ಕಥೆ – ಗೀತಾ ಕುಲಕರ್ಣಿ
ಭಾನುವಾರ ಮಧ್ಯಾಹ್ನ ಊಟವಾದ ನಂತರ ಅಡುಗೆಮನೆಯ ಕೆಲಸನ್ನೆಲ್ಲ ಮುಗಿಸಿ ನಾನು ಅತಿಥಿಗಳ ಲಿಸ್ಟ್ ಸಿದ್ಧಪಡಿಸಲು ಡೈರಿ ತೆಗೆದುಕೊಂಡು ಕುಳಿತೆ. 20 ದಿನಗಳ ನಂತರ ನಮ್ಮ 25ನೇ ವಿವಾಹ ವಾರ್ಷಿಕೋತ್ಸವ ಇತ್ತು. ಅದಕ್ಕಾಗಿ ಒಂದು ಪಾರ್ಟಿ ಮಾಡುವ ಹವಣಿಕೆಯಲ್ಲಿದ್ದೆವು.
ಅಶೋಕ್ ಅಲ್ಲಿಗೆ ಬಂದರು, “ರಮಾ, ಮಕ್ಕಳನ್ನೂ ಕರೆ, ಯಾರು ಯಾರನ್ನು ಆಮಂತ್ರಿಸಬೇಕು ಅಂತ ಒಟ್ಟಿಗೆ ಕುಳಿತು ನೋಡೋಣ,” ಎಂದರು.
“ಶುಭಾ, ಸಿದ್ಧಾರ್ಥ್ ಬನ್ನಿ. ಗೆಸ್ಟ್ ಲಿಸ್ಟ್ ಮಾಡೋಣ.”
ನನ್ನ ಕರೆ ಕೇಳುತ್ತಿದ್ದಂತೆ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ನನ್ನ ಮಕ್ಕಳಿಬ್ಬರೂ ಧಾವಿಸಿ ಬಂದರು. ಬೇರೆ ಸಮಯದಲ್ಲಾದರೆ ಹೀಗೆ ಕರೆದ ಕೂಡಲೇ ಬರುವವರೇ ಅಲ್ಲ. ಪಾರ್ಟಿ ಬಗ್ಗೆ ಇಬ್ಬರೂ ತುಂಬಾ ಉತ್ಸಾಹಿತರಾಗಿದ್ದರು. ತಮ್ಮ ಸ್ನೇಹಿತರನ್ನು ಆಹ್ವಾನಿಸಬೇಕು. ಡಿ.ಜೆ ಇರಬೇಕು, ಎಲ್ಲರೂ ಡ್ಯಾನ್ಸ್ ಮಾಡಬೇಕು, ಒಂದು ಒಳ್ಳೆಯ ಹೋಟೆಲ್‌ನಲ್ಲಿ ಡಿನ್ನರ್ ಏರ್ಪಡಿಸಬೇಕು ಎಂದೆಲ್ಲ ಪ್ಲಾನ್ ಮಾಡಿದ್ದರು.
ನಾನು ಪೆನ್ ಕೈಗೆತ್ತಿಕೊಳ್ಳುತ್ತಾ ಹೇಳಿದೆ, “ಅಶೋಕ್, ನೀವೇ ಪ್ರಾರಂಭ ಮಾಡಿ.”
“ಸರಿ, ಬರೆದುಕೋ. ನಮ್ಮ ನೆಂಟರು ಮತ್ತು ನೆರೆಹೊರೆಯವರದು ಕಾಮನ್ ಲಿಸ್ಟ್. ನಮ್ಮ ಆಫೀಸ್‌ನವರ ಹೆಸರು ಹೇಳುತ್ತೇನೆ,” ಎನ್ನುತ್ತಾ ಒಂದೊಂದಾಗಿ ಹೆಸರುಗಳನ್ನು ಹೇಳತೊಡಗಿದರು.
