ಕಥೆ  –  ಸುನಂದಾ ಶಶಿಧರ್‌ 

ಕಾಲ ಕಳೆದಂತೆ ನಾವು ಪರಸ್ಪರ ಆತ್ಮೀಯರಾದೆವು. ಅವಳು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳತೊಡಗಿದಳು. ಆದರೆ ನಾನು ಅವಳನ್ನು ಅರ್ಥ ಮಾಡಿಕೊಂಡಿರುವೆನೇ ಎಂದು ಒಮ್ಮೊಮ್ಮೆ ಯೋಚಿಸುತ್ತಿದ್ದೆ.

ನಮ್ಮ ಕಾಲೇಜ್‌ ಲೈಬ್ರೆರಿಯಲ್ಲಿ ಕಳೆದ 3-4 ದಿನಗಳಿಂದ ಅವಳನ್ನು ನೋಡುತ್ತಿದ್ದೇನೆ. ಅವಳ ಹೆಸರು ಅನಿತಾ  ಎಂದು ತಿಳಿಯಿತು. ಸುಮಾರು 40 ವರ್ಷ ವಯಸ್ಸು, ಸರಳ ಉಡುಗೆ, ಉದ್ದವಾದ ಜಡೆ, ಕಣ್ಣುಗಳಲ್ಲಿ ಏನೋ ಒಂದು ವಿಧವಾದ ಆಕರ್ಷಣೆ.

ಕಾಲೇಜಿನ ಸೈನ್ಸ್ ಡಿಪಾರ್ಟ್‌ಮೆಂಟ್‌ಗೆ ಹೊಸದಾಗಿ ನೇಮಕವಾಗಿದ್ದಾಳೆ. ನನ್ನದು ಆರ್ಟ್ಸ್ ಡಿಪಾರ್ಟ್‌ಮೆಂಟ್‌. ಸಾಹಿತ್ಯದ ವಿಷಯವನ್ನು ನಾನು ಪಾಠ ಮಾಡುವುದರಿಂದ ದಿನ 1-2 ಗಂಟೆಗಳ ಕಾಲ ಲೈಬ್ರೆರಿಯಲ್ಲಿರುತ್ತೇನೆ. ಅವಳು ಲೈಬ್ರೆರಿಯಲ್ಲಿ ಆಗಾಗ ಕಾಣಿಸತೊಡಗಿದಳು.

ಒಂದು ದಿನ ನಾನು ಅವಳನ್ನು ಕೇಳಿದೆ, “ನಿಮಗೂ ಸಾಹಿತ್ಯದಲ್ಲಿ ಆಸಕ್ತಿ ಇದೆಯೇ?”

“ಹೌದು. ಹೆಸರಾಂತ ಕವಿಗಳ ಕವನ, ಕಾವ್ಯಗಳನ್ನು ಓದುವುದರಲ್ಲಿ ನನಗೆ ಬಹಳ ಆಸಕ್ತಿ. ಚಿಕ್ಕಪುಟ್ಟ ಕವಿತೆಗಳನ್ನು ಬರೆದೂ ಇದ್ದೇನೆ.”

“ಓಹೋ! ಹಾಗಾದರೆ ನನಗೊಬ್ಬರು ಫ್ರೆಂಡ್‌ ಸಿಕ್ಕಿದಂತಾಯಿತು,” ನಾನು ಉತ್ಸಾಹದಿಂದ ಹೇಳಿದೆ.

ಅವಳ ಕಣ್ಣುಗಳಲ್ಲಿ ಹೊಳಪು ಮೂಡಿತು.

ಅಂದಿನಿಂದ ನಾವಿಬ್ಬರೂ ಲೈಬ್ರೆರಿಯಲ್ಲಿ ಭೇಟಿಯಾಗತೊಡಗಿದೆವು. ಲೈಬ್ರರಿಯಲ್ಲಿ ಚರ್ಚೆ ಮಾಡುವವರಿಗಾಗಿಯೇ 2 ಪ್ರತ್ಯೇಕ ಕೋಣೆಗಳಿದ್ದವು. ಅವುಗಳಿಗೆ ಪಾರದರ್ಶಕ ಗಾಜಿನ ಬಾಗಿಲುಗಳಿದ್ದು, ಅಲ್ಲಿಯ ಚರ್ಚೆಯಿಂದ ಇತರರಿಗೆ ತೊಂದರೆಯಾಗದಂತೆ ಮಾಡುವುದಾಗಿತ್ತು.

ಕೆಲವು ದಿನಗಳು ಕಳೆದ ಮೇಲೆ ನಾನು ಅವಳನ್ನು ಕೇಳಿದೆ, “ನೀವು ಬಹಳ ಹೊತ್ತು ಇಲ್ಲೇ ಇರುತ್ತೀರಿ. ಮನೆಯಲ್ಲಿ ನಿಮ್ಮ ಪತಿ ನಿಮಗಾಗಿ….” ನಾನು ಬೇಕೆಂದೇ ಮಾತನ್ನು ಅರ್ಧಕ್ಕೆ ನಿಲ್ಲಿಸಿದೆ.

ಅವಳು ನಕ್ಕು ಹೇಳಿದಳು, “ಪತಿ ಅನ್ನುವವರು ಇದ್ದರೆ ತಾನೇ ಕಾಯುತ್ತಾರೆ….”

“ಅಂದರೆ….?”

“ಅಂದರೆ…. ನಾನು ಅವಿವಾಹಿತೆ.”

