚ್ಚುಕಟ್ಟಾದ ಮನೆ, ಕಣ್ಣಿನಲ್ಲಿ ಪ್ರೀತಿಯ ಹೊಳೆ ಹರಿಸುತ್ತಾ ಪತಿಯ ಸೇವೆಯಲ್ಲಿ ಸುಖ ಕಾಣುತ್ತಿದ್ದ ಹರಿಣಿಯ ನಡವಳಿಕೆಯು ಈಗ ಬೇರೆಯದೇ ರೀತಿಯಾಗಿ ಕಂಡುಬರುತ್ತಿತ್ತು.

ಈಚೆಗೆ ಉಮೇಶನಿಗೆ ತನ್ನ ಯಾವವೂ ವಸ್ತು ಕೈಗೆ ಸಿಗುತ್ತಿರಲಿಲ್ಲ. ಹರಿಣಿಯನ್ನು ಕೇಳಿದರೆ, “ನಿಮ್ಮ ಸಾಮಾನುಗಳನ್ನು ನೀವು ನೋಡಿಕೊಳ್ಳಿ. ನಾನೊಬ್ಬಳೇ ಎಷ್ಟು ಅಂತ ಮಾಡಲಿ,” ಎಂದು ಎದುರುತ್ತರ ಕೊಡುತ್ತಿದ್ದಳು.

ಉಮೇಶನ ತಲೆಯಲ್ಲಿ ಹುಳು ಕೊರೆಯತೊಡಗಿತು, `ಅವನಿಗೆ ಜ್ವರ ಬಂದಿದೆಯೆಂದು ತಿಳಿದು ಅವನ ಹಳೆಯ ಸೆಕ್ರೆಟರಿ ನೋಡಿ ಹೋಗಲೆಂದು ಮನೆಗೆ ಬಂದಿದ್ದಳು. ಆ ವಿಷಯಕ್ಕಾಗಿ ಹರಿಣಿ ಬೇಸರ ಪಟ್ಟುಕೊಂಡಿರಬಹುದೇ? ಅವಳು ತವರಿನಲ್ಲಿ ಈ ವಿಷಯದ ಕುರಿತು ಮಾತನಾಡಿ ಅವಳ ಅತ್ತಿಗೆ ಅದರ ಬಗ್ಗೆ ಕಿವಿಯೂದಿ ಕಳಿಸಿರಬಹುದೇ? ಅಥವಾ ಈಗ ಆಫೀಸ್‌ನಲ್ಲಿ ಕೆಲಸ ಹೆಚ್ಚಾಗಿರುವುದರಿಂದ ಅವಳೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ. ಅದಕ್ಕಾಗಿ ಬೇಸರ ಮಾಡಿಕೊಂಡಿರಬಹುದು. ಮನೆಯಲ್ಲಿ ಒಬ್ಬಳೇ ಇದ್ದು ಅವಳಿಗೆ ಬೋರ್‌ ಆಗಿರಬೇಕು….. ಇನ್ನೂ ಮಗು ಆಗಿಲ್ಲ. 2-3 ವರ್ಷವಾದ ಮೇಲೆ ಮಗುವಿನ ಪ್ಲಾನ್‌ ಮಾಡಲು ಇಬ್ಬರೂ ಕೂಡಿಯೇ ತೀರ್ಮಾನಿಸಿದ್ದೆವು. ಕೇಳಿದರೆ ಯಾವುದಕ್ಕೂ ಸರಿಯಾಗಿ ಉತ್ತರವನ್ನೇ ಕೊಡುತ್ತಿಲ್ಲ,’ ಉಮೇಶ ಯೋಚಿಸತೊಡಗಿದ.

“ಉಮೇಶ್‌, ಅಡುಗೆ ಮಾಡಿದ್ದೇನೆ. ನೀವು ಬಡಿಸಿಕೊಂಡು ಊಟ ಮಾಡಿ. ಉಳಿದದ್ದನ್ನು ಫ್ರಿಜ್‌ನಲ್ಲಿ ಇಟ್ಟುಬಿಡಿ. ನಾನು ಮನೆಗೆ  ಬರುವುದು ತಡವಾಗಬಹುದು. ಫ್ರೆಂಡ್‌ ಮನೆಯಲ್ಲಿ ಕಿಟಿ ಪಾರ್ಟಿ ಇದೆ,” ಹರಿಣಿ ಭಾವರಹಿತ ದನಿಯಲ್ಲಿ ಹೇಳಿದಳು.

“ಭಾನುವಾರದ ದಿನ ಯಾರು ಕಿಟಿ ಪಾರ್ಟಿ ಮಾಡುತ್ತಾರೆ? ಇದೊಂದು ದಿನ ತಾನೇ ಜೆಂಟ್ಸ್ ಎಲ್ಲ ಮನೆಯಲ್ಲಿರುತ್ತಾರೆ….?”

“ನಾವು ಪ್ರತಿದಿನ ಮನೆಯಲ್ಲಿ ಇರುತ್ತೇವಲ್ಲ. ಅದು ಲೆಕ್ಕ ಇಲ್ಲವೇನು? ಹಾಸಿಗೆ ಮೇಲೆ ನಿನ್ನೆಯಿಂದ ನಿಮ್ಮ ಬಟ್ಟೆಗಳು ಹರಡಿಕೊಂಡು ಬಿದ್ದಿವೆ. ಅವನ್ನೆಲ್ಲ ಎತ್ತಿಟ್ಟುಕೊಳ್ಳಿ. ನಿಮ್ಮ ಕೆಲಸಗಳನ್ನೆಲ್ಲ ನನಗೇ ಯಾಕೆ ಬಿಡುತ್ತೀರಿ ಅಂತ ನನಗೆ ಅರ್ಥವಾಗುವುದಿಲ್ಲ,” ಎನ್ನುತ್ತಾ ಹರಿಣಿ ಧಡ್‌ ಎಂದು ಬಾಗಿಲನ್ನು ಮುಚ್ಚಿಕೊಂಡು ಹೊರಟುಹೋದಳು.