“ರಮೇಶ್, ನವೀನ್, ಅನಿಲ್, ವಿಕಾಸ್, ಕಾರ್ತಿಕ್, ಅಂಜಲಿ, ದೇವಿಕಾ, ರಂಜನಾ….”
ಕಡೆಯ ಹೆಸರು ಕೇಳಿ ನಾನು ಪತಿಯೆಡೆಗೆ ನೋಡಿದೆ. ಅವರು ಸ್ಟೈಲಾಗಿ, “ಅಯ್ಯೋ, ಇವರೂ ನಮ್ಮ ಆಫೀಸ್‌ನಲ್ಲಿ….”
“ನಾನೇನೂ ಹೇಳಲಿಲ್ಲವಲ್ಲ…..” ನಾನೆಂದೆ.
“ಮತ್ತೆ, ಹಾಗೇಕೆ ನೋಡಿದೆ.”
“ಈ ರಂಜನಾ ನನಗೆ ಇಷ್ಟವಿಲ್ಲ.”
“ಏಕೆ?”
“ನಿಮಗೇ ಗೊತ್ತಲ್ಲ. ಅವಳು ಪಟಪಟ ಅಂತ ಮಾತನಾಡುವುದು, ಪಾರ್ಟಿಗಳಲ್ಲಿ ನಿಮ್ಮೆಲ್ಲರ ಭುಜದ ಮೇಲೆ ಕೈಯಿರಿಸಿಕೊಂಡು ಮಾತನಾಡುತ್ತಾ ನಿಲ್ಲುವುದು ಇವೆಲ್ಲ ಚೆನ್ನಾಗಿ ಕಾಣಲ್ಲ. ಇಂತಹ ಸ್ವೇಚ್ಛಾಚಾರಿ ಮಹಿಳೆಯರು ನನಗೆ ಸ್ವಲ್ಪ ಇಷ್ಟವಾಗುವುದಿಲ್ಲ.”
“ರಮಾ, ಇಷ್ಟು ಸಣ್ಣದಾಗಿ ಯೋಚಿಸಬೇಡ. ಈಗ ಕಾಲ ಬದಲಾಗಿದೆ. ಸ್ತ್ರೀ-ಪುರುಷರ ಗೆಳೆತನದಲ್ಲಿ ಇಂತಹ ಚಿಕ್ಕಪುಟ್ಟ ವಿಷಯವನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ….. ನೀನು ಯೋಚಿಸುವ ರೀತಿಯನ್ನು ಬದಲಾಯಿಸಿಕೊಳ್ಳಬೇಕು.”
ನಾನು ಸುಮ್ಮನಿದ್ದೆ. ಏನು ಹೇಳಲಿ? ನನ್ನ ಪತಿಯ ಉಪದೇಶ ಕೇಳಿ ಏನಾದರೂ ಕಟುವಾಗಿ ಮಾತನಾಡಿ ಫ್ಯಾಮಿಲಿ ಟೈಮನ್ನು ಹಾಳುಮಾಡಲು ನನಗಿಷ್ಟವಾಗಲಿಲ್ಲ.
ನಂತರ ನಾನು ಸಿದ್ಧಾರ್ಥನಿಗೆ ಹೇಳಿದೆ, “ಸರಿ, ಈಗ ನಿನ್ನ ಸ್ನೇಹಿತರ ಹೆಸರುಗಳನ್ನು ಹೇಳು.”
ಅವನು ತನ್ನ ಪಟ್ಟಿ ಪ್ರಾರಂಭಿಸಿದನು, “ರಚನಾ, ಶೀತಲ್, ನ್ಯಾನ್ಸಿ, ಅಂಜಲಿ, ಟೀನಾ, ವಿವೇಕ್, ರಜತ್, ಸಮರ್ಥ್…..”
ಮಧ್ಯದಲ್ಲಿ ನಾನು ನಗುತ್ತಾ ಹೇಳಿದೆ, “ನಿನ್ನ ಲಿಸ್ಟ್ ನಲ್ಲಿ ಹುಡುಗಿಯರ ಹೆಸರೇ ಹೆಚ್ಚಾಗಿದೆಯಲ್ಲ…..?”