ಅವಳ ಮಾತಿಗೆ ಪ್ರತಿಕ್ರಿಯಿಸಲು ನನಗೆ ಒಂದೆರಡು ನಿಮಿಷ ಬೇಕಾಯಿತು.

“ಅಂದರೆ…. ನೀವು ಮದುವೆಯೇ ಆಗಲಿಲ್ಲವೇ? ಅದೇಕೆ?”

“ಮೊದಲೆಲ್ಲ ವಿದ್ಯಾಭ್ಯಾಸದ ಕಡೆಗೇ ಗಮನವಿತ್ತು. ಆಮೇಲೆ ಸರಿಯಾದ ಕೆಲಸ ಆಗಲಿ ಅಂತ ಒಂದಷ್ಟು ವರ್ಷಗಳು ಕಳೆದವು…. ಬಹುಶಃ ನಿಮ್ಮಂಥ ಯೋಗ್ಯ ವರ ಸಿಕ್ಕಿದ್ದರೆ ಆಗುತ್ತಿತ್ತು ಅಂತ ಕಾಣಿಸುತ್ತೆ.”

“ಹಾಗಾದರೆ ನಾನು ನಿಮಗೆ ಸಿಕ್ಕಿ ಪ್ರಪೋಸ್‌ ಮಾಡಿದ್ದರೆ  ನನ್ನನ್ನು ಮದುವೆ ಆಗುತ್ತಿದ್ದಿರಾ?” ನಾನು ತುಂಟತನದಿಂದ ಕೇಳಿದೆ.

“ಖಂಡಿತ ಯೋಚನೆ ಮಾಡಿರುತ್ತಿದ್ದೆ,” ಅವಳು ಹುಬ್ಬು ಕುಣಿುಸುತ್ತಾ ಹೇಳಿದಳು.

“ನನಗೂ ಮನೆಯಲ್ಲಿ ಕಾಯುವವರು ಯಾರೂ ಇಲ್ಲ.”

“ನೀವು ಅವಿವಾಹಿತರೇನು?”

“ಅವಿವಾಹಿತ ಅಲ್ಲವಾದರೂ ಒಬ್ಬಂಟಿಯಾಗಿದ್ದೇನೆ. ನನ್ನ ಹೆಂಡತಿ ಮದುವೆಯಾದ 2 ವರ್ಷಕ್ಕೇ ಒಂದು ಅಪಘಾತದಲ್ಲಿ….”

“ಓ ಸಾರಿ…… ನೀವು ಇನ್ನೊಂದು ಮದುವೆ ಯಾಕೆ ಮಾಡಿಕೊಳ್ಳಲಿಲ್ವಾ? ಮಗು ಇದೆಯಾ?”

“ಹೌದು, ಮಗ ಇದ್ದಾನೆ. ಬೆಂಗಳೂರಿನಲ್ಲಿ ಓದುತ್ತಿದ್ದಾನೆ. ಇಲ್ಲಿವರೆಗೂ ನನ್ನ ಹೆಂಡತಿಯನ್ನು ಮರೆಯುವುದಕ್ಕೆ ಆಗುತ್ತಿಲ್ಲ,” ಎಂದು ಹೇಳುತ್ತಾ ನಾನು ಎದ್ದು ನಿಂತೆ, “ನನಗೀಗ ಕ್ಲಾಸ್‌ ಇದೆ. ಹೊರಡುತ್ತೇನೆ,” ಎಂದು ಹೊರನಡೆದೆ.

ಪತ್ನಿಯ ವಿಷಯ ಬಂದಾಗ ನಾನು ಉದ್ವೇಗಕ್ಕೊಳಗಾದೆ. ಮನಸ್ಸಿನ ಭಾವನೆಗಳನ್ನು ತಡೆದುಕೊಳ್ಳಲಾರದೆ ಬಂದುಬಿಟ್ಟೆ. ನನ್ನ ಮನಃಸ್ಥಿತಿ ಅವಳಿಗೆ ಅರ್ಥವಾಯಿತು.

ಮರುದಿನ ಅವಳೇ ಮುಂದಾಗಿ ನನ್ನ ಬಳಿಗೆ ಬಂದಳು.“ಐ ಆಮ್ ಸಾರಿ. ನಿಮ್ಮ ಪತ್ನಿಯ ಬಗ್ಗೆ ಹೇಳುತ್ತಾ ಎಮೋಶನಲ್ ಆಗಿಬಿಟ್ಟಿರಿ.”

“ಹೌದು. ನಾನು ಅವಳನ್ನು ಬಹಳ ಪ್ರೀತಿಸುತ್ತಿದ್ದೆ….. ಅವಳ ಕಾಲಾನಂತರ ನಾನೇ ಮಗುವನ್ನು ಬೆಳೆಸಿದೆ. ಈಗ ಅವನೂ ಬೇರೆ ಊರಿಗೆ ಓದಲು ಹೋಗಿರುವುದರಿಂದ ನನಗೆ ತಡೆದುಕೊಳ್ಳಲು ಆಗಲಿಲ್ಲ.”

“ನನಗೆ ಅರ್ಥವಾಗುತ್ತದೆ. ನೀವು ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ. ನನಗೆ ಇಂಥವರನ್ನು ಕಂಡರೆ ಬಲು ಇಷ್ಟ.”

“ಓ.ಕೆ. ಹಾಗಾದರೆ ನೀವು ನನ್ನನ್ನು ಲೈಕ್‌ ಮಾಡುತ್ತೀರಿ ಎಂದ ಹಾಗಾಯಿತು,” ಅವಳ ಮಾತಿನ ಜಾಡು ಹಿಡಿದು ನಗುತ್ತಾ ಹೇಳಿದೆ.