ಉಮೇಶ್‌ ಮೊದಲಿನಿಂದಲೂ ಎಲ್ಲವನ್ನೂ ಹಾಗೆಯೇ ಬಿಟ್ಟಿರುತ್ತಿದ್ದನು… ಆಗೆಲ್ಲ ಹರಿಣಿ ಸಂತೋಷದಿಂದ ಆ ಕೆಲಸಗಳನ್ನೆಲ್ಲ  ಮಾಡುತ್ತಿದ್ದಳು. ಈಗ ಈ ರೀತಿ ಕೋಪಿಸಿಕೊಳ್ಳುವಂತಹದನ್ನು ನಾನೇನು ಮಾಡಿದೆ ಎಂದು ಉಮೇಶ್‌ ಯೋಚಿಸಿದ. ಹೋಗಲಿ, ಇನ್ನು ಮುಂದೆ ಅವಳಿಗೆ ಕೆಲಸದ ಹೊರೆ ಹೆಚ್ಚಿಸುವುದು ಬೇಡ. ನನ್ನ ಕೆಲಸ ನಾನೇ ಮಾಡಿಕೊಳ್ಳುತ್ತೇನೆ. ಹರಿಣಿ ರುಚಿ ರುಚಿಯಾಗಿ ಅಡುಗೆ ಮಾಡುತ್ತಿದ್ದಳು. ಹೀಗಾಗಿ ಉಮೇಶ್‌ ಹೊರಗೆ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದ. ಆದರೆ ಈಗ ಅಡುಗೆಗೆ ಒಮ್ಮೆ ಉಪ್ಪು ಹೆಚ್ಚಾಗಿದ್ದರೆ, ಮತ್ತೊಮ್ಮೆ ಸಪ್ಪೆ ಸಾಂಬಾರ್‌, ಬೆಂದಿಲ್ಲದ ತರಕಾರಿ, ಸೀದಿರುವ ಚಪಾತಿ….. ಅವಳಿಗೇನಾಗಿದೆ ಎಂದು ಉಮೇಶ್‌ಅಚ್ಚರಿಗೊಂಡ. ಅವನಿಗೇನೂ ತಿಳಿಯಲಿಲ್ಲ. ಅರ್ಧ ಮನಸ್ಸಿನಿಂದಲೇ ಊಟ ಮಾಡಿದ. ಊಟವಾದ ನಂತರ ಛಾವಣಿಯನ್ನೇ ದಿಟ್ಟಿಸುತ್ತಾ ಮಲಗಿದ್ದವನಿಗೆ ಒಂದು ಆಲೋಚನೆ ಬಂದಿತು, `ದಿನ ಅವಳೇ ಅಡುಗೆ ಮಾಡುತ್ತಾಳೆ. ಇಂದು ಅವಳು ಮನೆಗೆ ಬರುವುದರೊಳಗೆ ವಿಶೇಷವಾದ ಡಿನ್ನರ್‌ ಸಿದ್ಧಪಡಿಸಿಡುತ್ತೇನೆ….  ಅವಳಿಗೆ ಹಿಂದಿ ಸಿನಿಮಾ ಎಂದರೆ ಬಲು ಇಷ್ಟ. ನೈಟ್‌ ಶೋಗೆ ಟಿಕೆಟ್‌ಬುಕ್‌ ಮಾಡುತ್ತೇನೆ,’ ಎಂದುಕೊಂಡು ಕೂಡಲೇ ಎದ್ದು ಆನ್‌ಲೈನ್‌ ಟಿಕೆಟ್‌ ಬುಕ್‌ ಮಾಡಿದ. ಇಬ್ಬರಿಗೂ ಇಷ್ಟವಾದ ಅಡುಗೆ ತಯಾರಿಸಿದ.

ಹರಿಣಿ ಮನೆಗೆ ಬಂದಾಗ ಅವನು ಮಾಡಿರುವುದನ್ನು ಕಂಡು ಮನಸ್ಸಿನಲ್ಲಿಯೇ ಖುಷಿಪಟ್ಟಳು. ಗೊಜ್ಜನ್ನು ಕೊಂಚ ಸರಿಪಡಿಸಿದಳು. ಹೊರಗೆ ಏನೂ ಮಾತನಾಡಲಿಲ್ಲ. ಉಮೇಶ್‌ ತನ್ನ ಮೇಲೆ ಯಾವುದಕ್ಕೂ ಅವಲಂಬಿತನಾಗದಿರಲಿ ಎಂಬುದೇ ಅವಳ ಇಚ್ಛೆಯಾಗಿತ್ತು. ಊಟ ಮೌನವಾಗಿ ನಡೆಯಿತು. ಮೂವಿ ನೋಡುವಾಗಲೂ ಹರಿಣಿ ಸುಮ್ಮನಿದ್ದಳು.

ಅವಳ ಮೌನ ಉಮೇಶನಿಗೆ ತಾಳಲಾಗಲಿಲ್ಲ, “ಹರಿಣಿ ಏನು ವಿಷಯ ಅಂತ ಬಾಯಿಬಿಟ್ಟು ಹೇಳು. ನನ್ನಿಂದ ಏನಾದರೂ ತಪ್ಪಾಯಿತೇನು ಅಥವಾ ನನ್ನ ಜೊತೆ ಇರುವುದು ನಿನಗೆ ಇಷ್ಟವಾಗುತ್ತಿಲ್ಲವೇ?”