“ಹೌದು ಮಾಮ್, ಇವರೆಲ್ಲ ನನ್ನ ಬೆಸ್ಟ್ ಫ್ರೆಂಡ್ಸ್,” ಎನ್ನುತ್ತಾ ಇನ್ನೂ ಹೆಸರುಗಳನ್ನು ಹೇಳುತ್ತಾ ಇದ್ದ, ನಾನು ಬರೆಯುತ್ತಾ ಇದ್ದೆ.
“ಇದೇನು ನಮ್ಮ ವೆಡ್ಡಿಂಗ್ ಆ್ಯನಿವರ್ಸರಿನೋ ಅಥವಾ ನಿಮ್ಮಗಳ ಗೆಟ್ ಟುಗೆದರ್ ಪಾರ್ಟಿನೋ?” ನಾನು ತಮಾಷೆ ಮಾಡಿದೆ.
“ಓ ಮಾಮ್, ಈ ಪಾರ್ಟಿಗಾಗಿ ಎಲ್ಲರೂ ಕಾಯುತ್ತಿದ್ದಾರೆ….. ನ್ಯಾನ್ಸಿ ಮತ್ತು ರಚನಾ ಅಂತೂ ಆಗಲೇ ಡ್ಯಾನ್ಸ್ ಪ್ರಾಕ್ಟೀಸ್ ಪ್ರಾರಂಭಿಸಿದ್ದಾರೆ….. ಇಬ್ಬರೂ ಸೋಲೋ ಪರ್‌ಫಾರ್ಮೆನ್ಸ್ ಕೊಡುತ್ತಾರೆ.”
ಶುಭಾ ಹೇಳಿದಳು, “ಈಗ ನನ್ನ ಸ್ನೇಹಿತರ ಹೆಸರುಗಳನ್ನು ಬರೆದುಕೊಳ್ಳಿ. ಆಶು, ಅಭಿಜಿತ್, ಉಜ್ವಲಾ, ಭಾರತಿ, ಶೇಖರ್, ಪಾರ್ಥವ್, ಟೋನಿ, ರಾಧಿಕಾ.”
ಅವಳೂ ಹಲವಾರು ಹೆಸರುಗಳನ್ನು ಬರೆಸಿದಳು.
ಸಿದ್ಧಾರ್ಥ್ ಅವಳನ್ನು ರೇಗಿಸಿದ, “ನೋಡಿ ಮಾಮ್, ಇವಳ ಲಿಸ್ಟ್ ನಲ್ಲೂ ಹುಡುಗರ ಹೆಸರುಗಳು ಇವೇ ತಾನೇ?”
ಶುಭಾ ಅವನ ಬೆನ್ನಿನ ಮೇಲೆ ಗುದ್ದುತ್ತಾ ಹೇಳಿದಳು, “ಶಟಪ್, ಈಗಿನ ಕಾಲದಲ್ಲಿ ಎಲ್ಲರೂ ಸ್ನೇಹಿತರು. ನಾವು ಪಾರ್ಟಿಯಲ್ಲಿ ಚೆನ್ನಾಗಿ ಎಂಜಾಯ್ ಮಾಡುವುದಕ್ಕೆ ಕಾಯುತ್ತಿದ್ದೇವೆ…. ಮಾಮ್ ನೀವು ನೋಡುತ್ತಿರಿ. ಆಶು ಎಷ್ಟು ಒಳ್ಳೆಯ ಡ್ಯಾನ್ಸರ್ ಅಂತ.”
ಇಷ್ಟರಲ್ಲಿ ಅಶೋಕ್‌ಗೆ ತಮ್ಮ ಆಫೀಸಿನ ಇನ್ನಿಬ್ಬರು ಮಹಿಳಾ ಸಹೋದ್ಯೋಗಿಗಳ ಹೆಸರು ನೆನಪಾಯಿತು. ನಾನು ಅವುಗಳನ್ನೂ ಬರೆದುಕೊಂಡೆ.