ಅದಕ್ಕೆ ಅವಳೇನೂ ಉತ್ತರಿಸಲಿಲ್ಲ. ಆದರೆ ಸಮ್ಮತಿಯೆಂಬಂತೆ ಮುಗುಳ್ನಕ್ಕಳು. ನನ್ನ ಎದೆಯ ಹಕ್ಕಿ ಹಾಡತೊಡಗಿತು. ನಾನು ಮೆಲ್ಲನೆ ಅವಳ ಕೈಯನ್ನು ನನ್ನ ಕೈಯಲ್ಲಿರಿಸಿ ಅದುಮಿದೆ. ಬಹಳ ಹೊತ್ತು ಮಾತನಾಡುತ್ತಾ ಕುಳಿತೆವು.

ಒಂದೇ ರೀತಿಯ ಆಸಕ್ತಿ ಮತ್ತು ಒಂದೇ ರೀತಿಯ ಪರಿಸ್ಥಿತಿಯ ಜೊತೆ ಜೊತೆಗೆ ಪರಸ್ಪರ ಮೆಚ್ಚುಗೆ ಇರಲಾಗಿ, ನಾವು ಹೆಚ್ಚು ಸಮಯ ಜೊತೆಯಾಗಿ ಕಾಲ ಕಳೆಯತೊಡಗಿದೆವು.

44 ವರ್ಷ ವಯಸ್ಸಿನಲ್ಲಿ ನಾನು ಯುವ ಪ್ರೇಮಿಯಂತೆ ಇರುವುದನ್ನು ನೆನೆದು ನನಗೇ ನಗು ಬರುತ್ತಿತ್ತು. ಅದೇ ಒಂದು ಬಗೆಯ ಮುದ ನೀಡುತ್ತಿತ್ತು.

ಇದೇ ರೀತಿ ಕೆಲವು ತಿಂಗಳುಗಳು ಕಳೆದವು. ನಾವು ಪರಸ್ಪರ ಹತ್ತಿರವಾಗಿದ್ದೆವು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೆವು. ಅವಳೊಬ್ಬಳೇ ಇರುವಾಗ ಸಪ್ಪಗಿರುವಂತೆ ತೋರುತ್ತಿತ್ತು. ಅವಳು ಸದಾ ನಗುನಗುತ್ತಿರಬೇಕು ಎಂಬುದು ನನ್ನ ಇಚ್ಛೆಯಾಗಿತ್ತು.

ಒಂದು ದಿನ ನಾನು ಅವಳಿಗೆ ಹೇಳಿದೆ, “ಅನಿತಾ, ನಾವು ಮದುವೆ ಮಾಡಿಕೊಳ್ಳೋಣ. ನೀನು ಒಪ್ಪಿದರೆ ನಿಮ್ಮ ತಂದೆ ತಾಯಿಯ ಹತ್ತಿರ ಮಾತಾಡಲು ಬರುತ್ತೇನೆ.”

ನನ್ನ ಮಾತು ಕೇಳಿ ಅವಳು ಒಂದು ಕ್ಷಣ ಸ್ತಬ್ಧಳಾದಳು. ಮುಖ ಬಾಡಿತು. ನನ್ನ ಪ್ರಸ್ತಾಪವನ್ನು ಅವಳು ನಿರಾಕರಿಸುವಳೇನೋ ಎಂದು ನನಗೆ ಆತಂಕವಾಯಿತು. ಆದರೆ ಮರುಕ್ಷಣವೇ ಅವಳು ಸಾವರಿಸಿಕೊಂಡು ಮುಗುಳ್ನಗುತ್ತಾ, “ನನ್ನ ತಂದೆ ಬಿಸ್‌ನೆಸ್‌ಗಾಗಿ ವಿದೇಶಕ್ಕೆ ಹೋಗಿದ್ದಾರೆ. ಅಮ್ಮ ಒಬ್ಬರೇ ಏನು ಹೇಳುತ್ತಾರೆ? ಒಂದು ಕೆಲಸ ಮಾಡೋಣ. ಇನ್ನು ಸ್ವಲ್ಪ ದಿನ ಆದ ಮೇಲೆ ನೀವು ಬರಬಹುದು.”

ಅವಳು ಹೇಳುವುದು ಸರಿ ಎನ್ನಿಸಿತು. ಆ ದಿನ ಅವಳು ತನ್ನ ಮನೆಯವರ ಕುರಿತು ಬಹಳ ಹೊತ್ತು ಮಾತನಾಡಿದಳು. ಅವಳ ಮುಖವನ್ನೇ ನೋಡುತ್ತಾ ಅವಳು ಹೇಳಿದ್ದನ್ನೆಲ್ಲ ಕೇಳಿದೆ.

“ನನ್ನ ತಂದೆಗೆ ನನ್ನನ್ನು ಕಂಡರೆ ಬಹಳ ಪ್ರೀತಿ. ನನಗೇನಾದರೂ ಬೇಸರವಾದರೆ ಅವರು ಎಲ್ಲ ಕೆಲಸವನ್ನು  ಬಿಟ್ಟು ನನ್ನನ್ನು ಸಮಾಧಾನಪಡಿಸಲು ಬರುತ್ತಾರೆ. ನಾನು ನಗುವವರೆಗೆ ಅವರಿಗೆ ನೆಮ್ಮದಿ ಇರುವುದಿಲ್ಲ.”