“ನಿಮಗೆ ಹಿಂದಿ ಸಿನಿಮಾ ಇಷ್ಟವಿಲ್ಲದೆ ಇರುವಾಗ ನನಗೋಸ್ಕರ ಯಾಕೆ ಬುಕ್‌ ಮಾಡಿದಿರಿ? ಪ್ರಸಾದ್‌ ಅಥವಾ ಧನಂಜಯ್‌ಜೊತೆಯಲ್ಲಿ ನಿಮಗೆ ಬೇಕಾದ ಇಂಗ್ಲಿಷ್‌ ಮೂವಿಗೆ ಹೋಗಬಹುದಾಗಿತ್ತು…..”

ಹರಿಣಿ ಹೇಳುತ್ತಿದ್ದುದನ್ನು ಕೇಳಿ ಉಮೇಶ್‌ ಬೆಪ್ಪಾದ. ತಾನು ಗೆಳೆಯರ ಜೊತೆ ಇಂಗ್ಲಿಷ್‌ ಮೂವಿಗೆ ಹೋಗುವುದು ಅವಳಿಗೆ ಸುತರಾಂ ಇಷ್ಟವಿರಲಿಲ್ಲ. ತನ್ನೊಂದಿಗೆ ಹಿಂದಿ ಸಿನಿಮಾಗೆ ಬರುವಂತೆ ಹಠ ಮಾಡುತ್ತಿದ್ದಳು. ಈಗ ಅದಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾಳೆ…. ಅವಳೇಕೆ ತನ್ನಿಂದ ದೂರ ನಿಲ್ಲುತ್ತಿದ್ದಾಳೆ? ಬೇರೆ ಯಾರಿಗಾದರೂ ಮನಸ್ಸು ಕೊಟ್ಟಿರಬಹುದೇ….? ಉಮೇಶ್‌ ತಲೆ ಕೊಡವಿಕೊಂಡ. ತಾನು ಹೀಗೆ ಯೋಚಿಸಬಹುದೇ, ತನ್ನನ್ನು ಅಪಾರವಾಗಿ ಪ್ರೀತಿಸುವ ಹರಿಣಿ ಹೀಗೆ ಮಾಡಲು ಸಾಧ್ಯವೇ ಇಲ್ಲ. ಪತಿ ತನ್ನ ಕೆಲಸನ್ನೆಲ್ಲ ಸ್ವತಃ ಮಾಡಿಕೊಳ್ಳಲಿ ಎಂದು ಅವಳು ಬಯಸುವುದಾದರೆ ಹಾಗೇ ಆಗಲಿ. ಆಗಲಾದರೂ ಅವಳಿಗೆ ಸಂತೋಷವಾಗುವುದು, ಅವಳು ಹಿಂದಿನ ಹರಿಣಿಯಾಗುವಳು. 2-3 ತಿಂಗಳಲ್ಲಿ ಉಮೇಶ್‌ ಸಾಕಷ್ಟು ಬದಲಾದ. ಭಾನುವಾರದ ದಿನ ತನ್ನ ಬಟ್ಟೆಗಳನ್ನು ಒಗೆದುಕೊಳ್ಳತೊಡಗಿದ. ಕೆಲವನ್ನು ತಾನೇ ಇಸ್ತ್ರೀ ಮಾಡಿಕೊಂಡರೆ, ಮತ್ತೆ ಕೆಲವನ್ನು ಲ್ಯಾಂಡ್ರಿಗೆ ಕೊಡುತ್ತಿದ್ದ.  ತನ್ನ ವಾಚ್‌, ಪರ್ಸ್‌, ಮೊಬೈಲ್‌ ಚಾರ್ಜರ್‌ ಇತ್ಯಾದಿಗಳನ್ನು ಗಮನವಿಟ್ಟು ಅವುಗಳ ಜಾಗದಲ್ಲಿ ಇಡುತ್ತಿದ್ದ. ಅವುಗಳ ಬಗ್ಗೆ ಹರಿಣಿಗೆ ತೊಂದರೆ ಕೊಡುತ್ತಿರಲಿಲ್ಲ. ಹೊಟ್ಟೆ ತುಂಬುವ ಮಟ್ಟಿಗೆ ಅಡುಗೆ ಮಾಡುವುದನ್ನೂ ಕಲಿತ. ಆಫೀಸಿಗೆ ಹೊರಡುವ ಮೊದಲು ತನ್ನ ಕೋಣೆಯನ್ನು ವ್ಯವಸ್ಥಿತವಾಗಿ ಇಡುತ್ತಿದ್ದ.

`ಈಗ ನಿನಗೆ ಸಂತೋಷಾನಾ ಹರಿಣಿ,’ ಎಂದು ಕೇಳಿದರೆ ಸುಮ್ಮನೆ ಮುಗುಳ್ನಗುತ್ತಿದ್ದಳು.  ಅವನು ಸ್ವತಃ ಕೆಲಸಗಳನ್ನು ಮಾಡಿಕೊಳ್ಳುವುದನ್ನು ನೋಡಿದಾಗ ಅವಳ ಮನಸ್ಸು ನೋಯುತ್ತಿತ್ತು. ಆದರೆ ಹಾಗೆ ಮಾಡುವುದು ಅವಳ ಪಾಲಿಗೆ ಅನಿವಾರ್ಯವಾಗಿತ್ತು.

“ಉಮೇಶ್‌, ಹೊಸ ಇಂಗ್ಲಿಷ್‌ ಮೂವಿ ಬಂದಿದೆ. ನಿಮ್ಮ ಸ್ನೇಹಿತರ ಜೊತೆ ನೋಡಿಕೊಂಡು ಬರಬಹುದಲ್ಲ…..”