“ಮಾಮ್, ನಮ್ಮ ಸ್ನೇಹಿತರ ಲಿಸ್ಟ್ ಮಾಡಿ ಆಯಿತು. ಈಗ ಡೈರಿ ಮತ್ತು ಪೆನ್‌ನ್ನು ನನ್ನ ಕೈಗೆ ಕೊಡಿ. ನಾನು ನಿಮ್ಮ ಫ್ರೆಂಡ್ಸ್ ಹೆಸರನ್ನು ಬರೆಯುತ್ತೇನೆ.”
“ನಿಮ್ಮ ಮಮ್ಮಿಯ ಲಿಸ್ಟ್ ನ್ನು ನಾನೇ ಹೇಳುತ್ತೇನೆ ಬಿಡು,” ನಾನು ಬಾಯಿ ತೆರೆಯುವ ಮೊದಲೇ ಅಶೋಕ್ ಹೇಳಿದ್ದರಿಂದ ನಾನು ಸುಮ್ಮನಾದೆ.
ಅವರು ಹೇಳತೊಡಗಿದರು, “ವೀಣಾ, ಮಂಜು, ನೀಲಮ್, ನಿತಾ, ಸುಮಾ, ನೇಹಾ…. ನಿಮ್ಮ ಕಿಟಿ ಪಾರ್ಟಿ ಮೆಂಬರ್ಸ್ ಇನ್ನೂ ಕೆಲವರು ಇರಬೇಕಲ್ಲವೇ?”
ಆಗ ನಾನು ಉಳಿದ 4-5 ಹೆಸರುಗಳನ್ನು ಹೇಳಿದೆ, “ಅದರ ಜೊತೆಗೆ ಇನ್ನೊಂದು ಹೆಸರು ಸೇರಿಸಿಕೊ…. ಶರತ್.”
“ಇವರು ಯಾರು?” ಮೂವರೂ ಚಕಿತರಾದರು.
“ನನ್ನ ಸ್ನೇಹಿತ.”
“ಅರೆ, ಎಂದೂ ಹೆಸರು ಕೇಳೇ ಇಲ್ಲವಲ್ಲ….. ನಮ್ಮ ಮನೆ ಹತ್ತಿರವೇ ಇದ್ದಾರಾ?” ಮೂವರ ಮುಖ ಭಾವ ನೋಡಲು ತಮಾಷೆಯಾಗಿತ್ತು.
ಅಶೋಕ್ ಹೇಳಿದರು, “ನೀನು ಯಾವಾಗಲೂ ಹೇಳಿಯೇ ಇಲ್ಲವಲ್ಲ. ಯಾರು ಅಂತ ನನಗೆ ಗೊತ್ತಾಗುತ್ತಲೇ ಇಲ್ಲ.”
“ಹೇಳುವಂಥ ವಿಶೇಷ ಏನೂ ಇಲ್ಲ. ಹೀಗೇ ಪರಿಚಯ ಆಯಿತು. ಅವರನ್ನೂ ಪಾರ್ಟಿಗೆ ಕರೆಯೋಣ ಅನ್ನಿಸಿತು. ಮುಂದಿನ ಬೀದಿಯಲ್ಲೇ ವಾಸಿಸುತ್ತಾರೆ. ಒಂದು ಚಿಕ್ಕ ಮಗು ಇದೆ. ಎಷ್ಟೋ ಸಲ ಅವರನ್ನು ಮತ್ತು ಮನೆಯವರನ್ನು ಇಲ್ಲಿಗೆ ಕರೆಯೋಣ ಅಂತ ಅಂದುಕೊಂಡೆ. ಆದರೆ ಆಗಲೇ ಇಲ್ಲ. ಈಗ ಪಾರ್ಟಿಗೆ ಆಮಂತ್ರಿಸುವುದಕ್ಕೆ ಒಂದು ಅವಕಾಶ ಇದೆ…. ತುಂಬ ಒಳ್ಳೆಯವರು. ಅವರನ್ನು ಭೇಟಿ ಮಾಡಿದರೆ ನಿಮಗೆಲ್ಲ ಸಂತೋಷ ಆಗುತ್ತದೆ.”