“ನಿಮ್ಮ ತಂದೆ ಯಾವ ಬಿಸ್‌ನೆಸ್‌ ಮಾಡುತ್ತಾರೆ?”

“ಅವರದು ಎಕ್ಸ್ ಪೋರ್ಟ್‌ ಇಂಪೋರ್ಟ್‌ ಬಿಸ್‌ನೆಸ್‌.”

“ಸರಿ, ನಿಮ್ಮ  ತಾಯಿ?”

“ಅಮ್ಮ ಹೌಸ್‌ವೈಫ್‌. ಅವರು ಮನೆಯನ್ನು ಎಷ್ಟು ಅಚ್ಚುಕಟ್ಟಾಗಿ ಇಟ್ಟಿರುತ್ತಾರೆಂದರೆ ಆಶ್ಚರ್ಯ ಆಗುತ್ತದೆ. ಒಂದು ಸಾಮಾನು ಆ ಕಡೆ ಈ ಕಡೆ ಆಯ್ತು ಅಂದರೆ ಅವರಿಗೆ  ಕೋಪ ಬಂದುಬಿಡುತ್ತದೆ.”

“ನೀನು ಈ ವಿಷಯ ಹೇಳಿದ್ಧು ಒಳ್ಳೆಯದಾಯಿತು. ನಾನು ಅದರ ಬಗ್ಗೆ ಗಮನ ಇಡಬೇಕು.” ನನ್ನ ಮಾತು ಕೇಳಿ ಅವಳ ಕಣ್ಣುಗಳಲ್ಲಿ ನೀರು ತುಂಬಿತು. “ಏನಾಯಿತು?” ಎಂದು ಕೇಳಿದೆ. ಅವಳು ಉತ್ತರ ಕೊಡಲಿಲ್ಲ.

“ನಿನ್ನ ಪೇರೆಂಟ್ಸ್ ನ್ನು ಬಹಳ ಪ್ರೀತಿಸುತ್ತಿಯಾ, ಅದಕ್ಕೇ ನಿನಗೆ ಮದುವೆಯ ಕಡೆ ಮನಸ್ಸು ಹೋಗಿಲ್ಲ.”

ನನ್ನ ಮಾತಿಗೆ ಅವಳು ನಕ್ಕಳು, “ಹೌದು. ನಿಜ ಹೇಳಬೇಕೆಂದರೆ ಅವರನ್ನು ಬಿಟ್ಟು ಎಲ್ಲಿಗೂ ಹೋಗುವುದಕ್ಕೆ ನನಗೆ ಇಷ್ಟವಿಲ್ಲ.”

“ಯೋಚನೆ ಮಾಡಬೇಡ. ಬೇಕಾದರೆ ಅವರನ್ನೂ ನಮ್ಮ ಜೊತೆಯಲ್ಲಿ ಇರಿಸಿಕೊಳ್ಳೋಣ. ಏನಂತೀಯಾ?”

ಅವಳೇನೂ ಹೇಳಲಿಲ್ಲ. ಆದರೆ ಪ್ರೀತಿಯಿಂದ ನನ್ನತ್ತ ನೋಡಿದಳು. ಬಹುಶಃ ನನ್ನ ಮಾತಿನಲ್ಲಿ ಅವಳಿಗೆ ನಂಬಿಕೆ ಬರಲಿಲ್ಲವೇನೋ.

ಆದರೆ ನಾನು ಮನಸ್ಸಿನಲ್ಲಿ ಅವಳ ತಂದೆತಾಯಿಯರನ್ನು ನಮ್ಮ ಜೊತೆಯಲ್ಲಿಯೇ ಇರಿಸಿಕೊಳ್ಳುವ ನಿರ್ಧಾರ ಮಾಡಿದೆ. ಅವಳ ಪೇರೆಂಟ್ಸ್ ನನಗೂ ಪೇರೆಂಟ್ಸ್ ಇದ್ದ ಹಾಗಲ್ವಾ……? ಅನಿತಾ ಒಮ್ಮೊಮ್ಮೆ ತನ್ನ ಅಣ್ಣ ಅತ್ತಿಗೆಯ ಬಗೆಗೂ ಹೇಳುತ್ತಿದ್ದಳು.  ಅಣ್ಣನಿಗೆ ಅವಳ ಮೇಲೆ ಬಲು ಪ್ರೀತಿ. ಆದರೆ ಅತ್ತಿಗೆಯ ಸ್ವಭಾವ ಅಷ್ಟು ಒಳ್ಳೆಯದಲ್ಲ, ಅಣ್ಣನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದಾಳೆ. ಇನ್ನೊಂದು ದಿನ ನಾನು ಅನಿತಾಳಿಗೆ ಹೇಳಿದೆ, “ನಡಿ, ಈ ದಿನ ನಿಮ್ಮ ಮನೆಯವರನ್ನೆಲ್ಲ ಭೇಟಿ ಮಾಡುತ್ತೇನೆ.”

ಅವಳು ಸ್ವಲ್ಪ ಹೊತ್ತು ಸುಮ್ಮನಿದ್ದು, ನಂತರ, “ನಮ್ಮ ತಾಯಿ ತಂದೆಯ ಜೊತೆಗಿರುವುದಕ್ಕೆ ಹೋಗಿದ್ದಾರೆ…. ನಾನು ಅವರಿಗೆ ನಮ್ಮ ವಿಷಯವನ್ನೆಲ್ಲ ಹೇಳಿದ್ದೇನೆ….. ನಿಮ್ಮ ಫೋಟೋ ಸಹ ತೋರಿಸಿದ್ದೇನೆ….. ಅವರಿಗೆಲ್ಲ ಒಪ್ಪಿಗೆ ಇದೆ. ಒಂದು ಕೆಲಸ ಮಾಡಿ. ನೀವು ಮದುವೆಯ ತಾರೀಖು ಗೊತ್ತು ಮಾಡಿ. ಅಷ್ಟು ಹೊತ್ತಿಗೆ ಅವರು ಬರುತ್ತಾರೆ,” ಎಂದಳು.