“ಹರಿಣಿ, ನೀನು ಯಾಕೆ ಹೀಗೆ ನನ್ನನ್ನು ದೂರ ಮಾಡುತ್ತಿದ್ದೀಯ. ಇದರಿಂದ ನಿನಗೆ ಯಾವ ಸಂತೋಷ ಇದೆಯೋ ನನಗೆ ಅರ್ಥವಾಗುತ್ತಿಲ್ಲ. ನಾನು ನಿನಗೆ ತಕ್ಕವನಲ್ಲ ಅನ್ನಿಸತ್ತಿದೆಯೇನು?”

“ಅಯ್ಯೋ….. ನಾನು ನಿಮಗೆ ತಕ್ಕವಳಲ್ಲ. ಲಲಿತಾ ಆಂಟಿ ತಮ್ಮ ನಾದಿನಿಯ ಮಗಳನ್ನು ನಿಮಗೆ ಸರಿಯಾದ ಜೊತೆ ಅಂತ ಆರಿಸಿಟ್ಟಿದ್ದರು. ಅವಳ ಮದುವೆ ಇನ್ನೂ ಆಗಿಲ್ಲ. ನನ್ನಿಂದಾಗಿ ಅವಳ ಜೊತೆ ಆಗಬೇಕಿದ್ದ ಮದುವೆ ತಪ್ಪಿಹೋಯಿತು….. ಈ ವಿಷಯಕ್ಕೆ ಲಲಿತಾ ಆಂಟಿ ಇನ್ನೂ ಕೋಪ ಮಾಡಿಕೊಂಡಿದ್ದಾರೆ. ಈಗಲೂ ನೀವು ಮನಸ್ಸು ಮಾಡಿದರೆ ಅವರ ಕೋಪವನ್ನು ಹೋಗಲಾಡಿಸಬಹುದು…..”

“ಹರಿಣಿ, ನೀನು ಯಾಕೆ ಈಗ ಈ ಹಳೇ ವಿಷಯಗಳನ್ನೆಲ್ಲ ತೆಗೀತಾ ಇದಿಯಾ….. ನಾವು ಒಬ್ಬರನ್ನೊಬ್ಬರು ಇಷ್ಟಪಟ್ಟೆ, ಪ್ರೀತಿಸಿದೆವು, ಮದುವೆಯಾದೆವು. ಈಗ ಆ ವಿಷಯ ಯಾಕೆ ಬಂತು…. ಸರಿ ನನಗೀಗ ಆಫೀಸ್‌ಗೆ ಲೇಟ್‌ ಆಗ್ತಾ ಇದೆ. ಸಾಯಂಕಾಲ ಮಾತನಾಡೋಣ, ರಿಲ್ಯಾಕ್ಸ್,” ಎನ್ನುತ್ತಾ ಉಮೇಶ್‌ ಎಂದಿನಂತೆ ಅವಳ ಹಣೆಯನ್ನು ಚುಂಬಿಸಿ, “ನೀನು ಏನಾದರೂ ಮಾಡು, ಏನಾದರೂ ಹೇಳು, ನಾನಂತೂ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ. ಸೀ ಯೂ ಹನಿ,” ಎಂದು ಹೊರಟ.

`ನಾನು ನಿಮಗೆ ಏನೂ ಹೇಳಲಾರೆ…..’ ಎಂದುಕೊಳ್ಳುತ್ತಾ ಹರಿಣಿ ಬಹಳ ಹೊತ್ತು ಅಳುತ್ತಾ ಕುಳಿತಳು.

ಮರುದಿನವೇ ಅವಳು ಬೆಂಗಳೂರಿಗೆ ಹೊರಡಬೇಕಾಗಿತ್ತು. ಮತ್ತೆ ಹಿಂದಿರುಗಿ ಬಾರದಂತಹ ಪ್ರಯಾಣ. ಬ್ಯಾಗ್‌ನಲ್ಲಿ ತನಗೆ ಬೇಕಾದ ಸಾಮಾನುಗಳನ್ನು ಪ್ಯಾಕ್‌ ಮಾಡಿಕೊಂಡಳು.

ಉಮೇಶ್‌ ಆಫೀಸ್‌ನಿಂದ ಬಂದ ಮೇಲೆ ತಾನು ಊರಿಗೆ ಹೋಗಲಿರುವ ವಿಷಯವನ್ನು ತಿಳಿಸಲು ಹರಿಣಿಗೆ ಧೈರ್ಯವಾಗಲಿಲ್ಲ. ರಾತ್ರಿ ನಿದ್ರೆ ಬಾರದೆ ಮಗ್ಗಲು ಬದಲಿಸುತ್ತಿದ್ದಳು.

“ನಿನಗೆ ಮೈ ಸರಿ ಇಲ್ಲ ಅಂತ ಕಾಣುತ್ತೆ ಹರಿಣಿ,” ಎಂದ ಉಮೇಶ್‌ ಅವಳಿಗೆ ಕುಡಿಯಲು ಬಿಸಿ ನೀರು ತಂದುಕೊಟ್ಟ.

“ಡಾಕ್ಟರ್‌ಗೆ ಫೋನ್‌ ಮಾಡ್ಲಾ?” ಎಂದ.

“ಏನಿಲ್ಲ. ಸ್ವಲ್ಪ ತಲೆನೋವು ಅಷ್ಟೇ. ಬೆಳಗ್ಗೆ ಹೊತ್ತಿಗೆ ಸರಿಹೋಗುತ್ತದೆ. ನೀವು ಮಲಗಿಕೊಳ್ಳಿ….” ಎಂದಳು.