ಮೂವರು ಹಾವು ಕಂಡವರಂತೆ ಪೇಲವವಾಗಿ ಕುಳಿತರು. ವಾತಾವರಣ ಇದ್ದಕ್ಕಿದ್ದಂತೆ ಬದಲಾಗಿಬಿಟ್ಟಿತ್ತು. ಆಶ್ಚರ್ಯದಿಂದ ಕೂಡಿದ ಗಂಭೀರ ವಾತಾವರಣ ನಿರ್ಮಾಣವಾಗಿತ್ತು.
ಅಶೋಕ್ ಮತ್ತೆ ಹೇಳಿದರು, “ನೀನು ಯಾವತ್ತೂ ಹೇಳೇ ಇಲ್ಲ.”
“ಏನು ಹೇಳಬೇಕಿತ್ತು….? ಅಂತಹ ದೊಡ್ಡ ವಿಷಯವೇನಲ್ಲ.”
“ಎಲ್ಲಿ ಸಿಕ್ಕಿದರು ನಿನಗೆ?”
“ಆಗಾಗ ಲೈಬ್ರೆರಿಯಲ್ಲಿ ಸಿಗುತ್ತಾರೆ. ಅವರಿಗೂ ನನ್ನ ಹಾಗೆ ಓದುವುದರಲ್ಲಿ ಆಸಕ್ತಿ ಇದೆ…. ಅಲ್ಲೇ ಪರಿಚಯ ಆಯಿತು.”
“ಅವರ ಹೆಂಡತಿಯನ್ನು ಭೇಟಿ ಮಾಡಿದ್ದೀಯಾ?”
“ನೋಡಿದ್ದೇನೆ. ಆದರೆ ಮಾತನಾಡಿಸಿಲ್ಲ. ಈಗ ಪಾರ್ಟಿಗೆ ಕರೆದರೆ ಭೇಟಿಯಾಗುತ್ತದೆ.”
ಸಿದ್ಧಾರ್ಥ್ ಹೇಳಿದ, “ಮಾಮ್, ಇದನ್ನು ಕೇಳಿ ಏನೋ ವಿಚಿತ್ರವಾಗಿ ಅನ್ನಿಸುತ್ತದೆ.”
“ಏಕೆ?”
“ಗೊತ್ತಿಲ್ಲ. ನಿಮ್ಮ ಬಾಯಲ್ಲಿ ಮೇಲ್ ಫ್ರೆಂಡ್ ಹೆಸರು ಕೇಳಿ ಆಶ್ಚರ್ಯ ಆಗುತ್ತಿದೆ.”
ಶುಭಾ ಸಹ ಹೇಳಿದಳು, “ಮಾಮ್, ನಾನೂ ಸಹ ನಿಮ್ಮಿಂದ ಇದನ್ನು ಎಕ್ಸ್ ಪೆಕ್ಟ್ ಮಾಡಿರಲಿಲ್ಲ.”
“ಯಾವ ವಿಷಯ ಹೇಳುತ್ತಿದ್ದೀಯಾ?”
“ಅದೇ, ನೀವು ಪುರುಷರನ್ನು ಫ್ರೆಂಡ್ ಮಾಡಿಕೊಂಡಿರುವುದು.”