“ನೀನು ಮದುವೆಗೆ ಸಿದ್ಧಳಿದ್ದೀಯಾ ತಾನೇ?”

“ಖಂಡಿತ…. ನಾನು ತನುಮನ ಪೂರ್ವಕವಾಗಿ ನಿಮ್ಮವಳಾಗಲು ಸಿದ್ಧಳಿದ್ದೇನೆ,” ಎಂದು ಅನಿತಾ ಹೇಳಿದಾಗ ನನಗೆ ರೋಮಾಂಚನವಾಯಿತು.

ಆ ರಾತ್ರಿ ನನಗೆ ಬಹಳ ಹೊತ್ತು ನಿದ್ರೆ ಬರಲಿಲ್ಲ. ನನ್ನ ಮನಸ್ಸಲ್ಲೆಲ್ಲ ಅವಳ ಯೋಚನೆಯೇ ತುಂಬಿತ್ತು. ಅವಳ ಮುಖ ಚಹರೆಯೇ ನನ್ನ ಕಣ್ಣ ಮುಂದೆ ನಿಲ್ಲುತ್ತಿತ್ತು. ಅವಳ ತಂದೆ ತಾಯಿ ನಮ್ಮ ಮದುವೆಗೆ ಒಪ್ಪದಿದ್ದರೆ….? ಅವಳ ಅಣ್ಣ ಅತ್ತಿಗೆ ಏನಾದರೂ ಅಡ್ಡಿ ಮಾಡಿದರೆ….? ಎಂಬ ಭಯ ಮೂಡಿ ಬಂತು. ಆದರೆ ಅನಿತಾಳ ದೃಢವಾದ ಒಪ್ಪಿಗೆ ನನಗೆ ಧೈರ್ಯ ನೀಡಿತು.

ಬೆಳಗಾಗುತ್ತಿದ್ದಂತೆ ನಾನು ಅನಿತಾಳಿಗೆ ಫೋನ್‌ ಮಾಡಿದೆ, “ಬರುವ ತಿಂಗಳು 1ನೇ ತಾರೀಖಿಗೆ ನಾವು ಒಂದಾಗೋಣ. ಏನಂತೀಯ?”

“ವೆರಿ ಗುಡ್‌. ನೀವು ಆ ತಾರೀಖನ್ನು ಫೈನಲ್ ಮಾಡಿಬಿಡಿ.”

“ಆದರೆ ನಿಮ್ಮ ತಂದೆ ತಾಯಿ ಮತ್ತು ಅಣ್ಣ? ಅವರು ಆ ಹೊತ್ತಿಗೆ ಬರುತ್ತಾರೆ ತಾನೇ?”

“ನಾನು ಈಗಲೇ ಅವರಿಗೆ ತಿಳಿಸುತ್ತೇನೆ,” ಅನಿತಾ ಸಂತೋಷದಿಂದ ಉಲಿದಾಗ ನನ್ನ ಎಲ್ಲ ಸಂಶಯಗಳು ದೂರವಾದವು.

ನನ್ನ ಹತ್ತಿರದ ನೆಂಟರಿಗೆ ಮದುವೆಯ ವಿಷಯ ತಿಳಿಸಿದೆ. ನನ್ನ ಮಗನಿಗೆ ವಿಷಯ ಮೊದಲೇ ತಿಳಿದಿತ್ತು. ತಾರೀಖು ನಿರ್ಧಾರವಾದದ್ದನ್ನು ಕೇಳಿ ಅವನು ಖುಷಿಯಾದನು. ನಮ್ಮ ಸಹೋದ್ಯೋಗಿಗಳೆಲ್ಲ ಸಿಹಿಯೂಟಕ್ಕೆ ಕಾತರದಿಂದ ಕಾಯುತ್ತಿದ್ದರು.

ನಾವು ರಿಜಿಸ್ಟರ್‌ ಮ್ಯಾರೇಜ್‌ ಮಾಡಿಕೊಂಡು, ನಂತರ ಬಂಧುಮಿತ್ರರಿಗೆ ಪಾರ್ಟಿ ಏರ್ಪಡಿಸುವುದೆಂದು ನಿಶ್ಚಯಿಸಿದೆವು.

ನನ್ನ ಮಗ ಮದುವೆಗೆ 4 ದಿನ ಮೊದಲೇ ಬಂದ. ಅನಿತಾಳನ್ನು ಅವಳ ಮನೆಯವರ ಬಗ್ಗೆ ಕೇಳಿದೆ, “ರೈಲಿಗೆ ಬುಕಿಂಗ್‌ ಮಾಡಿದ್ದಾರೆ, ಬರುತ್ತಾರೆ,” ಎಂದು ಕೇಳಿದಳು.