ಉಮೇಶ್‌ ಮಲಗಲಿಲ್ಲ. ಎದ್ದು ಹೋಗಿ ನೋವಿನ ತೈಲದ ಬಾಟಲನ್ನು ತಂದ. ಮುಚ್ಚಳ ತೆರೆಯುತ್ತಿದ್ದಾಗ ಅದು ಕೈ ಜಾರಿ ಮಂಚದ ಕೆಳಗೆ ಹೋಯಿತು. ಬಗ್ಗಿದಾಗ ಬ್ಯಾಗ್‌ ಕಾಣಿಸಿತು.

“ಇದೇನು ಬ್ಯಾಗ್‌? ಯಾರು ಊರಿಗೆ ಹೋಗುತ್ತಿದ್ದಾರೆ?” ಕೇಳಿದ.

“ಓ….. ಅದು… ನಾನು ನಾಳೆ ಬೆಂಗಳೂರಿಗೆ ಹೋಗಬೇಕಾಗಿದೆ. ನನ್ನನ್ನು ಕರೆದುಕೊಂಡು ಹೋಗಲು ಹರ್ಷ ಬರುತ್ತಾನೆ. ನನ್ನ ಸ್ನೇಹಿತೆ ರೇವತಿಯ ತಂಗಿಯ ಮದುವೆ ಇದೆ. ಅವಳಿಗೆ ಯಾರೂ ಇಲ್ಲ. ಗಾಬರಿಯಾಗಿದ್ದಾಳೆ. ಹೆದರಿ ಡಿಪ್ರೆಶನ್‌ನಿಂದಾಗಿ ಆಸ್ಪತ್ರೆಗೂ ಸೇರಿದ್ದಳು. ಅದಕ್ಕೆ ಅವಳ ಸಹಾಯಕ್ಕೆ ಹೋಗುತ್ತಿದ್ದೇನೆ. ನನ್ನನ್ನು ಕಳಿಸಿಕೊಡಿ ಅಂತ ನಿಮ್ಮನ್ನು ಕೇಳಲು ಫೋನ್‌ಮಾಡಿದ್ದಳು. ಉಮೇಶ್‌ ಬೇಡ ಅನ್ನುವುದಿಲ್ಲ…. 1 ತಿಂಗಳು ಅಲ್ಲದಿದ್ದರೂ 6 ತಿಂಗಳು ಬೇಕಾದರೂ ಇರಿಸಿಕೊ. ಅವರಿಗೆ ತೊಂದರೆ ಆಗುವುದಿಲ್ಲ. ಎಲ್ಲ ಕೆಲಸವನ್ನೂ ಸ್ವತಃ ಅವರೇ ಮಾಡಿಕೊಳ್ಳುವ ಅಭ್ಯಾಸ ಅವರಿಗಿದೆ ಅಂತ ಅವರಿಗೆ ಹೇಳಿದ್ದೇನೆ. ಸರಿ ತಾನೇ?” ಎಂದವಳು ಬಲವಂತದ ನಗೆ ನಕ್ಕಳು. ಇಷ್ಟು ಪ್ರೀತಿಸುವ ಪತಿಗೆ ಸಬೂಬು ಹೇಳಬೇಕಾದ ಅನಿವಾರ್ಯತೆಗೆ ಅವಳು ಒಳಗೊಳಗೆ ನೊಂದುಕೊಂಡಳು.

“ಆದರೆ…. ಎಷ್ಟು ದಿನ…. ನೀನು ಹೇಳಲೇ ಇಲ್ಲವಲ್ಲ…… ನಾನೊಬ್ಬನೇ…… ಹೇಗೆ….”

“ಒಬ್ಬರೇ ಇರುವುದಕ್ಕೆ ಎಲ್ಲರೂ ಅಭ್ಯಾಸ ಮಾಡಿಕೊಳ್ಳಬೇಕು. ಎಲ್ಲ ರೀತಿಯಿಂದಲೂ ನಾವು ನಮ್ಮ ಕೆಲಸವನ್ನು ನಡೆಸಿಕೊಂಡು ಹೋಗಬೇಕಾಗುತ್ತದೆ…… ಇದ್ದಕ್ಕಿದ್ದಂತೆ ಒಬ್ಬರು ಹೋಗಿಬಿಟ್ಟರೆ ಇನ್ನೊಬ್ಬರು ಸುಮ್ಮನೆ ಅಳುತ್ತಾ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ….” ಅವಳು ನಿರ್ಭಾವದಿಂದ ಹೇಳಿದಳು.

“ಸುಮ್ಮನೆ ಇರು….. ಏನು ತಲೆ ಬುಡ ಇಲ್ಲದ ಮಾತು ಆಡುತ್ತೀಯ…. ನೀನು ಹೋಗಬೇಕು ಅಂದರೆ ನಾನು ತಡೆಯುವುದಿಲ್ಲ…. ಆದರೆ ಯಾವಾಗ ವಾಪಸ್‌ ಬರುತ್ತೀಯ ಅಂತ ಹೇಳು…. ಮದುವೆಗೆ 10 ದಿನವೇ ಬೇಕಾದಷ್ಟಾಯಿತು. ಅಲ್ಲಿ 1 ತಿಂಗಳು ಇದ್ದು ಏನು ಮಾಡುತ್ತೀಯಾ? ಇರಲಿ ಹೋಗು…. ಆದರೆ ನನಗೆ ಪ್ರತಿದಿನ ಫೋನ್‌ ಮಾಡುತ್ತಿರು…..” ಎಂದ ಉಮೇಶ್‌. ಬೆಳಗ್ಗೆ 8 ಗಂಟೆಯ ಹೊತ್ತಿಗೆ ಹರ್ಷ ಬಂದ, “ಭಾವ…. ಅಕ್ಕ ಎಲ್ಲಿ?”