“ಏಕೆ, ಇದರಲ್ಲಿ ಹೊಸದೇನಿದೆ? ಕಾಲ ಬದಲಾಗಿದೆ ಸ್ತ್ರೀ-ಪುರುಷರ ಗೆಳೆತನ ಸಾಮಾನ್ಯ ವಿಷಯವಾಗಿದೆ ತಾನೇ? ಈಗ ಸ್ವಲ್ಪ ಹೊತ್ತಿಗೆ ಮೊದಲು, ನಾನು ನಿಮ್ಮ ಮಾತುಗಳನ್ನು ಕೇಳಿ, ನನ್ನ ಸಂಸಾರ ಎಷ್ಟು ಆಧುನಿಕ ವಿಚಾರ ಹೊಂದಿದೆ ಎಂದು ಸಂತೋಷಪಟ್ಟುಕೊಂಡೆ. ಹಾಗೇ ನನ್ನ ಸ್ನೇಹಿತನ ಬಗ್ಗೆ ಕೇಳಿ ನೀವೆಲ್ಲ ಸಂತೋಷಪಡುತ್ತೀರಿ ಅಂದುಕೊಂಡೆ.”
ಮೂವರ ಮುಖಗಳೂ ಪೆಟ್ಟು ತಿಂದಂತೆ ಆಗಿದ್ದವು.
ಅಶೋಕ್ ಇದ್ದಕ್ಕಿದ್ದಂತೆ, “ನಿದ್ರೆ ಬರುತ್ತಾ ಇದೆ. ಮಕ್ಕಳೇ, ನೀವು ರೆಸ್ಟ್ ತೆಗೆದುಕೊಳ್ಳಿ. ಮಿಕ್ಕ ಕೆಲಸ ಆಮೇಲೆ ನೋಡೋಣ,” ಎಂದರು.
ಮಕ್ಕಳು ಬತ್ತಿಹೋದ ಉತ್ಸಾಹದಿಂದ ಮಾತಿಲ್ಲದೆ ಎದ್ದು ನಡೆದರು. ಅಶೋಕ್ ದಿಂಬಿನ ಮೇಲೆ ತಲೆಯಿಟ್ಟು. ಕಣ್ಣಿಗೆ ಅಡ್ಡವಾಗಿ ಕೈ ಇರಿಸಿಕೊಂಡರು. ನಾನು ಹಾಗೇ ಕುಳಿತು ಶರತ್ ಬಗ್ಗೆ ಯೋಚಿಸತೊಡಗಿದೆ…..
ಕೆಲವಾರು ತಿಂಗಳುಗಳ ಹಿಂದೆ ಲೈಬ್ರೆರಿಯಲ್ಲಿ ಸಿಕ್ಕಿದ್ದರು. ಪುಸ್ತಕಗಳ ಬಗ್ಗೆ ಮಾತನಾಡುವ ಮೂಲಕ ಪರಿಚಯವಾಗಿತ್ತು. ಅವರು ಶಾಲೆಯೊಂದರಲ್ಲಿ ಕನ್ನಡ ಟೀಚರ್ ಆಗಿದ್ದಾರೆ. ಅವರ ಪತ್ನಿಯೂ ಒಬ್ಬ ಟೀಚರ್. ಅವರ ಮಗಳು ಈಗ ಮೂರನೇ ತರಗತಿಯಲ್ಲಿದ್ದಾಳೆ. ಅವರ ಸರಳ ಸ್ವಭಾವವನ್ನು ಕಂಡು ಅವರೊಡನೆ ಮಾತನಾಡಲು ಇಷ್ಟವಾಗುತ್ತದೆ. ಅವರ ಮರ್ಯಾದಾಪೂರ್ವಕ ನಡವಳಿಕೆ ಮೆಚ್ಚುಗೆಯಾಗುತ್ತದೆ. ನಿಂತಿದ್ದಲ್ಲೇ ಸಾಹಿತ್ಯದ ಬಗ್ಗೆ, ಲೇಖಕರು, ಕವಿಗಳ ಬಗ್ಗೆ ಮಾತನಾಡುತ್ತೇವೆ….. ನನಗಂತೂ ಅವರ ಮನೆಯಾಗಲಿ, ಫೋನ್ ನಂಬರ್ ಆಗಲಿ ತಿಳಿದಿಲ್ಲ….. ಪಾರ್ಟಿಗೆ ಕರೆಯಬೇಕಾದರೆ ಲೈಬ್ರೆರಿಯಲ್ಲೇ ಭೇಟಿ ಮಾಡಬೇಕಾಗುತ್ತದೆ.