ಮದುವೆಯ ದಿನ ಬಂದಿತು. ನಾವು 11 ಗಂಟೆಗೆ ರಿಜಿಸ್ಟ್ರಾರ್‌ ಆಫೀಸಿನ ಹತ್ತಿರ ಭೇಟಿ ಮಾಡುವುದು ಎಂದು ಮಾತನಾಡಿಕೊಂಡಿದ್ದೆವು. ನಾನು ಮಗನೊಡನೆ 10 ಗಂಟೆಗೇ ಮನೆಯಿಂದ ಹೊರಟು 11 ಗಂಟೆಗೆ ನಿಗದಿತ ಸ್ಥಳ ತಲುಪಿದೆ. ಅನಿತಾ ಬಂದಿರಲಿಲ್ಲ. ಫೋನ್‌ ಮಾಡಿದರೆ ಕನೆಕ್ಟ್ ಆಗಲಿಲ್ಲ. ನಾನು ತಳಮಳದಿಂದ ನಿರೀಕ್ಷಿಸುತ್ತಾ ಕುಳಿತೆ. 1-2 ಗಂಟೆಯ ಹೊತ್ತಿಗೆ ಕೆಲವು ಗೆಳತಿಯರೊಂದಿಗೆ ಅನಿತಾ ಬಂದಳು.

ನಾನು ಧಾವಂತದಿಂದ ಅವಳನ್ನು ಪಕ್ಕಕ್ಕೆ ಕರೆದು ಅವಳ ಮನೆಯವರ ಬಗ್ಗೆ ಕೇಳಿದೆ. ಅವಳೂ ಗಾಬರಿಯಾಗಿದ್ದಳು. “ಎಲ್ಲರೂ ಒಟ್ಟಿಗೆ ಬರುತ್ತಿದ್ದಾರೆ. ಟ್ರೇನ್‌ ತಡವಾಯಿತಂತೆ. ಆದ್ದರಿಂದ ಟ್ಯಾಕ್ಸಿ ಮಾಡಿಕೊಳ್ಳುತ್ತಿದ್ದಾರೆ,” ಎಂದಳು.

“ಸರಿ ಹಾಗಾದರೆ, ನಾವು ಅವರಿಗಾಗಿ ಕಾಯೋಣ,” ಎಂದು ಹೇಳಿದೆ.

ಮತ್ತೆ 1 ಗಂಟೆ ಕಳೆಯಿತು. ಈ ಮಧ್ಯೆ ಅನಿತಾ 2-3 ಸಲ ಮನೆಯವರೊಡನೆ ಮಾತನಾಡಿದಳು. “ಅವರು ಇನ್ನೂ ದಾರಿಯಲ್ಲಿದ್ದಾರೆ,” ಎಂದಳು.

“ಇಲ್ಲಿಗೆ ತಲುಪಲು ಇನ್ನೂ 2-3 ಗಂಟೆ ಬೇಕಾಗುತ್ತದೆಯಂತೆ,” ಅನಿತಾಳ ಮುಖ ಸಪ್ಪೆಯಾಗಿತ್ತು.

ಅವಳಲ್ಲಿ ಉತ್ಸಾಹ ತುಂಬಲು ನಾನು ನನ್ನ ಮನಸ್ಸಿನ ಕಳವಳವನ್ನು ಮರೆ ಮಾಡಿದೆ. ಸಮಯ ಮೀರಿ ಹೋಗುವುದೆಂದು ಆಫೀಸ್‌ನಲ್ಲಿ ಕಾಗದ ಪತ್ರಗಳ ಕೆಲಸ ಪೂರೈಸಿದೆವು. ಪರಸ್ಪರರ ಮಾಲೆ ತೊಡಿಸಿ ಪತಿ-ಪತ್ನಿಯರಾದೆವು. ಅಲ್ಲಿದ್ದವರಿಗೆಲ್ಲ ಸಿಹಿ ಹಂಚಿದೆವು.

ಸಿಹಿ ತಿನ್ನುವಾಗ ಮನೆಯವರೇ ಇಲ್ಲದುದು ಪಿಚ್ಚೆನೆಸಿತು. ಅನಿತಾ ಮಾತಿಲ್ಲದೆ ಕುಳಿತಿದ್ದಳು. ಸಾಯಂಕಾಲವಾಗುತ್ತಾ ಬಂದಂತೆ ನಾನು ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ. ಅವಳು ಮತ್ತೆ ಫೋನ್‌ ಎತ್ತಿಕೊಂಡಳು.

ಫೋನ್‌ನಲ್ಲಿ ಮಾತನಾಡುತ್ತಾ ಅವಳ ಕಣ್ಣುಗಳಲ್ಲಿ ನೀರು ತುಂಬಿತು. ಧ್ವನಿ ಗದ್ಗದವಾಯಿತು.

ಅದನ್ನು ಕಂಡು ನಾನು ಓಡುತ್ತಾ ಅವಳನ್ನು ಸಮೀಪಿಸಿದೆ, “ಏನಾಯಿತು ಅನಿತಾ? ಏನೂ ತೊಂದರೆಯಾಗಿಲ್ಲ ತಾನೇ?”

“ಅಯ್ಯೋ ಅವರ ಟ್ಯಾಕ್ಸಿಗೆ ಬೇರೆ ಒಂದು ಗಾಡಿ ಡಿಕ್ಕಿ ಹೊಡೆಯಿತಂತೆ. ಅಪ್ಪ ಅಮ್ಮನಿಗೆ ಏಟು ಬಿದ್ದಿದೆಯಂತೆ. ಅಣ್ಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ನಾನು ಆಸ್ಪತ್ರೆಗೆ ಹೋಗಿ ಬರುತ್ತೇನೆ,” ಅನಿತಾ ಗಾಬರಿಯಿಂದ ಹೇಳಿದಳು.