“ಅವಳಿನ್ನೂ ಎದ್ದಿಲ್ಲ. ರಾತ್ರಿ ಅವಳಿಗೆ ಮೈ ಚೆನ್ನಾಗಿರಲಿಲ್ಲ. ಏನೋ ವಿಚಿತ್ರವಾಗಿ ಮಾತನಾಡುತ್ತಿದ್ದಳು….. ಅದಕ್ಕೆ ಎಬ್ಬಿಸಲಿಲ್ಲ….”
“1 ಗಂಟೆಗೆ ರೈಲಿದೆ ಭಾವ ತಡವಾಗಬಾರದು.”

“ಅವಳು ಹೊರಡುವ ವಿಷಯ ನನಗೆ ಗೊತ್ತಾಗಿದ್ದು ರಾತ್ರಿನೇ…. ಕಾಫಿ ಮಾಡಿ ಎಬ್ಬಿಸೋಣ ಅಂತ ರೆಡಿ ಮಾಡುತ್ತಿದ್ದೆ. ನೀನು ಎಬ್ಬಿಸು…. ನಾನು ಕಾಫಿ ತರುತ್ತೇನೆ….” ಎಂದ ಉಮೇಶ್‌.

ಹರ್ಷ ಕೋಣೆಯೊಳಗೆ ಹೋದ, “ಅಕ್ಕಾ, ಎದ್ದೇಳು. ನಾನು ಬಂದಿದ್ದಾಯಿತು. ನೀನಿನ್ನೂ ಎದ್ದೇ ಇಲ್ಲ. ತಡವಾಗಿಬಿಡುತ್ತದೆ.”

“ಆಗುವಷ್ಟು ತಡ ಆಗಿಬಿಟ್ಟಿದೆ ಹರ್ಷ. ಮತ್ತೆ ಏನಾಗುತ್ತದೆ?” ಎನ್ನುತ್ತಾ ಹರಿಣಿ ಹಾಸಿಗೆಯಲ್ಲಿ ಎದ್ದು ಕುಳಿತಳು.

“ನೀನು ಚಿಕಿತ್ಸೆಗೆ ಅಲ್ಲೇ ಏಕೆ ಉಳಿದುಕೊಳ್ಳಲಿಲ್ಲ… ಪ್ರಯತ್ನ ಮಾಡಬಹುದಿತ್ತು. ಭಾವನಿಗೂ ಹೇಳುವುದಕ್ಕೆ ಏಕೆ ಬಿಡಲಿಲ್ಲ….?” ಹರ್ಷ ಅಕ್ಕನ ಭುಜಕ್ಕೆ ತಲೆಯೊರಗಿಸಿದ. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.

“ಕೈ ಮೀರಿಬಿಟ್ಟಿತ್ತು ಹರ್ಷ. ಎಷ್ಟು ಚಿಕಿತ್ಸೆ ಮಾಡಿದರೂ ಅಷ್ಟೇ ನಿನಗೆ ಗೊತ್ತಲ್ಲ….. ಅಲ್ಲದೆ, ನಾನಿಲ್ಲದೆ ಇರೋದಕ್ಕೆ ನಿಮ್ಮ ಭಾವನನ್ನೂ ತಯಾರು ಮಾಡಬೇಕಿತ್ತಲ್ಲ…. ಇರಲಿ, ನೀನೀಗ ಅಳಬೇಡ ಸುಮ್ಮನಿರು,” ಹರಿಣಿ ತಮ್ಮನ ಕಣ್ಣೀರನ್ನು ಒರೆಸಿದಳು. ಆದರೆ ಅದು ನಿಲ್ಲುತ್ತಲೇ ಇರಲಿಲ್ಲ. ಉಮೇಶ್‌ ಬರುತ್ತಿರುವ ಸದ್ದನ್ನು ಕೇಳಿದೊಡನೆ ಹರ್ಷ ಕಣ್ಣುಗಳನ್ನು ಒರೆಸಿಕೊಂಡು ಅಕ್ಕನೊಡನೆ ಹರಟೆ ಹೊಡೆಯುವವನಂತೆ ಸೋಗು ಹಾಕಲು ಪ್ರಯತ್ನಿಸಿದ. ಹರಿಣಿ ಹೊರಡುವ ಮುನ್ನ ಉಮೇಶನಿಗೆ ಮನೆಯ ಬಗ್ಗೆ ಕಾಳಜಿಯಿಂದಿರಲು ಸೂಚಿಸಿದಳು.

“ಹೊರಗೆ ಹೆಚ್ಚಾಗಿ ತಿನ್ನಬೇಡಿ. ಆಮೇಲೆ ನನಗೆ ಪ್ರತಿದಿನ ಫೋನ್‌ ಮಾಡಬೇಡಿ. ಉಮೇಶನಿಗೆ ನಿನ್ನನ್ನು ಬಿಟ್ಟು ಇರೋದಕ್ಕೆ ಆಗೋಲ್ಲ ಅಂತ ಅಲ್ಲಿ ಎಲ್ಲರೂ ನನ್ನನ್ನು ರೇಗಿಸುತ್ತಾರೆ,” ಎಂದಳು.

“ನನ್ನ ಬಗ್ಗೆ ನೀನೇನೂ ಯೋಚನೆ ಮಾಡಬೇಡ. ನಾನು ಎಲ್ಲಾ ಮ್ಯಾನೇಜ್‌ ಮಾಡುತ್ತೇನೆ. ನೀನು ದೊಡ್ಡ ಪ್ರೋಗ್ರಾಂ ಹಾಕಿಕೊಂಡು ಗೆಳತಿಯ ಮನೆಗೆ ಹೋಗುತ್ತಿದ್ದೀಯ. ಸಂತೋಷವಾಗಿ ಹೋಗಿದ್ದು ಬಾ….” ಎಂದ.