ಇರಲಿ, ಅದು ಮುಂದಿನ ಮಾತು. ಈಗಂತೂ ನಾನು ಸ್ತ್ರೀ-ಪುರುಷರ ಮಿತ್ರತ್ವದ ಬಗ್ಗೆ ನನ್ನ ಮನೆಯವರ ಆಧುನಿಕ ಆಲೋಚನಾ ಧಾಟಿಯ ಡಬಲ್ ಸ್ಟಾಂಡರ್ಡ್ ನೋಡಿ ಬೆರಗಾಗಿ ಹೋದೆ. ಶರತ್‌ನ ಹೆಸರು ಕೇಳುತ್ತಿದ್ದಂತೆ ಮನೆಯ ವಾತಾವರಣವೇ ಬದಲಾಗಿಬಿಟ್ಟಿತು. ಅದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಾನು ಅದೆಷ್ಟು ಸಹಜವಾಗಿ ಅವರೆಲ್ಲರ ಸ್ನೇಹಿತರ ಪಟ್ಟಿಯ ಹುಡುಗ-ಹುಡುಗಿಯರ ಹೆಸರುಗಳನ್ನು ಬರೆದೆ. ನನ್ನ ಲಿಸ್ಟ್ ನಲ್ಲಿ ಒಬ್ಬ ಪುರುಷನ ಹೆಸರು ಬಂದೊಡನೆಯೇ ಎಲ್ಲರ ಮೂಡ್ ಹಾಳಾಯಿತು. ಅವರಿಗೊಂದು ರೀತಿ, ನನಗೊಂದು ರೀತಿಯೇ? ನನಗೆ ಕೋಪ ಬರುವಂತಾಯಿತು. ಕೊಂಚ ಹೊತ್ತಿನ ಬಳಿಕ ನನ್ನ ಮನಸ್ಸು ಬೇರೆ ಬಗೆಯಿಂದ ಯೋಚಿಸತೊಡಗಿತು.
ಈ ಮೂವರಿಗೂ ನನ್ನ ಬಾಯಿಂದ ಬಾಯ್‌ಫ್ರೆಂಡ್ ಹೆಸರು ಬಂದುದನ್ನು ಕೇಳಲು ಇಷ್ಟವಾಗಲಿಲ್ಲ….. ಹೀಗೇಕೆ? ಮೂವರೂ ನನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ. ನನ್ನ ಬಗ್ಗೆ ಪೊಸೆಸಿವ್ ಆಗಿದ್ದಾರೆ. ನಾನು ಈ ರೀತಿ ಯೋಚಿಸಿದಾಗ ನನ್ನ ಮನಸ್ಸು ಹಗುರವಾಯಿತು. ನಮ್ಮ ನಮ್ಮಲ್ಲಿನ ಸ್ನೇಹ, ಪ್ರೀತಿ, ಸುರಕ್ಷೆ ಅಧಿಕಾರದ ಭಾವನೆಗಳ ಅನುಭವವಾಗತೊಡಗಿತು. ಮನಸ್ಸು ನಿರಾಳವಾಯಿತು.
ಆಗ ನನಗೆ ಮತ್ತೆ ಮೂವರೊಡನೆ ಒಟ್ಟಿಗೆ ಕುಳಿತು ಮಾತನಾಡುವ ಮನಸ್ಸಾಯಿತು. ಆದ್ದರಿಂದ ಜೋರಾಗಿ ಕೂಗು ಹಾಕಿದೆ, “ಎಲ್ಲರೂ ಬನ್ನಿ, ನಾನು ತಮಾಷೆ ಮಾಡಿದೆ. ನಿಮ್ಮನ್ನೆಲ್ಲ ಫೂಲ್ ಮಾಡಿಬಿಟ್ಟೆ.”