“ನಿಲ್ಲು, ನಾನೂ ಬರುತ್ತೇನೆ. ಇಬ್ಬರೂ ಹೋಗಿ ಬರೋಣ.”

ಅನಿತಾ ನನ್ನನ್ನು ತಡೆಯುತ್ತಾ, “ಬೇಡ, ನಾನೊಬ್ಬಳೇ ಹೋಗುತ್ತೇನೆ. ನೀವು ಪಾರ್ಟಿಯ ಅರೇಂಜ್‌ಮೆಂಟ್ಸ್ ನೋಡಬೇಕಲ್ಲ,” ಎಂದಳು.

“ಪಾರ್ಟಿ ವಿಷಯ ಹಾಗಿರಲಿ. ವಿಜಯ್‌ ಅದನ್ನು ಮ್ಯಾನೇಜ್‌ ಮಾಡುತ್ತಾನೆ,” ಎಂದು ಹೇಳಿ ನಾನು ನನ್ನ ಮಗ ವಿಜಯ್‌ಗೆ ಗಾಡಿ ತೆಗೆಯಲು ಹೇಳಿದೆ.

ದಾರಿಯಲ್ಲಿ ಅನಿತಾ ಮೌನವಾಗಿದ್ದಳು. ನನಗೆ ಅವಳ ಮನಃಸ್ಥಿತಿ ಅರ್ಥವಾಗಿತ್ತು.

ಅಪಘಾತವಾದ ಸ್ಥಳ ಊರಿನಿಂದ ನಲವತ್ತು ಮೈಲಿ ದೂರದಲ್ಲಿತ್ತು. ಕಾರಿನ ವೇಗನ್ನು ಹೆಚ್ಚಿಸುತ್ತಾ ನಾನು, “ಆಸ್ಪತ್ರೆಯ ಹೆಸರೇನು?” ಎಂದು ಕೇಳಿದೆ.

“ಸಿಟಿ ಹಾಸ್ಪಿಟಲ್.”

ಆಸ್ಪತ್ರೆಯ ರಸ್ತೆ ತಲುಪಿದಾಗ, “ಅನಿತಾ, ಅವರ ಕಂಡೀಶನ್‌ ಹೇಗಿದೆಯೆಂದು ಕೇಳಿದೆಯಾ? ಸೀರಿಯಸ್‌ ಇಲ್ಲ ತಾನೇ? ಈಗ ಫೋನ್‌ ಮಾಡಿ ಯಾವ ವಾರ್ಡ್‌ನಲ್ಲಿದ್ದಾರೆಂದು ತಿಳಿದುಕೊ,” ಎಂದೆ.

ಅನಿತಾ ಯಾವ ಪ್ರತಿಕ್ರಿಯೆಯೂ ಇಲ್ಲದೆ ಕುಳಿತಿದ್ದಳು. ಅವಳ ಕಳೆಗುಂದಿದ ಮುಖವನ್ನು ನೋಡಿ ನನಗೂ ದುಃಖವಾಯಿತು.

ಆಸ್ಪತ್ರೆ ತಲುಪಿದಾಗ ನಾನು ಮತ್ತೆ ಹೇಳಿದೆ, “ಅನಿತಾ, ನಿನ್ನ ಅಣ್ಣನಿಗೆ ಫೋನ್‌ ಮಾಡಿ ಯಾವ ವಾರ್ಡ್‌ ಎಂದು ಕೇಳು.”

ಅವಳು ಮಿಸುಕಾಡದೆ ಕುಳಿತಿರುವುದನ್ನು ಕಂಡು ನನಗೆ ಗಾಬರಿಯಾಯಿತು, “ಯಾಕೆ ಅನಿತಾ, ಏನಾಯಿತು? ಅಪ್ಪ ಅಮ್ಮ ಹೇಗಿದ್ದಾರೆ?”

ಅನಿತಾ ಇದ್ದಕ್ಕಿದ್ದಂತೆ ಜೋರಾಗಿ ಅಳತೊಡಗಿದಳು, “ಅಪ್ಪನೂ ಇಲ್ಲ… ಅಮ್ಮನೂ ಇಲ್ಲ….. ಯಾರೂ ಇಲ್ಲ…. ಈ ಪ್ರಪಂಚದಲ್ಲಿ ನಾನು ಒಬ್ಬಂಟಿ….. ನನಗೆ ಯಾರೂ ಇಲ್ಲ….”

ಅವಳ ರೋದನವನ್ನು ಕಂಡು ನನ್ನ ಮನಸ್ಸಿನಲ್ಲಿ ಸಂಶಯ ಹುಟ್ಟಿತು. ಅವಳ ಭುಜ ಬಳಸಿ ಸಮಾಧಾನಪಡಿಸುತ್ತಾ ಹೇಳಿದೆ, “ಇದೇನಿದು? ಅಪ್ಪ ಅಮ್ಮ ಚೆನ್ನಾಗಿ ಆಗುತ್ತಾರೆ. ನೀನು ದುಃಖಪಡಬೇಡ. ನಾನು ನಿನ್ನ ಜೊತೆ ಇದ್ದೇನಲ್ಲ. ಹೆದರಬೇಡ…. ಯಾವ ವಾರ್ಡ್‌ ಅಂತ ವಿಚಾರಿಸೋಣ, ಬಾ…”