ಹರಿಣಿ ರೈಲು ಗಾಡಿಯನ್ನು ಹತ್ತುವಾಗ ಉಮೇಶ್‌ ಮೆದುವಾಗಿ ಅವಳ ಕೈ ಅದುಮಿದ. ಅವನು ಕೈ ಬಿಟ್ಟು ಬೈ ಹೇಳಿದಾಗ ಹರಿಣಿಗೆ ಪ್ರಪಂಚವೇ ತನ್ನಿಂದ ದೂರ ಸರಿಯುತ್ತಿರುವಂತೆ ಭಾಸವಾಯಿತು. ಕಡೆ ಬಾರಿ ಅವನನ್ನು ಕಣ್ತುಂಬ ನೋಡಬಯಸಿದಳು. ಆದರೆ ಭೋರ್ಗರೆಯುತ್ತಿದ್ದ ಕಣ್ಣೀರ ಕಡಲನ್ನು ತಡೆಯಲು ಅಶಕ್ತಳಾಗಿ ಮುಖ ತಿರುಗಿಸಿ ಬೋಗಿಯೊಳಗೆ ನಡೆದಳು.

ಹರಿಣಿ ಊರಿಗೆ ಹೋಗಿ 2 ದಿನಗಳಷ್ಟೇ ಆಗಿತ್ತು. ಉಮೇಶನಿಗೆ ಆಫೀಸ್‌ನ ಕೆಲಸಕ್ಕಾಗಿ ಬರುವ ಶುಕ್ರವಾರ ಬೆಂಗಳೂರಿಗೆ ಹೋಗಬೇಕಾಗಿದೆ ಎಂಬ ವಿಷಯ ತಿಳಿಯಿತು. ಅವನಿಗೆ ಖುಷಿಯಿಂದ ಕುಣಿದಾಡುವಂತಾಯಿತು. ಹರಿಣಿಗೆ ವಿಷಯ ತಿಳಿಸಲು 2-3 ಸಲ ಪ್ರಯತ್ನಿಸಿದ. ಅವಳ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಇರಲಿ, ಅವಳಿಗೆ ಸರ್ಪ್ರೈಸ್‌ ಕೊಡೋಣವೆಂದು ಯೋಚಿಸಿದ.

ಇದ್ದಕ್ಕಿದ್ದಂತೆ ಉಮೇಶ್‌ ಮನೆಗೆ ಬಂದುದನ್ನು ಕಂಡು ಹರ್ಷ ಕಕ್ಕಾಬಿಕ್ಕಿಯಾದ, “ಭಾವ….. ನೀವು……” ಎಂದು ತೊದಲಿದ.

“ನನಗೆ ಇಲ್ಲಿ ಮೀಟಿಂಗ್‌ ಇದೆ. ಅದಕ್ಕೋಸ್ಕರ ಬಂದೆ. ಹರಿಣಿಯ ಫೋನ್‌ ಕನೆಕ್ಷನ್‌ ಸಿಗಲಿಲ್ಲ. ಅವಳಿಗೆ ಸರ್ಪ್ರೈಸ್‌ ಮಾಡೋಣ ಅಂತ ಇದ್ದೀನಿ. ಅವಳ ಫ್ರೆಂಡ್‌ ರೇವತಿಯ ಮನೆ ವಿಳಾಸ ಕೊಡು ಹರ್ಷ. ಅಲ್ಲಿಗೇ ಹೋಗುತ್ತೇನೆ,” ಎಂದ ಉಮೇಶ್‌.

“ನಾನೂ ಅಲ್ಲಿಗೆ ಹೋಗುತ್ತಿದ್ದೇನೆ ಭಾವ…… ಬನ್ನಿ ಹೋಗೋಣ…..”

“1 ನಿಮಿಷ ಇರು…. ಒಳಗೆ ಹೋಗಿ ಅಮ್ಮನನ್ನು ಮಾತನಾಡಿಸಿಕೊಂಡು ಬರುತ್ತೇನೆ,” ಎಂದು ಉಮೇಶ್‌ ಹೇಳಿದಾಗ ಹರ್ಷನಿಗೆ ಏನು ಹೇಳಬೇಕೆಂದು ತಕ್ಷಣ ತೋಚಲಿಲ್ಲ.

“ಎಲ್ಲರೂ ಅಲ್ಲೇ ಇದ್ದಾರೆ,” ಎಂದು ನಿಧಾನವಾಗಿ ಹೇಳಿದ.

“ಓಹ್‌… ಯಂಗ್‌ ಮ್ಯಾನ್‌! ಯಾವ ಲೋಕದಲ್ಲಿ ಮುಳುಗಿದ್ದೀಯ..? ನಿನಗೂ ಬೇಗನೆ ಮದುವೆ ಮಾಡಬೇಕು ಅಂತ ಕಾಣಿಸುತ್ತೆ…..” ಎಂದು ಛೇಡಿಸಿದ. ಉಮೇಶ್‌ ಆಟೋದಿಂದ ಇಳಿದು ಕಿದ್ವಾಯ್‌ ಆಸ್ಪತ್ರೆ ಎಂಬ ಹೆಸರನ್ನು ನೋಡಿ ಸ್ತಂಭಿತನಾದ.

“ಅರೆ ಹರ್ಷ….. ಇದೆಲ್ಲಿಗೆ ಕರೆದುಕೊಂಡು ಬಂದಿದ್ದೀಯಾ…..? ಇಲ್ಲಿ ಯಾರಿದ್ದಾರೆ…..? ಮಾತನಾಡು….. ಹರಿಣಿ ಏನಾದರೂ…..” ಸಂದೇಹದಿಂದ ಅವನ ಧ್ವನಿ ನಡುಗಿತು.