ನಾನು ಹೀಗೆ ಹೇಳಿ ಜೋರಾಗಿ ನಕ್ಕಿದ್ದನ್ನು ಕೇಳಿದ ಕೂಡಲೇ ಅಶೋಕ್ ಕಣ್ಣಿಗೆ ಅಡ್ಡಲಾಗಿ ಇರಿಸಿದ್ದ ಕೈಯನ್ನು ತೆಗೆದು ಕೇಳಿದರು, “ಹೌದಾ? ಮತ್ತೆ ಸುಳ್ಳು ಯಾಕೆ ಹೇಳಿದೆ?”
ಮಕ್ಕಳೂ ಆತುರದಿಂದ ಒಳಗೆ ಬಂದರು, “ಮಾಮ್, ಹಾಗೇಕೆ ಹೇಳಿದಿರಿ?”
“ನೀವು ಮಾತ್ರ ಅಷ್ಟೊಂದು ಜೋಕ್ಸ್ ಮಾಡುತ್ತೀರಿ, ನಾನು ನಿಮಗೆ ತಮಾಷೆ ಮಾಡಬಾರದೇನು?”
ಶುಭಾ ಮುಖ ಸೊಟ್ಟಗೆ ಮಾಡಿ ಉಲಿದಳು,“ಆದರೂ ನೀವು ಇಂಥ ತಮಾಷೆ ಮಾಡಬೇಡಿ…..ಒಂದು ಥರಾ ಅನ್ನಿಸುತ್ತೆ.”
ಸಿದ್ಧಾರ್ಥ್ ದನಿಗೂಡಿಸಿದ, “ಹೌದು ಮಾಮ್, ನನಗೂ ಒಂದು ಥರಾ ಆಯಿತು.”
ಅಶೋಕ್ ಮೇಲೆದ್ದು ಕುಳಿತುಕೊಳ್ಳುತ್ತಾ, “ನೀನಂತೂ ನಮಗೆಲ್ಲ ಶಾಕ್ ಕೊಟ್ಟುಬಿಟ್ಟೆ,” ಎಂದರು. ಎಲ್ಲರ ಮುಖದಲ್ಲೂ ನಿರಾಳತೆಯ ಭಾವ ಗೋಚರಿಸುತ್ತಿತ್ತು. ಅವರೆಲ್ಲ ಉತ್ಸಾಹದಿಂದ ಪಾರ್ಟಿಯ ಮುಂದಿನ ಸಿದ್ಧತೆಗಳ ಬಗ್ಗೆ ಮಾತನಾಡತೊಡಗಿದರು.
ನಾನು ಮನಸ್ಸಿನಲ್ಲಿ ನನ್ನ ಸುಳ್ಳು-ಸತ್ಯದ ತಮಾಷೆಯ ಬಗ್ಗೆ ನೆನೆಸಿಕೊಂಡು ನಸುನಗುತ್ತಾ ಲಿಸ್ಟ್ ಬರೆಯುವ ಕೆಲಸದಲ್ಲಿ ಮಗ್ನಳಾದೆ. ಆದರೆ ಮನಸ್ಸಿನ ಒಂದು ಮೂಲೆಯಲ್ಲಿ ಶರತ್‌ನ ನೆನಪು ಮತ್ತೂ ಹೆಚ್ಚು ಧೃಡವಾಗಿ ನಿಂತಿತು. ಅವರನ್ನು ಎಂದಾದರೂ ಆಮಂತ್ರಿಸಬೇಕು. ವೆಡ್ಡಿಂಗ್ ಆ್ಯನಿವರ್ಸರಿಗೆ ಅಲ್ಲದಿದ್ದರೂ ಬೇರೊಂದು ದಿನ ಅವರಿಗೆ ಅತಿಥಿ ಸತ್ಕಾರ ನೀಡಬೇಕು.