ಅನಿತಾ ಸ್ವಲ್ಪ ಹೊತ್ತು ನನ್ನನ್ನೇ ತದೇಕಚಿತ್ತದಿಂದ ದಿಟ್ಟಿಸಿದಳು. ನಂತರ ಕಣ್ಣೀರನ್ನು ಒರೆಸಿಕೊಂಡು ತಲೆತಗ್ಗಿಸಿ ಹೇಳಿದಳು, “ಸಾರಿ, ನಾನು ನಿಮಗೆ ಸುಳ್ಳು ಹೇಳಿಬಿಟ್ಟೆ. ತಂದೆ ತಾಯಿ ನನ್ನ ಬಾಲ್ಯದಲ್ಲೇ ತೀರಿಹೋಗಿದ್ದರು….. ನನ್ನ ಒಡಹುಟ್ಟಿದವರು ಯಾರೂ ಇಲ್ಲ….. ನನ್ನ ಸೋದರತ್ತೆಯೇ ನನ್ನನ್ನು ಸಾಕಿ ಬೆಳೆಸಿದರು. ಈಗ ಅವರೂ ಇಲ್ಲ….. ಬಹಳ ವರ್ಷಗಳಿಂದ ನಾನು ಒಂಟಿಯಾಗಿ ಬದುಕುತ್ತಿದ್ದೇನೆ. ನನ್ನ ಮನೆಯವರ ಬಗ್ಗೆ ನಾನು ಹೇಳಿದ್ದೆಲ್ಲ ಸುಳ್ಳು…. ಪ್ಲೀಸ್‌ ನನ್ನನ್ನು ಕ್ಷಮಿಸಿ.”

ಅವಳ ಮಾತನ್ನೂ ಕೇಳಿ ನನಗೆ ಆಶ್ಚರ್ಯವಾಯಿತು, “ಮತ್ತೆ ಹೀಗೆಲ್ಲ ಹೇಳಿದ್ದು ಏಕೆ?”

“ನಾನು ಒಂಟಿ ಎಂದು ಹೇಳಿದರೆ ನೀವು ನನ್ನಿಂದ ದೂರವಾಗಿ ಬಿಡುವಿರಿ ಅನ್ನುವ ಭಯದಿಂದ ನಾನು ಸುಳ್ಳು ಹೇಳಿದೆ…. ನಾನು ನಿಮ್ಮನ್ನು ಬಹಳ ಇಷ್ಟಪಡುತ್ತೇನೆ…. ಪ್ಲೀಸ್‌ ಕೋಪ ಮಾಡಿಕೊಳ್ಳಬೇಡಿ…. ಐ ಲವ್ ಯೂ….”  ಎಂದಳು.

ಅನಿತಾ ಹೇಳುತ್ತಿದ್ದುದನ್ನು ಕೇಳಿ ನನಗೆ ನಿಜಕ್ಕೂ ಅವಳ ಮೇಲೆ ಕೋಪ ಉಂಟಾಗಲಿಲ್ಲ. ಬದಲಾಗಿ ಕನಿಕರ ಹುಟ್ಟಿತು. ಆದ್ದರಿಂದ ನಾನು, “ಅನಿತಾ, ಹೀಗೆ ಸುಳ್ಳು ಹೇಳುವ ಅಶ್ಯಕತೆಯೇ ಇರಲಿಲ್ಲ …. ನಾನೇ ಒಂಟಿಯಾಗಿದ್ದೇನೆ…. ಹಾಗಿರುವಾಗ ನಿನ್ನ ಪರಿಸ್ಥಿತಿ ನನಗೆ ಅರ್ಥವಾಗೋಲ್ಲವೇ? ಹೋಗಲಿ ಬಿಡು,  ಇಂದಿನಿಂದ ನೀನು ಒಂಟಿ ಅನ್ನುವ ಭಾವನೆ ಬಿಟ್ಟುಬಿಡು. ನಾನು ನಿನ್ನ ಜೊತೆಗೆ ಇರುತ್ತೇನೆ…. ನಾವಿಬ್ಬರೂ ಒಂಟಿಯಾಗಿದ್ದವರು…. ಈಗ ಇಬ್ಬರೂ ಒಟ್ಟಿಗೆ ಸೇರಿ ನಮ್ಮದೇ ಒಂದು ಕುಟುಂಬವಾಗುತ್ತದೆ.”

ಅನಿತಾಳ ಮುಖ ಆಶ್ಚರ್ಯ, ಸಂತೋಷಗಳಿಂದ ಪ್ರಫುಲ್ಲಿತವಾಯಿತು. ಅವಳು ಸಮಾಧಾನಚಿತ್ತಳಾಗಿ ತನ್ನ ತಲೆಯನ್ನು ನನ್ನೆದೆಗೆ ಒರಗಿಸಿದಳು. ನಾನು ಕಾರನ್ನು ನನ್ನ ಮಿತ್ರ ಡಾ. ಸಂದೀಪ್‌ನ ಕ್ಲಿನಿಕ್‌ನತ್ತ ತಿರುಗಿಸಿದೆ. ಅವನೊಬ್ಬ ಹೆಸರಾಂತ ಮನೋವೈದ್ಯ. ಅವಶ್ಯಕತೆ ಇದ್ದರೆ ಅನಿತಾಳಿಗೆ ಕೌನ್ಸೆಲಿಂಗ್‌ ಮಾಡಿ ಹೊಸ ಬಾಳನ್ನು ಉತ್ತಮವಾಗಿ ಪ್ರಾರಂಭಿಸಲು ಅವನು ಸಹಾಯ ಮಾಡುವನೆಂಬ ನಂಬಿಕೆಯಿಂದ ಅವನತ್ತ ನಡೆದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