ಹರ್ಷ ಏನೂ ಮಾತನಾಡದೆ ಅವನ ಕೈ ಹಿಡಿದು ನೇರವಾಗಿ ಹರಿಣಿಯ ಬಳಿಗೆ ಕರೆತಂದು, “ಸಾರಿ ಅಕ್ಕಾ, ನಿನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗಲಿಲ್ಲ…..” ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳತೊಡಗಿದ. ಉಮೇಶನಿಗೆ ವಿಷಯ ತಿಳಿಸಬಾರದೆಂದು ಮನಸ್ಸಿನಲ್ಲಿದ್ದರೂ ಹರಿಣಿಯ ಕಣ್ಣುಗಳು ಮಾತ್ರ ಅವನನ್ನು ಕಾಣಲು ಕಾತರಿಸುತ್ತಿದ್ದವು. ಅವನು ಹತ್ತಿರ ಬಂದ ಕೂಡಲೇ ಅವನ ಕೈಗಳೆರಡನ್ನೂ ಗಟ್ಟಿಯಾಗಿ ಹಿಡಿದು, ನಿಮ್ಮನ್ನು ನೋಡಿದ ಮೇಲೆ ಸಮಾಧಾನದಿಂದ ಹೋಗಬಲ್ಲೇ ಎಂಬ ಭಾವದಿಂದ ಕಣ್ಣುಗಳನ್ನು ಮುಚ್ಚಿದಳು. ಅವಳ ಕೈಹಿಡಿತ ನಿಧಾನವಾಗಿ ಸಡಿಲವಾಯಿತು. ಅವಳು ಪ್ರಜ್ಞೆ ತಪ್ಪಿದಳು.

“ಹರಿಣಿ….ಹರಿಣಿ…. ಏನಾಯಿತು? ನೀನು ನನಗೆ ಮೊದಲೇ ಏಕೆ ತಿಳಿಸಲಿಲ್ಲ….? ಇಲ್ಲ… ನಿನಗೆ ಏನೂ ಆಗುವುದಕ್ಕೆ ನಾನು ಬಿಡುವುದಿಲ್ಲ… ಡಾಕ್ಟರ್‌….. ಸಿಸ್ಟರ್‌…..” ಉಮೇಶ್‌ ಉದ್ವೇಗ, ಗಾಬರಿಯಿಂದ ಕೂಗಿದ.

ಅಲ್ಲಿಗೆ ಬಂದ ಡಾಕ್ಟರ್‌ ಅವನ ಹೆಗಲ ಮೇಲೆ ಕೈಯಿರಿಸಿ ಸಮಾಧಾನ ಮಾಡಲು ಪ್ರಯತ್ನಿಸಿದರು, “ಪ್ಲೀಸ್‌, ಧೈರ್ಯ ತಂದುಕೊಳ್ಳಿ….. ನಾನು ಇವರಿಗೆ 2-3 ತಿಂಗಳ ಹಿಂದೇನೇ ಹೇಳಿದ್ದೆ… ಬಹಳ ತಡವಾಗಿ ಬಂದಿದ್ದರು…. ಕ್ಯಾನ್ಸರ್‌ನ ಲಾಸ್ಟ್ ಸ್ಟೇಜ್‌ ಆಗಿತ್ತು….. ಈಗ ಏನೂ ಮಾಡುವಂತಿಲ್ಲ….”

“ಹೀಗೆ ಹೇಳಿಬಿಟ್ಟರೆ ಹೇಗೆ ಡಾಕ್ಟರ್‌? ನಿಮ್ಮ ಕೈಯಲ್ಲಿ ಆಗದಿದ್ದರೆ ಬಿಟ್ಟುಬಿಡಿ….. ನಾನು ಅಮೆರಿಕಾಗೆ ಕರೆದುಕೊಂಡು ಹೋಗುತ್ತೇನೆ…. ತಕ್ಷಣ ಡಿಸ್ಚಾರ್ಜ್‌ ಮಾಡಿ…. ನಿನಗೆ ಏನಾದರೂ ಆಗುವುದಕ್ಕೆ ನಾನು ಬಿಡುವುದಿಲ್ಲ ಹರಿಣಿ….. ನಾನು ಈಗಲೇ ಬರುತ್ತೇನೆ,” ಎನ್ನುತ್ತಾ ಉಮೇಶ್‌ ಹೊರಗೆ ಓಡಿದ.

ಒಂದೇ ಉಸಿರಿನಲ್ಲಿ ಉಮೇಶ್‌ ಅಮೆರಿಕಾಗೆ ಹೋಗುವ ವ್ಯವಸ್ಥೆ ಮಾಡಿದ. 2 ದಿನಗಳ ನಂತರ ಹರಿಣಿಯನ್ನು ಕರೆದುಕೊಂಡು ಮೈ ತುಂಬ ಆಸೆ ಹೊತ್ತು ವಿಮಾನವನ್ನೇರಿದ.

“ನೀನಿಲ್ಲದೆ ನಾನಿರಲಾರೆ ಹರಿಣಿ….” ಅವನು ಹರಿಣಿಯ ಕಿವಿಯಲ್ಲಿ ಮೆಲ್ಲಗೆ ಉಸುರಿದ ಮತ್ತು ಎಂದಿನಂತೆ ಅವಳ ಹಣೆಯನ್ನು ಚುಂಬಿಸಿದ. ಆದರೆ ಈ ಬಾರಿ ಅವನ ಮುಖವೆಲ್ಲ ಕಣ್ಣೀರಿನಿಂದ ತೊಯ್ದಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